• ಜಯಂತ್ ದೇಸಾಯಿ

ಜಗನ್ಮಾತೆ ಸರಸ್ವತಿಯ ದೇಗುಲಗಳು ಅಪರೂಪದಲ್ಲಿ ಅಪರೂಪ. ವೈದಿಕ ಪರಂಪರೆಯಲ್ಲಿ ದೇವಿಯನ್ನು ವಿದ್ಯಾದೇವತೆಯಾಗಿ ಮಾತ್ರವಲ್ಲದೆ, ತ್ರಿ ಶಕ್ತಿ ರೂಪದಲ್ಲಿ ಒಂದಾಗಿ, ಶಕ್ತಿ ದೇವತೆಯಾಗಿ ಆರಾಧಿಸಲಾಗುತ್ತದೆ. ಪೌರಾಣಿಕ ಹಿನ್ನಲೆಯಲ್ಲಿ ಋಷಿ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶಾರದೆಯು, ಕರ್ನಾಟಕ ಹಾಗೂ ಕಾಶ್ಮೀರದಲ್ಲಿ ಶಕ್ತಿ ಪೀಠವಾಗಿ ಅಲ್ಲಿನ ಶಕ್ತಿ ದೇವತೆಯಾಗಿ ನೆಲೆಯಾಗಿದ್ದಾಳೆ, ಹಲವೆಡೆ ದೇವಿಯನ್ನು ಸ್ಥಳೀಯ ಹೆಸರುಗಳಿಂದ ಕರೆಯಲಾಗುತ್ತಿದ್ದು, ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ವಿಶೇಷ ದಿನಗಳಲ್ಲಿ ವಿಶಿಷ್ಟ ಆಚರಣೆಗಳೊಂದಿಗೆ ದೇವಿಯನ್ನು ಆರಾಧಿಸಲಾಗುತ್ತಿದೆ. ಅಂಥ ಹಲವು ವಿಶಿಷ್ಟ ಐತಿಹ್ಯದ ದೇವಸ್ಥಾನಗಳ ಕುರಿತಾದ ಪರಿಚಯ ಇಲ್ಲಿದೆ.

ಸರಸ್ವತಿ ಶಕ್ತಿ ಪೀಠಗಳು:

