- ರಂಗನಾಥ ಕೆ. ಹೊನ್ನಮರಡಿ

ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಕೈದಾಳ ಗ್ರಾಮದಲ್ಲಿರುವ ಚೆನ್ನಕೇಶವ ದೇವಾಲಯದಲ್ಲಿನ ಶ್ರೀ ಚೆನ್ನಿಗರಾಯ ಸ್ವಾಮಿ ಮೂರ್ತಿಯು ವಾಸ್ತುಕಲೆಯಲ್ಲಿ ಹೆಗ್ಗಳಿಕೆ ಹೊಂದಿದ್ದು, ರಾಷ್ಟ್ರವ್ಯಾಪ್ತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಇದಕ್ಕೆ ಶಿಲ್ಪಿ ಜಕಣಾಚಾರಿಯ ಜೀವನದ ಸತ್ಯಕಥೆಯೇ ಕಾರಣ ಎನ್ನಬಹುದು. ಗರ್ಭಗುಡಿಯಲ್ಲಿರುವ ಚೆನ್ನಿಗರಾಯಸ್ವಾಮಿ ವಿಗ್ರಹವು ಬೇಲೂರು ಚೆನ್ನಿಗರಾಯನ ಪ್ರತಿರೂಪದಂತಿದೆ. 5 ಅಡಿ 4 ಇಂಚು ಎತ್ತರವಿರುವ ಮೂರ್ತಿಯನ್ನು ಎರಡು ಅಡಿ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಗಳಿವೆ. ಕೈ ಬೆರಳುಗಳ ನಡುವೆ ಒಂದು ಕಡ್ಡಿ ಚಲಿಸುವಷ್ಟು ಜಾಗವಿದ್ದು, ಬೆರಳಲ್ಲಿರುವ ಉಂಗುರ ಸಹ ವೃತ್ತಾಕಾರವಾಗಿ ತಿರುಗಿಸಬಹುದಾಗಿದೆ. ಇವು ಶಿಲ್ಪಿಯ ಕೈಚಳಕವನ್ನು ಸಾರುತ್ತವೆ. ದೇವಾಲಯದ ರಕ್ಷಣಾ ಗೋಡೆಯ ಕಿಂಡಿಯಿಂದ ಹಾದು ಬರುವ ಸೂರ್ಯ ಕಿರಣಗಳು, ಗರುಡನ ಕಿವಿಯಲ್ಲಿ ಹಾಯ್ದು ದೇವಾಲಯದ ಕಿಂಡಿ ಪ್ರವೇಶಿಸಿ ಕೇಶವನ ಪಾದದ ಮೇಲೆ ಬೀಳುವ ಅದ್ಭುತ ದೃಶ್ಯವನ್ನು ನೋಡಬಹುದಾಗಿದೆ.

kaidala 3

ಕ್ರೀಡಾಪುರವೇ ಕೈದಾಳ

ಹಿಂದಿನ ಕ್ರೀಡಾಪುರ ಪಟ್ಟಣ ಕಿರು ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು. ಇಲ್ಲಿ ಜನಿಸಿದ ಶಿಲ್ಪಿ ಜಕಣಾಚಾರಿ ಬೇಲೂರಿನಲ್ಲಿ ಚೆನ್ನಿಗರಾಯ ಮೂರ್ತಿಯನ್ನು ಕಡೆಯುವ ಸಮಯದಲ್ಲಿ ತಂದೆಯನ್ನು ಹುಡುಕುತ್ತ ಬರುತ್ತಾನೆ. ಡಕಣಾಚಾರಿಯು ಜಕಣಾಚಾರಿಯೇ ತನ್ನ ತಂದೆ ಎಂದು ತಿಳಿಯದೇ ಚೆನ್ನಿಗರಾಯಮೂರ್ತಿ ಕಡೆಯುತ್ತಿರುವ ಶಿಲೆಯಲ್ಲಿ ದೋಷವಿದೆ ಎಂದು ಸವಾಲು ಹಾಕುತ್ತಾನೆ. ಅದರಂತೆ ಇಬ್ಬರ ನಡುವೆ ಸವಾಲು ಏರ್ಪಟ್ಟು ಜಕಣಾಚಾರಿಯು ನೀನು ಹೇಳಿದ್ದೇ ನಿಜವಾಗಿದ್ದು, ಮೂರ್ತಿಯಲ್ಲಿ ದೋಷವಿದ್ದರೆ ನಾನು ನನ್ನ ಬಲ ಕೈಯನ್ನು ಕತ್ತರಿಸುಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಆಗ ಅಲ್ಲಿನ ರಾಜರೆದುರು ಮೂರ್ತಿಯ ಪರೀಕ್ಷೆ ನಡೆಯುತ್ತದೆ. ಚೆನ್ನಿಗರಾಯ ಶಿಲ್ಪದ ಹೊಟ್ಟೆಯ ಭಾಗದಲ್ಲಿ ಉಳಿಯಿಂದ ಹೊಡೆದಾಗ, ಆ ಭಾಗ ಒಡೆದು ಅದರಿಂದ ಕಪ್ಪೆಯೊಂದು ಹೊರಬರುತ್ತದೆ. ಹೀಗಾಗಿ ಈ ದೇವಾಲಯದಲ್ಲಿರುವ ದೇವರನ್ನು ಕಪ್ಪೆ ಚೆನ್ನಿಗರಾಯ ಎಂದೇ ಕರೆಯುತ್ತಾರೆ.

