ಪೂಜ್ಯಾಯ ರಾಘವೇಂದ್ರಾಯ..ಸತ್ಯಧರ್ಮ ರತಾಯ ಚ

ಭಜತಾಂ ಕಲ್ಪವೃಕ್ಷಾಯ.. ನಮತಾಂ ಕಾಮಧೇನವೇ..

ನಿಜಾರ್ಥದಲ್ಲಿ ದೈವಿಕ ಪ್ರವಾಸಗೈಯ್ಯುತ್ತಿದೆ ಪ್ರವಾಸಿ ಪ್ರಪಂಚ. ಜಗತ್ತಿನಾದ್ಯಂತ ಭಕ್ತಕೋಟಿಯನ್ನು ಶಿಷ್ಯವೃಂದವನ್ನು ಹೊಂದಿರುವ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಪ್ರವಾಸಿ ಪ್ರಪಂಚ ಭೇಟಿಕೊಟ್ಟು ಗುರುರಾಯರ ದರ್ಶನ ಪಡೆದು ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ತೆಗೆದುಕೊಂಡ ಧನ್ಯತೆ ಅನುಭವಿಸಿದೆ. ಪ್ರವಾಸಿ ಪ್ರಪಂಚದ ಪಾಲಿಗೆ ಇದೊಂದು ಮಹತ್ವದ ಮೈಲಿಗಲ್ಲು. ಈ ಮೂಲಕ ನಾಡಿನ ಕೋಟ್ಯಂತರ ಭಕ್ತಾದಿಗಳಿಗೂ, ರಾಯರ ಅನುಯಾಯಿಗಳಿಗೂ ಮಂತ್ರಾಲಯ ಕ್ಷೇತ್ರದ ಸಚಿತ್ರ ವರದಿ ನೀಡುತ್ತಿದೆ. ಗುರುರಾಘವೇಂದ್ರರ 354ನೇ ಆರಾಧನಾ ಮಹೋತ್ಸವಕ್ಕೆ ದಿನಗಣನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಓದುಗರ ಕೈ ಸೇರುತ್ತಿರುವ ಪತ್ರಿಕೆ ಸಾಕ್ಷಾತ್ ರಾಯರ ಆಶೀರ್ವಾದವನ್ನೆ ಹೊತ್ತು ತರುತ್ತಿದೆ ಎಂದರೆ ಅದು ಅತಿಶಯೋಕ್ತಿ ಏನಲ್ಲ.

ತುಂಗಾತೀರದಿ ನಿಂತ ಸುಯತಿ ವರನಾರೇ... ಪೇಳಮ್ಮಯ್ಯ..

ಸಂಗೀತಪ್ರಿಯ ಮಂಗಳ ಸುಗುಣತರಂಗ ಮುನಿಕುಲೋತ್ತುಂಗ.. ಕಾಣಮ್ಮ.. ಕಾಣಮ್ಮ....

ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಕುರಿತಾಗಿ, ಮಂತ್ರಾಲಯ ಮಹಾತ್ಮೆಯ ಕುರಿತಾಗಿ, ಆರಾಧನೆಯ ಕುರಿತಾಗಿ ಈ ದೇಶದ ಭಕ್ತಸಮೂಹ ಅರಿಯದೇ ಹೋದದ್ದು ಏನೂ ಇಲ್ಲ. ವರ್ಷಕ್ಕೊಮ್ಮೆ ನಡೆಯುವ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗಳ ಆರಾಧನೆ ಶ್ರದ್ಧೆ ಮತ್ತು ಭಕ್ತಿಯ ಸಮಾಗಮ. ರಾಯರು ಅಂದರೆ ದೇವರು, ದೇವದೂತರು, ದೈವಾಂಶ ಸಂಭೂತರು.. ಏನೇ ಅಂದರೂ ಅದು ಸತ್ಯವೇ. ನಂಬಿದವರ್ ಭಾವಭಕುತಿಗೆ ತಕ್ಕಂತೆ ಕಂಡ ವಿಶ್ವವಂದಿತರು ಗುರುರಾಯರು. ಸಂಗೀತ, ಸಾಹಿತ್ಯವನ್ನು ಆವಾಹಿಸಿಕೊಂಡಿದ್ದ ಸರಸ್ವತಿಪುತ್ರರಾಗಿದ್ದರು ರಾಘವೇಂದ್ರಸ್ವಾಮಿಗಳು. ಮಧ್ವಮತವನ್ನು ದೇಶಾದ್ಯಂತ ಪ್ರಚಾರ ಮಾಡಿದ ರಾಯರು ಜನರಿಗೆ ಮುಕ್ತಿ ಮಾರ್ಗ ತೋರಿಸಲೆಂದೇ ಅವತರಿಸಿದ ಯತಿವರ್ಯರು. ವೀಣೆ ಹಿಡಿದೆ ಹಾಡಲು ಕುಳಿತರೆ ಇಡೀ ಜಗತ್ತು ತಲೆದೂಗಿ ಮೈಮರೆಯುತ್ತಿತ್ತು.

manthralaya 5 (1)

ರಾಯರು ಬೃಂದಾವನದಲ್ಲಿ ಐಕ್ಯರಾಗಿ ಮುನ್ನೂರಾ ಐವತ್ನಾಲ್ಕು ವರ್ಷಗಳು ಉರುಳಿವೆ. ರಾಘವೇಂದ್ರ ಸ್ವಾಮಿಗಳು ಇಂದಿಗೂ ಬೃಂದಾವನದಲ್ಲೇ ನೆಲೆಸಿದ್ದಾರೆ. ಇನ್ನೂ ಮುನ್ನೂರಾನಲವತ್ತಾರು ವರ್ಷಗಳನ್ನು ಅಲ್ಲಿಯೇ ಸವೆಸಲಿದ್ದಾರೆ. ಏಳುನೂರು ವರ್ಷಗಳು ಬೃಂದಾವನದಲ್ಲಿದ್ದು ಎಲ್ಲ ಜನರ ಸಂಕಷ್ಟಗಳನ್ನು ಪರಿಹರಿಸುವುದಾಗಿ ರಾಯರೇ ಹೇಳಿಕೊಂಡಿದ್ದರೆಂಬ ಮಾತಿದೆ. ಬೃಂದಾವನಸ್ಥರಾದ ನಂತರವೂ ರಾಯರು ಹಲವರಿಗೆ ದರ್ಶನ ಕೊಟ್ಟಿದ್ದು ರಾಯರ ಇರುವಿಕೆಗೆ ಸಾಕ್ಷಿಯಾಗಿದೆ.

