• ಗೊರೂರು ಅನಂತರಾಜು, ಹಾಸನ

ನನ್ನ ಅಜ್ಜನ ತಂಗಿಯ ಮೊಮ್ಮಗ ಕಿರಣ, ಒಂದೆರಡು ತಿಂಗಳ ಹಿಂದೆಯಷ್ಟೇ ಅವರ ತಂದೆ ತೀರಿಹೋಗಿದ್ದರು. ಹಾಗಾಗಿ ಪಿತೃತರ್ಪಣ ಕಾರ್ಯ ನೆರವೇರಿಸಲೆಂದೇ ಅವರು ಗಯಾಕ್ಕೆ ಹೊರಡಲು ಸಿದ್ಧರಾಗಿದ್ದರು. ಗಯಾ ಜತೆಗೆ ಕಾಶಿ ಪ್ರಯಾಗ್‌ರಾಜ್‌ ಅನ್ನೂ ಪ್ರವಾಸಕ್ಕೆ ಸೇರಿಸಿಕೊಂಡು ಒಂದು ವಾರದ ಟ್ರಿಪ್ ನಿಗದಿಯಾಗಿತ್ತು. ಕಾಶಿಗೆ ಬಂದು ತಲುಪಿ, ಅಲ್ಲಿಂದಲೇ ಗಯಾಕ್ಕೆ ಹೊರಟೆವು.

ಕಾಶಿಯಿಂದ ಗಯಾಕ್ಕೆ ಸುಮಾರು 250 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರದ ಪ್ರಯಣ. ಫಲ್ಗೂ ನದಿಯ ತೀರದಲ್ಲಿ ಗಯಾ ಇದೆ. ಇದು ಹಿಂದೂ ಧರ್ಮದ ಪವಿತ್ರ ಪುಣ್ಯಕ್ಷೇತ್ರ. ಪಿತೃತರ್ಪಣ ಕಾರ್ಯಕ್ಕೆ ಮತ್ತು ವಿಷ್ಣುಪಾದ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಫಲ್ಗೂ ನದಿಯನ್ನು ರಾಮಾಯಣದಲ್ಲಿ ನಿರಂಜನಾ ಎಂದು ಕರೆಯಲಾಗಿದ್ದು, ರಾಮ-ಸೀತೆ ಮತ್ತು ಲಕ್ಷ್ಮಣ ದಶರಥನಿಗೆ ಇಲ್ಲಿ ಪಿಂಡ ಅರ್ಪಿಸಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದೊಂದು ಮುಖ್ಯ ವ್ಯಾಪಾರ ಕೇಂದ್ರವೂ ಹೌದು.

ಇದನ್ನೂ ಓದಿ: ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ

ಗಯಾಕ್ಕೆ ಹತ್ತಿರದಲ್ಲಿ ಬೋಧಗಯಾವಿದೆ. ಇದು ಬುದ್ಧನಿಗೆ ಜ್ಞಾನೋದಯವಾದ ಸ್ಥಳ. ಈ ಕ್ಷೇತ್ರದ ಒಂದು ಭಾಗ ಬ್ರಹ್ಮಗಯಾವಾಗಿದ್ದು, ಹಿಂದೂಗಳ ಯಾತ್ರಾಸ್ಥಳವಾಗಿದೆ. ಮತ್ತೊಂದು ಭಾಗ ಬೋಧಗಯಾ ಪ್ರಪಂಚದಾದ್ಯಂತ ಇರುವ ಬೌದ್ಧರ ಯಾತ್ರಾಸ್ಥಳವಾಗಿದೆ.

