• ಕೆ. ಶ್ರೀಧರ್

ಇತ್ತೀಚೆಗೆ ಸೋಷಿಯಲ್ ಮೀಡಿಯಾದ ತುಂಬಾ ʼದೇವರ ನಾಡುʼ ಎಂದು ಖ್ಯಾತಿಯಾದ ಕೇರಳದ ಕೊಟ್ಟಿಯೂರಿನದ್ದೇ ಸದ್ದು. ಫೇಸ್ಬುಕ್, ವಾಟ್ಸಾಪ್ ಹಾಗೂ ಇನ್ ಸ್ಟಾಗ್ರಾಂ ತುಂಬ ಆನೆಗಳ ಮೇಲೆ ಮಾವುತರು ಕುಳಿತು ಯಾವುದೋ ಶತಮಾನಗಳ ಸಂಪ್ರದಾಯವನ್ನು ಉತ್ಸವದಂತೆ ಆಚರಿಸುತ್ತಿರುವ ವಿಡಿಯೋ. ಈ ಕಾಡು ಬೆಟ್ಟಗಳೆಂದರೆ ಪ್ರೀತಿ ಇದ್ದ ನಾನು ಸ್ನೇಹಿತರೊಡನೆ ಕೊಟ್ಟಿಯೂರಿಗೆ ಹೊರಟೆ. ಕೇರಳದ ಗಡಿಯಂಚಿನಿಂದಲೇ ಸೋನೆ ಮಳೆ ಅಲ್ಲಲ್ಲಿ ಕಾರಿನ ಗ್ಲಾಸಿಗೆ ರಾಚುತ್ತಿತ್ತು. ನಮ್ಮ ಭಾರತ ದೇಶದಲ್ಲಿ ಮುಂಗಾರು ಮೊದಲು ಬೀಳುವುದೇ ಕೇರಳದಲ್ಲಿ. ದಾರಿಯುದ್ದಕ್ಕೂ ರಸ್ತೆಯ ಬದಿಯಲ್ಲಿ ಬೆಳೆದಿದ್ದ ರಬ್ಬರ್ ಮರಗಳ ಮೇಲೆ ಪಚ್ಚ ಹಸುರಿನ ಪಾಚಿ. ಕೇರಳದ ಮಾದರಿಯ ಮನೆಗಳನ್ನು ನೋಡುವುದೇ ಒಂದು ಸೊಗಸು. ಜೀವನದಲ್ಲಿ ಒಮ್ಮೆಯಾದರೂ ಈ ಮನೆಯಲ್ಲಿ ವಸತಿ ಹೂಡಿ ಒಂದ್ ಸೆಲ್ಫೀ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಬೇಕೆನ್ನುವಷ್ಟು ಮುದ್ದಾಗಿರ್ತವೆ. ವರ್ಷದಲ್ಲಿ ಮೂವತ್ತು ದಿನಗಳು ಮಾತ್ರ ದರ್ಶನ ನೀಡುವ ದೇವರು ಕೊಟ್ಟಿಯೂರಿನ ಶಿವ. ನಾವು ಮಳೆಯಲ್ಲಿ ನೆನೆದೂ ಸರಿ, ದರ್ಶನ ಮಾಡೇ ತೀರಬೇಕು ಎಂದುಕೊಂಡು ಕೊಟ್ಟಿಯೂರಿನ ಶಿವನ ದೇವಾಲಯದ ಕಡೆ ಸಾಗಿದೆವು.

