- ಎಂ. ಆರ್. ಸಚಿನ್

ಹದ್ದಿನಕಲ್ಲು ಹನುಮಂತರಾಯ ಬಹಳ ಪ್ರಸಿದ್ಧ ಹೆಸರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ, ಭೈರಸಂದ್ರ ಗ್ರಾಮದಲ್ಲಿದೆ ಈ ಹದ್ದಿನಕಲ್ಲು ಬೆಟ್ಟ. ಆ ಬೆಟ್ಟದ ಮೇಲಿರುವ ಶಕ್ತಿಯೇ ಹನುಮಂತರಾಯ ಸ್ವಾಮಿ. ಈ ಕ್ಷೇತ್ರದಲ್ಲಿರುವ ಹನುಮಂತನಲ್ಲಿ ಭೂತ, ಪ್ರೇತ, ಮಾಯ-ಮಂತ್ರದ ಶಂಕೆಗೆ ಒಳಗಾಗಿರುವ ವ್ಯಕ್ತಿಗಳ ಗಾಳಿ ಬಿಡಿಸುವ ಸಲುವಾಗಿ ಸಾವಿರಾರು ಜನರು ಬರುತ್ತಾರೆ. ಇದೇ ಜಾಗದಲ್ಲಿ ಹನುಮಂತನೊಂದಿಗೆ ರಾವಣನ ಮಗನಾದ ಇಂದ್ರಜಿತು ಅಥವಾ ಮೇಘನಾದನನ್ನೂ ಪೂಜಿಸುತ್ತಾರೆ ಎನ್ನುವುದೇ ಮತ್ತೊಂದು ವಿಸ್ಮಯ.

ಇಂದ್ರನನ್ನೇ ಜಯಿಸಿದ ಇಂದ್ರಜಿತುವನ್ನು ಕುಲದೇವತೆಯಾಗಿ ಪೂಜಿಸುವ ಒಂದಷ್ಟು ಜನರು ನಮ್ಮ ದೇಶದಲ್ಲೂ ಇದ್ದಾರೆ. ಹಿಮಾಚಲ ಪ್ರದೇಶದ ಸಿರ್ಮೌರ್ (Sirmour) ಜಿಲ್ಲೆಯ ಸಂಗ್ರಾ (Sangra) ಎಂಬ ಹಳ್ಳಿಯಲ್ಲಿ ಇಂದ್ರಜಿತುವನ್ನು ಶಕ್ತಿ ಮತ್ತು ಪರಾಕ್ರಮದ ಸಂಕೇತವಾಗಿ ನೋಡುತ್ತಾರೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಗೊಂಡ ಸಮುದಾಯದ ಜನರು ಮೇಘನಾದನನ್ನು ತಮ್ಮ ಪೂರ್ವಜನಾಗಿ ಮತ್ತು ದೇವತೆಯಾಗಿ ಪೂಜಿಸುತ್ತಾರೆ. ಅವರು 'ಮೇಘನಾದ ಮೇಳ' ಎಂಬ ವಾರ್ಷಿಕ ಜಾತ್ರೆಯನ್ನೂ ನಡೆಸುತ್ತಾರೆ. ಆದರೆ ಆಂಜನೇಯನೊಂದಿಗೆ ಪೂಜೆಗೊಳಪಡುವ ವಿಶಿಷ್ಟತೆ ಬೇರೆಲ್ಲೂ ಇರಲಿಕ್ಕಿಲ್ಲ. ಬಹುಶಃ ಇಂದ್ರಜಿತುವನ್ನು ಪೂಜಿಸಿ ಎಡೆ ಒಪ್ಪಿಸುವ ಪ್ರಪಂಚದ ಏಕೈಕ ಕ್ಷೇತ್ರ ಇದೊಂದೆ ಅನಿಸುತ್ತದೆ.