ಹಿಂದೂ ಪುರಾಣಗಳ ಪ್ರಕಾರ

ಗಯಾದಲ್ಲಿ ಮಹಾವಿಷ್ಣುವು ಗಯಾಸುರನೆಂಬ ಅಸುರನನ್ನು ಸಂಹರಿಸಿದ್ದ. ನಂತರ ಅವನ ಹೆಸರೇ ನಗರಕ್ಕೂ ಅಂಟಿತು. ವಿಷ್ಣುವು ಗಯಾಸುರನನ್ನು ತನ್ನ ಪಾದಗಳಿಂದ ಒತ್ತಿ ಹಿಡಿಯುವ ಮೂಲಕ ಸಂಹರಿಸಿದನು. ಹಾಗಾಗಿ ಗಯಾಸುರನು ಸಣ್ಣಸಣ್ಣ್ಣ ಬೆಟ್ಟ-ಗುಡ್ಡಗಳಾಗಿ ಪರಿವರ್ತಿತನಾದನು. ಈತ ತನ್ನನ್ನು ಸ್ಪರ್ಶಿಸಿದವರ ಅಥವಾ ನೋಡುವವರ ಪಾಪಗಳನ್ನು ಕಳೆಯಬಲ್ಲವನಾಗಿದ್ದನು. ದೇವತೆಗಳು ಗಯಾಸುರನ ಮರಣದ ನಂತರ ಆತನ ಕಾಯದಲ್ಲಿ ನೆಲೆಸುವುದಾಗಿ ವಚನ ನೀಡಿದ್ದರು. ಹಾಗಾಗಿ ಗಯಾಸುರನ ಸಾವಿನ ನಂತರ ಬೆಟ್ಟಗುಡ್ಡ ಮತ್ತು ನೆಲದ ರೂಪದಲ್ಲಿ ಉಳಿದಿರುವ ಗಯಾಸುರನ ಕ್ಷೇತ್ರ ಸರ್ವ ಪಾಪಗಳನ್ನು ನೀಗಿಸಬಲ್ಲ ಕ್ಷೇತ್ರವಾಗಿದೆ.

Untitled design - 2026-04-11T145820.191

ಪಿತೃಕಾರ್ಯ ಮಾಡಿದರೆ ಸ್ವರ್ಗ ಪ್ರಾಪ್ತಿ

ಹಿಂದೂಗಳು ಗಯಾದಲ್ಲಿ ತಮ್ಮ ಪೂರ್ವಜರಿಗೆ ಶ್ರಾದ್ಧ ಕಾರ್ಯ ನಡೆಸುತ್ತಾರೆ. ಈ ಕ್ಷೇತ್ರದಲ್ಲಿ ಶ್ರಾದ್ಧ ಕಾರ್ಯ ಮಾಡಿದರೆ, ವಂಶದ ನೂರು ಜನ ಪಿತೃಗಳಿಗೆ ಹಾಗೂ ಶ್ರಾದ್ಧ ಕಾರ್ಯ ಮಾಡಿದವರಿಗೂ ಶಾಶ್ವತ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಸ್ಥಳ ಪುರಾಣ ತಿಳಿಸುತ್ತದೆ.

ವಿಷ್ಣು ಪಾದ ದೇವಾಲಯದಲ್ಲಿ ಆದಿ ಗದಾಧರನೆಂದು ಹೇಳಲಾದ ಪಾದಗಳ ಗುರುತಿದೆ. 11ನೆಯ ಶತಮಾನದಲ್ಲಿ ಆಳಿದ ನಯಪಾಲ ದೇವ ಮತ್ತು ಅವನ ನಂತರದ ಅರಸರ ಕಾಲದಲ್ಲಿ ಈ ಸ್ಥಳದ ಜೀರ್ಣೋದ್ಧಾರ ಕಾರ್ಯಗಳಾಗಿವೆ. ಗಯಾದಲ್ಲಿ ಅನೇಕ ಮಂದಿರಗಳು ಮತ್ತು ಫಲ್ಗೂ ನದಿಯ ತೀರದಲ್ಲಿ ಹಲವು ಪವಿತ್ರ ಸ್ನಾನಘಟ್ಟಗಳಿವೆ. ಎಲ್ಲಕ್ಕಿಂತ ಪಾವನ ಸ್ಥಾನವೆಂದರೆ ವಿಷ್ಣುಪಾದ ದೇವಾಲಯ. ಫಲ್ಗೂ ನದಿಯ ತೀರದಲ್ಲಿ ಪಿಂಡದಾನ ಮೊದಲಾದ ಪಿತೃಕಾರ್ಯಗಳನ್ನು ನಡೆಸುವುದು ಗತಿಸಿದ ಆತ್ಮಗಳಿಗೆ ಮೋಕ್ಷದಾಯಕ ಎನ್ನಲಾಗಿದೆ.

