ದೀಪಾವಳಿಯಲ್ಲಿಅನ್ನಪೂರ್ಣೇಶ್ವರಿಗೆ ಲಾಡುರಥ ಉಡುಗೊರೆ!
ಭಾರತದ ಪವಿತ್ರ ಪುಣ್ಯಕ್ಷೇತ್ರ ಕಾಶಿ ಎಂದರೆ ಕೇವಲ ಗಂಗಾಸ್ನಾನ ಹಾಗೂ ವಿಶ್ವನಾಥನ ದರ್ಶನವಷ್ಟೇ ಅಲ್ಲ, ಅದು ಜಗತ್ತಿನ ಹಸಿವು ನೀಗಿಸುವ ಜಗನ್ಮಾತೆ ಅನ್ನಪೂರ್ಣೇಶ್ವರಿಯ ನೆಲೆಬೀಡು. ಭಾರತೀಯ ಸಂಸ್ಕೃತಿಯಲ್ಲಿ ಅನ್ನವನ್ನು ಪರಬ್ರಹ್ಮ ಎಂದು ಪೂಜಿಸಲಾಗುತ್ತದೆ. ಇಂತಹ ಅನ್ನದ ದೇವತೆಯಾದ ಅನ್ನಪೂರ್ಣೇಶ್ವರಿಗೆ ಕಾಶಿಯಲ್ಲಿ ವಿಶೇಷವಾದ ಮತ್ತು ವಿಶಿಷ್ಟವಾದ ಸ್ಥಾನವಿದೆ. ಅದರಲ್ಲೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ದೇಗುಲದಲ್ಲಿ ನಡೆಯುವ ದರ್ಶನ, ಅನ್ನಕೂಟದ ಸಂಭ್ರಮ ಹಾಗೂ ಭಕ್ತಿ-ವೈಭವಗಳು ಭಕ್ತರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ.
- ಸುವರ್ಣ ಲಕ್ಷ್ಮೀ
ಕಾಶಿಯಲ್ಲಿ ವಿಶ್ವನಾಥನೊಂದಿಗೆ ಅನ್ನಪೂರ್ಣೇಶ್ವರಿ ದೇಗುಲ ಇರುವುದು ನಮಗೆಲ್ಲ ಗೊತ್ತು. ಇದು ಕಾಶಿವಿಶ್ವನಾಥ ದೇಗುಲದಿಂದ ಕೇವಲ 50 ಅಡಿ ದೂರದಲ್ಲಿದೆ. ಈ ಅನ್ನಪೂರ್ಣ ಮಂದಿರ, ಪ್ರಸ್ತುತ ಇರುವ ದೇಗುಲವನ್ನು 18ನೆಯ ಶತಮಾನದಲ್ಲಿ ಪೇಶ್ವ ಬಾಜಿರಾವ್ ಅವರು ನಾಗರಾ ಶೈಲಿಯಲ್ಲಿ ನಿರ್ಮಾಣ ಮಾಡಿದರು. ಇದು ವಾರಾಣಸಿಯ ದಶಾಶ್ವಮೇಧ ರಸ್ತೆಯಲ್ಲಿದೆ. ಈ ಮಂದಿರದ ಗರ್ಭಗುಡಿಯಲ್ಲಿ ಹಿತ್ತಾಳೆಯ ಅನ್ನಪೂರ್ಣೆಯ ವಿಗ್ರಹವಿದ್ದು, ಅದಕ್ಕೆ ಪ್ರತಿನಿತ್ಯ ಪೂಜೆಗಳು ನಡೆಯುತ್ತವೆ. ಇದಲ್ಲದೆ ಇಲ್ಲಿ ಬಂಗಾರದ ಅನ್ನಪೂರ್ಣೇಶ್ವರಿ ವಿಗ್ರಹವೊಂದಿದೆ. ಅದನ್ನು ವರ್ಷದಲ್ಲಿ ಐದು ದಿನ ಮಾತ್ರ ಭಕ್ತರ ದರ್ಶನಕ್ಕೆ ಇಡಲಾಗುತ್ತದೆ.
