- ಸುರೇಶ ಗುದಗನವರ

ಥಾಯ್ಲೆಂಡಿನ ಪಟ್ಟಾಯ ಕರಾವಳಿಯಲ್ಲಿ ನೆಲೆಗೊಂಡಿರುವ ಸತ್ಯ ದೇವಾಲಯವು ವಿಶ್ವದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ. 105 ಮೀಟರ್‌ಗಿಂತಲೂ ಹೆಚ್ಚು ಎತ್ತರ ಹಾಗೂ ಅದರ ರಚನೆಯ ಪ್ರತಿಯೊಂದು ಇಂಚನ್ನು ಆವರಿಸಿರುವ ಸಂಕೀರ್ಣವಾದ ಮರದ ಕೆತ್ತನೆಗಳು ವಾಸ್ತುಶಿಲ್ಲದ ಅದ್ಭುತ ದೃಶ್ಯವಾಗಿದೆ. ಈ ಭವ್ಯವಾದ ರಚನೆಯು ಥಾಯ್ ಜನರ ಇತಿಹಾಸ ಸಂರಕ್ಷಣೆ ಮತ್ತು ಪ್ರಾಚೀನ ಕರ ಕುಶಲತೆಗೆ ಸಾಕ್ಷಿಯಾಗಿದೆ.

ಈ ದೇವಾಲಯವನ್ನು ಥಾಯ್ ಉದ್ಯಮಿ ಲೆಕ್ ವಿರಿಯಾಫಂಟ್ ಅವರು ಅಗಸ್ಟ್ 1981 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿದರು. ಈ ವಿಸ್ಮಯಕಾರಿ ಕಟ್ಟಡವು ಸಂಪೂರ್ಣವಾಗಿ ಮರದಿಂದ ನಿರ್ಮಿಸಲ್ಪಟ್ಟಿದೆ. ದೇವಾಲಯದ ನಿರ್ಮಾಣದಲ್ಲಿ ಒಂದೇ ಒಂದು ಮೊಳೆಯನ್ನು ಬಳಸಲಾಗಿಲ್ಲ, ನಿಜಕ್ಕೂ ಅಚ್ಚರಿಯೆನಿಸುತ್ತದೆ. ದೇವಾಲಯದ ಸುಂದರವಾದ ಕೆತ್ತನೆಗಳು ಐದು ಸಭಾಂಗಣಗಳನ್ನು ಅಲಂಕರಿಸಿವೆ. ಅಲ್ಲಿನ ಕಂಬಗಳು ಮತ್ತು ಎತ್ತರದ ಮೇಲ್ಮೈಗಳನ್ನು ಆವರಿಸಿರುವ ಸಂಕೀರ್ಣ ಕೆತ್ತನೆಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಮುಖ್ಯ ಸಭಾಂಗಣದಲ್ಲಿ ಜ್ಞಾನೋದಯದ ಕಥೆಗಳನ್ನು ಹೇಳುವ ಕೆತ್ತನೆಗಳಿವೆ.

Truth Temple of Thailand

ಥಾಯ್ಲೆಂಡ್‌ನ ನಂಬಿಕೆಯ ಸಾಕ್ಷಿ

ಕೌಶಲ್ಯ ಪೂರ್ಣ ಕರಕುಶಲತೆಯಿಂದ ಕೂಡಿದ ಸತ್ಯ ದೇವಾಲಯವನ್ನು ಭೇಟಿ ನೀಡುವ ಪ್ರತಿಯೊಬ್ಬರೂ ವಿಸ್ಮಯಕಾರಿ ಅನುಭವವನ್ನು ಪಡೆದುಕೊಳ್ಳುತ್ತಾರೆ. ದೇವಾಲಯದ ಎತ್ತರದ ಗೋಪುರಗಳು, ಅಲಂಕೃತ ಬಾಲ್ಕನಿಗಳು ಮತ್ತು ಸಂಕೀರ್ಣವಾದ ಗುಮ್ಮಟಗಳ ಮರದ ವಾಸ್ತುಶಿಲ್ಪದ ಭವ್ಯತೆಯು ನಿಜಕ್ಕೂ ಮಾನವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

ಇದು ಕೇವಲ ಒಂದು ಸ್ಮಾರಕವಲ್ಲ, ಬದಲಾಗಿ ಶತಮಾನಗಳಿಂದ ಥಾಯ್ ಸಮಾಜವನ್ನು ರೂಪಿಸಿರುವ ಸಂಪ್ರದಾಯಗಳು ಮತ್ತು ನಂಬಿಕೆಗಳಿಗೆ ಜೀವಂತ ಸಾಕ್ಷಿಯಾಗಿದೆ.