ರಾಮಶಿಲಾ ಮತ್ತು ಪ್ರೇತಶಿಲಾ

ಈ ಕ್ಷೇತ್ರದ ಯಾತ್ರೆ ಪೂರ್ಣವಾಗಲು ಹತ್ತಿರದ ಐದು ಸ್ಥಳಗಳ ದರ್ಶನ ಮಾಡಲೇಬೇಕು. ಅಲ್ಲಿನ ಯಮ ಮತ್ತು ಆತನ ದೂತರಿಗೂ ಪೂಜೆ ಸಲ್ಲಿಸಬೇಕು. ವಿಶೇಷವಾಗಿ ರಾಮಶಿಲಾ ಮತ್ತು ಪ್ರೇತಶಿಲಾ ಗುಡ್ಡಗಳು. ಪ್ರೇತಶಿಲಾದಲ್ಲಿ ಯಮನನ್ನು ಪ್ರಾರ್ಥಿಸಿ ನಂತರ ಪಿತೃಯಾನದ ಕಾವಲು ನಾಯಿಗಳಿಗೂ ಪೂಜೆ ಸಲ್ಲಿಸುವುದು ವಾಡಿಕೆ. ಜೋಯಿಸರು ಹೇಳಿದಂತೆ ಅಲ್ಲಿಗೆ ಹೋಗಿದ್ದ ನಾವು ಐವರೂ ಪುರುಷರು ಪಿತೃತರ್ಪಣ ಕಾರ್ಯ ನೆರವೇರಿಸಿದೆವು.

ಉತ್ತರ ದಕ್ಷಿಣದ ಶಾಸನಗಳು ಕೂಡುವ ಸ್ಥಳ

ಗಯಾದಲ್ಲಿ ಇಂದಿಗೆ ಕಾಣುವ ದೇವಾಲಯಗಳು ಮತ್ತು ಪ್ರಾಚೀನ ಕಟ್ಟಡಗಳು 8ನೆಯ ಶತಮಾನದ ನಂತರ ಆಳಿದ ಪಾಲ ವಂಶದ ಅರಸರ ಮತ್ತು ಅವರ ನಂತರದವರ ಕಾಲಕ್ಕೆ ಸೇರಿದವು. ಗಯಾದಲ್ಲಿ ಆ ಪ್ರಾಂತ್ಯದ ರಾಜವಂಶಗಳ ಹಲವು ಶಾಸಗಳು ದೊರೆತಿವೆ. ವಿಷ್ಣುಪಾದ ದೇವಾಲಯದಲ್ಲಿ ದಕ್ಷಿಣ ಪಥದ ಅರಸರ ಕೆಲವು ಶಾಸನಗಳೂ ದೊರತಿವೆ. ಎದುರಿಗಿನ ಶಿವ ದೇವಾಲಯದ ಬಲಬದಿಯ ಗೋಡೆಯಲ್ಲಿನ ಕಪ್ಪು ಕಲ್ಲಿನಲ್ಲಿ ಪ್ರತಾಪರುದ್ರ ರಾಜನ ಶಾಸನವಿದೆ. ಇದು ನಂದಿ ನಾಗರೀ ಲಿಪಿಯಲ್ಲಿದೆ. ಈ ದೇವಾಲಯದ ಪ್ರಾಂಗಣದಲ್ಲಿನ ಮಹದೇವ ಗುಡಿಯ ಬಾಗಿಲುವಾಡದಲ್ಲಿ ಹೊಯ್ಸಳ ವಂಶದ ಮುಮ್ಮಡಿ ನರಸಿಂಹನ ಶಾಸನವಿದೆ. ಇದೂ ನಂದಿ ನಾಗರೀ ಲಿಪಿಯಲ್ಲಿದೆ. ಅದರೂ ಇದರ ಭಾಷೆ ಕನ್ನಡ. ಇದರ ಕೆಳಗೆ ಕನ್ನಡ ಲಿಪಿಯ ಇನ್ನೊಂದು ಶಾಸನವಿದೆ. ವೀರನರಸಿಂಹ ದೇವರಸರ ಕಮ್ಮಟದ ಜಕ್ಕಣ್ಣನ ಮಗ ದೇವಣ್ಣ ಗಯಾ ಪ್ರವೇಶಿಸಿದ ಕುರಿತು ಅದು ತಿಳಿಸುತ್ತದೆ. ಗದಾಧರ ಘಾಟ್‌ನ ಬಲಗೋಡೆಗೆ ಸೇರಿಸಲಾದ ಕಲ್ಲೊಂದರಲ್ಲಿ ಶ್ರೀಕೃಷ್ಣದೇವರಾಯನ 1521ರ ಶಾಸನವಿದೆ. ಮಹಾದೇವ ಗುಡಿಯಲ್ಲಿ ಅಚ್ಯುತರಾಯನ ಶಾಸನವಿದೆ.