ವಿಶ್ವದ ಎಲ್ಲೆಡೆಯೂ ರಾಯರ ಭಕ್ತರಿದ್ದಾರೆ.ಮಂತ್ರಾಲಯಕ್ಕೆ ಬಂದು ಪಾವನರಾದವರಿದ್ದಾರೆ. ಬೃಂದಾವನ ದರ್ಶನದಿಂದ ಬದುಕಿನಲ್ಲಿ ಮಹತ್ತರ ಬದಲಾವಣೆ, ಏಳಿಗೆ, ನೆಮ್ಮದಿ ಶಾಂತಿ ಹೊಂದಿದವರಿದ್ದಾರೆ. ಭಕ್ತರ ಶಕ್ತಿಕೇಂದ್ರವೆನಿಸಿರುವ ಮಂತ್ರಾಲಯದ ಬೃಂದಾವನದಲ್ಲಿ ನಿಜಕ್ಕೂ ಅನೂಹ್ಯ ಶಕ್ತಿ ಇದೆ. ಹಾಗಂತ ಇದು ಕೇವಲ ಧಾರ್ಮಿಕ ಕೇಂದ್ರವಲ್ಲ. ಸಾಮಾಜಿಕ ಕೈಂಕರ್ಯಗಳಿಂದಲೂ ಸಮಾಜವನ್ನು ಮೇಲಕ್ಕೆತ್ತುತ್ತಾ, ಅಶಕ್ತರಿಗೆ ಶಕ್ತಿ ನೀಡುತ್ತಾ ಮುನ್ನಡೆದಿದೆ. ಪ್ರಸ್ತುತ ಗುರುಗಳಾಗಿರುವ ಶ್ರೀ ಸುಬುಧೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಭಕ್ತರ ಕಷ್ಟಕಾರ್ಪಣ್ಯಗಳು ಕಳೆಯುತ್ತಿವೆ. ಅಶಕ್ತರಿಗೆ ಆತ್ಮಸ್ಥೈರ್ಯ ದೊರಕುತ್ತಿದೆ. ಇನ್ನೊಂದು ವಾರದಲ್ಲಿ 354ನೇ ಆರಾಧನಾ ಮಹೋತ್ಸವ ನಡೆಯಲಿದ್ದು, ಈ ಹೊತ್ತಿನಲ್ಲಿ ಪ್ರವಾಸಿ ಪ್ರಪಂಚಕ್ಕೆ ಮಂತ್ರಾಲಯ ದರ್ಶನ ಭಾಗ್ಯ ದೊರೆತಿರುವುದು ಪುಣ್ಯ ಮತ್ತು ಹೆಮ್ಮೆ.

ಕಾಯೋ ಗುರುರಾಯ…

ಭಾರತ ದೇಶದ ವೈದಿಕ ಸಿದ್ಧಾಂತ ತತ್ವಗಳ. ಧರ್ಮಗಳ ಪ್ರಚಾರಕ್ಕಾಗಿ ಲೋಕಮಾನ್ಯ ಗ್ರಂಥಗಳನ್ನು ರಚಿಸಿ, ಮಹದುಪಕಾರ ಮಾಡಿ ಮಾನವ ಜನಾಂಗದ ಕಲ್ಯಾಣ, ನಾಡು, ನುಡಿಗಳ ಬೆಳವಣಿಗೆ ಅಭಿವೃದ್ಧಿಗಾಗಿ, ಶಾಂತಿ ಸ್ಥಾಪನೆಗಾಗಿ ತಮ್ಮ ಅಖಂಡ ಪುಣ್ಯ ರಾಶಿಯನ್ನು ಕಾಮಧೇನು, ಕಲ್ಪವೃಕ್ಷದಂತೆ ಧಾರೆಯೆರೆಯುತ್ತಾ ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿದವರು ಶ್ರೀರಾಘವೇಂದ್ರ ಗುರುಸಾರ್ವಭೌಮರು.

ಹೌದು, ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರೂ ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎಂಬುದು ಅಸಂಖ್ಯಾತ ಭಕ್ತರ ಆಗಾಧ ನಂಬಿಕೆ.

ಆಂಧ್ರಪ್ರದೇಶದಲ್ಲಿದ್ದರೂ ಕರ್ನಾಟಕದ ಭಕ್ತಾದಿಗಳೇ ಹೆಚ್ಚು ಸಂದರ್ಶಿಸುವ ಕ್ಷೇತ್ರ ಅಂದರೆ ಅದು ಮಂತ್ರಾಲಯ. ಮಂತ್ರಾಲಯ ಕೇವಲ ಪುಣ್ಯಕ್ಷೇತ್ರ ಮಾತ್ರವೇ ಅಲ್ಲ, ಅಧ್ಯಾತ್ಮಿಕ ಮತ್ತು ದೈವಿಕ ಪ್ರವಾಸಿ ತಾಣವೂ ಹೌದು.

ಎಲ್ಲಿದೆ ಮಂತ್ರಾಲಯ?

ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ 74 ಕಿ.ಮೀ ಮತ್ತು ಹೈದರಾಬಾದ್ ನಿಂದ 250 ಕಿ.ಮೀ ದೂರದಲ್ಲಿರುವ ಪವಿತ್ರ ಪಟ್ಟಣ. ಕರ್ನಾಟಕದ ಗಡಿಯ ಬಳಿ ಮತ್ತು ತುಂಗಭದ್ರಾ ನದಿಯ ದಡದಲ್ಲಿರುವ ಮಂತ್ರಾಲಯ ಕರ್ನಾಟಕದ್ದೇ ಅನಿಸುವ ಭಾವ ಕೊಡುತ್ತದೆ.

​ಮೂಲ ಬೃಂದಾವನಂ

​ಹಿಂದೂ ಧಾರ್ಮಿಕ ಸ್ಥಳವಾಗಿರುವ ಮಂತ್ರಾಲಯದಲ್ಲಿರುವುದೇ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ. ಶ್ರೀ ಗುರು ರಾಘವೇಂದ್ರ ಸ್ವಾಮಿ (೧೬೦೧-೧೬೭೧) ಹಿಂದೂ ಧರ್ಮದ ಅತ್ಯಂತ ಪೂಜನೀಯ ಸಂತರು. ವೈಷ್ಣವ ಸಂಪ್ರದಾಯ ಮತ್ತು ಶ್ರೀ ಮಧ್ವಾಚಾರ್ಯರ ದ್ವೈತ ತತ್ವವನ್ನು ಪ್ರತಿಪಾದಿಸಿದ ಧೀಮಂತ ಯತಿಗಳು.

