ವರದಹಳ್ಳಿಯಲ್ಲಿ ಶ್ರೀಧರಸ್ವಾಮಿಗಳ ಪವಾಡ
ಇಲ್ಲಿ ಮಾತು ಬಾರದ ಅದೆಷ್ಟೋ ಜನರಿಗೆ ಮಾತು ಬರಿಸಿದ, ಖಾಯಿಲೆಯಿಂದ ನರಳುತ್ತಿರುವವರಿಗೆ ಆ ಖಾಯಿಲೆಯೇ ಇಲ್ಲವಾಗಿಸಿದ ಜೀವಂತ ಉದಾಹರಣೆಗಳು ಸಾಕಷ್ಟಿವೆ. ಮಕ್ಕಳಾಗದವರಿಗೆ ಮಕ್ಕಳ ಭಾಗ್ಯವನ್ನೂ ಶ್ರೀಧರ ಸ್ವಾಮಿಗಳನ್ನು ನಂಬಿದ ಭಕ್ತರಿಗೆ ಕರುಣಿಸಿದ್ದಾರೆ. ಶ್ರೀಧರ ಸ್ವಾಮಿಗಳ ಅದೆಷ್ಟೋ ಪವಾಡಗಳು ಇಂದಿಗೂ ನಡೆಯುತ್ತಿವೆ.
- ದಿವ್ಯಾ ಶ್ರೀಧರ್ ರಾವ್
ಒಮ್ಮೆ ಬದುಕಿನಲ್ಲಿ ನೋಡಲೇಬೇಕಾದ ಪುಣ್ಯಕ್ಷೇತ್ರವೆಂದರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿ. ವರದಹಳ್ಳಿಯಲ್ಲಿ ಐತಿಹಾಸಿಕ ದುರ್ಗಾಂಬ ದೇವಸ್ಥಾನ ಮತ್ತು ಶ್ರೀಧರ ಸ್ವಾಮಿ ಮಠವಿದೆ.
ಶ್ರೀಧರ ಸ್ವಾಮಿಗಳ ಹಿನ್ನೆಲೆ
ಶ್ರೀಧರ ಸ್ವಾಮಿಗಳನ್ನು ಗುರು ದತ್ತಾತ್ರೆಯರ ಅವತಾರವೆನ್ನುತ್ತಾರೆ. ಅವರು ಮೂಲತಃ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರು ಗ್ರಾಮದವರು. ಡಿಸೆಂಬರ್ 7, 1908 ರಲ್ಲಿ ಸ್ವಾಮಿ ಶ್ರೀಧರ ಎಂಬ ಮಹಾಪುರುಷನ ಜನನವಾಗುತ್ತದೆ. ಅಧ್ಯಾತ್ಮವನ್ನು ಹುಡುಕಿಕೊಂಡು ದೇಶ ಆರಂಭಿಸಿದ ಸ್ವಾಮಿ ಶ್ರೀಧರರಿಗೆ ಗುರುಗಳಾಗಿ ಸಿಕ್ಕವರು ಶ್ರೀ ಸಮರ್ಥ ರಾಮದಾಸರು. ಗುರುಗಳಾದ ಶ್ರೀ ಸಮರ್ಥ ರಾಮದಾಸರಲ್ಲಿ ದೀಕ್ಷೆ ಪಡೆದ ಶ್ರೀಧರ ಸ್ವಾಮಿಗಳನ್ನು ಕೈ ಬೀಸಿ ಕರೆದದ್ದು ಮಲೆನಾಡಿನ ವರದಹಳ್ಳಿ. ಸಾಗರ ತಾಲೂಕಿನ ವರದಹಳ್ಳಿ ಅವರು ತಪಸ್ಸು ಮಾಡಿದ ಪುಣ್ಯಭೂಮಿ. ತಾಯಿ ದುರ್ಗಾಂಬೆಯ ಅಣತಿಯಂತೆ ಶ್ರೀಧರ ಸ್ವಾಮಿಗಳು ವರದಹಳ್ಳಿಗೆ ಬಂದು ನೆಲೆಸಿದರು ಎನ್ನಲಾಗುತ್ತದೆ. ವರದಹಳ್ಳಿಯ ದುರ್ಗಾ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ವರದಹಳ್ಳಿಯಲ್ಲಿ ನೆಲೆನಿಂತವರು ಶ್ರೀಧರ ಸ್ವಾಮಿಗಳು.