ಮತ್ತೆ ಮತ್ತೆ ಬಿದ್ದು ಬೆಳೆದ ಬೋದಿವೃಕ್ಷ

ಇಲ್ಲಿನ ಬೋಧಿವೃಕ್ಷದ ಕೆಳಗೆ ಸಿದ್ಧಾರ್ಥ ಗೌತಮನಿಗೆ ಜ್ಞಾನೋದಯವಾಗಿ ಬುದ್ಧನಾದ ಎನ್ನಲಾಗಿದೆ. ಇದು ಬೌದ್ಧರ ಯಾತ್ರಾ ಸ್ಥಳ. ಬೌದ್ಧಧರ್ಮದ ಜನ್ಮಸ್ಥಳವೂ ಆಗಿದ್ದು, ಯುನಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇಂದು ಇಲ್ಲಿ ಕಾಣುವ ಬೋಧಿವೃಕ್ಷ ಅಂದಿನದ್ದಲ್ಲ. ಅಶೋಕನ ಕಾಲದಲ್ಲಿ ಒಣಗಿದ್ದ ಮೂಲ ಬೋಧಿವೃಕ್ಷವನ್ನು ತೆಗೆಸಿ ಅದೇ ಸ್ಥಳದಲ್ಲಿ ಅದರ ಬೀಜಗಳನ್ನು ನೆಟ್ಟು ಹೊಸ ವೃಕ್ಷವನ್ನು ಬೆಳೆಸಲಾಯಿತು. 7ನೆಯ ಶತಮಾನದಲ್ಲಿ ಪುನಃ ಶಶಾಂಕ ಇಲ್ಲಿ ಹೊಸದೊಂದು ಸಸಿಯನ್ನು ನೆಡಿಸಿದ್ದ. 1876ರಲ್ಲಿ ಈ ಮರವೂ ಒಣಗಿ ಬಿದ್ದು ಹೋದಾಗ ಪುನಃ ಅದರ ಬೀಜಗಳಿಂದ ಹೊಸದೊಂದು ಮರವನ್ನು ಬೆಳಸಲಾಯಿತು ಎನ್ನಲಾಗಿದೆ.

ಪುರಾತನತೆ ಕಾದಿಟ್ಟ ಪುರಾತತ್ವ

ಬೋಧಿವೃಕ್ಷದ ಕೆಳಗೆ ಬುದ್ಧನು ಕುಳಿತಿದ್ದ ಕಲ್ಲಿನ ವೇದಿಕೆಯ ಹೆಸರು ವಜ್ರಾಸನ. ಜಪಾನ್, ಥೈಲ್ಯಾಂಡ್, ಟಿಬೇಟ್, ಭೂತಾನ್ ಮುಂತಾದ ದೇಶಗಳು ನಿರ್ಮಿಸಿರುವ ವಿಶಿಷ್ಟ ಶೈಲಿಯ ಬೌದ್ಧ ವಿಹಾರಗಳು ವಿವಿಧ ಮಠಗಳು, ಬೌದ್ಧರ ಇತಿಹಾಸದ ಅಪರೂಪದ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ಹೊಂದಿರುವ ಪುರಾತತ್ವ ವಸ್ತು ಸಂಗ್ರಹಾಲಯವೂ ಇಲ್ಲಿದೆ.