ಪ್ರಕೃತಿಯೇ ಸೃಷ್ಟಿಸಿದ ದೈವಿಕ ಸೌಂದರ್ಯ

ಭಾನುವಾರವಾದ್ದರಿಂದ ನೂರಾರು ಕಿಲೋ ಮೀಟರುಗಳಿಂದ ಬಂದಿದ್ದ ಜನ ಜಂಗುಳಿಯಲ್ಲಿ ಆ ಕಾಡಿನ ಕಿರಿದಾದ ರಸ್ತೆ ವಾಹನಗಳಿಂದ ತುಂಬಿ ಹೋಗಿತ್ತು ಆದರೆ ದೇವಾಲಯದ ಮಾರ್ಗದ ಮನೆಗಳ ಮುಂದೆ ʼಪೇ ಪಾರ್ಕಿಂಗ್ʼ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಅನನುಕೂಲವಾಗಲಿಲ್ಲ. ನಾವು ಕಾರನ್ನು ಹಾಗೇ ಪೇ ಪಾರ್ಕ್ ಮಾಡಿ ಒಂದು ಕಿಲೋ ಮೀಟರ್ ನಡೆದುಕೊಂಡು ದೇವಾಲಯದ ಕಡೆ ಹೊರಟೆವು. ದೂರದಿಂದಲೇ ಬಿಳಿ ಶಲ್ಯ ಪಂಚೆ ಧರಿಸಿ ಸೇತುವೆಯೊಂದರ ಮಾರ್ಗ ಮಧ್ಯದಲ್ಲಿ ಜನ ಕ್ಯೂ ನಿಂತಿದ್ದು ನೋಡಿ ಆಶ್ಚರ್ಯವಾಯಿತು. ವಾವಲಿ ನದಿಯು ಸೇತುವೆ ಕೆಳಗೆ ಶಾಂತವಾಗಿ ಹರಿಯುತ್ತಿತ್ತು. ನಾವು ಜನರ ಕ್ಯೂ ನೋಡಿ ದೇವಾಲಯ ಎಲ್ಲಿ ಎಂದು ಹುಡುಕಿದೆವು. ಸುತ್ತಲೂ ಬೆಟ್ಟ, ದಟ್ಟವಾದ ಕಾನನ ಅದರ ಮಧ್ಯದಲ್ಲಿ ತಾಳೆ ಗರಿಗಳಿಂದ ನಿರ್ಮಿಸಲ್ಪಟ್ಟ ದೇವಾಲಯದ ಪ್ರಾಂಗಣ. ಅದರ ಸುತ್ತಲೂ ವಾವಲಿ ನದಿಯ ನೀರು, ಭಕ್ತಿಯಿಂದ ಕೈ ಮುಗಿಯುತ್ತಾ ಆ ನೀರಿನಲ್ಲಿ ತೆರಳುವ ಜನ. ಅದರ ನಡುವೆ ಬಾನೆತ್ತರಕ್ಕೆ ಬೆಳೆದು ನಿಂತ ಟಬೆಬುಯಾ ರೋಸಿಯದ ಮರದಂತಿರುವ ನೀಳವಾದ ಮರ. ತುಳಸಿ ಕಟ್ಟೆಯಂತಿರುವ ಸತಿ ದೇವಿಯ ವೃತ್ತಾಕಾರದ ಪೀಠ. ಅದರ ಪಾರ್ಶ್ವ ದಿಕ್ಕಿನಲ್ಲಿಯೇ ಇರುವ ಉದ್ಭವ ಕಲ್ಲುಬಂಡೆಯ ಸ್ವಯಂಭೂ ಶಿವ! ಮಳೆ ಗಾಳಿಯಿದ್ದರೂ ಪ್ರಕಾಶಮಾನವಾಗಿ ಬೆಳಗುವ ಜ್ಯೋತಿ.