ಮಗನಿಂದಲೇ ಈ ರೀತಿ ಅವಮಾನಿತನಾದ ಖ್ಯಾತ ಶಿಲ್ಪಿ ತನ್ನ ಬಲಗೈಯನ್ನೇ ಕತ್ತರಿಸಿಕೊಳ್ಳುತ್ತಾನೆ. ನಂತರದ ದಿನಗಳಲ್ಲಿ ಭಗವಂತ ಆತನ ಕನಸಿನಲ್ಲಿ ಬಂದು ತನ್ನ ಜನ್ಮ ಸ್ಥಳವಾದ ಕ್ರೀಡಾಪುರದಲ್ಲಿ ಚೆನ್ನಿಗರಾಯನ ದೇವಾಲಯ నిರ್ಮಿಸಲು ಆದೇಶಿಸುತ್ತಾನೆ. ಕ್ರೀಡಾಪುರದಲ್ಲಿ ದೇವತಾ ಪ್ರತಿಷ್ಠಾಪನೆಯಾದಾಗ ಜಕಣಾಚಾರಿಗೆ ಮತ್ತೆ ಕೈ ಬಂತು, ಹೀಗಾಗಿ ಕೈ ದಾಳವೆಂದು ಖ್ಯಾತಿಯಾಯಿತು.

ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ದೇವಾಲಯದಲ್ಲಿ ದೇವರ ಪೂಜಾ ಕಾರ್ಯ ನನಗೆ ದೊರೆತಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದೇ ಹೇಳಬಹುದು. ವಿವಾಹಿತರು ದೇವರಲ್ಲಿ ನಿಷ್ಠೆ, ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರೆ ಬೇಡಿಕೊಂಡ ಕಾರ್ಯ ಸಿದ್ದಿಯಾಗುತ್ತದೆ.
ಜಯಸಿಂಹ ಅರ್ಚಕರು
ಕೈದಾಳ ದೇವಸ್ಥಾನ.

ದೇವಾಲಯದ ಶೈಲಿ

ಕೈದಾಳದಲ್ಲಿ ದ್ರಾವಿಡ ವಾಸ್ತುಶೈಲಿಯಲ್ಲಿರುವ ಚೆನ್ನಕೇಶವ ದೇವಾಲಯವಿದೆ. ಇಲ್ಲಿ ದೊರೆತಿರುವ ಶಾಸನದ ರೀತ್ಯ 1150-51ರಲ್ಲಿ ಹೊಯ್ಸಳರ 1ನೆಯ ನರಸಿಂಹನ ಸಾಮಂತನಾಗಿದ್ದ ಗುಳೇ-ಬಾಚಿ ಎಂಬಾತ ಈ ದೇವಸ್ಥಾನ ಕಟ್ಟಿಸಿದ್ದಾನೆ. ಇಲ್ಲಿ ವಿಜಯನಗರ ಶೈಲಿಯಲ್ಲಿ 7 ಹಂತದ ಗೋಪುರವಿದ್ದ ಕುರುಹು ದೊರಕುತ್ತದೆ.

ಮಹಾದ್ವಾರದ ಬಲಬದಿಯ ಕಂಬವೊಂದರ ಮೇಲೆ ವಸಹಿತನಾದ ಚೆನ್ನಕೇಶವನನ್ನೂ ಎಡಗಡೆಯ ಕಂಬದ ಮೇಲೆ ಕೈಮುಗಿದು ನಿಂತ ಭಕ್ತವಿಗ್ರಹವಿದೆ. ಉತ್ತರೀಯ ಹೊದ್ದಿರುವ ಜಕಣಾಚಾರಿಯದಿರಬಹುದೆಂದು ಹೇಳಲಾಗುತ್ತದೆ. ವಿಗ್ರಹ ಖಡ್ಗ ಉತ್ತರೀಯ ಹೊಂದಿರುವುದರಿಂದ ಇದು ದೇವಾಲಯ ಕಟ್ಟಿಸಿದ ಬಾಚಿ ಸಾಮಂತನದಾಗಿರಬಹುದೆಂಬ ವಾದವೂ ಇದೆ.

