• ಮೋಹನ ಭಟ್ಟ, ಅಗಸೂರು.

ಯುನೈಟೆಡ್ ಅರಬ್ ಎಮಿರೇಟ್ಸ್ ನ‌ ರಾಜಧಾನಿ ಅಬುಧಾಬಿ ಹಿಂದೊಮ್ಮೆ ಮರಳುಗಾಡಿನ ಪ್ರದೇಶವಾಗಿತ್ತು. ಆದರೀಗ ಅಂದದ ಹಸಿರು ನಗರಿಯಾಗಿ ಮಾರ್ಪಟ್ಟಿದೆ.

ಈ ತೈಲನಗರದ ಮುಖ್ಯ ಆಕರ್ಷಣೆ ಶೇಖ್ ಝಯೇದ್ ಪ್ರಾರ್ಥನಾ ಮಂದಿರ.‌‌ ಶೇಖ್ ಝಯೇದ್ ಯುಎಇಯ ನವನಿರ್ಮಾಣದ ರೂವಾರಿ ಎಂದೇ ಕರೆಯಲಾಗುತ್ತದೆ. ‌ಅರೇಬಿಕ್ ಗುಚ್ಛ ರಾಷ್ಟ್ರಗಳಲ್ಲಿ ದುಬೈ ಅತ್ಯಂತ ಮುಂದುವರಿದ, ಆಧುನಿಕ ವಿನ್ಯಾಸ, ಸಾರಿಗೆ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿ ರೂಪುಗೊಳ್ಳಲು ಶೇಖ್ ಝಯೇದ್ ಅವರ ಕನಸೇ ಕಾರಣವಾಗಿದೆ.

ಶೇಖ್ ಝಯೇದ್ ಪ್ರಾರ್ಥನಾ ಮಂದಿರ ಕೇವಲ ಅರೇಬಿಯನ್‌ ರಿಗಷ್ಟೇ ಸೀಮಿತವಾಗಿಲ್ಲ.‌ ಆಗಮಿಸುವ ಪ್ರತಿಯೊಬ್ಬರೂ ಪ್ರಾರ್ಥಿಸಬಹುದು. ಹೀಗಾಗಿ ಇದೊಂದು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಸಾಂಸ್ಕೃತಿಕ ಕೇಂದ್ರವಾಗಿಯೂ ಇದನ್ನು ನೋಡಲಾಗುತ್ತದೆ.

sheikh zayed grand mosque

ಮನಸೆಳೆಯುವ ವಿನ್ಯಾಸ

ಪ್ರವೇಶದ ನಂತರ ಸಿಗುವ ಕಮಾನುಗಳ ರಚನೆಯೇ ಒಂದು ಕಮಾಲ್. ಒಂದರ ನಂತರ ಇನ್ನೊಂದು ಇದ್ದರೂ ದೂರದಿಂದ ಒಂದೇ ಕಮಾನು ಇದ್ದಂತೆ ಅನಿಸುವುದು ಇದರ ವೈಶಿಷ್ಟ್ಯ. ಸುತ್ತಲೂ ಹರಿಯುವ ನೀರು ಅದನ್ನು ತಂಪುಗೊಳಿಸಲು ಪ್ರತ್ಯೇಕ ವ್ಯವಸ್ಥೆ ಇದೆ. ಗೋಡೆಗಳಿಗೆ ಚಿನ್ನದ ಬಳ್ಳಿ, ಹೂವುಗಳನ್ನು ಅಳವಡಿಸಲಾಗಿದೆ. ಇನ್ಯಾವ ಹೊಳೆಯುವ ಬಣ್ಣವೂ ಇಲ್ಲ. ಇದೇ ರೀತಿಯ ವಿನ್ಯಾಸ ಪ್ರಾರ್ಥನಾ ಗೃಹಗಳಿಗೂ ಮಾಡಲಾಗಿದೆ. ಎಲ್ಲವೂ ಸರಳ ಹಾಗೂ ಅಷ್ಟೇ ಸುಂದರ.

ಸುಮಾರು ಹನ್ನೆರಡು ಹೆಕ್ಟೇರು ಕ್ಷೇತ್ರದಲ್ಲಿ ವ್ಯಾಪಿಸಿರುವ ಈ ಮಂದಿರಕ್ಕೆ ಎಂಬತ್ತೆರಡು ಗೋಪುರಗಳಿವೆ. ಒಂದು ಸಾವಿರದ ಎರಡು ನೂರು ಕಂಬಗಳ ಆಧಾರದ ಮೇಲೆ ಇದು ನಿಂತಿದೆ. ಹಚ್ಚ ಹಾಲು ಬಣ್ಣದ ಅಮೃತ ಶಿಲೆಗಳ ಹಾಸುಗಳಿಂದ ಆವೃತವಾದ ಇಡೀ ಮಹಲು ಮುಟ್ಟಿದರೆ ಹಾಳಾಗುವುದೇನೋ ಎಂದೆನಿಸುತ್ತದೆ. ಮೆಸೆಡೋನಿಯಾ,ಇಟಲಿ, ಚೀನಾ, ಭಾರತದ ಮಖರಾನಾ ಅಮೃತ ಶಿಲೆಗಳು ಸೇರಿದಂತೆ ಸುಮಾರು ಮೂವತ್ತು ಬಗೆಯ ಅತ್ಯಮೂಲ್ಯ ಶಿಲೆಗಳನ್ನು ಬಳಸಲಾಗಿದೆ.