kottiyur tmple new

ಪೂಜೆಯ ಸೊಬಗು

ಭಕ್ತರಿಗೆ ಮಲಯಾಳಂ ಭಾಷೆಯಲ್ಲಿಯೇ ದೇವಾಲಯದ ವಿಧಿವಿಧಾನಗಳ ಬಗ್ಗೆ ತಿಳಿ ಹೇಳುವ ರೀತಿ, ತಾಳೆ ಗರಿಯ ಗುಡಿಸಲುಗಳಲ್ಲಿ ಋಷಿಗಳಂತೆ ಗಂಧವನ್ನು ತೇಯ್ದು ಚೂರು ಬಾಳೆ ಎಲೆಯಲ್ಲಿ ಭಕ್ತರಿಗೆ ನೀಡುವ ವಿಧಾನ, ಆಲಯವೇ ಇಲ್ಲದಿರುವ ಆ ತಾಳೆ ಗರಿಯ ಗುಡಿಸಲಿನ ಸುತ್ತ ರೌಂಡ್ ಹಾಕುತ್ತಾ ತ್ರಿಶೂಲ ಮತ್ತು ಬೆಳಗುವ ಜ್ಯೋತಿಯಿಂದಲೇ ’ದೇವರೆಲ್ಲಿ ಕೊಟ್ಟಿಯೂರಿನ ಶಿವ ದೇವರೆಲ್ಲಿ’ ಎಂದು ಭಕ್ತರ ಕಣ್ಣುಗಳು ಹುಡುಕುವ ಪರಿ, ವಿವರಣೆಗೆ ನಿಲುಕದ ವೈಭವ.

ʼಕೊಟ್ಟಿಯೂರು ವ್ಯಸಖ ಮಹೋತ್ಸವʼದ ಪೂಜೆಯದ್ದು ಇನ್ನೊಂದು ದೈವಿಕ ಸಂಭ್ರಮ. ಒಂದು ಮೂಲೆಯಿಂದ ಎರಡು ದೈತ್ಯ ಆನೆಗಳು ಪ್ರವೇಶಿಸುತ್ತವೆ. ಹಿಂದೆಯೇ ಬರುವ ಮಾವುತ ದೇವಾಲಯದ ಆವರಣ ತಲುಪಿ ಆನೆಯನ್ನೇರಿ ಸತಿ ದೇವಿ ಮತ್ತು ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉತ್ಸವಕ್ಕೆ ಚಾಲನೆ ನೀಡುತ್ತಾನೆ. ಗಾಂಭೀರ್ಯದ ಮಾವುತನ ನೋಟ ಹಾಗೂ ಆನೆಗಳ ನಡಿಗೆ ವಿವಿಧ ವಾದ್ಯಗಳ ಮೇಳೈಸಿ ಮೊಳಗುವ ಸದ್ದು, ಆ ಮೆರವಣಿಗೆಯ ಮುಂದೆ ಬಿದಿರು ಬೊಂಬಿನ ನಳಿಕೆಯಲ್ಲಿ ಪಂಜಿಗೆ ಬೆಂಕಿ ಹಚ್ಚಿಕೊಂಡು ಶಂಖನಾದ ಮೊಳಗಿಸುತ್ತಾ ಸಾಗುವ ಸೇವಕರು ಈ ಮಹೋತ್ಸವದ ಮೆರವಣಿಗೆ ನೋಡುಗರನ್ನು ಮೂಕವಿಸ್ಮಿತರಾಗಿಸುತ್ತದೆ.

ಈ ದೇವಾಲಯದ ವಿಶೇಷ

ಈ ಉತ್ಸವದ ಹೆಸರು “ಕೊಟ್ಟಿಯೂರು ವ್ಯಸಖ ಮಹೋತ್ಸವ”. ಇದೊಂದು 27 ದಿನಗಳ ಕಾಲ ನಡೆಯುವ ಹಿಂದೂ ತೀರ್ಥಯಾತ್ರೆ. ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳದಂತೆಯೇ ಧಾರ್ಮಿಕ ಶುದ್ಧೀಕರಣವನ್ನು ಒಳಗೊಂಡಿರುವ ಆಚರಣೆಯಾಗಿದ್ದು, ಈ ಕಾರಣಕ್ಕಾಗಿ ದಕ್ಷಿಣಕಾಶಿ/ದಕ್ಷಿಣ ವಾರಾಣಸಿ ಎಂದೂ ಈ ಕೊಟ್ಟಿಯೂರನ್ನು ಕರೆಯುತ್ತಾರೆ.