Kashmir Puravasini peetha

ಕಾಶ್ಮೀರ ಪುರವಾಸಿನಿ

ʻನಮಸ್ತೇ ಶಾರದೇ ದೇವಿ ಕಾಶ್ಮೀರಪುರ ವಾಸಿನಿ

ತ್ವಮ್ ಅಹಮ್ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇʼ

ಶಾರದೆಯ ಮೂಲ ಶಕ್ತಿ ಪೀಠ ಇರುವುದು ಕಾಶ್ಮೀರದಲ್ಲಿ. ಸತಿ ದೇವಿ ತನ್ನ ಪತಿ ಶಿವನನ್ನು ತಂದೆ ದಕ್ಷನು ಅವಮಾನ ಮಾಡಿದ ಕಾರಣಕ್ಕೆ ಯಜ್ಞದ ಅಗ್ನಿಕುಂಡಕ್ಕೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡಳು. ಇದರಿಂದ ಕೋಪಗೊಂಡ ಪರಶಿವನು ಸತಿದೇವಿಯನ್ನು ಹೊತ್ತುಕೊಂಡು ರುದ್ರನರ್ತನ ಮಾಡುತ್ತಿದ್ದನು. ಈ ಸಮಯದಲ್ಲಿ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಅವಳ ದೇಹವನ್ನು ಕತ್ತರಿಸಿದನು. ಆಗ ತುಂಡಾದ ಸತಿದೇವಿಯ ದೇಹದ ಕೈ ಭಾಗ ಬಿದ್ದದ್ದು ಈ ಸ್ಥಳದಲ್ಲಿ. ಪೌರಾಣಿಕ ಐತಿಹ್ಯದ ಈ ಸ್ಥಳ ಪವಿತ್ರ ಕಾಶ್ಮೀರ ಕ್ಷೇತ್ರವಾಗಿ, ಶಾರದೆಯ ಆವಾಸ ಸ್ಥಾನವಾಗಿ, ವೈದಿಕ ಪರಂಪರೆಯ ಮೂಲ ಬುನಾದಿಯಾಗಿ, ಸನಾತನ ಧರ್ಮದ ಶಕ್ತಿ ಕೇಂದ್ರವಾಯಿತು. ಮುಂದೆ ಆದಿಗುರು ಶಂಕರಾಚಾರ್ಯರು ಈ ಸ್ಥಳಕ್ಕೆ ಬಂದು ವಾಙ್ಮಯ ಜಗತ್ತಿನ ಸರ್ವಶ್ರೇಷ್ಠ ಹಂಸನಾಮಕ ಸರ್ವಜ್ಞ ಪೀಠವನ್ನು ಅಲಂಕರಿಸಿದರು. ನಂತರ ಹಂಸವಾಹನಿ ಹಂಸನಾಮಕ ಸರ್ವಶಕ್ತ ಶಾಕ್ತ ಪೀಠದಲ್ಲಿ ತಾಯಿ ಶಾರದೆಯನ್ನು ಶ್ರೀ ಚಕ್ರದಲ್ಲಿ ಆಹ್ವಾನಿಸಿ ಅದರಲ್ಲಿ ದೇವಿಯ ಸನ್ನಿಧಾನವನ್ನು ಸ್ಥಾಪಿಸಿದರು. ಈ ಸ್ಥಳವನ್ನು ಶಕ್ತಿ ಪೀಠವನ್ನಾಗಿ ಮಾಡಿದರು. ಕಾಶ್ಮೀರಿ ಪಂಡಿತರಿಗೆ ಪ್ರಮುಖ 3 ಧಾರ್ಮಿಕ ಯಾತ್ರ ಪೀಠಗಳಲ್ಲಿ ಈ ಪೀಠವು ಅಗ್ರಗಣ್ಯವಾಗಿದೆ. ವೈದಿಕ ಪರಂಪರೆಯ ಜನರಿಗೂ ಈ ಶಕ್ತಿ ಪೀಠ ಭಕ್ತಿ ಕೇಂದ್ರವಾಗಿದೆ.

ಶೃಂಗೇರಿ ಶಾರದಾ ಪೀಠ

ಋಷಿಶೃಂಗ ಮಹಾಮುನಿಗಳ ತಪ್ಪಸ್ಸಿನಿಂದ ಪವಿತ್ರ ಭೂಮಿಯಾಗಿದ್ದ ಈ ಸ್ಥಳಕ್ಕೆ, ಅದ್ವೈತ ಮತ ಪ್ರಚಾರಕ್ಕೆ ಹಾಗೂ ವೈದಿಕ ಧರ್ಮ ಸ್ಥಾಪಿಸಲು ಸಂಚಾರ ಮಾಡುತ್ತಾ ಆದಿಗುರು ಶಂಕರಾಚಾರ್ಯರು ಶೃಂಗೇರಿಗೆ ಬಂದರು. ಆಗ ಈ ಕ್ಷೇತ್ರವನ್ನು ತಮ್ಮ ಅದ್ವೈತ ಸಿದ್ಧಾಂತದ ಮೂಲ ನೆಲೆಯಾಗಿ, ತಮ್ಮ ಪೀಠದ ಮೊದಲ ಶಕ್ತಿಪೀಠವನ್ನಾಗಿ ಶೃಂಗೇರಿಯಲ್ಲಿ ತಾಯಿ ಶಾರದೆಯನ್ನು ಸ್ಥಾಪಿಸಿದರು. ಅಂದಿನಿಂದ ಶೃಂಗೇರಿ, ಶಾರದೆಯ ಪ್ರಮುಖ ಮತ್ತು ಮೊದಲ ಶಕ್ತಿಪೀಠವಾಗಿದೆ. ಹಸನ್ಮುಖಿ ಸುಂದರ ಶಾರದೆ ಇಲ್ಲಿ ನೆಲೆಯಾಗಿದ್ದು, ಈ ಕ್ಷೇತ್ರ ಶಾರದಾ ಪೀಠವಾಗಿ ಜಗತ್ಪ್ರಸಿದ್ಧಿ ಪಡೆದಿದೆ.