ವರದಹಳ್ಳಿ ಶ್ರೀಧರಾಶ್ರಮದ ಹಿನ್ನೆಲೆ
ಶ್ರೀ ಶ್ರೀಧರ ಸ್ವಾಮಿಗಳು ನಲೆನಿಂತ ಮೇಲೆ ಆ ವರದಹಳ್ಳಿ ಎಂಬ ಪುಣ್ಯಭೂಮಿ ಶಕ್ತಿ ಮತ್ತು ಭಕ್ತಿಯ ಕೇಂದ್ರವಾಯಿತು. 1963 ರ ಚಾತುರ್ಮಾಸದಲ್ಲಿ ಶ್ರೀಧರ ಸ್ವಾಮಿಗಳು, ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮಧ್ವಜವನ್ನು ಸ್ಥಾಪಿಸಿದರು. ತಮ್ಮ ಈ ಆಶ್ರಮಕ್ಕೆ ಶ್ರೀಧರಾಶ್ರಮ ಎಂಬ ನಾಮಕರಣವನ್ನೂ ಮಾಡಿದರು. ತದನಂತರ ಭಕ್ತರ ಅನೇಕ ಸಂಕಷ್ಟಗಳನ್ನು ನಿವಾರಿಸುವ ಮೂಲಕ ಭಕ್ತರಿಗೆ ದೇವರಾದರು.
ಸ್ಥಳ ಮಹಿಮೆ
ಶ್ರೀಧರಾಶ್ರಮದ ಪ್ರವೇಶದಲ್ಲಿ ಗೋವಿನ ಬಾಯಿಯಿಂದ ಬರುವ ತೀರ್ಥದಿಂದ ಸ್ನಾನ ಮಾಡಿದ ಅನೇಕರ ಖಾಯಿಲೆಗಳು ವಾಸಿಯಾದ ಉದಾಹರಣೆಗಳಿವೆ. ಈ ನೀರಿನಲ್ಲಿ ಔಷಧೀಯ ಗುಣಗಳಿವೆ ಮತ್ತು ಈ ನೀರು ಅದೆಲ್ಲಿಂದ ಉದ್ಭವವಾಗುತ್ತದೆ ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲವಂತೆ. ಇಲ್ಲಿಂದ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋದರೆ ಅಲ್ಲಿ ಶ್ರೀಧರಾಶ್ರಮ ಸಿಗುತ್ತದೆ. ಅಲ್ಲಿ ಶ್ರೀಧರ ಸ್ವಾಮಿಗಳು ಕುಳಿತು ತಪಸ್ಸು ಮಾಡಿದ್ದರು ಎನ್ನಲಾಗುತ್ತದೆ. ಇಲ್ಲಿ ಏಕಾಂತ ಗುಹೆಯೂ ಇದೆ. ಅಲ್ಲದೆ ಶ್ರೀಧರ ಸ್ವಾಮಿಗಳು ಐಕ್ಯರಾದ ಗುಹೆಯನ್ನೂ ಕಾಣಬಹುದು. ಇಲ್ಲಿ ಮಾತು ಬಾರದ ಅದೆಷ್ಟೋ ಜನರಿಗೆ ಮಾತು ಬರಿಸಿದ, ಖಾಯಿಲೆಯಿಂದ ನರಳುತ್ತಿರುವವರಿಗೆ ಆ ಖಾಯಿಲೆಯೇ ಇಲ್ಲವಾಗಿಸಿದ ಜೀವಂತ ಉದಾಹರಣೆಗಳು ಸಾಕಷ್ಟಿವೆ. ಮಕ್ಕಳಾಗದವರಿಗೆ ಮಕ್ಕಳ ಭಾಗ್ಯವನ್ನೂ ಶ್ರೀಧರ ಸ್ವಾಮಿಗಳನ್ನು ನಂಬಿದ ಭಕ್ತರಿಗೆ ಕರುಣಿಸಿದ್ದಾರೆ. ಶ್ರೀಧರ ಸ್ವಾಮಿಗಳ ಅದೆಷ್ಟೋ ಪವಾಡಗಳು ಇಂದಿಗೂ ನಡೆಯುತ್ತಿವೆ. ಶ್ರೀಧರಾಶ್ರಮದಲ್ಲಿ ಪ್ರತಿದಿನವೂ ಗುರುಗಳ ಪಾದುಕಾಪೂಜೆ ನಡೆಯುತ್ತದೆ. ಪಾದುಕಾಪೂಜೆ ಮಾಡಿಸಿದರೆ ಅಂದುಕೊಂಡದ್ದೆಲ್ಲವೂ ನಡೆಯುತ್ತದೆ. ಇಂದಿಗೂ ಗುರುಗಳ ಚಲನವಲನಗಳನ್ನು ಸಾಕಷ್ಟು ಭಕ್ತರು ಕಂಡಿದ್ದಾರೆ ಎನ್ನಲಾಗುತ್ತದೆ.