ಇಲ್ಲಿ ತಾಳೆ ಗರಿಗಳಿಂದ ಕಟ್ಟಲಾದ ಆಶ್ರಮಗಳಿವೆ. ಸ್ಥಳೀಯರು ನೀಡುವ ಮಾಹಿತಿ ಪ್ರಕಾರ ಸುಮಾರು 50 ಸಾವಿರಕ್ಕೂ ಹೆಚ್ಚು ಎಕರೆ ಭೂಪ್ರದೇಶವನ್ನು ಹೊಂದಿರುವ ವನ್ಯಜೀವಿ ಅರಣ್ಯ ವಲಯದೊಳಗೆ ಈ ದೇವಾಲಯವಿದೆ. ನದಿ ಮತ್ತು ಕಲ್ಲುಗಳಿಂದಲೇ ಸೃಷ್ಟಿಯಾದ ಎತ್ತರದ ಪೀಠದ ಮೇಲೆ ನಿಂತಿದೆ. ಅದರ ಸುತ್ತಲೂ ಕೊಳವಿದೆ. ಕೊಳದ ನೀರು ವಾವಲಿ ನದಿಗೆ ಹರಿಯುತ್ತದೆ. ಮೇಲಿನಿಂದ ನೋಡಿದಾಗ ಇಡೀ ದೇವಾಲಯ ಶಿವಲಿಂಗವನ್ನು ಹೋಲುವುದು ಇದರ ವಿಶೇಷ. ಇಲ್ಲಿನ ಶಿವಲಿಂಗ ಸ್ವಯಂಭೂ ಶಿವಲಿಂಗವಾಗಿದೆ. ಈ ದೇವಾಲಯದ ವಿಧಿ ವಿಧಾನಗಳನ್ನು ಒಟ್ಟುಗೂಡಿಸಿದ ಕೀರ್ತಿ ಶಂಕರಚಾರ್ಯರಿಗೆ ಸಲ್ಲುತ್ತದೆ.

ಪೌರಾಣಿಕ ಹಿನ್ನೆಲೆ

ಪುರಾಣದ ಪ್ರಕಾರ, ದಕ್ಷನ ಕಿರಿ ಮಗಳಾದ ಸತಿ ಶಿವನನ್ನು ತುಂಬ ಪ್ರೀತಿಸುತ್ತಿದ್ದಳು. ಆತನ ಮಡದಿಯಾಗಲು ಆಶಿಸಿದಳು. ದಕ್ಷನು ತನ್ನ ಪ್ರಭಾವ ಮತ್ತು ಶಕ್ತಿಗಳಿಂದಲೇ ಪ್ರಸಿದ್ಧನಾಗಿದ್ದ. ಇದಕ್ಕೆ ತದ್ವಿರುದ್ಧವಾಗಿ ಶಿವ ಸಾಧಾರಣ ಜೀವನ ನಡೆಸುತ್ತಿದ್ದ. ಶಿವ ಮತ್ತು ಸತಿ ವಿವಾಹವನ್ನು ದಕ್ಷ ವಿರೋಧಿಸಿದನು. ಆದರೆ ಸ್ವಯಂವರದಲ್ಲಿ ಸತಿಯು ಶಿವನನ್ನು ಆರಿಸಿಕೊಂಡಳು. ಸತಿ ಮತ್ತು ಶಿವನ ವಿವಾಹವಾಯಿತು.