ಭಕ್ತ ​ಪ್ರಹ್ಲಾದರ ಪುನರ್ಜನ್ಮ

ಶ್ರೀ ರಾಘವೇಂದ್ರ ಸ್ವಾಮಿ ತಮ್ಮ ಜೀವಿತಾವಧಿಯಲ್ಲಿ ಅನೇಕ ಅದ್ಭುತಗಳನ್ನು ಮಾಡಿದ್ದಾರೆ. ಇಂದಿಗೂ ತಮ್ಮ ಭಕ್ತರ ಬದುಕಲ್ಲಿ ಪವಾಡ ನಡೆಸಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಮಂತ್ರಾಲಯ ಕ್ಷೇತ್ರ ಸಂಪೂರ್ಣವಾಗಿ ಸಮರ್ಪಿತವಾಗಿರುವುದೇ ಗುರು ರಾಘವೇಂದ್ರ ಸ್ವಾಮಿಗಳಿಗೆ. ಅವರನ್ನು ನರಸಿಂಹ ಅವತಾರದಲ್ಲಿ ವಿಷ್ಣುವಿನಿಂದ ರಕ್ಷಿಸಲ್ಪಟ್ಟ ಭಕ್ತ ಪ್ರಹ್ಲಾದನ ಪುನರ್ಜನ್ಮ ಎಂದು ಕೂಡ ಪರಿಗಣಿಸಲಾಗಿದೆ.

​ಸಾಂಪ್ರದಾಯಿಕ ಉಡುಗೆ

​ಬೆಳಗ್ಗೆ6 ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ದೇವಾಲಯ ತೆರೆದಿರುತ್ತದೆ. ಇಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸುವುದು ಕಡ್ಡಾಯ. ಅದು ರಾಯರಿಗೆ ಮತ್ತು ಧಾರ್ಮಿಕ ಸಂಪ್ರದಾಯಕ್ಕೆ ನೀಡುವ ಗೌರವ. ಧಾರ್ಮಿಕ ಪ್ರದೇಶಗಳಿಗೆ ಪ್ರವೇಶಿಸಲು ಪುರುಷರು ಧೋತಿ , ಮಹಿಳೆಯರು ಸೀರೆ ಅಥವಾ ಸಲ್ವಾರ್ ಕಮೀಜ್ ಧರಿಸಬೇಕು. ಭಕ್ತಾದಿಗಳ ಪ್ರದಕ್ಷಿಣೆ. ಹೆಜ್ಜೆ ನಮಸ್ಕಾರ, ಉರುಳು ಸೇವೆಗಳು ಇಲ್ಲಿ ಸರ್ವೇಸಾಮಾನ್ಯ..

​​ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ

ಮಠದ ಗರ್ಭಗುಡಿಗೆ ಪ್ರವೇಶಿಸುವ ಮೊದಲು, ತುಂಗಭದ್ರಾ ನದಿಯ ದಡದಲ್ಲಿ, ಅಥವಾ ಮಠದ ಮುಂಭಾಗದ ಟ್ಯಾಪ್‌ನಲ್ಲಿ ಸ್ನಾನ ಮಾಡಿ ಅಥವಾ ಕನಿಷ್ಠ ನಿಮ್ಮ ಪಾದಗಳನ್ನು ತೊಳೆದು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸ್ಥಳಕ್ಕೆ ಹೋಗಬಹುದು. ಅದಕ್ಕೂ ಮುನ್ನ ದೇವತೆ ಮಂಚಲಮ್ಮ ದರ್ಶನ ಆಗುತ್ತದೆ. ನಂತರ ಮಠದ ಮುಂದೆ ಕ್ಯೂ ಕಾಂಪ್ಲೆಕ್ಸ್ ಮೂಲಕ ಮಠದ ಗರ್ಭಗುಡಿಗೆ ಪ್ರವೇಶ. ದರ್ಶನದ ನಂತರ, ಶ್ರೀ ರಾಘವೇಂದ್ರ ಸ್ವಾಮಿಯ ಸ್ತೋತ್ರಗಳನ್ನು ಜಪಿಸುತ್ತಾ ಗರ್ಭಗುಡಿ ಸುತ್ತಲೂ ಪ್ರದಕ್ಷಿಣೆ ಹಾಕಬಹುದು. ಓಂ ಶ್ರೀ ರಾಘವೇಂದ್ರಾಯ ನಮ: ಎಂದು ಜಪಿಸಬಹುದು.

​ಪರಿಮಳ ಪ್ರಸಾದ

​ಪ್ರತಿಯೊಬ್ಬ ರಾಯರ ಭಕ್ತರಿಗೂ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. 50ರು ಮೀರಿದ ಸೇವೆಗಳನ್ನು ನೀಡುತ್ತಿದ್ದರೆ, ಬೆಳಿಗ್ಗೆ 8 ಗಂಟೆಯ ಮೊದಲು ಗರ್ಭಗುಡಿಯ ಬಲಭಾಗದಲ್ಲಿರುವ ಸೇವಾ ಹಾಲ್‌ನಲ್ಲಿ ಇರಬೇಕು. ಅದಕ್ಕೆ ನೀವು ಹಿಂದಿನ ದಿನವೇ ಸೇವಾ ಟಿಕೆಟ್‌ಗಳನ್ನು ಖರೀದಿಸಬೇಕಾಗುತ್ತದೆ.

ಪರಿಮಳ ಪ್ರಸಾದ ಇಲ್ಲಿನ ವಿಶೇಷ ರೀತಿಯ ಪ್ರಸಾದಗಳಾಗಿವೆ. ಇದನ್ನು ಮಂತ್ರಾಲಯದಲ್ಲಿ ಬೃಂದಾವನಕ್ಕೆ ಸಮರ್ಪಿಸಲಾಗುತ್ತದೆ. ದೇಗುಲದ ಹೊರಗಿನ ಕೌಂಟರ್‌ಗಳಲ್ಲಿ ಮಾತ್ರ ಇದು ಲಭ್ಯವಿರುತ್ತದೆ. ರಾಯರು ಪರಿಮಳ ಎನ್ನುವ ಗ್ರಂಥವನ್ನು ಬರೆದಿದ್ದರು. ಇದು ನಾಡಿನಲ್ಲೆಡೆ ಪಸರಿಸಲಿ ಎನ್ನುವ ಕಾರಣಕ್ಕೆ ಈ ವಿಶೇಷ ಪ್ರಸಾದಕ್ಕೆ ಪರಿಮಳ ಎನ್ನುವ ಹೆಸರನ್ನು ಇಡಲಾಗಿದೆ.