ಸರಸ್ವತಿ ಪ್ರಧಾನ ದೇವಸ್ಥಾನಗಳು:

maihar devi temple

ಮೈಹಾರ್ ದೇವಿ, ಮಧ್ಯ ಪ್ರದೇಶ

ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯ ತ್ರಿಕೂಟದ ಬೆಟ್ಟಗಳ ತುದಿಯಲ್ಲಿ ಶಾರದಾ ಮಾಯಿಯ ದೇವಸ್ಥಾನವಿದೆ. ಸತಿ ದೇವಿಯ ದೇಹದ ಹಾರ ಬಿದ್ದ ಸ್ಥಳವಾದ ಮೈಹಾರ್ ಭೂಮಿಯು ಶಾರದೆಯ ಪವಿತ್ರ ಆವಾಸ ಸ್ಥಾನವಾಗಿದೆ. ಇಲ್ಲಿ ಸರಸ್ವತಿಯು ಶಾರದಾ ಮಾಯಿಯಾಗಿ ಹಾಗೂ ಕ್ಷೇತ್ರ ದೇವಿಯಾಗಿ ಮೈಹಾರ್ ದೇವಿ ಹೆಸರಿನಲ್ಲಿ ಪೂಜೆಗೊಳ್ಳುತ್ತಾಳೆ. ಪವಿತ್ರ ನರ್ಮದಾ ದಂಡೆಯ ಮೇಲೆ ಇರುವ ಬೆಟ್ಟಗಳ ಮಧ್ಯೆ ಈ ದೇವಿಯ ದೇವಾಲಯವಿದ್ದು ಸರಸ್ವತಿ ದೇವಿ ಇಲ್ಲಿ ಶಕ್ತಿ ರೂಪಿಣಿಯಾಗಿ ಪೂಜೆಗೊಳ್ಳುತ್ತಿದ್ದಾಳೆ. ತ್ರಿಕೂಟ ಬೆಟ್ಟದ ತುದಿಯಲ್ಲಿ ಸಹೋದರರಾದ ಅಲ್ಹಾ ಹಾಗೂ ಉಡಲ ದೇವಿಯ ಇರುವಿಕೆಯನ್ನು ಗುರುತಿಸಿ ಅನುಗ್ರಹಕ್ಕಾಗಿ 12 ವರ್ಷ ತಪಸ್ಸು ಮಾಡಿದ ಐತಿಹ್ಯವಿದೆ ಇಲ್ಲಿ. ಅವರಿಗೆ ಅಮರತ್ವವನ್ನು ದೇವಿ ಕರುಣಿಸಿದ್ದಾಳೆ ಇಂದಿಗೂ ಬ್ರಾಹ್ಮಿ ಮುಹೂರ್ತದಲ್ಲಿ ಅಲ್ಹಾ ಅದೃಶ್ಯರೂಪಿಯಾಗಿ ಬಂದು ಇಲ್ಲಿ ದೇವಿಯನ್ನು ಪೂಜಿಸುತ್ತಾನೆ ಎಂದು ನಂಬಲಾಗಿದೆ.

ಶ್ರೀ ಜ್ಞಾನ ಸರಸ್ವತಿ ದೇವಸ್ಥಾನ, ತೆಲಂಗಾಣ

ತೆಲಂಗಾಣದ ನಿಜಾಮಾಬಾದ್ (ನಿರ್ಮಲ್) ಜಿಲ್ಲೆಯ ಮುಧೋಳ ಮಂಡಲದ ಬಾಸರ್ ಜ್ಞಾನ ಸರಸ್ವತಿ ದೇವಿಯು ಪ್ರಾಚೀನ ದೇವಸ್ಥಾನಗಳ ಪೈಕಿ ಒಂದು. ವೇದವ್ಯಾಸ ಮುನಿಗಳು ಸರಸ್ವತಿ ದೇವಿಯ ಕುರಿತಾಗಿ ತಪಸ್ಸು ಆಚರಿಸಲು, ಪೂಜೆಗಾಗಿ ಹಿಡಿ ಮಣ್ಣು ತಂದು ಮೂರು ಭಾಗಗಳಾಗಿ ಹಾಕಿದರು. ಆಗ ಅವು ಮಹಾಲಕ್ಷ್ಮಿ, ಮಹಾ ಕಾಳಿ, ಮಹಾ ಸರಸ್ವತಿಯ ರೂಪವಾಗಿ ಬದಲಾದವು. ಅದರಲ್ಲಿ ಮಹಾಮಾತೆ ಸರಸ್ವತಿ ಪ್ರಧಾನ ದೇವಿಯಾಗಿ ಪದ್ಮಾಸನ ಭಂಗಿಯಲ್ಲಿ ವೀಣೆ ಹಿಡಿದು ಅಭಯ ಹಸ್ತ ಚಾಚಿದ ಸುಂದರ ಚಿನ್ಮಯ ರೂಪದಲ್ಲಿ ಇದ್ದು, ಸರಸ್ವತಿ ದೇವಿ ಗರ್ಭಗುಡಿಯ ಪಕ್ಕದಲ್ಲೇ ಚಿಕ್ಕ ಮಹಾಲಕ್ಷ್ಮಿ ದೇವಿಯನ್ನು ನಾವು ಕಾಣುತ್ತೇವೆ.

