• ದೀಪ್ತಿ ಕೆ ಟಿ

ಭಾರತದಲ್ಲಿ ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ, ಮತ್ತು ಹಿಂದೂ ಮಹಾಸಾಗರ ಒಂದಾಗಿ ಸೇರುವ ಅದ್ಭುತ ತಾಣವೆಂದರೆ ಕನ್ಯಾಕುಮಾರಿ. ಈ ಪವಿತ್ರ ಸ್ಥಳವು ಕೇವಲ ಪ್ರಕೃತಿಯ ಸೌಂದರ್ಯದಿಂದ ಮಾತ್ರ ಪ್ರಸಿದ್ಧಿ ಪಡೆದಿಲ್ಲ. ಬದಲಿಗೆ ಅದು ಧಾರ್ಮಿಕ, ಪೌರಾಣಿಕ ಮತ್ತು ಸಂಸ್ಕೃತಿಯ ಸಂಗಮ ತಾಣವಾಗಿದೆ. ಇವುಗಳ ಮಧ್ಯೆ ಕನ್ಯಾಕುಮಾರಿ ದೇವಿ ದೇವಸ್ಥಾನವಿದೆ. ಇದು ತಮಿಳುನಾಡಿನ ಅತ್ಯಂತ ಪುರಾತನ ಹಾಗೂ ಪವಿತ್ರ ಕ್ಷೇತ್ರಗಳಲ್ಲಿ ಒಂದು.

ಪೌರಾಣಿಕ ಹಿನ್ನೆಲೆ

ಹಿಂದೂ ಪೌರಾಣಿಕ ಕಥೆಗಳ ಪ್ರಕಾರ, ದೇವಸ್ಥಾನದಲ್ಲಿ ನೆಲೆಗೊಂಡಿರುವ ದೇವಿ ಪಾರ್ವತಿಯ ಕನ್ಯಾ ರೂಪದಲ್ಲಿರುವ ಭಗವತಿ ಅಮ್ಮನ್. ಅಂದರೆ ಕನ್ಯಾಕುಮಾರಿ ದೇವಿ. ಇಲ್ಲಿ ಪಾರ್ವತಿ ದೇವಿಯು ಶಿವನನ್ನು ವಿವಾಹವಾಗಲು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಆದರೆ, ಕಾರಣಾಂತರಗಳಿಂದ ಶಿವನ ಆಗಮನ ವಿಳಂಬವಾಗಿ ಮದುವೆ ನೆರವೇರುವುದಿಲ್ಲ. ಇದರಿಂದ ಕೋಪಗೊಂಡ ದೇವಿಯು ತಪಸ್ಸಿನ ಶಕ್ತಿಯಿಂದ, ಅಸುರರನ್ನು ಸಂಹರಿಸುತ್ತಾಳೆ. ಆ ಶಕ್ತಿ ಇಂದಿಗೂ ಇಲ್ಲಿ ಇದೆ ಎಂದು ಭಕ್ತರು ನಂಬುತ್ತಾರೆ.

Kanyakumari temple

ಶಿಲ್ಪಕಲೆ ಮತ್ತು ವಾಸ್ತುಶಿಲ್ಪ

ಕನ್ಯಾಕುಮಾರಿ ದೇವಿ ದೇವಸ್ಥಾನವು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿದೆ. ಸುಮಾರು 3000 ವರ್ಷಗಳಷ್ಟು ಪುರಾತನ ಈ ದೇವಸ್ಥಾನವು ಕಲ್ಲಿನ ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ. ದೇವಾಲಯದ ಗೋಪುರ ಗಗನಚುಂಬಿಯಾಗಿದ್ದು, ಅದರ ಮೇಲಿನ ಕೆತ್ತನೆಗಳು ಪ್ರಾಚೀನ ತಮಿಳು ಕಲೆ ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ಸಾರುತ್ತವೆ. ದೇವಿಯ ವಿಗ್ರಹವು ಸಮುದ್ರದತ್ತ ಮುಖಮಾಡಿ ನಿಂತಿದ್ದು, ಬೆಳಗಿನ ಸೂರ್ಯೋದಯದ ಕಿರಣಗಳು ನೇರವಾಗಿ ದೇವಿಯ ಮುಖದ ಮೇಲೆ ಬೀಳುವ ಕ್ಷಣ ಕಂಡರೆ ದೈವಿಕ ಅನುಭವ ಸಿಗುತ್ತದೆ.

parvati temple

ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ

ಈ ದೇವಸ್ಥಾನವು ಕೇವಲ ಪೂಜಾ ಕೇಂದ್ರವಾಗಿರದೆ ಸ್ತ್ರೀಶಕ್ತಿಯ ಪ್ರತೀಕವಾಗಿದೆ. ಇಲ್ಲಿ ಪೂಜಿಸಲ್ಪಡುವ ದೇವಿಯನ್ನು ʻಶಕ್ತಿಯ ಸ್ವರೂಪʼ ಎಂದು ಭಕ್ತರು ಆರಾಧಿಸುತ್ತಾರೆ. ಕನ್ಯಾಕುಮಾರಿಯಲ್ಲಿ ಆಚರಿಸಲ್ಪಡುವ ನವರಾತ್ರಿ ಉತ್ಸವಕ್ಕೆ ವಿಶೇಷ ಪ್ರಸಿದ್ಧಿ ಇದೆ. ಈ ಸಮಯದಲ್ಲಿ ದೇವಾಲಯವು ಹೂ, ದೀಪ, ಮತ್ತು ಭಕ್ತಿಯಿಂದ ತುಂಬಿರುತ್ತದೆ.

ಪ್ರಕೃತಿ ಸೌಂದರ್ಯ

ದೇವಾಲಯದ ಸುತ್ತಲಿನ ಪರಿಸರವು ಆಧ್ಯಾತ್ಮಿಕತೆಯಷ್ಟೇ ಸುಂದರವಾಗಿದೆ. ಸಮುದ್ರದ ಅಲೆಗಳ ಸದ್ದಿನ ಮಧ್ಯೆ ಪ್ರಾರ್ಥನೆಯ ಘಂಟೆಯ ನಾದ ಜತೆಗೂಡಿ ಮನಸ್ಸಿಗೆ ಅಹ್ಲಾದಕರ ಅನುಭೂತಿ ನೀಡುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಸಮುದ್ರದ ಮೇಲಿನ ಬಂಗಾರದಂಥ ಕಿರಣಗಳ ಮಧ್ಯೆ ಕನ್ಯಾಕುಮಾರಿಯನ್ನು ಕಾಣುವುದು ವರ್ಣನಾತೀತವಾಗಿಸುತ್ತದೆ. ಇಲ್ಲಿ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆ ಕಾಣಸಿಗುತ್ತದೆ. ಅದು ಈ ಸ್ಥಳದ ಸಂಸ್ಕೃತಿಯ ಮತ್ತೊಂದು ಹೆಮ್ಮೆ. ಆಧ್ಯಾತ್ಮಿಕತೆಯ ಸಂಕೇತ ಹೀಗೆ ಭಾರತದ ಸಂಸ್ಕೃತಿ, ಇತಿಹಾಸ, ಪೌರಾಣಿಕ, ವಾಸ್ತುಶಿಲ್ಪ ಮತ್ತು ಪ್ರಾಕೃತಿಕ ಸೌಂದರ್ಯದ ಅನನ್ಯ ಸಂಗಮವಾಗಿದೆ ಈ ಕನ್ಯಾಕುಮಾರಿ.