​ಸಾಮೂಹಿಕ ಭೋಜನ

​ಮಧ್ಯಾಹ್ನದ ಸಮಯದಲ್ಲಿ ಅನ್ನಪೂಣ೯ ಭೋಜನಾ ದೊಡ್ಡ ಊಟದ ಹಾಲ್‌ನಲ್ಲಿ ಸಾಮೂಹಿಕ ಊಟ ನಡೆಯುತ್ತದೆ. ರಾತ್ರಿಯ ಸಮಯದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

​ಪ್ರಮುಖ ಆಕರ್ಷಣೆ

ಇಲ್ಲಿನ ಪ್ರಮುಖ ಆಕರ್ಷಣೆ ದೇವಾಲಯ ಮತ್ತು ಮಠ ಸಂಕೀರ್ಣ. ದೇವಾಲಯದ ಸುತ್ತಲೂ ನಿತ್ಯ ದೇವರನ್ನು ಹೊತ್ತೊಯ್ಯುವ ದೇವಾಲಯದ ರಥಗಳು ಅದ್ಭುತ ದೃಶ್ಯವಾಗಿದ್ದರೆ, ತುಂಗಭದ್ರಾ ನದಿಯೂ ಸಹ ನೋಡಬೇಕಾದ ಆಕರ್ಷಣೆಯಾಗಿದೆ. ಜೊತೆಗೆ ಮಂತ್ರಾಲಯಕ್ಕೆ ಪ್ರವೇಶದ ದ್ವಾರದ ಬಳಿ ಬೃಹತ್‌ ಅಭಯಾಂಜನೇಯ ದೇಗುಲವಿದೆ. ಇಲ್ಲಿಗೆ ಪ್ರತಿಯೊಬ್ಬರೂ ಭೇಟಿ ನೀಡಿ ಕೆಲಸ ಸಮಯ ಧ್ಯಾನ ಮಾಡಿ ಫೋಟೋ ಕ್ಲಿಕಿಸಬಹುದು.

manthralaya

​ತಲುಪುವುದು ಹೇಗೆ?

​ಮಂತ್ರಾಲಯವು ರೈಲು ಮತ್ತು ರಸ್ತೆ ಮೂಲಕ ಭಾರತದ ಉಳಿದ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ನಿಯಮಿತ ರೈಲು ಮತ್ತು ಬಸ್ ಸೇವೆಗಳು ಮಂತ್ರಾಲಯ ನಗರಕ್ಕೆ ಹೋಗುತ್ತವೆ. ಬಸ್ಸುಗಳನ್ನು ಆಂಧ್ರಪ್ರದೇಶದ ರಸ್ತೆ ಸಾರಿಗೆ ನಿರ್ವಹಿಸುತ್ತವೆ. ಅಲ್ಲದೇ ಕರ್ನಾಟಕದಿಂದಲೂ ಅತಿ ಹೆಚ್ಚು ಬಸ್‌ಗಳ ಸಂಪರ್ಕ ಇದೆ. ಆದಾಗ್ಯೂ, ಮಂತ್ರಾಲಯಕ್ಕೆ ನೇರ ವಿಮಾನ ಸಂಪರ್ಕವಿಲ್ಲ. ಸುಮಾರು 250 ಕಿ.ಮೀ ದೂರದಲ್ಲಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ, ಇದು ಮಂತ್ರಾಲಯವನ್ನು ಭಾರತದ ಇತರ ಭಾಗಗಳಿಗೆ ಸಂಪರ್ಕಿಸುವ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಮಂತ್ರಾಲಯಕ್ಕೆ ಭೇಟಿಯಿತ್ತಾಗ ಸಂಜೆ ಆರತಿ ಸಮಯಕ್ಕೆ ಬಿಡುವು ಮಾಡಿಕೊಂಡರೆ ರಾಯರ ದರ್ಶನ ಮತ್ತು ಪೂಜೆ ಎಲ್ಲವೂ ದೊರೆಯುತ್ತದೆ. ಪಂಚಮುಖಿ ಆಂಜನೇಯ ದೇವಸ್ಥಾನ, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮತ್ತು ವೈದಿಕ ಮಾರ್ಗಗಳು ಸಂಕೀರ್ಣದ ಭೇಟಿ ನೀಡುವ ಇತರ ತಾಣಗಳಾಗಿವೆ.

ಹಸಿರು ಮಂತ್ರಾಲಯ -ಸ್ವಚ್ಛತೆಗೆ ಪ್ರಾಶಸ್ತ್ಯ

ಮಂತ್ರಾಲಯದಲ್ಲಿ ವೃಕ್ಷ ಪ್ರಸಾದ ಎಂಬ ಹೆಸರಿನಲ್ಲಿ ಸಸಿಯನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ಮಕ್ಕಳಿಗಾಗಿಯೇ ಎಪ್ಪತ್ತು ಲಕ್ಷಕ್ಕೂ ಹೆಚ್ಚು ವೆಚ್ಚದ ಹಸಿರು ಉದ್ಯಾನ ನಿರ್ಮಾಣವಾಗಿದೆ. ಮಂತ್ರಾಲಯ ಎಂಬುದು ಕಟ್ಟಡಗಳ ಬೀಡಾಗಬಾರದು ಎಂಬ ಕನಸು ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರದ್ದು. ಅವರ ಆಶಯದಂತೆ ರಾಯರ ಕ್ಷೇತ್ರವನ್ನು ಸ್ವಚ್ಛ ಮತ್ತು ಹಸಿರು ಮಂತ್ರಾಲಯವಾಗುವ ಸರ್ವ ಶ್ರಮ ನಡೆಯುತ್ತಲೇ ಇದೆ.

ಗೋಶಾಲೆ ಎಂಬ ಪ್ರೇಕ್ಷಣೀಯ ತಾಣ

ಯಾತ್ರಾರ್ಥಿಗಳು ಮಂತ್ರಾಲಯದ ಗೋಶಾಲೆಗೆ ಭೇಟಿ ನೀಡದೇ ಬಂದಲ್ಲಿ ಕಾಮಧೇನುವಿನ ದರ್ಶನ ಕಳೆದುಕೊಂಡಂತೆ. ಇಲ್ಲಿ ಸುಸ್ಥಿತಿಯಲ್ಲಿರುವ ಗೋವುಗಳಿಗಿಂತ ಬರಪೀಡಿತ ಜಾಗಗಳಲ್ಲಿರುವ, ಬಡ ರೈತರಿಗೆ ಸೇರಿದ್ದ ಈ ವಾರಸುದಾರರಿಲ್ಲದ ಗೋವುಗಳಿಗೆ ಆದ್ಯತೆ ನೀಡು ಅವುಗಳೀಗೆ ಅನ್ನಾಹಾರ ನೀಡಿ ಸಲಹುವ ಕೆಲಸ ನಡೆಯುತ್ತದೆ. ಶ್ರೀಗಳು ಅತ್ಯಂತ ಆಪ್ತತೆಯಿಂದ ಗೋವುಗಳೊಂದಿಗೆ ಸಮಯ ಕಳೆದು ಅವುಗಳನ್ನು ಲಾಲಿಸುತ್ತಾರೆ.

