- ಶೋಭಾ ಪುರೋಹಿತ್

ಸುಬ್ರಹ್ಮಣ್ಯದಿಂದ 40 ಕಿಮೀ, ಧರ್ಮಸ್ಥಳದಿಂದ 20 ಕಿಮೀ ಮತ್ತು ಮಂಗಳೂರಿನಿಂದ 80 ಕಿಮೀ ಅಂತರದಲ್ಲಿ ಸೌತಡ್ಕ ಗಣಪತಿ ದೇವಸ್ಥಾನವಿದೆ. ಬಯಲು ಆಲಯದಲ್ಲಿ ಗಣಪತಿ ನೆಲೆಸಿದ್ದು ಸೌತಡ್ಕ ಗಣಪತಿ ಎಂದು ಪ್ರಸಿದ್ಧಿ ಪಡೆದಿದೆ.

ರಾಜ ಮನೆತನದವರು ಈ ಗಣಪತಿಯನ್ನು ಪೂಜಿಸುತ್ತಿದ್ದರು. ಇದರ ದೇಗುಲವನ್ನು ಶತ್ರುಗಳು ಹಾಳುಗೆಡವಿದ ಬಳಿಕ ಅಲ್ಲಿನ ದನ ಕಾಯುವ ಹುಡುಗರು ಗಣಪತಿ ಮೂರ್ತಿಯನ್ನು ತಂದು ಇಲ್ಲಿ ಕೂಡಿಸಿದರಂತೆ. ಇಲ್ಲಿ ಹೆಚ್ಚಾಗಿ ಸೌತೆ ಬೆಳೆಯುವ ಹುಲ್ಲುಗಾವಲು ಇದ್ದು, ರೈತರು ಬೆಳೆದ ಸೌತೆಕಾಯಿಯನ್ನು ನೈವೇದ್ಯಕ್ಕೆ ಅರ್ಪಿಸಿದರಂತೆ. ಹೀಗಾಗಿ ಇದಕ್ಕೆ ಸೌತಡ್ಕ ಗಣಪತಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಇಲ್ಲಿ ಭಕ್ತರು ಏನೇ ಹರಸಿಕೊಂಡರೂ ಈಡೇರುತ್ತದೆ ಎಂದು ನಂಬಲಾಗಿದದು, ಬೇಡಿಕೆ ಈಡೇರಿದ ನಂತರ ಭಕ್ತರು ಇಲ್ಲಿಗೆ ಬಂದು ಗಂಟೆ ಕಟ್ಟುವುದು ಪ್ರಚಲಿತದಲ್ಲಿದೆ. ಇಲ್ಲಿ ಹಾಗೆ ಕಟ್ಟಿದ ಸಾಕಷ್ಟು ಗಂಟೆಗಳನ್ನು ಕಾಣಬಹುದು.

SOUTHADKA TEMPLE

ದೇಗುಲವನ್ನು ಕಟ್ಟುವ ಪ್ರಯತ್ನಗಳು ನಡೆದಿವೆ. ಆಗ ಗಣಪತಿ ದೇವರು ಇದು ಇಲ್ಲಿಗೆ ಬರುವ ಭಕ್ತರಿಗೆ ದರ್ಶನಕ್ಕೆ ಅಡ್ಡಿಯಾಗುತ್ತದೆ ಎಂದು ಅದನ್ನು ತಡೆದನಂತೆ. ಹಾಗಾಗಿ ಇಲ್ಲಿ ಗಣಪನಿಗೆ ಒಂದು ಗೋಡೆಯನ್ನೂ ನಿರ್ಮಿಸಲಾಗಿಲ್ಲ. ಬದಲಿಗೆ ಮರವೊಂದರ ನೆರಳಲ್ಲಿ ಬಯಲನ್ನೇ ಆಲಯವಾಗಿರಿಸಿಕೊಂಡು ಇಲ್ಲಿನ ಗಣಪತಿ ಇದ್ದಾನೆ. ಯಾವುದೇ ಸಮಯದಲ್ಲಿ ಭಕ್ತರು ಗಣಪತಿಯ ದರ್ಶನ ಪಡೆಯಬಹುದು.

ಇಲ್ಲಿ ಗೋಮಾಳ, ಪೂಜಾ ಸಾಮಗ್ರಿಗಳ ಚಿಕ್ಕ ಅಂಗಡಿ, ಪೂಜಾ ಟಿಕೆಟ್ ಮತ್ತು ಪ್ರಸಾದ ವಿತರಣೆಗೆ ಚಿಕ್ಕ ಕಚೇರಿ ಮತ್ತು ಪ್ರಸಾದ ತಯಾರಿಸುವ ದೇಗುಲದ ಅಡುಗೆ ಕೋಣೆ ಇಲ್ಲಿದೆ. ಪ್ರಸಾದ ನಿಲವೂ ಇದ್ದು ಬರುವ ಭಕ್ತಾದಿಗಳಿಗೆ ದಿನವೂ ಅನ್ನಸಂತರ್ಪಣೆ ಇರುತ್ತದೆ.

ದಿನವೂ ಇಲ್ಲಿ ಗಣ ಹೋಮ ಹಾಗೂ ಪ್ರತಿ ಸಂಕಷ್ಟ ಚತುರ್ಥಿ ಮತ್ತು ಗಣಪತಿ ಹಬ್ಬಗಳಲ್ಲಿ ಗಣಹೋಮ ಸಹಿತ ವಿಷೇಶ ಪೂಜೆ ಇರುತ್ತದೆ. ಅವಲಕ್ಕಿ ಪಂಚಕಜ್ಜಾಯ ಇಲ್ಲಿನ ವಿಶೇಷ ಪ್ರಸಾದ. ಭಕ್ತರು ಪಂಚಕಜ್ಜಾಯ ಸೇವೆ ಮಾಡಲು ಇಚ್ಛಿಸಿದರೆ ಇಲ್ಲಿರುವ ಸಾಕಷ್ಟು ಹಸುಗಳಿಗೂ ತಿನ್ನಿಸಬೇಕು.