ಈ ಅಮರಾವತಿ ಇಂದ್ರನದಲ್ಲ
ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದಾಗ ತಾರಕಾಸುರನ ಕೊರಳಿನಲ್ಲಿದ್ದ ಶಿವಲಿಂಗವು ಒಡೆದು ಐದು ಸ್ಥಳಗಳಲ್ಲಿ ಬಿದ್ದಿತು, ಅವು ಪಂಚರಾಮ ಕ್ಷೇತ್ರಗಳಾದವು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಮೊದಲನೆಯದೇ ಈ ಅಮರಲಿಂಗೇಶ್ವರ.
- ಅಶ್ವಿನಿ ಸುನಿಲ್
ಇಂದ್ರನ ರಾಜಧಾನಿ ಅಮರಾವತಿಯ ಬಗ್ಗೆ ಪುರಾಣಗಳಲ್ಲಿ ಓದಿರುತ್ತೀರಿ. ಇದು ಆಂಧ್ರಪ್ರದೇಶದ ರಾಜಧಾನಿ ಅಮರಾವತಿ. ಈ ಹೆಸರು ಬರಲು ಕಾರಣವೇನು ಎಂದು ಯೋಚಿಸಿದ್ದೀರಾ?
ಕೆಲವರು ಇಲ್ಲಿರುವ ಅಮರಾವತಿ ಸ್ತೂಪದಿಂದ ಆ ಹೆಸರು ಬಂದಿದೆ ಎನ್ನುತ್ತಾರೆ. ಇನ್ನು ಕೆಲವರು ಇಲ್ಲಿರುವ ಅಮರಲಿಂಗೇಶ್ವರ ದೇವಾಲಯದಿಂದ ಈ ಹೆಸರು ಬಂದಿದೆ ಎನ್ನುತ್ತಾರೆ.
ಆಂಧ್ರಪ್ರದೇಶದ ರಾಜಧಾನಿಯಾಗಿ ಗುರುತಿಸಿಕೊಂಡು, ಈಗಷ್ಟೇ ಬೆಳವಣಿಗೆ ಹೊಂದುತ್ತಿರುವ ಅಮರಾವತಿ ನಗರದಲ್ಲಿರುವ ಅಮರಲಿಂಗೇಶ್ವರ ದೇವಾಲಯವು ಪುರಾಣ ಪ್ರಸಿದ್ಧವಾದದ್ದು. ಇಂದ್ರನಿಂದ ನಿರ್ಮಿತವಾದ ಪಂಚರಾಮ ಕ್ಷೇತ್ರಗಳಲ್ಲಿ ಅಮರಲಿಂಗೇಶ್ವರ ದೇವಾಲಯವೂ ಒಂದು ಎಂದು ನಂಬಲಾಗಿದೆ.
ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದಾಗ ತಾರಕಾಸುರನ ಕೊರಳಿನಲ್ಲಿದ್ದ ಶಿವಲಿಂಗವು ಒಡೆದು ಐದು ಸ್ಥಳಗಳಲ್ಲಿ ಬಿದ್ದಿತು, ಅವು ಪಂಚರಾಮ ಕ್ಷೇತ್ರಗಳಾದವು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಮೊದಲನೆಯದೇ ಈ ಅಮರಲಿಂಗೇಶ್ವರ. ಹೀಗೆ ಛಿದ್ರಗೊಂಡ ಶಿವಲಿಂಗದ ಐದು ತುಂಡುಗಳಲ್ಲಿ, ದೊಡ್ಡ ತುಂಡು ಹದಿನೈದು ಅಡಿ ಉದ್ದದ ಬಿಳಿ ಅಮೃತಶಿಲೆಯ ಕಂಬವಾಗಿದ್ದು, ಇದನ್ನೇ ಅಮರೇಶ್ವರ ಎಂದು ಪೂಜಿಸಲಾಗುತ್ತಿದೆ ಎನ್ನಲಾಗಿದೆ. ಉಳಿದ ಪಂಚರಾಮ ದೇವಸ್ಥಾನಗಳು ಗೋದಾವರಿ ನದಿಯ ತಟದಲ್ಲಿವೆ. ಅಮರಾವತಿಯ ಈ ದೇವಸ್ಥಾನ ಮಾತ್ರ ಕೃಷ್ಣಾ ನದಿಯ ನದಿಯ ತಟದಲ್ಲಿದೆ. ಈ ಅಮರಲಿಂಗೇಶ್ವರನನ್ನು ಇಂದ್ರ ಮತ್ತು ಇತರ ದೇವತೆಗಳು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ.