ಶಕ್ತಿ ಕೇಂದ್ರಗಳ ದರ್ಶನ

ಮಂತ್ರಾಲಯದ ಧಾರ್ಮಿಕ ಪ್ರವಾಸ ಗುರುರಾಯರ ಬೃಂದಾವನ ಸನ್ನಿಧಿಗಷ್ಟೇ ಸೀಮಿತವಾಗಿಲ್ಲ. ಇಲ್ಲಿ ಸುತ್ತ ಮುತ್ತ ಕೇವಲ ಅರ್ಧ ಗಂಟೆಯಷ್ಟು ಪ್ರಯಾಣದಲ್ಲಿ ಹಲವಾರು ಶಕ್ತಿ ಕೇಂದ್ರಗಳಿವೆ.

ಗಾಣಧಾಳ ಪಂಚಮುಖಿ ಪ್ರಾಣದೇವರು, ಬಿಚ್ಚಾಲಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಸ್ವಪ್ನ ಬೃಂದಾವನ, ಶ್ರೀ ಗುರುರಾಯರ ಶಿಷ್ಯರಾದ ಅಪ್ಪಣ್ಣಾಚಾರ್ಯರ ಮನೆ, ಶ್ರೀ ವಿಜಯದಾಸರ ಕಟ್ಟೆ ಮತ್ತು ಕಲ್ಲೂರು ಕ್ಷೇತ್ರಗಳ ದರ್ಶನ ಪಡೆಯಬಹುದು.

ಪಂಚಮುಖಿ ಪ್ರಾಣದೇವರು

ಗಾಣಧಾಳ ಸಮೀಪದಲ್ಲಿ ಇರುವ ಹೆಬ್ಬಂಡೆಗಳು ಶ್ರೀ ರಾಘವೇಂದ್ರ ಸ್ವಾಮಿಗಳು ಅಖಂಡ ಹನ್ನೆರಡು ವರ್ಷ ತಪಸ್ಸು ಮಾಡಿದ ಸ್ಥಳ ಈ ಪಂಚಮುಖಿ ಎಂಬ ಪುಣ್ಯಸ್ಥಳ. ರಾಯರ ತಪಸ್ಸಿಗೆ ಮೆಚ್ಚಿ ಶ್ರೀ ವೆಂಕಟರಮಣ ಸ್ವಾಮಿ, ಕೊಲ್ಹಾಪುರ ಮಹಾಲಕ್ಷ್ಮಿ ಮತ್ತು ಪಂಚಮುಖಿ ಆಂಜನೇಯ ದರ್ಶನ ನೀಡಿದ್ದು ಇಲ್ಲಿಯೇ. ಇಲ್ಲಿ ಬಂದು ದರ್ಶನ ಪಡೆದರೆ ತಿರುಪತಿಯ ವೆಂಕಟೇಶ್ವರ ದರ್ಶನ ಕೂಡ ಸಿಗುತ್ತದೆಂಬ ನಂಬಿಕೆ ಇದೆ.

ಎಲೆ ಬಿಚ್ಚಾಲಿಯ ಸ್ವಪ್ನ ಬೃಂದಾವನ

ಪಂಚಮುಖಿಗೆ ಬರುವ ಮುನ್ನ ಗುರುರಾಯರು ಬಿಚ್ಚಾಲಿಯಲ್ಲಿ ಸುಮಾರು 12 ವರ್ಷ ತಪಸು ಮಾಡಿದ ಸ್ಥಳ ಎನ್ನುವ ಇತಿಹಾಸ ಇದೆ. ಮಂತ್ರಾಲಯ ಹೊರತು ಪಡಿಸಿದರೆ ಶ್ರೀರಾಯರ ಏಕಶಿಲಾ ಬೃಂದಾವನ ಇರುವುದು ಈ ಎಲೆ ಬಿಚ್ಚಾಲಿಯಲ್ಲಿ ಮಾತ್ರ. ಅವರ ಅಂತರಂಗ ಶಿಷ್ಯರಾಗಿದ್ದ ಅಪ್ಪಣ್ಣಚಾರ್ಯರ ನೆಲೆವೀಡು ಇದು. ಏಳು ಅಡಿ ಸರ್ಪ ಇಲ್ಲಿ ವಾಸವಿದ್ದು ಗ್ರಾಮದ ಜನರಿಗೆ ವಾಸ ಮಾಡಲು ಭಯ ಎದುರಾದಾಗ ಶ್ರೀ ಗುರುರಾಘವೇಂದ್ರ ಮಹಾಸ್ವಾಮಿಗಳು ಇಲ್ಲಿ ತಪಸ್ಸು ಮಾಡಿ ಆ ಸಮಸ್ಯೆ ನಿವಾರಣೆ ಮಾಡಿದರು ಎನ್ನುವ ಪ್ರತೀತಿ ಇದೆ. ಈಗ ಅಲ್ಲಿನ ಏಕಶಿಲಾ ಬೃಂದಾವನದ ಹಾಲಿ ಅರ್ಚಕರಾಗಿ ಅಪ್ಪಣ್ಣಾಚಾರಿ ಮೊಮ್ಮಗ ಬಾಡದ ಕೃಷ್ಣಾಚಾರ್ಯರು ನಿತ್ಯದ ಪೂಜೆ ಕೈಂಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿಗೆ ಬರುವ ಭಕ್ತರಿಗೆ ಇತಿಹಾಸವನ್ನು ತಿಳಿಸುವ ಮೂಲಕ ಗುರುರಾಯರ ಹಾಗೂ ಅಪ್ಪಣ್ಣ ಅಚಾರ್ಯರ ನಡುವಿನ ಗುರು-ಶಿಷ್ಯ ಸಂಬಂಧ ತಿಳಿಯಬಹುದಾಗಿದೆ.

ಕಲ್ಲೂರು ಲಕ್ಷ್ಮಿ ದರ್ಶನ

ವಿದ್ವಾಂಸರಾಗಿದ್ದ ಲಕ್ಷ್ಮೀಕಾಂತಾಚಾರ್ಯ ಅವರಿಗೆ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ನೀಡಿದ ಐತಿಹ್ಯ ಕಲ್ಲೂರು ಕ್ಷೇತ್ರದ್ದು.

