- ನಂದಾದೀಪ

ಭಾರತದ ಪಂಬನ್ ದ್ವೀಪದಲ್ಲಿರುವ ತಮಿಳುನಾಡಿನ ದಕ್ಷಿಣ ಭಾಗದಲ್ಲಿರುವ ಸುಂದರವಾದ ಒಂದು ಪಟ್ಟಣ. ಈ ಸ್ಥಳವು ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವುದರಿಂದ ತನ್ನದೇ ಆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಪರಶಿವನ 12 ಜ್ಯೋತಿರ್ಲಿಂಗವಿರುವ ದೇವಾಲಯಗಳಲ್ಲಿ ತಮಿಳುನಾಡಿನ ರಾಮೇಶ್ವರಂ ದೇವಾಲಯವೂ ಸೇರಿಕೊಂಡಿದೆ. ಭಾರತದ 4 ಪವಿತ್ರ ಕ್ಷೇತ್ರಗಳಲ್ಲಿ ರಾಮೇಶ್ವರಂ ಕೂಡ ಒಂದು ಎಂದು ಹೇಳಲಾಗಿದೆ. ಶ್ರೀರಾಮ ಮತ್ತು ಈಶ್ವರನ ಐಕ್ಯತೆಯ ರೂಪವೇ ಈ ರಾಮೇಶ್ವರಂ ದೇವಾಲಯ.

ಈ ದೇವಾಲಯವು ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಒಂದು ಮಾತ್ರವಲ್ಲ, ಇದು ಕಾಶಿ ಯಾತ್ರೆಯ ಪ್ರಮುಖ ತಾಣವಾಗಿದೆ. ರಾಮೇಶ್ವರಂ ಯಾತ್ರೆಯಿಲ್ಲದೆ ಕಾಶಿ ಯಾತ್ರೆ ಅಪೂರ್ಣವೆಂಬ ನಂಬಿಕೆ ಹಿಂದೂ ಧರ್ಮೀಯರದ್ದು. ಈ ದೇವಾಲಯದ ಪ್ರತಿಯೊಂದು ಅಂಶವು ರಾಮಾಯಣದ ಘಟನೆಯನ್ನು ಹಾಗೂ ಶೈವ ಧರ್ಮ ಮತ್ತು ವೈಷ್ಣವ ಧರ್ಮದ ಏಕತೆಯನ್ನು ಸೂಚಿಸುತ್ತದೆ. ರಾಮನು ಈ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ರಾಮಲಿಂಗ ಮತ್ತು ಶಿವಲಿಂಗ ಎನ್ನುವ ಎರಡು ಲಿಂಗಗಳಿವೆ. ಇಂದಿಗೂ ಕೂಡ ಇಲ್ಲಿ ರಾಮನ ಭಕ್ತರು ಶಿವಲಿಂಗವನ್ನು ಪೂಜಿಸುತ್ತಾರೆ.

Ramshwaram temple

ಶ್ರೀ ಕ್ಷೇತ್ರಕ್ಕೂ ರಾಮಾಯಣದ ಸಂಬಂಧ

ರಾಮೇಶ್ವರಂನಲ್ಲಿರುವ ರಾಮಲಿಂಗವನ್ನು ಶ್ರೀರಾಮ ಪೂಜಿಸಿದ್ದ ಎಂಬ ಪ್ರತೀತಿ ಇದ್ದು, ಸೀತೆಯನ್ನು ಮರಳಿ ಕರೆತರಲು ರಾವಣನ ವಿರುದ್ಧ ಯುದ್ಧ ನಡೆಸುವುದಕ್ಕೂ ಮುನ್ನ ಶ್ರೀರಾಮ ರಾಮೇಶ್ವರಂನಲ್ಲಿ ಲಿಂಗವನ್ನು ಸ್ಥಾಪಿಸಿ ಪೂಜೆ ಸಲ್ಲಿಸಿದ್ದ ಎಂಬ ನಂಬಿಕೆ ಇದೆ. ಹಾಗೆಯೇ ರಾಮೇಶ್ವರಂನಲ್ಲಿ ಪ್ರತಿಷ್ಠಾಪನೆಯಾಗಿರುವ ಲಿಂಗದ ಹಿಂದೆಯೂ ಸ್ವಾರಸ್ಯಕರ ಕತೆಯಿದೆ. ಲಂಕೆಗೆ ತೆರಳುವುದಕ್ಕೂ ಮುನ್ನ ಶ್ರೀರಾಮ ವಾರಾಣಸಿಯಿಂದ ಶಿವಲಿಂಗವೊಂದನ್ನು ತರುವಂತೆ ಹನುಮಂತನಿಗೆ ಸೂಚಿಸುತ್ತಾನೆ. ಹನುಮಂತನನ್ನು ಕಳಿಸಿದ ನಂತರ ಪೂಜೆಗೆ ತಡವಾಗುತ್ತದೆಂಬುದನ್ನು ಅರಿತ ರಾಮನು ಸಮುದ್ರ ಪ್ರದೇಶದ್ಲಲಿದ್ದ ಮರಳಿನಲ್ಲೇ ಲಿಂಗದ ಆಕೃತಿಯನ್ನು ನಿರ್ಮಿಸಿ ಅದಕ್ಕೇ ಪೂಜೆ ಸಲ್ಲಿಸುತ್ತಾನೆ. ಹನುಮಂತ ಕಾಶಿಯಿಂದ ವಾಪಸ್ಸಾಗುತ್ತಿದ್ದಂತೆಯೇ ರಾಮ ಮರಳಿನಲ್ಲೇ ನಿರ್ಮಿಸಿ ಪೂಜೆ ಸಲ್ಲಿಸಿದ್ದ ಲಿಂಗವನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾನೆ. ಆದರೆ ಆ ವೇಳೆಗಾಗಲೇ ಮರಳಿನಲ್ಲಿ ನಿರ್ಮಿಸಲಾಗಿದ್ದ ಲಿಂಗ ಶಿಲೆಯ ರೂಪ ಪಡೆದುಕೊಂಡಿರುತ್ತದೆ. ಆದರೆ ಹನುಮಂತನನ್ನು ಸಮಾಧಾನ ಮಾಡಲು ಶ್ರೀರಾಮನು ಹನುಮಂತ ಕಾಶಿಯಿಂದ ತಂದಿದ್ದ ಲಿಂಗಕ್ಕೂ ಪೂಜೆ ಸಲ್ಲಿಸುತ್ತಾನೆ. ಅಂದು ಹನುಮಂತ ತಂದಿದ್ದ ಶಿವಲಿಂಗವನ್ನು ಇಂದಿಗೂ ರಾಮೇಶ್ವರಂ ನಲ್ಲಿ ಪೂಜಿಸಲಾಗುತ್ತಿದೆ.