ಐತಿಹಾಸಿಕ ಮಹತ್ವ
ಕ್ರಿಪೂ ಮೂರನೇ ಶತಮಾನದಷ್ಟು ಪುರಾತನ ಇತಿಹಾಸವಿರುವ ಈ ದೇವಾಲಯವು ಶಾತವಾಹನರ ಕಾಲದಲ್ಲಿ ಅಭಿವೃದ್ಧಿಗೊಂಡಿತು ಎನ್ನಲಾಗುತ್ತದೆ. ಇದಕ್ಕೆ ಪೂರಕವಾಗಿ ಶಾತವಾಹನರ ಕಾಲದಲ್ಲಿ ನಿರ್ಮಿತವಾದ ಪ್ರಮುಖ ಬೌದ್ಧ ಸ್ತೂಪ ಅಮರಾವತಿಯಲ್ಲಿದೆ. ಅಮರಲಿಂಗೇಶ್ವರ ದೇವಾಲಯವನ್ನು ವಿವಿಧ ಹಂತಗಳಲ್ಲಿ ಕಟ್ಟಲಾಯಿತು ಎನ್ನಲಾಗಿದೆ.
ದೇವಾಲಯದ ನಾಲ್ಕು ಬದಿಗಳಲ್ಲಿ ದೊಡ್ಡ ಗೋಪುರಗಳಿದ್ದು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ದೇವಾಲಯದ ಗೋಡೆಗಳ ಮೇಲೆ ಶ್ರೀಕೃಷ್ಣ ದೇವರಾಯರ ಕಾಲದ ಶಾಸನಗಳು, ಅಮರಾವತಿಯ ಕೋಟ ರಾಜನ ಶಾಸನಗಳನ್ನು ಕಾಣಬಹುದು. ಗರ್ಭಗುಡಿಯಲ್ಲಿರುವ ಅಮರಲಿಂಗೇಶ್ವರನ ಎತ್ತರ 15 ಅಡಿಗಳಷ್ಟಿದೆ. ಅಮರಲಿಂಗೇಶ್ವರನ ಪತ್ನಿ ಬಾಲ ಚಾಮುಂಡಿಕ ಕೂಡಾ ಇಲ್ಲಿ ಇರುವುದು ಮತ್ತೊಂದು ವಿಶೇಷ.
ಅಮರೇಶ್ವರಸ್ವಾಮಿ ದೇವಾಲಯದಿಂದ ಸ್ವಲ್ಪ ದೂರದಲ್ಲಿ ಶಾತವಾಹನರ ಕಾಲದಲ್ಲಿ ನಿರ್ಮಿಸಲ್ಪಟ್ಟ ಬೌದ್ಧ ಸ್ತೂಪವನ್ನು ಕಾಣಬಹುದು. ಇದು ಆ ಕಾಲದಲ್ಲಿ ಅಮರಾವತಿಯಲ್ಲಿ ಹಿಂದೂ ಮತ್ತು ಬೌದ್ಧ ಧರ್ಮಗಳ ಅನ್ಯೋನ್ಯತೆಯನ್ನು ಸ್ಪಷ್ಟವಾಗಿ ತೋರುತ್ತದೆ.
ಕ್ರಿಪೂ ಎರಡನೇ ಶತಮಾನದಲ್ಲಿ ನಿರ್ಮಿತವಾದ ಈ ಸ್ತೂಪವು, ಭಾರತದ ಅತಿ ದೊಡ್ಡ ಹಾಗೂ ಪ್ರಮುಖ ಸ್ತೂಪಗಳಲ್ಲಿ ಒಂದಾಗಿದೆ. ವೃತ್ತಾಕಾರದ ದಿಬ್ಬದಂಥ ರಚನೆಯನ್ನು ಹೊಂದಿದ್ದು, ಬುದ್ಧನ ಜೀವನದ ದೃಶ್ಯಗಳು, ಪ್ರಾಣಿ, ಹೂವಿನ ಚಿತ್ರಣಗಳ ಕೆತ್ತನೆಗಳಿಂದ ಕೂಡಿದೆ. ಈ ಸ್ತೂಪವು ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ಕಲೆ, ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ.

ಹತ್ತಿರದಲ್ಲಿವೆ ಹತ್ತಾರು ಪ್ರವಾಸಿ ತಾಣಗಳು
ಅಮರಾವತಿಯ ಅಮರಲಿಂಗೇಶ್ವರ ದೇವಸ್ಥಾನಕ್ಕೆ ಪ್ರವಾಸಕ್ಕೆ ಬಂದರೆ ಹತ್ತಿರದಲ್ಲೇ ಇರುವ ಮಂಗಳಗಿರಿಯ ಪಾನಕಾಲ ನರಸಿಂಹ ಸ್ವಾಮಿ ದೇವಾಲಯ, ಕೊಂಡಪಲ್ಲಿ ಕೋಟೆ, ಉಂಡವಳ್ಳಿಯ ಗುಹೆಗಳು, ಕೊಂಡವೀಡು ಕೋಟೆ, ವಿಜಯವಾಡದ ಕನಕದುರ್ಗ ದೇವಸ್ಥಾನ, ಭವಾನಿ ಐಲ್ಯಾಂಡ್, ಏಷ್ಯಾದಲ್ಲಿ ಅತಿ ದೊಡ್ಡ ಮೆಣಸಿನ ಕಾಯಿ ಮಾರ್ಕೆಟ್ ಗುಂಟೂರು ಚಿಲ್ಲಿ ಯಾರ್ಡ್ ಎಲ್ಲವನ್ನೂ ನೋಡಿಕೊಂಡು ಬರಬಹುದು.