ಆಚಾರ್ಯರರಿಗೆ 88 ವರ್ಷ ಪ್ರಾಯದಲ್ಲಿದ್ದಾಗ ಒಮ್ಮೆ ಅವರಿಗೆ ಕೊಲ್ಲಾಪುರಕ್ಕೆ ಹೋಗಬೇಕಾದ ಸಂದರ್ಭ ನನಗೆ ವಯಸ್ಸಾಗಿದೆ ಕೊಲ್ಹಾಪುರಕ್ಕೆ ಬಂದು ದರ್ಶನ ಪಡೆಯಲು ಆಗುತ್ತದೋ ಇಲ್ಲವೋ ಎನ್ನುವ ಚಿಂತೆಯಲ್ಲಿಯೇ ಆಚಾರ್ಯರು ನಿದ್ರಿಸಿದರು. ಮರುದಿನ ಬೆಳಗ್ಗೆ ಎದ್ದು ಪೂಜೆಗೆ ಗಂಧ ತೇಯಲು ಸಾಣೆಕಲ್ಲು ಎತ್ತಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಅದರಲ್ಲಿ ಸಾಕ್ಷಾತ್ ಶ್ರೀಮಹಾಲಕ್ಷ್ಮಿ ಒಡಮೂಡಿದ್ದಾಳೆ. ಇದೇ ಸಾಣೆಕಲ್ಲಿನಲ್ಲಿ ಒಡಮೂಡಿದ ಶ್ರೀಮಹಾಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಅದಾದ ಕೆಲದಿನಗಳಲ್ಲಿಯೇ ಅಲ್ಲೇ ಸಮೀಪದ ಮಾಮದಪುರ ಎಂಬ ಗ್ರಾಮದಲ್ಲಿ ರೈತನೊಬ್ಬರು ಹೊಲ ಉಳುವಾಗ ನೇಗಿಲಿಗೆ ಶಿಲೆ ಎದುರಾಗುತ್ತದೆ. ಆಚಾರ್ಯರಿಗೆ ಸುದ್ದಿ ಮುಟ್ಟಿ ಅವರು ಹೋಗಿ ಅಗೆಸಿ ನೋಡಲಾಗಿ ಶ್ರೀದೇವಿ ಭೂದೇವಿ ಸಹಿತ ಶ್ರೀವೆಂಕಟೇಶ್ವರ ಸ್ವಾಮಿ. ಆ ಮೂರ್ತಿಯನ್ನು ಕಲ್ಲೂರಿಗೆ ತಂದು ಪ್ರತಿಷ್ಠಾಪಿಸುತ್ತಾರೆ. ಆಶ್ಚರ್ಯ ಮುಗಿಯುವುದಿಲ್ಲ. ತೀರ್ಥ ಇಡುತ್ತಿದ್ದ ಕಟ್ಟೆ ಮೇಲೆ ಮುಂದೆ ಮುಖ್ಯಪ್ರಾಣ ದೇವರು ಒಡಮೂಡುತ್ತಾರೆ. ಹೀಗೆ ಲಕ್ಷ್ಮೀ, ವೆಂಕಟೇಶ, ಆಂಜಿನೇಯಸ್ವಾಮಿ ಒಂದೇ ಕಡೆ ಇರುವ ಅಪರೂಪದ ತಾಣ ಕಲ್ಲೂರು.

ದಾರಿ ಹೇಗೆ?

ಮಂತ್ರಾಲಯದಿಂದ ಪಂಚಮುಖಿಗೆ (22 ಕಿ.ಮೀ) ಅಟೋಗಳು, ಬಸ್, ಜೀಪ್‌ಗಳು ಸಿಗುತ್ತವೆ. ಪಂಚಮುಖಿ, ಬಿಚ್ಚಾಲಿ, ಕಲ್ಲೂರು ಪ್ಯಾಕೇಜ್ ಮಾಡಿಸುವ ಟ್ಯಾಕ್ಸಿಗಳು ಸಿಗುತ್ತವೆ. ಮಂತ್ರಾಲಯದಿಂದ ಪಂಚಮುಖಿಗೆ ಅಲ್ಲಿಂದ ರಾಯಚೂರಿಗೆ ಬಸ್ ಗಳಿವೆ. ರಾಯರ ಸನ್ನಿಧಾನಕ್ಕೆ ಎರಡು ದಿನಗಳ ಭೇಟಿಯಾಗಿದ್ದರೆ ಮೊದಲ ದಿನ ಬೃಂದಾವನ ದರ್ಶನ ಪೂರೈಸಿ,

ಪಂಚಮುಖಿಗೆ ಹಾಗೂ ಎಲೆ ಬಿಚ್ಚಾಲಿಗೆ ಹೋಗಿಬರಬಹುದು. ಎರಡನೇ ದಿನ ರಾಯಚೂರಿಗೆ ಬಸ್‌ನಲ್ಲಿ ತೆರಳಿ (45 ಕಿ.ಮೀ.) ಅಲ್ಲಿಂದ ಕಲ್ಲೂರಿಗೆ (25 ಕಿ.ಮೀ.) ಹೋಗಿ ಶ್ರೀಮಹಾಲಕ್ಷ್ಮೀ ದರ್ಶನ ಪಡೆಯಬಹುದು. ಇನ್ನು ರಾಯಚೂರಿನಿಂದ ಮಾನ್ವಿಗೆ ತೆರಳಿ ಅಲ್ಲಿ ಜಗನ್ನಾಥ ದಾಸರ ದರ್ಶನ, ಚಿಕಲಪರ್ವಿ ಶ್ರೀವಿಜಯದಾಸರ ಕಟ್ಟೆ ಹಾಗೂ ಶ್ರೀ ಸಂಜೀವರಾಯ ದೇವಸ್ಥಾನದ ದರ್ಶನ ಪಡೆಯಬಹುದು.