ಇನ್ನೊಂದು ಪೌರಾಣಿಕ ಹಿನ್ನೆಲೆಯಂತೆ ವಾಲ್ಮೀಕಿ ಋಷಿಯು ಸರಸ್ವತಿಯನ್ನು ಸ್ಥಾಪಿಸಿ ಇಲ್ಲಿಯೇ ರಾಮಾಯಣವನ್ನು ಬರೆಯಲು ಶುರು ಮಾಡಿದ್ದನು ಎನ್ನಲಾಗಿದೆ. ಅದರಂತೆ ದೇವಾಲಯ ಆವರಣದಲ್ಲಿ ವಾಲ್ಮೀಕಿ ಅಮೃತ ಶಿಲೆ ಚಿತ್ರ ಹಾಗೂ ಸಮಾಧಿಯನ್ನು ಇಲ್ಲಿ ಕಾಣಬಹುದು.

ಫಣಿ ಚಿಕ್ಕಾಡು ದೇವಿ ದೇವಸ್ಥಾನ, ಕೇರಳ

ಕೇರಳದ ಕೊಟ್ಟಾಯಂ ಜಿಲ್ಲೆಯ ಪಣಿಚಿಕ್ಕಾಡು ಗ್ರಾಮದಲ್ಲಿ, ಪಣಿಚಿಕ್ಕಾಡು ದೇವಿಯಾಗಿ ಸರಸ್ವತಿ ದೇವಿಯನ್ನು ಆರಾಧಿಸಲಾಗುತ್ತದೆ. ದೇವತೆ ನೀರಿನ ಬುಗ್ಗೆಯಲ್ಲಿ ನೆಲೆಸಿದ್ದಾಳೆ ಎನ್ನುವ ನಂಬಿಗೆ ಇಲ್ಲಿಯದು. ಸುತ್ತಲು ಹಸಿರಿನಿಂದ ಆವೃತವಾಗಿರುವ ನೀರಿನ ಬುಗ್ಗೆಯಲ್ಲಿ ದೇವಿಯ ಮೂರ್ತಿಯನ್ನು ರಾಜ ನಂಬೂದಿರಿ ಪ್ರತಿಷ್ಠಾಪಿಸಿದನೆಂದು ಸ್ಥಳ ಪುರಾಣ ತಿಳಿಸುತ್ತದೆ. ಇದನ್ನು ದಕ್ಷಿಣ ಮೂಕಾಂಬಿಕಾ ಎಂದೂ ಕರೆಯುತ್ತಾರೆ. ನವರಾತ್ರಿಯಲ್ಲಿ ಇಲ್ಲಿ ಮಕ್ಕಳಿಗಾಗಿಯೇ ವಿಶೇಷವಾದ ವಿದ್ಯಾರಂಭ ಆಚರಣೆ ಮಾಡಲಾಗುತ್ತದೆ.