Anjaneya betta

ಬೆಂಗಳೂರಿನಿಂದ ಸುಮಾರು 111 ಕಿಲೋಮೀಟರ್ ದೂರದಲ್ಲಿ ಬೆಂಗಳೂರು-ಮಂಗಳೂರು ರಾಜ್ಯ ಹೆದ್ದಾರಿಯ ಬೆಳ್ಳೂರು ಕ್ರಾಸ್‌ನಲ್ಲಿರುವ ಟೋಲ್ ಕೇಂದ್ರಕ್ಕೂ 2 ಕಿಲೋಮೀಟರ್ ಹಿಂದೆಯೇ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರಕ್ಕೆ ಸ್ವಾಗತಿಸುವ ಹೆಬ್ಬಾಗಿಲು ಕಾಣುತ್ತದೆ. ಅಲ್ಲಿನ ಗ್ರಾಮದಲ್ಲಿಯೇ ಹದ್ದಿನಕಲ್ಲು ಹನುಮಂತರಾಯಸ್ವಾಮಿಯ ಭವ್ಯ ದೇವಾಲಯವಿದ್ದು ದೇವಾಲಯದ ಪಕ್ಕದ ರಸ್ತೆಯಲ್ಲಿ ಮುಂದೆ ಸಾಗಿದರೆ ಹದ್ದಿನಕಲ್ಲು ಆಂಜನೇಯ ಸ್ವಾಮಿಯ ಕೆಂಪುಕಲ್ಲಿನ ಬೃಹತ್ ಬೆಟ್ಟವು ಎದುರಾಗುತ್ತದೆ. ಬೆಟ್ಟವನ್ನು ಹತ್ತಿ ಹೋದರೆ ಅಲ್ಲಿ ಒಂದು ದೊಡ್ಡ ಕಲ್ಲು ಕಂಬದ ಮೇಲೆ ಕೆತ್ತಲ್ಪಟ್ಟ ಆಂಜನೇಯನ ಮೂರ್ತಿ ಇದೆ. ಆ ಆಂಜನೇಯನ ಪಾದದ ಅಡಿಯಲ್ಲಿ ಇಂದ್ರಜಿತನನ್ನು ಸಹ ನಾವು ನೋಡಬಹುದು. ಈ ಬೆಟ್ಟದಲ್ಲಿ ಸಾವಿರಾರು ವಾನರಗಳು ವಾಸವಾಗಿದ್ದು, ಇವುಗಳು ಮಾಯಾಸುರ ಇಂದ್ರಜಿತ್ ಪ್ರಭುವಿಗೆ ಒಪ್ಪಿಸುವ ಮಾಂಸಾಹಾರಿ ಊಟವನ್ನೇ ಪ್ರಸಾದವಾಗಿ ಸ್ವೀಕರಿಸುತ್ತವೆ. ಭಕ್ತರೂ ಸಹ ಶ್ರಾವಣ ಮಾಸದಲ್ಲಿಯೇ ಇಲ್ಲಿ ಬಂದು ಬೆಟ್ಟದ ಕೆಳಗಿರುವ ಇಂದ್ರಜಿತು ಮೂರ್ತಿಯೆದುರು ಕೋಳಿ ಕುರಿಗಳನ್ನು ಬಲಿಕೊಟ್ಟು ಅಲ್ಲಿಯೇ ಮಾಂಸಾಹಾರ ಊಟವನ್ನು ತಯಾರಿಸಿ ಶ್ರೇಷ್ಟ ಪ್ರಸಾದವೆಂದು ಸೇವಿಸುತ್ತಾರೆ.

Haddinakallu hanumantaraya hill

ಈ ಕ್ಷೇತ್ರವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ತನ್ನ ವಿಶಿಷ್ಟ ಆಚರಣೆ ಮತ್ತು ಪ್ರಕೃತಿ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತಿದೆ. ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಇದು ಅತ್ಯುತ್ತಮ ಸ್ಥಳವಾಗಿದ್ದು, ಚಾರಣಿಗರಿಗೂ ಇದೊಂದು ಅಚ್ಚುಮೆಚ್ಚಿನ ತಾಣವಾಗಿದೆ.

ದಾರಿ ಹೇಗೆ?

ರಾಜಧಾನಿ ಬೆಂಗಳೂರಿನಿಂದ ಸುಮಾರು 111 ಕಿಮೀ ದೂರದಲ್ಲಿ ಬೆಂಗಳೂರು-ಮಂಗಳೂರು ರಾಜ್ಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ತಲುಪಬೇಕು. ಅಲ್ಲಿನ ಟೋಲ್ ಕೇಂದ್ರಕ್ಕೂ 2 ಕಿಮೀ ಹಿಂದೆಯೇ ಹದ್ದಿನಕಲ್ಲು ಆಂಜನೇಯಸ್ವಾಮಿ ಕ್ಷೇತ್ರಕ್ಕೆ ಸ್ವಾಗತಿಸುವ ಹೆಬ್ಬಾಗಿಲು ಕಾಣುತ್ತದೆ. ಹೆಬ್ಬಾಗಿಲನ್ನು ಪ್ರವೇಶಿಸಿದರೆ ಏಕಕಾಲದಲ್ಲಿ ಆಂಜನೇಯ ಮತ್ತು ಇಂದ್ರಜಿತುವಿನ ದರ್ಶನ ಮಾಡಬಹುದು.