ಶ್ರೀ ಸುಬುಧೇಂದ್ರ ತೀರ್ಥರು

ಪೂಜ್ಯರೂ ಪ್ರಾತಃಸ್ಮರಣೀಯರೂ ಆಗಿರುವ, ನವಮಂತ್ರಾಲಯ ನಿರ್ಮಾತೃಗಳೆಂದೇ ಪ್ರಖ್ಯಾತರಾಗಿರುವ 108 ಶ್ರೀ ಸುಜಯೀಂದ್ರ ತೀರ್ಥರು ಮೊದಲಿನಿಂದಲೂ ವಿದ್ಯಾಪಕ್ಷಪಾತಿಗಳು. ವಿದ್ವತ್ತೋಷಕರು. ಇಂಥ ವಿದ್ಯಾಭಿಮಾನಿಗಳಾದ ಶ್ರೀಸುಜಯೀಂದ್ರತೀರ್ಥ ಶ್ರೀ ಪಾದಂಗಳವರು ತಮ್ಮ ಕಿರಿಯ ಪುತ್ರರಾದ ಪಂಡಿತಕೇಸರಿ ವಿದ್ವಾನ್ ಶ್ರೀ ರಾಜಾ ಎಸ್. ಗಿರಿಯಾಚಾರ್ಯರನ್ನು ಚಿಕ್ಕಂದಿನಿಂದಲೇ ನಿರಂತರ ಶಾಸ್ತ್ರಾಭ್ಯಾಸದಲ್ಲಿ ಆಸಕ್ತರಾಗಿರುವಂತೆ ನೋಡಿಕೊಂಡರು. ಈ ಉತ್ತಮ ಮಾರ್ಗವನ್ನು ಅನುಸರಿಸಿ ಭವಿಷ್ಯದಲ್ಲಿ ಮಹಾನ್ ವಿದ್ವಾಂಸರೆಂದೆನಿಸಿಕೊಂಡ ಶ್ರೀ ರಾಜಾ ಎಸ್. ಗಿರಿಯಾಚಾರ್ಯರು ಹಾಗೂ ಅವರ ಪತ್ನಿ ಸಾಧ್ಯ ಶ್ರೀಮತಿ ಮಂಜುಳಾಬಾಯಿಯವರು ಶ್ರೀರಾಯರ ಅನುಗ್ರಹದಿಂದ ಪುತ್ರ ರತ್ನನೊಬ್ಬನನ್ನು ಪಡೆದರು. ಅವರೇ ರಾಜಾ ಎಸ್. ಪವಮಾನಾಚಾರ್ಯರು. (ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ನಾಮ). ಇವರು ಪಾಷ್ಟಿಕ ವಂಶ (ಶ್ರೀ ರಾಘವೇಂದ್ರ ಗುರುಗಳ ವಂಶ)ದ ಗೌತಮ ಗೋತ್ರದಲ್ಲಿ 1971 ರ ಏಪ್ರಿಲ್ 19ರಂದು ಆಂಧ್ರಪ್ರದೇಶದ ಕರ್ನೂಲ್ ಪಟ್ಟಣದಲ್ಲಿ ಜನಿಸಿದರು. ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ, ಮಂತ್ರಾಲಯದಲ್ಲಿ ಅಧ್ಯಯನ ನಡೆಸಿದರು. ಕಾವ್ಯಾದಿ ಪಾಠಗಳನ್ನು 108 ಶ್ರೀ ಸುಜಯೀಂದ್ರ ತೀರ್ಥರಿಂದ, ದೈತವೇದಾಂತವನ್ನು ಪೂರ್ವಾಶ್ರಮದ ಪಿತೃಪಾದರಾದ ವಿದ್ವಾನ್ ಶ್ರೀ ರಾಜಾ ಎಸ್. ಗಿರಿಯಾಚಾರ್ಯರಿಂದ, ವ್ಯಾಕರಣವನ್ನು ಶ್ರೀ ಪೇರಿ ಸೂರ್ಯನಾರಾಯಣ ಶಾಸ್ತಿಗಳಿಂದ ಕಲಿತಿದ್ದಾರೆ. 'ವ್ಯಾಸ ದಾಸ ಸಮನ್ವಯ ಪೀಠ, ಅಧ್ಯಾತ್ಮಿಕ ಕೇಂದ್ರ, ಮಂತ್ರಾಲಯ" ಎಂಬ ಹೆಸರಿನ ಸಂಸ್ಥೆಯನ್ನು ಪೂರ್ವಶ್ರಮದ ತಂದೆಯವರೊಡನೆ ಸ್ಥಾಪಿಸಿದ್ದರು.

shree subudendra

ಆರಾಧನೆಯ ಪೂರ್ವಭಾವಿ ತಯಾರಿಯಲ್ಲಿ ಇರುವ ಮಂತ್ರಾಲಯ ಅದರ ಸುತ್ತಮುತ್ತ ಇರುವ ಗುರುವಾರದಂದು ಎಂದಿಗಿಂಟ ಹೆಚ್ಚು ಭಕ್ತಾದಿಗಳನ್ನು ಸೆಳೆಯುತ್ತದೆ. ಈ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥರ ದರ್ಶನ ಮತ್ತು ಆಶೀರ್ವಾದ ಪಡೆಯಲು ಹಾಗೂ ಅವರಿಂದ ಮಂತ್ರಾಕ್ಷತೆ ಸ್ವೀಕರಿಸಲು, ಭಕ್ತಾದಿಗಳ ದಂಡೇ ನೆರೆಯುತ್ತದೆ. ಇಂಥ ಸಂದರ್ಭದಲ್ಲೂ ಯತಿಗಳು ಪ್ರವಾಸಿ ಪ್ರಪಂಚ ತಂಡಕ್ಕೆ ಸಮಯ ಕೊಟ್ಟು ಸಂದರ್ಶನ ನೀಡಿದ್ದಾರೆ. ಪತ್ರಿಕೆಗೆ ಇದು ಸಾರ್ಥಕ ಕ್ಷಣ. ಪೂರ್ಣ ಸಂದರ್ಶನವನ್ನು ಪ್ರವಾಸಿ ಪ್ರಪಂಚ ಡಿಜಿಟಲ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.

ಪ್ರವಾಸಿ ಪ್ರಪಂಚ: ಶ್ರೀಗಳ ಪಾದಕ್ಕೆ ವಂದನೆಗಳು. ಈ ಮೂರು ದಿನಗಳ ಆರಾಧನೆಯ ಮಹತ್ವ ಮತ್ತು ಕಾರಣ ತಿಳಿಸುವಿರಾ?

ಶ್ರೀ ಸುಬುಧೇಂದ್ರ ತೀರ್ಥರು: ರಾಘವೇಂದ್ರ ಸ್ವಾಮಿಗಳವರ 354 ನೇ ಆರಾದನಾ ಮಹೋತ್ಸವ ಇದೇ ಆಗಸ್ಟ್ ಎಂಟರಿಂದ ಹದಿನಾಲ್ಕನೇ ತಾರೀಖಿನ ತನಕ ನಡೆಯುತ್ತದೆ. ಎಂಟರಂದು ಧ್ವಜಾರೋಹಣ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಇತ್ಯಾದಿ ಇರುತ್ತದೆ. ಒಂಬತ್ತರಂದು ಶಾಖೋತ್ಸವ, ರಾಯರಿಗಾಗಿ ನಿರ್ಮಿಸಿದ ಪರಿಮಳ ತೀರ್ಥ ಪುಷ್ಕರಣಿಯ ಉದ್ಘಾಟನೆ, ತೆಪ್ಪೋತ್ಸವ ಇತ್ಯಾದಿ ಇರುತ್ತದೆ. ಅದೇ ದಿನ ಉಪಾಕರ್ಮ ಕಾರ್ಯಕ್ರಮವೂ ಜರುಗಲಿದೆ.

