• ವಿದ್ಯಾ ಇರ್ವತ್ತೂರು

ಒಡಿಶಾದ ಪುರಿ ಜಗನ್ನಾಥ ದೇವರ ರಥಯಾತ್ರೆ, ರಥೋತ್ಸವ ಇಂದಿನಿಂದ (ಜೂನ್‌ 27ರ ಶುಕ್ರವಾರ) ಆರಂಭವಾಗಿದೆ. ಇದು ಇಲ್ಲಿನ ಹಿಂದುಗಳಿಗೆ ಅತ್ಯಂತ ಪವಿತ್ರ ಹಬ್ಬವಾಗಿದ್ದು, ವರ್ಷಕ್ಕೊಮ್ಮೆಆಷಾಢದಲ್ಲಿ ನಡೆಯುವ ಈ ರಥಯಾತ್ರೆ, ರಥೋತ್ಸವಕ್ಕೆ ಕೋಟ್ಯಂತರ ಭಕ್ತರು ಸಾಕ್ಷಿಯಾಗುತ್ತಾರೆ. ದೇಶ, ವಿದೇಶಗಳ ಭಕ್ತರನ್ನು, ಪ್ರವಾಸಿಗರನ್ನು ಇದು ಸೆಳೆಯುತ್ತದೆ.

ಕಾಣಸಿಗದು ದೇವಾಲಯದ ಮುಖ್ಯ ಗುಮ್ಮಟದ ನೆರಳು

ಪುರಿ ಜಗನ್ನಾಥ ದೇವರ ರಥೋತ್ಸವದ ವೇಳೆ ಎಲ್ಲರ ಗಮನ ಸೆಳೆಯುವ ಕೆಲವು ಆಸಕ್ತಿದಾಯಕ ಸಂಗತಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ಶ್ರೀ ಜಗನ್ನಾಥ ದೇವಾಲಯದ ಮುಖ್ಯ ಗುಮ್ಮಟದ ನೆರಳು ಕಾಣಲು ಸಾಧ್ಯವಿಲ್ಲ ಎಂಬುದು. ಸೂರ್ಯ ಯಾವುದೇ ಸ್ಥಾನದಲ್ಲಿದ್ದರೂ ಇದರ ನೆರಳು ಬೀಳುವುದಿಲ್ಲ ಎನ್ನುವುದು ಇಲ್ಲಿನ ವಿಶೇಷತೆ.

puri temple

ಕೇಳಿಸದು ಸಮುದ್ರದ ಅಲೆಗಳ ಸದ್ದು

ವಿಶೇಷವೆಂದರೆ ದೇವಾಲಯದ ಪಕ್ಕದಲ್ಲೇ ಸಮುದ್ರವಿದೆ. ಆದರೆ ದೇವಾಲಯದ ಹೊರಗೆ ಕೇಳಿಸುವ ಸಮುದ್ರದ ಅಲೆಗಳ ಅಬ್ಬರ ಸದ್ದು, ದೇವಾಲಯದ ಮುಖ್ಯ ದ್ವಾರವನ್ನು ಪ್ರವೇಶಿಸಿದ ತಕ್ಷಣ ಮಾಯವಾಗುತ್ತದೆ. ಎಲ್ಲೆಲ್ಲೂ ನಿಶ್ಯಬ್ದ ಆವರಿಸಿಕೊಳ್ಳುತ್ತದೆ. ಇದು ಇಲ್ಲಿನ ಮತ್ತೊಂದು ಸೋಜಿಗ. ಯಾವುದೇ ಸದ್ದುಗದ್ದಲವಿಲ್ಲದೆ ಜಗನ್ನಾಥ ನಿದ್ರಿಸಲಿ ಎನ್ನುವ ಕಾರಣಕ್ಕೆ ದೇವಾಲಯದ ಒಳಗೆ ಸಮುದ್ರದ ಸದ್ದು ಬರದಂತೆ ಆಂಜನೇಯ ತಡೆಯುತ್ತಾನೆ ಎನ್ನುವ ನಂಬಿಕೆ ಪುರಾತನ ಕಾಲದಿಂದಲೂ ಬಂದಿದೆ.