ಒಮ್ಮೆ ದಕ್ಷನ ತಂದೆ ಬ್ರಹ್ಮದೇವ ಒಂದು ಮಹಾ ಯಜ್ಞವನ್ನು ಕೈಗೊಂಡನು. ದಕ್ಷನು ಈ ಸಭೆಗೆ ಬಂದಾಗ ಶಿವ ಮತ್ತು ಸತಿ ಎದ್ದು ನಿಂತು ಸ್ವಾಗತಿಸಲಿಲ್ಲ ಎಂಬ ಕಾರಣಕ್ಕಾಗಿ ಭೃಗ ಋಷಿಗೆ ಯಜ್ಞದ ಅಧ್ಯಕ್ಷತೆ ನೀಡಿ ಶಿವ ಮತ್ತು ಸತಿಯನ್ನು ಉದ್ದೇಶಪೂರಕವಾಗಿ ಹೊರಗಿಟ್ಟನು. ಆಗ ಶಿವನು ಆಹ್ವಾನವಿಲ್ಲದ ಸಭೆಗೆ ಹಾಜರಾಗಲು ನಿರಾಕರಿಸುತ್ತಾನೆ. ಸತಿ ಸಮಾರಂಭಕ್ಕೆ ಹಾಜರಾಗಲು ಶಿವನಲ್ಲಿ ಕೇಳಿಕೊಳ್ಳುತ್ತಾಳೆ. ಶಿವನು ನಂದಿಯೊಂದಿಗೆ ಸತಿಯನ್ನು ಕಳಿಸಿಕೊಡುತ್ತಾನೆ. ಆಹ್ವಾನಿಸದ ಕಾರ್ಯಕ್ರಮಕ್ಕೆ ಬಂದ ಸತಿಯನ್ನು ದಕ್ಷ ಅಪಾರವಾಗಿ ಅವಮಾನಗೊಳಿಸಿ ಶಿವನು ನಾಸ್ತಿಕ ಮತ್ತು ಸ್ಮಶಾನವಾಸಿ ಎಂದು ಜರಿಯುತ್ತಾನೆ. ದಕ್ಷನ ಈ ದುರಹಂಕಾರದ ವರ್ತನೆಯನ್ನು ಶಪಿಸಿದ ಸತಿ ಶಿವನ ಕೋಪವು ದಕ್ಷನ ಸಾಮ್ರಾಜ್ಯವನ್ನು ನಾಶಗೊಳಿಸುತ್ತದೆ ಎಂದು ಶಪಿಸುತ್ತಾಳೆ. ಅವಮಾನವನ್ನು ಸಹಿಸಲಾಗದೆ ಸತಿ ಯಜ್ಞದ ಬೆಂಕಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ.

ತನ್ನ ಪತ್ನಿಯ ಸಾವಿನ ಸುದ್ದಿ ಕೇಳಿದ ಶಿವನು ದುಃಖ ಮತ್ತು ಕೋಪದಿಂದ ಶಸ್ತ್ರಸಜ್ಜಿತ ಭಯಂಕರ ವೀರಭದ್ರ ಮತ್ತು ಭದ್ರಕಾಳಿಯನ್ನು ಕಳಿಸಿ ದಕ್ಷನನ್ನು ಕೊಂದು ಯಜ್ಞವನ್ನು ನಾಶಪಡಿಸುವಂತೆ ಆಜ್ಞಾಪಿಸುತ್ತಾನೆ. ಉಗ್ರವೀರಭದ್ರ, ಭದ್ರಕಾಳಿ ಮತ್ತು ಭೂತಗಣರು ದಕ್ಷನ ಮೇಲೆ ದಾಳಿ ನಡೆಸಿ, ಸೆರೆಹಿಡಿದು ಶಿರಚ್ಛೇದ ಮಾಡಿ ವಿಜಯದ ಅಂತಿಮ ಕ್ರಿಯೆಯಾಗಿ ಭೃಗು ಋಷಿಯ ಬಿಳಿ ಗಡ್ಡವನ್ನು ಕಿತ್ತುಹಾಕುತ್ತಾರೆ. ಮಹಾಯಜ್ಞ ಇಂಥ ಅಡಚಣೆಯಿಂದ ವಿನಾಶ ಉಂಟುಮಾಡಬಹುದೆಂದು ಬ್ರಹ್ಮ ಮತ್ತು ವಿಷ್ಣು ದುಃಖಿತ ಶಿವನನ್ನು ಯಜ್ಞವನ್ನು ಮುಂದುವರೆಸಲು ಒತ್ತಾಯಿಸುತ್ತಾರೆ. ಯಜ್ಞಕ್ಕಾಗಿ ಉದ್ದೇಶಿಸಲಾದ ಟಗರಿನ ತಲೆಯನ್ನು ದಕ್ಷನ ಶಿರಚ್ಛೇದಿತ ದೇಹಕ್ಕಿರಿಸಿ ಅವನ ಜೀವವನ್ನು ಪುನಃಸ್ಥಾಪಿಸಿ ಯಜ್ಞವನ್ನು ಪೂರ್ಣಗೊಳಿಸುತ್ತಾನೆ ಶಿವ.