ಕೇಂದ್ರ ಪ್ರಾರ್ಥನಾ ಗೃಹವೇ ಪ್ರಮುಖ ಈ ಮಹಲಿನ ಪ್ರಮುಖ ಆಕರ್ಷಣೆ. ಇದಕ್ಕೆ ಐದು ಸಾವಿರದ ನಾಲ್ಕು ನೂರು ಚದರ ಅಡಿಯ ಉಣ್ಣೆಯ ಕಾರ್ಪೆಟ್ ಹಾಸಲಾಗಿದೆ. ಎಲ್ಲಿಯೂ ಜೋಡಿಸದ ಇದು 2007ರಲ್ಲಿ‌ ಗಿನ್ನಿಸ್ ದಾಖಲೆಯನ್ನು ಸೇರಿದೆ. ಸಾವಿರ ನಿಪುಣ ಇರಾನೀ ಕಾರ್ಮಿಕರು ವಿನ್ಯಾಸ ಹಾಗೂ ನೇಯ್ಗೆಯಲ್ಲಿ ಪಾಲ್ಗೊಂಡು ಎರಡು ವರ್ಷಗಳ ಅವಧಿಯಲ್ಲಿ ಪೂರ್ಣ ಗೊಳಿಸದ್ದಾರಂತೆ. ಭಾರತದಿಂದಲೂ ನಿಪುಣ ಕೆಲಸಗಾರರು ಈ ಕಟ್ಟಡದ ನಿರ್ಮಾಣ ಸೇರಿದಂತೆ ಕುಶಲ ಕೆಲಸದಲ್ಲಿ ಪಾಲ್ಗೊಂಡಿದ್ದರು ಎಂಬುದು ಗಮನಾರ್ಹ.

sheikh zayed grand mosque (1)

ಮುಖ್ಯ ಪ್ರಾರ್ಥನಾ ಸ್ಥಳಕ್ಕೆ ‌ಅಳವಡಿಸಿದ ಬೆಳಕು ಗುಚ್ಛ ಕೂಡ ವಿಖ್ಯಾತವಾದುದು.‌ ಜರ್ಮನಿಯ ಕುಶಲ ಕೆಲಸಗಾರರು ಇದನ್ನು ಮಾಡಿದ್ದಾರೆ. ಇದೂ ಕೂಡ ಚಿನ್ನದ್ದೇ. ಬೆಳಕಿನ ಕಿರಣಗಳು ಒಂದರ ಮೇಲೆ ಇನ್ನೊಂದು ಬಿದ್ದು ಪ್ರತಿಫಲಿಸಿ ಹರಡಿ ವಿಶಾಲ ಪ್ರದೇಶಕ್ಕೆ ವಿಶಿಷ್ಟವಾಗಿ ಮಂದವಾಗಿ ಪಸರಿಸಿ ಗಮನ ಸೆಳೆಯತ್ತದೆ. ವಿಶ್ವದ ಬೃಹತ್ ಹಾಗೂ ಬೆಳಕು ಚೆಲ್ಲುವ ಅಪರೂಪದ ಗುಚ್ಛಕ್ಕೆ ಇದು ಸೇರಿದೆ. ಈ ಬೆಳಕಿನ ವಿನ್ಯಾಸದಿಂದಲೇ ಇಡೀ ಪ್ರಾರ್ಥನಾ ಮಂದಿರದ ಇನ್ನಷ್ಟು ಆಕರ್ಷಕವಾಗಿದೆ.

ಯುಎಇ ಹಾಗೂ ನೆರೆಯ ದೇಶಗಳು ತೈಲ ಉತ್ಪಾದಿಸುವ ಕೇಂದ್ರಗಳಾಗಿವೆ. ಇಲ್ಲಿ ಎಲ್ಲ ಕಡೆ ಭಾರತೀಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ರಾಜತಾಂತ್ರಿಕ ಸಂಬಂಧ ಕೂಡ ಉತ್ತಮ‌ವಾಗಿದೆ. ನಮ್ಮ ದೇಶದಿಂದಲೇ ಪ್ರತಿನಿತ್ಯ ಬೇಕಾಗುವ ಸಾಮಾನುಗಳು, ತರಕಾರಿಗಳು‌ ಪ್ರತಿನಿತ್ಯ ಹೋಗುತ್ತವೆ .‌ ಹೀಗಾಗಿ ಭಾರತದಿಂದ ದೂರ ಅನಿಸುವುದಿಲ್ಲ. ಪಕ್ಕವೇ ಇದೆ ಎಂಬ ಭಾವ ತರುತ್ತದೆ.