ವರದಹಳ್ಳಿಯ ಶ್ರೀಧರಾಶ್ರಮದಲ್ಲಿ ಭಕ್ತಿಗೆ ಮಾತ್ರ ಆದ್ಯತೆ. ಭಕ್ತಿಯಿಂದ ಬರುವ ಸಕಲ ಸಂಕಷ್ಟಗಳನ್ನೂ ಶ್ರೀಧರ ಸ್ವಾಮಿಗಳು ಪರಿಹರಿಸುವುದನ್ನು ನಾವು ಇಂದಿಗೂ ನೋಡಬಹುದು. ಪ್ರತಿದಿನವೂ ನಡೆಯುವ ಪೂಜೆಯಲ್ಲಿ ಸಾಕಷ್ಟು ಭಕ್ತರು ಪಾಲ್ಗೊಳ್ಳುತ್ತಾರೆ. ಬರುವ ಭಕ್ತರಿಗಾಗಿ ಮದ್ಯಾಹ್ನ ಅನ್ನಪ್ರಸಾದವಿರುತ್ತದೆ.
ಗುರು ಶ್ರೀಧರ ಸ್ವಾಮಿಗಳ ಕೃಪೆಗಾಗಿ ಪ್ರತಿಯೊಬ್ಬರೂ ವರದಹಳ್ಳಿಯ ವರದಾಶ್ರಮವನ್ನು ಒಮ್ಮೆ ಭೇಟಿಕೊಟ್ಟರೆ ಸಕಲರ ಕಷ್ಟಗಳೂ ಪರಿಹಾರವಾಗುತ್ತದೆ. ಭಕ್ತಿಯ ಸಂಕೇತವಾಗಿ ವರದಹಳ್ಳಿಯ ವಾತಾವರಣವಿದೆ. ನೊಂದು ಬಂದ ಭಕ್ತರನ್ನು ನಗಿಸಿ ಕಳಿಸುವ ಶ್ರೀಧರ ಸ್ವಾಮಿಗಳ ಮಂತ್ರವಾದ ʼ ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ, ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃʼ ದಿನಕ್ಕೊಂದು ಬಾರಿಯಾದರೂ ಹೇಳುತ್ತಾ ಶ್ವಾಮಿ ಶ್ರೀಧರರ ಕೃಪೆಗೆ ಪಾತ್ರರಾಗೋಣ.

ದಾರಿ ಹೇಗೆ?
ಶಿವಮೊಗ್ಗದಿಂದ ಸಾಗರದ ಮುಖೇನವಾಗಿ ವರದಾಪುರ ಅಥವಾ ವರದಹಳ್ಳಿಗೆ ಹೋಗಬಹುದಾಗಿದೆ. ಸಾಗರದಿಂದ ಅರ್ಕಾರಿ ಬಸ್ಸುಗಳ ವ್ಯವಸ್ಥೆಯಿರುತ್ತದೆ ಮತ್ತು ಖಾಸಗಿ ವಾಹನಗಳ ವ್ಯವಸ್ಥೆಯೂ ಇದೆ.