kottiyoor-temple-04

ಸತಿಯ ನಿರ್ಜೀವ ದೇಹವನ್ನು ಹೊತ್ತುಕೊಂಡು ಅಲೆದಾಡುವಾಗ, ಅವಳ ದೇಹದ ಭಾಗಗಳು ಎಲ್ಲೆಲ್ಲಿ ಬಿದ್ದವೋ ಅವುಗಳು ಶಕ್ತಿಪೀಠಗಳಾಗುತ್ತವೆ. ಸತಿ ದೇವಿಯ ಕಣ್ಣೀರು ಮತ್ತು ಶಾಪವನ್ನು ಹೊತ್ತುಕೊಂಡ ಭೂಮಿಯನ್ನು ಕಾಳಿ ಆಳಲು ಪ್ರಾರಂಭಿಸಿದಾಗ ಕೇರಳವು ನೀರಿನಲ್ಲಿ ಮುಳುಗಿತು. ಪರುಶುರಾಮನು ವಾಸಿಸಲು ಒಂದು ಸ್ಥಳ ಬೇಕಿತ್ತು ವರುಣನ ಕೋರಿಕೆಯ ಮೇರೆಗೆ ಅವನು ತನ್ನ ಕೊಡಲಿಯನ್ನು ಗೋಕರ್ಣದಿಂದ ಕನ್ಯಾಕುಮಾರಿಗೆ ಎಸೆದಾಗ ಕೇರಳವು ಮತ್ತೆ ಸಮುದ್ರದಿಂದ ಹೊರಹೊಮ್ಮಿತು. ಕಾಳಿಯು ಪರಶುರಾಮನ ಮೇಲೆ ದಾಳಿ ಮಾಡಿದಾಗ ಆತನು ಕಾಳಿಯನ್ನು ಸೋಲಿಸಿ ಕಾಳಿಯನ್ನು ಕೊಲ್ಲಲು ತನ್ನ ಕೊಡಲಿಯನ್ನು ಎತ್ತಿದಾಗ ತ್ರಿಮೂರ್ತಿಗಳು ಅಲ್ಲಿ ಪ್ರತ್ಯಕ್ಷವಾಗಿ ಪರಶುರಾಮನನ್ನು ತಡೆದರು. ಕೊಟ್ಟಿಯೂರಿನಲ್ಲಿರುವ ಶಿವನ ಸ್ವಯಂಭೂ ಲಿಂಗದ ಆವರಣಕ್ಕೆ ಅವನು ಎಂದಿಗೂ ಬರಬಾರದೆಂದು ಷರತ್ತು ವಿಧಿಸಿ ಕಾಳಿಯನ್ನು ಬಿಡುಗಡೆ ಮಾಡಿದನು. ಆ ಸ್ಥಳದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಲು ಅವನು ಇಪ್ಪತ್ತೇಳು ದಿನಗಳ ಉತ್ಸವವನ್ನು ಪ್ರಾರಂಭಿಸಿದನು ಎಂಬ ಪ್ರತೀತಿ ಇದೆ.