ಇದನ್ನು ಓದಿ: ನಾಳೆಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆ

ಗಾಳಿಯ ದಿಕ್ಕಿಗೆ ವಿರುದ್ಧ ಹಾರುವ ಶಿಖರ ಧ್ವಜ

ಜಗನ್ನಾಥ ಮಂದಿರದ ಮೇಲ್ಭಾಗದಲ್ಲಿ ಶಿಖರ ಧ್ವಜವಿದೆ. ಸಾಮಾನ್ಯವಾಗಿ ಗಾಳಿ ಬಂದ ಭಾಗಕ್ಕೆ ಧ್ವಜಗಳು ಹಾರುತ್ತವೆ. ಆದರೆ ಇಲ್ಲಿನ ಶಿಖರ ಧ್ವಜವು ಗಾಳಿಯ ದಿಕ್ಕಿಗೆ ವಿರುದ್ಧ ಹಾರುತ್ತದೆ. ಪುರಾತನ ಕಾಲದಿಂದಲೂ ಇರುವ ಈ ಧ್ವಜವು ವಿಜ್ಞಾನಕ್ಕೆ ಸವಾಲೊಡ್ಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿದ್ದರೂ ಇನ್ನು ಯಾರಿಗೂ ಇದರ ನಿಖರ ಕಾರಣವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಪುರಿ ಜಗನ್ನಾಥ ದೇವಾಲಯವನ್ನು ಗಂಗಾ ರಾಜವಂಶದ ರಾಜ ಅನಂತವರ್ಮನ್ ಚೋಡಗಂಗನು ಪ್ರತಿಷ್ಠಾಪಿಸಿದ್ದು ಪ್ರತಿ 12ರಿಂದ 19 ವರ್ಷಗಳಿಗೊಮ್ಮೆ ದೇವರ ರಥೋತ್ಸವಕ್ಕೆ ಬಳಸುವ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯ ಮರದ ಮೂರ್ತಿಗಳನ್ನು ಹೊಸದಾಗಿ ಮಾಡಲಾಗುತ್ತದೆ.

jagannath temple

ದೇವಾಲಯವು ಅದರ ಶಿಖರದಲ್ಲಿ ಒಂದು ಸುದರ್ಶನ ಚಕ್ರವನ್ನು ಹೊಂದಿದ್ದು ಇದನ್ನು ನಗರದ ಯಾವುದೇ ಸ್ಥಳದಿಂದ ವೀಕ್ಷಿಸಬಹುದು. ಇದು 20 ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಈ ಚಕ್ರದ ಮೇಲೆ ಯಾವುದೇ ಪಕ್ಷಿ, ಕೀಟ, ವಿಮಾನಗಳು ಹಾರುವುದಿಲ್ಲ.

ಪ್ರತಿ ವರ್ಷ ಜಗನ್ನಾಥ, ಅವನ ಅಣ್ಣ ಬಲಭದ್ರ ಮತ್ತು ಅವನ ತಂಗಿ ಸುಭದ್ರಾಗೆ ಬೇವಿನ ಮರದಿಂದ ಮೂರು ಪ್ರತ್ಯೇಕ ರಥಗಳನ್ನು ತಯಾರಿಸಲಾಗುತ್ತದೆ. ಈ ರಥಗಳನ್ನು ತಯಾರಿಸಲು ಬೇರೆ ಯಾವುದೇ ಮರವನ್ನು ಬಳಸಲಾಗುವುದಿಲ್ಲ. ರಥದ ನಿರ್ಮಾಣ ಕಾರ್ಯವು ಅಕ್ಷಯ ತೃತೀಯದಂದು ಪ್ರಾರಂಭವಾಗುತ್ತದೆ.

ಹೀಗೆ ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಪುರಿ ಜಗನ್ನಾಥ ದೇವಾಲಯವನ್ನು ನೀವೂ ಒಮ್ಮೆ ನೋಡಿ ಬನ್ನಿ..