Saraswati temple uttarakhand

ಸರಸ್ವತಿ ಮಾತೆ ದೇವಸ್ಥಾನ, ಉತ್ತರಾಖಂಡ

ಉತ್ತರಾಖಂಡದ ಬದರಿನಾಥ್‌ನಿಂದ 3ಕಿಮೀ ದೂರದಲ್ಲಿರುವ ಚಮೋಲಿ ಜಿಲ್ಲೆಯ ಮನ ಗ್ರಾಮದ ಬಳಿ ನೆಲೆಸಿರುವ ಮಾತಾ ಸರಸ್ವತಿ ದೇವಸ್ಥಾನವು, ವೇದಗಳು ಮತ್ತು ಧರ್ಮಗ್ರಂಥಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ಸರಸ್ವತಿ ದೇವಿಯ ಜನ್ಮಸ್ಥಳವೆಂದು ನಂಬಲಾಗಿದೆ. ಇಲ್ಲಿ ಹರಿಯುವ ನದಿಯು ಸರಸ್ವತಿಯ ದೈವಿಕ ಮೂಲವನ್ನು ಸಂಕೇತಿಸುತ್ತದೆ. ಮಹಾಭಾರತ ಕಾಲದಲ್ಲಿ ಪಾಂಡವರು ಸ್ವರ್ಗವನ್ನು ತಲುಪಲು ಈ ಗ್ರಾಮದ ಮೂಲಕ ಹಾದುಹೋದರು ಎಂಬ ಪೌರಾಣಿಕ ನಂಬಿಕೆ ಇದೆ. ಜತೆಗೆ ಇಲ್ಲಿಯೇ ಕುಳಿತು ವೇದವ್ಯಾಸರು ಮಹಾಭಾರತವನ್ನು ಗಣೇಶನಿಗೆ ವಿವರಿಸಿದರು ಎಂದು ನಂಬಲಾಗಿದೆ.

ಕೂತನೂರ್ ಮಹಾ ಸರಸ್ವತಿ ದೇವಸ್ಥಾನ, ತಮಿಳುನಾಡು

ವಿದ್ಯೆಯ ದೇವತೆ ಸರಸ್ವತಿಗೆ ಸಮರ್ಪಿತವಾದ ಕೂತನೂರ್ ದೇವಾಲಯ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ. ಇದಕ್ಕೂ ಮುನ್ನ ಅಂಬಲ್ಪುರಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಿದೆ. ಇದನ್ನು ದಕ್ಷಿಣ ತಿರುವೇಣಿ ಸಂಗಮಂ ಎಂದು ಕರೆಯಲಾಗುತ್ತದೆ. ಈ ಗ್ರಾಮವನ್ನು 2ನೇ ರಾಜ ರಾಜ ಚೋಳ ತನ್ನ ಕಾವ್ಯಾತ್ಮಕ ಶ್ರೇಷ್ಠತೆಗಾಗಿ ತಮಿಳು ಕವಿ ಒಟ್ಟಕ್ಕೂಟನಿಗೆ ಉಡುಗೊರೆಯಾಗಿ ನೀಡಿದ್ದರಿಂದ ಕೂತನೂರ್ ಎಂಬ ಹೆಸರು ಬಂತೆಂದು ನಂಬಲಾಗಿದೆ. ಈ ದೇವಾಲಯವು ತಮಿಳುನಾಡಿನಲ್ಲಿ ಸರಸ್ವತಿಗೆ ಅರ್ಪಿತವಾದ ಏಕೈಕ ದೇವಾಲಯ ಎಂದು ಜನಪ್ರಿಯತೆ ಪಡೆದಿದೆ.

ಸನ್ನತಿ ತ್ರಿಶಕ್ತಿಪೀಠ ಚಂದ್ರಲಾ ಪರಮೇಶ್ವರಿ ದೇವಸ್ಥಾನ, ಕರ್ನಾಟಕ

ಮೂರು ದೇವತೆಗಳ ಶಕ್ತಿ ಪೀಠವೆಂದು ಕರೆಯಲ್ಪಡುವ ಸನ್ನತಿ ಚಂದ್ರಲಾಂಬ ದೇವಸ್ಥಾನದಲ್ಲಿ, ಮಹಾಕಾಳಿ, ಮಹಾಲಕ್ಷಿ, ಚಂದ್ರಲೆ ಹಾಗೂ ಮಹಾಸರಸ್ವತಿ ದೇವಸ್ಥಾನಗಳು ಒಂದೇ ಆವರಣದಲ್ಲಿ ಇದ್ದು, ಸರಸ್ವತಿ ತ್ರಿಶಕ್ತಿ ರೂಪಗಳಲ್ಲಿ ಒಬ್ಬಳು ಎನ್ನುವುದನ್ನು ಸಾರುವ ದಿವ್ಯ ಕ್ಷೇತ್ರವಾಗಿದೆ. ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಊರಿನಲ್ಲಿ ಇದೆ. ಸನ್ನತಿಯು ಯಾದಗಿರಿ ಪಟ್ಟಣದಿಂದ 23ಕಿಮೀ ದೂರದಲ್ಲಿ ಇದೆ.