kaidala 2

ತಂದೆ ಮಕ್ಕಳ ಮಿಲನ

ಶಿಲ್ಪಿ ಜಕಣಾಚಾರಿ ತನ್ನ ಪತ್ನಿ ಗರ್ಭಿಣಿಯಾಗಿದ್ದಾಗಲೇ ಪತ್ನಿ ತೊರೆದು ಮೂಲ ಕಸುಬಾದ ಕೆತ್ತನೆ ಕೆಲಸದ ಮೇಲೆ ದೇಶಾಂತರ ಹೋಗುತ್ತಾನೆ. ನಂತರದ ದಿನಗಳಲ್ಲಿ ಪತ್ನಿಯು ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವೇ ಜಕಣಾಚಾರಿಯ ಮಗನಾದ ಡಕಣಾಚಾರಿ. ತನ್ನ ತಂದೆಯನ್ನು ಹುಡುಕುತ್ತ ಹಲವು ವರ್ಷಗಳ ಬಳಿಕ ಜಕಣಾಚಾರಿ ಬೇಲೂರಿನಲ್ಲಿ ಚೆನ್ನಿಗರಾಯ ಮೂರ್ತಿಯನ್ನು ಕಡೆಯುತ್ತಿದ್ದ ಜಾಗಕ್ಕೆ ಬರುತ್ತಾನೆ. ಅಲ್ಲಿಗೆ ಬಂದ ಡಕಣಾಚಾರಿ, ಚೆನ್ನಿಗರಾಯಮೂರ್ತಿ ಕಡೆಯುತ್ತಿರುವ ಶಿಲೆಯಲ್ಲಿ ದೋಷವಿದೆ ಎಂದು ಸವಾಲು ಹಾಕಿ ಅದರಂತೆ ಮೂರ್ತಿಯ ಪರೀಕ್ಷೆ ನಡೆಯುತ್ತದೆ. ಮಾತು ಸತ್ಯವಾದ ನಂತರ ಜಕಣಾಚಾರಿಯು ಮೂರ್ತಿಯಲ್ಲಿ ದೋಷವನ್ನು ನೋಡುತ್ತಲೇ ಕಂಡುಹಿಡಿದ ನೀನು ಯಾರೋ ಶಿಲ್ಪಿಗೆ ಸೇರಿದ ವ್ಯಕ್ತಿಯಾಗಿರಬೇಕು ನೀನು ಯಾರು ಎಂದು ವಿಚಾರಿಸಿದಾಗ ತಂದೆ ಮಕ್ಕಳ ಸಂಬಂಧ ತಿಳಿಯುತ್ತದೆ.

ದೇವಾಲಯ ಅಭಿವೃದ್ಧಿಗೆ ಶ್ರೀ ಧರ್ಮಸ್ಥಳದ ವೀರೆಂದ್ರ ಹೆಗಡೆ ಧರ್ಮದಾರ ಟ್ರಸ್ಟ್‌ನಿಂದ ಗಂಗಾಧರೇಶ್ವರ, ಶ್ರೀ ಕೋಟಿ ರಾಮೇಶ್ವರ, ಗೌರಿಶಂಕರಸ್ವಾಮಿ ದೇವಾಲಯಗಳ ಜೀರ್ಣೋದ್ಧಾರ ನೆರವೇರಿಸಲಾಗಿದೆ. ಇದರಿಂದ ಕಳೆದು ಹೋದ ಮೆರುಗು ಮತ್ತೆ ಬಂದಿದೆ.
-ಸಿದ್ದಹನುಮಯ್ಯ
ನಿವೃತ ಶಿಕ್ಷಕರು,ಕೈದಾಳ

ದಾರಿಹೇಗೆ?

ತುಮಕೂರಿನಿಂದ 7 ಕಿ.ಮೀ. ದೂರದಲ್ಲಿರುವ ಕೈದಾ ಳಕ್ಕೆ ನಗರದ ಸರಕಾರಿ ಬಸ್ ನಿಲ್ದಾಣದಿಂದ ಬಸ್ ಸಿಗುತ್ತದೆ. ಮೈಸೂರು ಮಾರ್ಗದಲ್ಲಿ ಗೂಳೂರು ಬಸ್ ನಿಲ್ದಾಣದಿಂದ ದಿನದ 24 ಗಂಟೆ ಆಟೋ ಸೌಲಭ್ಯ ದೊರೆಯುತ್ತದೆ.