ದೀಪಾವಳಿಯ ವಿಶೇಷ ದರ್ಶನ
ಅದು ದೀಪಾವಳಿಯ ಸಮಯದಲ್ಲಿ, ಧನತೇರಾಸ್ (ಧನ ತ್ರಯೋದಶಿ) ದಿನದಿಂದ ಐದು ದಿನಗಳ ಕಾಲ ದರ್ಶನಕ್ಕೆ ಇಡಲಾಗುತ್ತದೆ. ಅದೇ ದಿನ ಖಜಾನ ಹೆಸರಿನ ಕಾಶಿವಿಶ್ವೇಶ್ವರ ಹಾಗೂ ಅನ್ನಪೂರ್ಣೇಶ್ವರಿಯರ ಚಿತ್ರ ಇರುವ ನಾಣ್ಯಗಳನ್ನು ಹಾಗೂ ಒಣ ಹಣ್ಣುಗಳನ್ನೂ ಭಕ್ತರಿಗೆ ವಿತರಿಸಲಾಗುತ್ತದೆ. ಅವುಗಳನ್ನು ಮನೆಯಲ್ಲಿ ಇಟ್ಟರೆ ಧನ, ಧಾನ್ಯಗಳಿಗೆ ಕೊರತೆ ಇರುವುದಿಲ್ಲವೆಂಬುದು ನಂಬಿಕೆ. ಇದಕ್ಕಾಗಿ ಧನತೇರಾಸ್ ದಿನದಂದು ಲಕ್ಷಾಂತರ ಜನ ಸೇರುತ್ತಾರೆ. ಇದರ ನಂತರ ಕಾರ್ತಿಕ ಶುಕ್ಲ ಪ್ರತಿಪದೆಯಂದು ಇಲ್ಲಿ ಅನ್ನಕೂಟ ಉತ್ಸವ ನಡೆಯುತ್ತದೆ. ಇದಂತೂ ಮಹಾ ಸಂಭ್ರಮದ ದಿನ. ಅಂದು ಹೊಸದಾಗಿ ಬೆಳೆದ ಧಾನ್ಯದಿಂದ 56 ರೀತಿಯ ಖಾದ್ಯಗಳನ್ನು ತಯಾರಿಸಿ ಬಂಗಾರದ ಅನ್ನಪೂರ್ಣೇಶ್ವರಿಗೆ ನೈವೇದ್ಯ ಮಾಡಲಾಗುತ್ತದೆ. ಅದನ್ನು ನೋಡುವುದೇ ಒಂದು ಹಬ್ಬ. ಈ ಉತ್ಸವದ ಅಂಗವಾಗಿಯೇ ಅನ್ನಪೂರ್ಣೇಶ್ವರಿಗೆ ಲಾಡುಗಳಿಂದ ರಥ ನಿರ್ಮಿಸಿ ಅರ್ಪಿಸುತ್ತಾರೆ. ನಂತರ ಇವೆಲ್ಲವನ್ನೂ ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ. ಈ ಸಮಯದಲ್ಲಿ ಸ್ವರ್ಣ ಅನ್ನಪೂರ್ಣೇಶ್ವರಿ ತನ್ನ ಸಹೋದರಿಯರ ಜತೆ ಕಾಣಿಸಿಕೊಳ್ಳುತ್ತಾಳೆ. ಅವರ ಮುಂದೆ ಶಿವನು ಭಿಕ್ಷಾ ಪಾತ್ರೆ ಹಿಡಿದು ದರ್ಶನ ನೀಡುತ್ತಾನೆ.
ಇದನ್ನೂ ಓದಿ: ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿರುವ ಡಾರ್ಕ್ ಟೂರಿಸಂ
ಶಿವನ ಹಸಿವು ನೀಗಿಸಿದ ಜಗನ್ಮಾತೆ
ಅನ್ನಪೂರ್ಣೇಶ್ವರಿಯ ಉಗಮದ ಬಗ್ಗೆ ಎರಡು ದಂತಕಥೆಗಳು ಪ್ರಚಲಿತದಲ್ಲಿವೆ. ಒಂದು ಕಥೆಯ ಪ್ರಕಾರ, ಒಮ್ಮೆ ಶಿವನು ಮಾತನಾಡುವ ಸಮಯದಲ್ಲಿ ಪಾರ್ವತಿಗೆ ಈ ಲೋಕವು ಮಾಯೆ ಎಂದೂ, ಇಲ್ಲಿರುವ ಸಕಲ ವಸ್ತುಗಳು ಕೂಡ ಮಾಯೆ ಎಂದೂ, ಆಹಾರವು ಕೂಡ ಮಾಯೆ ಎಂದು ಹೇಳಿದನು. ಇದರಿಂದ ಬೇಸರಗೊಂಡ ಪಾರ್ವತಿ ದೇವಿಯು ಅದೃಶ್ಯಳಾಗಿ ಆಹಾರವನ್ನೆ ಲೋಕದಿಂದ ಮಾಯ ಮಾಡಿದಳು. ಪಾರ್ವತಿ ದೇವಿ ಹೀಗೆ ಮಾಡಿದ್ದರಿಂದ ಹಾಹಾಕಾರ ಉಂಟಾಯಿತು. ಜನರು ಹಸಿವಿನಿಂದ ನರಳತೊಡಗಿದರು. ಶಿವನಿಗೂ ಹಸಿವಿನ ತೀವ್ರತೆ ಎದುರಾಯಿತು. ನಂತರ ಪಶ್ಚಾತ್ತಾಪ ಪಟ್ಟು ಕರುಣೆಯಿಂದ ಪಾರ್ವತಿ ದೇವಿ ಅನ್ನಪೂರ್ಣೆಯಾಗಿ ಕಾಶಿಯಲ್ಲಿ ಅಡುಗೆ ಮನೆಯನ್ನು ತೆರೆದು ಎಲ್ಲರಿಗೂ ಆಹಾರವನ್ನು ನೀಡತೊಡಗಿದಳು. ಹಾಗಾಗಿಯೇ ಪಾರ್ವತಿ ದೇವಿಯ ಅವತಾರವಾದ ಅನ್ನಪೂರ್ಣೆಯನ್ನು ನಾವು ಭಕ್ತಿಯಿಂದ ಆರಾಧಿಸಿದರೆ ಸಕಲ ಧನ-ಧಾನ್ಯಗಳು ಮನೆಯಲ್ಲಿರುತ್ತದೆ ಎಂಬ ನಂಬಿಕೆಯಿದೆ.

