• ಸಿ.ಎ.ವಿಲಾಸ ಹುದ್ದಾರ

ಮೈಸೂರಿನಿಂದ ಸುಮಾರು 35 ಕಿಮೀ ದೂರದಲ್ಲಿ ತಿರುಕೂಡಲು ಎಂಬ ಸ್ಥಳವಿದೆ. ಅದು ಕಾವೇರಿ, ಕಪಿಲ, ಸ್ಪಟಿಕ ಸರೋವರಗಳ ಸಂಗಮ ತಾಣ. ಅಲ್ಲಿ ಅಗಸ್ತ್ಯೇಶ್ವರ ದೇವಾಲಯ ನೆಲೆಯಾಗಿದೆ.

ನದಿ ತೀರದಲ್ಲಿ ಮಧುರ ಕ್ಷಣಗಳನ್ನು ಕಳೆದು ಮುಂದಕ್ಕೆ ಬರುತ್ತಿದ್ದಂತೆಯೇ ನಿಮಗೆ ದೇವಸ್ಥಾನ ಗೋಚರವಾಗುತ್ತದೆ. ಅದರ ಪಕ್ಕದಲ್ಲಿ ಒಂದು ಕಲ್ಲಿನ ಮಂಟಪವಿದೆ. ಈ ಮಂಟಪದಲ್ಲಿ ಕಲ್ಲಿನ ನಂದಿ ವಿಗ್ರಹವಿದ್ದು, ಮಂಟಪದ ಮೇಲ್ಭಾಗದಲ್ಲಿ ನಂದಿಯ ವಿಗ್ರಹ ಕಂಗೊಳಿಸುತ್ತದೆ.

ಇದನ್ನೂ ಓದಿ: ನೆಲ್ಲಿತೀರ್ಥದ ಗುಹೆಯೊಳಗೆ ಸ್ವಯಂಭೂ ಸೋಮನಾಥ

ಪುರಾಣದ ಪ್ರಕಾರ

ಅಗಸ್ತ್ಯ ಮುನಿಗಳು ದಂಡಕಾರಣ್ಯದಲ್ಲಿ ಸಂಚರಿಸುತ್ತ ತಿರುಕೂಡಲಿಗೆ ಬಂದಾಗ ಈಶ್ವರನನ್ನು ಪೂಜಿಸುವ ಮನಸಾಯಿತು. ಆಗ ಅವರು ಹನುಮಂತನಿಗೆ ಕಾಶಿಯಿಂದ ಶಿವನ ಲಿಂಗವನ್ನು ತರಲು ಹೇಳಿದರು. ಹನುಮಂತನು ಶಿವಲಿಂಗವನ್ನು ತರಲು ಹೊರಟು ಮರಳಿ ಬರುವುದು ತಡವಾಗಿದ್ದರಿಂದ, ಅಲ್ಲಿಯೇ ಇದ್ದ ಮರಳಿನಿಂದ ಅಗಸ್ತ್ಯ ಮುನಿಗಳು ಲಿಂಗವನ್ನು ತಯಾರಿಸಿದರು. ಅದನ್ನೇ ಪ್ರತಿಷ್ಠಾಪಿಸಿ ಪೂಜಿಸಿದರು. ಆದ್ದರಿಂದ ಈ ಲಿಂಗಕ್ಕೆ ಅಗಸ್ತ್ಯೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

Untitled design - 2026-05-01T124620.220

ದೇವಸ್ಥಾನ ಎದುರಿನಲ್ಲಿ ಒಂದು ಕಮಾನು ಇದೆ. ಅದನ್ನು ದಾಟುತ್ತಿದ್ದಂತೆಯೇ ಬಲ ಬದಿಗೆ ಶ್ರೀ ಮಾರ್ಕಂಡೇಶ್ವರ, ಕಾಲಬೈರವ, ಗಣಪತಿಯ ಪುಟ್ಟ ಗುಡಿಗಳಿವೆ. ಎಡಬದಿಗೆ ನಂದಿಯ ಆಕರ್ಷಕವಾದ ಸುಮಾರು ಐದು ಅಡಿ ಎತ್ತರದ ವಿಗ್ರಹವಿದೆ.

ಅಗಸ್ತ್ಯೇಶ್ವರ ಲಿಂಗ ಸ್ವಲ್ಪ ಭಿನ್ನವಾಗಿದೆ. ಈ ಭಿನ್ನವಾದ ಭಾಗದಿಂದ ತೀರ್ಥವು ಉದ್ಭವಿಸುತ್ತದೆ ಎಂದು ನಮಗೆ ಅಲ್ಲಿನ ಅರ್ಚಕರು ತಿಳಿಸಿದರು. ಇದನ್ನು ಕೇಳಿ ನಮಗೆ ರೋಮಾಂಚನವಾಯಿತು. ಭಕ್ತಿ ಭಾವದಿಂದ ತೀರ್ಥವನ್ನು ಸ್ವೀಕರಿಸಿದೆವು. ಗರ್ಭಗುಡಿಯ ಎರಡೂ ಬದಿಗೆ ಚಾಮುಂಡೇಶ್ವರಿ, ಭೃಂಗಿ, ಶ್ರೀನಂದಿ, ಗಣಪತಿ, ಸುಬ್ರಹ್ಮಣ್ಯ ಅವರ ವಿಗ್ರಹಗಳಿವೆ. ಹೊರಗಡೆ ಪ್ರಾಂಗಣದ ಸುತ್ತಲೂ ಶ್ರೀ ಅಗಸ್ತ್ಯ ಮುನಿ, ಲೊಪಾಮುದ್ರಾದೇವಿ, ದಕ್ಷಿಣಾಮೂರ್ತಿ ಮತ್ತು ಹನ್ನೆರಡು ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.

Untitled design - 2026-05-01T124625.356

ದೇವಾಲಯ ದರ್ಶನ ಪಡೆದು ಹೊರಗೆ ಬಂದಾಗ ಸಂಜೆಯಾಗಿತ್ತು. ಭಕ್ತಿ ಭಾವ ಮನಸಲ್ಲಿ ತುಂಬಿತ್ತು.

ದಾರಿ ಹೇಗೆ?

ಈ ದೇವಾಲಯ ತಿ.ನರಸಿಪುರದ ತಿರುಕೂಡಲು ಪ್ರದೇಶದಲ್ಲಿದೆ. ಮೈಸೂರಿನಿಂದ 35 ಕಿಮೀ ದೂರದಲ್ಲಿದ್ದು, ಸರಕಾರಿ ಬಸ್‌ ಸಂಚಾರ ಸುಲಭ ಮಾರ್ಗ. ಮೈಸೂರು ಹತ್ತಿರದ ರೈಲು ನಿಲ್ದಾಣ.