ಹತ್ತನೇ ತಾರೀಖು ರಾಯರ ಪೂರ್ವಾರಾಧನ ಮಹೋತ್ಸವ ನಡೆಯುತ್ತದೆ. ಅಂದ್ರೆ ರಾಯರು ದೇಹ ತ್ಯಜಿಸಿ ಬೃಂದಾವನ ಸೇರಿದ್ದಲ್ಲ. ಅವರು ಸಶರೀರವಾಗಿ ಬೃಂದಾವನ ಸೇರಿ ಅಲ್ಲೇ ನೆಲೆಸಿರುವವರು. ಯೋಗಶಕ್ತಿಯಿಂದ ಇವತ್ತಿಗೂ ರಾಘವೇಂದ್ರ ಸ್ವಾಮಿಗಳು ಬೃಂದಾವನದಲ್ಲಿದ್ದಾರೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಗಳಿವೆ. ಬೃಂದಾವನ ಸೇರಿದ ನೂರಾ ಅರವತ್ತು ವರ್ಷಗಳ ನಂತರ ಬ್ರಿಟಿಷ್ ಅಧಿಕಾರಿಗಳು ಖುದ್ದು ಮಂತ್ರಾಕ್ಷತೆ ಸ್ವೀಕರಿಸಿರುವುದಕ್ಕೆ ದಾಖಲೆಗಳಿವೆ. ಇದು ಸಾಮಾನ್ಯ ಬೃಂದಾವನವಲ್ಲ. ಬೃಂದಾವನವಿದು ಹರಿಮಂದಿರ ಅಂತ ಗುರುಗಳೆಲ್ಲ ಕೊಂಡಾಡಿದ್ದಾರೆ. ಅವರ ಮಹಿಮೆ, ಕೀರ್ತಿ, ಪವಾಡ ಎಲ್ಲವನ್ನೂ ಭಕ್ತಾದಿಗಳು ಕಂಡಿದ್ದಾರೆ. ಅವರ ಆರಾಧನೆಗೆ ಮೂರು ದಿನವು ಕಡಿಮೆಯೇ.

ನಾಲ್ಕನೇ ದಿನ ಅಂದರೆ ಹನ್ನೊಂದನೇ ತಾರೀಕು ಬೃಂದಾವನ ಪ್ರವೇಶ ಮಾಡುವ ದಿನ. ವಿಶೇಷ ಪೂಜೆ, ಪಂಚಾಮೃತ ಪೂಜೆ ಮತ್ತು ಉತ್ಸವ ಇರುತ್ತದೆ. ಇಡೀ ವಿಶ್ವದಲ್ಲಿ ಯಾವುದಾದರೂ ಒಬ್ಬ ಮಹಾನುಭಾವರ ಉತ್ಸವ ನಡೆಯುತ್ತದೆ ಅಂದ್ರೆ ಅದು ರಾಘವೇಂದ್ರ ಸ್ವಾಮಿಗಳ ಉತ್ಸವ ಮಾತ್ರ. ದೇಶಾತೀತ, ಜಾತ್ಯಾತೀತವಾಗಿ ನಡೆಸುವ ಮಹೋತ್ಸವ ಈ ಆರಾಧನೆ.

manthralaya3

ಹನ್ನೆರಡನೇ ತಾರೀಖು ಮಹಾರಥೋತ್ಸವ. ಅದನ್ನು ರಾಯರ ಉತ್ತರಾರಾಧನೆ ಎಂದು ಕರೆಯಲಾಗುತ್ತದೆ. ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಯೂ ನಡೆಯುತ್ತದೆ. ಅಂದೇ ಅನ್ನದಾನ, ಪ್ರಸಾದ, ದರ್ಶನ ಎಲ್ಲವೂ ಇರುತ್ತದೆ. ತಿರುಪತಿ ಶ್ರೀನಿವಾಸನ ವಸ್ತ್ರ ಸಮರ್ಪಣೆಯೂ ನಡೆಯುತ್ತದೆ.

ಪ್ರವಾಸಿ ಪ್ರಪಂಚ: ಕೋಟ್ಯಂತರ ಭಕ್ತರಲ್ಲಿ ಹೆಚ್ಚೆಂದರೆ ಒಬ್ಬರಿಗೆ ಇಬ್ಬರಿಗೆ ಪುಣ್ಯಾನುಸಾರ ರಾಘವೇಂದ್ರ ಸ್ವಾಮಿಗಳ ಆತ್ಮೀಯ ಸಾಂಗತ್ಯ ದೊರೆಯುತ್ತದೆ. ನಿಮಗೆ ಅವರ ಸಾಮಿಪ್ಯ,ಸಾನ್ನಿಧ್ಯ ಎಲ್ಲವೂ ದೊರೆತಿದೆ. ಅವರೊಂದಿಗೆ ಅಲೌಕಿಕ ಸಂಪರ್ಕದ ಅನುಭವ ಹಂಚಿಕೊಳ್ಳಬಹುದಾ?

ಶ್ರೀ ಸುಬುಧೇಂದ್ರ ತೀರ್ಥರು: ರಾಯರಿಗೆ ಭೇದಭಾವವೇ ಇಲ್ಲ. ಅವರ ಅನುಗ್ರಹ ಇಂಥವರಿಗೆ ಸಿಗುತ್ತೆ ಸಿಗೋದಿಲ್ಲ ಅನ್ನೊ ಮಾತೇ ಇಲ್ಲ. ನನಗೂ ಅದೇ ರೀತಿ ಅವರ ಅನುಗ್ರಹ ಸಿಕ್ಕಿದೆ ಎಂಬುದು ನಮ್ಮ ಭಾಗ್ಯ. ಇಲ್ಲಿ ಎಲ್ಲವೂ ಅವರಿಂದಲೇ ನೆರವೇರುವುದು. ನಾವು ನಿಮಿತ್ತ ಮಾತ್ರ. ನನ್ನಂಥ ಸಾಮಾನ್ಯನನ್ನು ಪೀಠಕ್ಕೇರಿಸಿ ಅನುಗ್ರಹಿಸಿದ್ದಾರೆ. ರಾಘವೇಂದ್ರ ಸ್ವಾಮಿಗಳ ಬಗ್ಗೆ ಇದಕ್ಕಿಂತ ಇನ್ನೇನು ಹೇಳಲಿ. ನನ್ನ ಬಗ್ಗೆ ಕೇಳುವುದಕ್ಕಿಂತ ಸಹಸ್ರಾರು ಭಕ್ತರ ಅನುಭವ ಕೇಳಿ ಪಡೆದರೆ ನಿಮಗೆ ಹಲವಾರು ಅಚ್ಚರಿ ಸಿಗುತ್ತದೆ.