ಗೌರಿ ರೂಪ ಮರಳಿ ಪಡೆದ ಕಥೆ
ಮತ್ತೊಂದು ದಂತಕಥೆಯ ಪ್ರಕಾರ, ಒಮ್ಮೆ ಪಾರ್ವತಿ ದೇವಿಯು ತನ್ನ ಪತಿ ಶಿವನ ಮೂರು ಕಣ್ಣುಗಳನ್ನು ಮುಚ್ಚಿದಳು. ಇದರಿಂದಾಗಿ ಇಡೀ ಜಗತ್ತು ಕತ್ತಲೆಯಿಂದ ತುಂಬಿತ್ತು. ಪಾರ್ವತಿ ತನ್ನ ಮೈಬಣ್ಣವನ್ನು (ಗೌರಿ ರೂಪ) ಕಳೆದುಕೊಂಡಳು. ತನ್ನ ಗೌರಿ ರೂಪವನ್ನು ಪುನಃ ಪಡೆದುಕೊಳ್ಳಲು ಅವಳು ಶಿವನ ಸಹಾಯವನ್ನು ಕೇಳಿದಳು. ಶಿವನು ವಾರಾಣಸಿಯಲ್ಲಿ ಅನ್ನದಾನ ಮಾಡುವಂತೆ ಕೇಳಿಕೊಂಡನು. ಆದ್ದರಿಂದ, ಅವಳು ಚಿನ್ನದ ಮಡಕೆ ಮತ್ತು ಸೌಟಿನೊಂದಿಗೆ ಅನ್ನಪೂರ್ಣ ರೂಪವನ್ನು ತೆಗೆದುಕೊಂಡು ವಾರಾಣಸಿಯಲ್ಲಿ ಆಹಾರವನ್ನು ದಾನ ಮಾಡಿದಳು. ಹಾಗಾಗಿ ಆಕೆಯನ್ನು ಅನ್ನಪೂರ್ಣೆ ಎಂದು ಕರೆಯಲಾಗುತ್ತದೆ. ಈಕೆ ಇರುವ ಕಡೆ ಆಹಾರಕ್ಕೆ ಕೊರತೆಯಿಲ್ಲವೆಂದು ನಂಬಿಕೆ. ವಾರಾಣಸಿಯಲ್ಲಿ ಯಾರೂ ಉಪವಾಸದಿಂದ ಮಲಗುವುದಿಲ್ಲ. ಹೊರನಾಡಿನಲ್ಲೂ ಅಷ್ಟೇ. ಅನೂಚಾನವಾಗಿ ನಡೆದುಕೊಂಡು ಬಂದಿರುವ ಈ ಉತ್ಸವಗಳು ನಮ್ಮ ಆಹಾರ ಸಮೃದ್ದತೆಗೆ ಸಂಕೇತ. ಇದೇ ರೀತಿಯ ಅನ್ನಕೂಟ ಉತ್ಸವಗಳು ಇದೇ ಕಾರ್ತಿಕ ಮಾಸದಲ್ಲಿ ಕೃಷ್ಣನ ಆಲಯದಲ್ಲಿಯೂ ನಡೆಯುತ್ತವೆ.
ಮಾಹಿತಿ ಪೆಟ್ಟಿಗೆ:
ಕಾಶಿಯ ಈ ಅನ್ನಪೂರ್ಣ ದೇವಾಲಯವು 'ಶ್ರೀ-ಯಂತ್ರ'ದ ವಿನ್ಯಾಸವನ್ನು ಹೋಲುವ ದೇಶದ ಏಕೈಕ ದೇವಾಲಯ ಎಂದು ನಂಬಲಾಗಿದೆ. ಹಿಂದೂ ಧರ್ಮದ ಶ್ರೇಷ್ಠ ದಾರ್ಶನಿಕರಾದ ಆದಿ ಶಂಕರಾಚಾರ್ಯರು ವಿಶ್ವವಿಖ್ಯಾತವಾದ 'ಅನ್ನಪೂರ್ಣ ಸ್ತೋತ್ರ'ವನ್ನು ಇದೇ ದೇವಾಲಯದಲ್ಲಿ ರಚಿಸಿದರು ಎಂಬ ಇತಿಹಾಸವಿದೆ.