Untitled design - 2026-04-11T145828.326

ಬರಾಬರ್ ಬೆಟ್ಟದ ಗುಹೆಯೊಳಗೆ

ಮೌರ್ಯ ಅಶೋಕ ಈ ವೃಕ್ಷದ ಹಿಂದೆ ಏಕಶಿಲಾ ಸ್ತಂಭವನ್ನು ಸ್ಥಾಪಿಸಿದ. ಮರದ ಸುತ್ತಲೂ ಚೌಕಾಕಾರದ ಕಟಾಂಜನವನ್ನು ಕಟ್ಟಿಸಿದ್ದ. ಮರಳುಗಲ್ಲಿನ ಕಂಬಗಳಿಂದ ಕೂಡಿದ ಕಟಾಂಜನ ಅಶೋಕನ ಕಾಲದ್ದೆಂದೂ ಬೆಣಚು ಕಲ್ಲಿನ ಮತ್ತೊಂದು ಕಂಬ ಅನಂತರದ ಕಾಲದ್ದೆಂದೂ ಹೇಳಲಾಗಿದೆ. ಗಯಾ ಪಟ್ಟಣಕ್ಕೆ 24 ಕಿಮೀ ದೂರದಲ್ಲಿ ಬರಾಬರ್ ಬೆಟ್ಟದಲ್ಲಿ ಒಂದು ಗುಹೆಯಿದೆ. ಅದರಲ್ಲಿ ಅಶೋಕನ 3ನೆಯ ಶಾಸನವಿದೆ. ಇಲ್ಲಿರುವ ದೇವಮಂದಿರದಲ್ಲಿ ಬುದ್ಧನ ದೊಡ್ಡ ವಿಗ್ರಹವಿದೆ. ಮೇಲಿನ ಅಂತಸ್ತಿನಲ್ಲಿ ಸಿದ್ಧಾರ್ಥನ ತಾಯಿ ಮಾಯಾದೇವಿಯ ವಿಗ್ರಹವಿದೆ. ಈಗ ಇರುವ ಕಟ್ಟಡ ಹಲವು ಬಾರಿ ಜೀರ್ಣೋದ್ಧಾರಗೊಂಡಿದೆ.

ನಾವು ಬೋಧಗಯ ದರ್ಶನ ಮಾಡಿ ವಾಪಸ್ಸು ಕಾಶಿಗೆ ಹಿಂತಿರುಗುವಷ್ಟರಲ್ಲಿ ರಾತ್ರಿ ಮೂರು ಗಂಟೆಯಾಗಿತ್ತು. ಒಂದು ಪ್ರವಾಸ ಹಲವು ಇತಿಹಾಸಗಳನ್ನು ಅರಿಯಲು ಅವಕಾಶ ಕಲ್ಪಿಸಬಲ್ಲದು ಅಲ್ಲವೇ?

ದಾರಿ ಹೇಗೆ?

ಕಾಶಿಯಿಂದ ಗಯಾ ಸುಮಾರು 250 ಕಿಮೀ ದೂರದಲ್ಲಿದೆ. ಕಾಶಿಯಿಂದಲೇ ಗಯಾಕ್ಕೆ ನೇರ ರೈಲು ಸಂಪರ್ಕವಿದ್ದು ಇದು ಅತ್ಯಂತ ಸುಲಭ ಮತ್ತು ಆರಾಮದಾಯಕ ಮಾರ್ಗವಾಗಿದೆ. ಗಯಾಕ್ಕೆ ಕಾಶಿಯಿಂದ ಖಾಸಗಿ ಮತ್ತು ಸರಕಾರಿ ಬಸ್‌ಗಳ ಸಂಚರವೂ ಇದೆ.