ಸಾವಿರಾರು ವರ್ಷಗಳ ಸಾಂಸ್ಕೃತಿಕ ಇತಿಹಾಸ, ಆಧ್ಯಾತ್ಮಿಕ ದೇವತೆಗಳ ಮರದ ಗೋಡೆಗಳು ಮತ್ತು ಸ್ತಂಭಗಳನ್ನು ದೇವಾಲಯದ ಛಾವಣಿಗಳ ಮೇಲೆ ಸ್ಪಷ್ಟವಾಗಿ ಕಾಣಬಹುದಾಗಿದೆ. ಸತ್ಯ ದೇವಾಲಯದ ಪ್ರತಿಯೊಂದು ಮರದ ಶಿಲ್ಪವು ಥಾಯ್ಲೆಂಡ್‌, ಕಾಂಬೋಡಿಯಾ, ಚೀನಾ ಮತ್ತು ಭಾರತದ ವಿಭಿನ್ನ ಕಲೆಗಳು ಮತ್ತು ತತ್ರಶಾಸ್ತ್ರಗಳಿಂದ ಪ್ರಭಾವಿತಗೊಂಡಿವೆ. ತೇಗು, ರೋಸ್‌ವುಡ್ ಸೇರಿದಂತೆ ವಿವಿಧ ರೀತಿಯ ಮರಗಳಿಂದ ಕೆತ್ತಿದ ಸಾವಿರಾರು ಅದ್ಭುತ ಪ್ರತಿಮೆಗಳನ್ನು ದೇವಾಲಯವು ಒಳಗೊಂಡಿದೆ. ಈ ದೇವಾಲಯವನ್ನು ನಿರ್ಮಿಸಲು 250ಕ್ಕೂ ಹೆಚ್ಚು ಕರ ಕುಶಲ ಶಿಲ್ಪಿಗಳು ಹಗಲು ರಾತ್ರಿಯೆನ್ನದೇ 25 ವರ್ಷಗಳ ಕಾಲ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸತ್ಯ ದೇವಾಲಯದ ಮರದ ವಾಸ್ತುಶಿಲ್ಪವು ಬೌದ್ಧ ಮತ್ತು ಹಿಂದೂ ನಂಬಿಕೆಗಳಿಂದ ಪ್ರೇರಿತವಾಗಿದೆ.

Thailand Temple

ದೇವಾಲಯವು ನಾಲ್ಕು ದ್ವಾರಗಳನ್ನು ಹೊಂದಿದ್ದು, ನಾಲ್ಕು ವಿಭಿನ್ನ ರೆಕ್ಕೆಗಳಾಗಿ ವಿಂಗಡಿಸಲಾಗಿದೆ. ಮೊದಲ ರೆಕ್ಕೆ ಚೀನಿ ವರ್ಚಸ್ಸನ್ನು ಚಿತ್ರಿಸಿದರೆ, ಎರಡನೇ ರೆಕ್ಕೆ ಅಂಕೋರ್ ವಾಟ್‌ನ ಭವ್ಯ ವಾಸ್ತುಶಿಲ್ಪವನ್ನು ನೆನಪಿಸುತ್ತದೆ. ಮೂರನೆಯ ರೆಕ್ಕೆಯು ಭಾರತೀಯ ಪುರಾಣಗಳಿಂದ ತುಂಬಿದ್ದು, ನಾಲ್ಕನೆಯ ರೆಕ್ಕೆ ಸಾಂಪ್ರದಾಯಿಕ ಥಾಯ್ ಶೈಲಿಯನ್ನು ಪ್ರದರ್ಶಿಸುತ್ತದೆ. ದೇವಾಲಯದ ಮುಂಭಾಗ ಮತ್ತು ಹಿಂಭಾಗದಲ್ಲಿ ಸಮುದ್ರಕ್ಕೆ ಎದುರಾಗಿ ಎರಡು ಮುಖ್ಯ ಪ್ರವೇಶದ್ವಾರಗಳನ್ನು ಹೊಂದಿವೆ. ದೇವಾಲಯದ ನಿರ್ಮಾಣದಲ್ಲಿ ಥಾಯ್ ಶಿಲ್ಪಿಗಳು ಮರದ ತುಂಡುಗಳನ್ನು ಜೋಡಿಸಲು ಮೊಳೆಗಳನ್ನು ಬಳಸಿಲ್ಲವೆಂಬುದು ಅಚ್ಚರಿ ಮೂಡಿಸುತ್ತದೆ. ಹೀಗೆ ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿರುವುದರಿಂದ ಗೆದ್ದಲು ಮತ್ತು ಅಕ್ಸಿಡೀಕರಣದಿಂದ ಕಾಪಾಡಲು ಕರಕುಶಲ ಶಿಲ್ಪಿಗಳು ಸದಾ ಕಾಲವು ಶ್ರಮಿಸಬೇಕಾಗುತ್ತದೆ.

ಈ ವಿಸ್ಮಯಕಾರಿ ಮರದ ಕಟ್ಟಡವು ಭಾಗಶಃ ದೇವಾಲಯ, ಭಾಗಶಃ ವಸ್ತುಸಂಗ್ರಹಾಲಯ, ಭಾಗಶಃ ಗ್ಯಾಲರಿ ಮತ್ತು ಭಾಗಶಃ ಕಾರ್ಯಾಗಾರವನ್ನು ಒಳಗೊಂಡಿದೆ. ದೇವಾಲಯದ ಸೌಂದರ್ಯವನ್ನು ವರ್ಣಿಸುವುದು ಅಸಾಧ್ಯ. ಇದೊಂದು ಅದ್ಭುತ ಕಲಾಕೃತಿಯಾಗಿದ್ದು, ಥಾಯ್ಲೆಂಡ್‌ಗೆ ಭೇಟಿ ನೀಡಿದ ಪ್ರವಾಸಿಗರೆಲ್ಲ ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ ಕಣ್ತುಂಬಿಸಿಕೊಳ್ಳಬೇಕು. 2008ರಲ್ಲಿ ಥಾಯ್ಲೆಂಡ್‌ನ ಅತ್ಯುತ್ತಮ ಪ್ರಯಾಣ ಕೈಗಾರಿಕಾ ಪ್ರಶಸ್ತಿಯನ್ನು ಪಡೆದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ದಿ ಸಾಂಚ್ಯುರಿ ಆಫ್‌ ಟ್ರುಥ್‌ ದೇವಾಲಯವು ಥಾಯ್ಲೆಂಡ್‌ನ ಪಟ್ಟಾಯದಿಂದ 8 ಕಿ.ಮೀ. ದೂರದಲ್ಲಿದೆ.