22 ಬಾವಿಗಳ ತೀರ್ಥಸ್ನಾನ

ರಾಮನಾಥಸ್ವಾಮಿ ದೇವಾಲಯದ ಮತ್ತೊಂದು ಪ್ರಮುಖ ವಿಶೇಷವೆಂದರೆ, ಈ ದೇವಾಲಯದ ಆವರಣದಲ್ಲಿ ಮತ್ತು ದೇವಾಲಯದ ಸುತ್ತಮುತ್ತಲಿನ ಆವರಣದಲ್ಲಿ 64 ಬಾವಿಗಳಿವೆ. ಇವುಗಳು ತೀರ್ಥಸ್ನಾನದ ಬಾವಿಗಳಾಗಿವೆ. ಸ್ಕಂದ ಪುರಾಣದ ಪ್ರಕಾರ, ಅವುಗಳಲ್ಲಿ 22 ಬಾವಿಗಳು ಪ್ರಮುಖವಾದ ಬಾವಿಗಳಾಗಿವೆ. ಈ ಬಾವಿಯ ಅಚ್ಚರಿಯ ವಿಷಯವೆಂದರೆ ದೇವಾಲಯದಲ್ಲಿರುವ ಎಲ್ಲಾ ಬಾವಿಗಳು ಒಂದಕ್ಕೊಂದು ಹತ್ತಿರದಲ್ಲಿದ್ದರೂ ಕೂಡ ಪ್ರತಿಯೊಂದು ಬಾವಿಯ ನೀರು ಭಿನ್ನ ರುಚಿಯನ್ನು ಹಾಗೂ ರೋಗನಿರೋಧಕ ಲಕ್ಷಣವನ್ನು ಹೊಂದಿದೆ. ಭಕ್ತರು ದೇವಾಲಯವನ್ನು ಪ್ರವೇಶಿಸುವ ಮುನ್ನ ಸಮುದ್ರ ಸ್ನಾನ ಮುಗಿಸಿ, ಈ ಬಾವಿಯ ನೀರಿನಿಂದ ಅಂದರೆ ತೀರ್ಥಸ್ನಾನವನ್ನು ಮಾಡಿ ದೇವಾಲಯದ ಒಳಗೆ ಪ್ರವೇಶಿಸಬೇಕು. ಇಲ್ಲಿನ ಬಾವಿಯ ನೀರಿನಿಂದ ತೀರ್ಥಸ್ನಾನ ಮಾಡುವುದರಿಂದ ಪಾಪಗಳೆಲ್ಲವೂ ಕೂಡ ಪರಿಹಾರವಾಗಿ ಮೋಕ್ಷ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಬಾವಿಗಳಿಗೆ ನಡೆದುಕೊಂಡು ಹೋಗಲು ಒಬ್ಬ ವ್ಯಕ್ತಿಗೆ 25 ರೂ. ವೆಚ್ಚವಾಗುತ್ತದೆ. ಭಕ್ತಾದಿಗಳು ಬಾವಿಗಳಿಂದ ನೀರು ಸಂಗ್ರಹಿಸಲು ಖಾಲಿ ಬಾಟಲಿಗಳನ್ನು ಕೊಂಡೊಯ್ಯಬಹುದಾಗಿದೆ.

Rameshwaram temple TamilNadu


ಐತಿಹಾಸಿಕ ಹಿನ್ನೆಲೆ

ದೇವಾಲಯದಲ್ಲಿ ಲಭ್ಯವಿರುವ ಶಾಸನದ ಪ್ರಕಾರ, ರಾಮೇಶ್ವರಂನಲ್ಲಿರುವ ಪ್ರಾಚೀನ ದೇವಾಲಯವನ್ನು 12ನೇ ಶತಮಾನದಲ್ಲಿ ಶ್ರೀಲಂಕಾದ ರಾಜನಾದ ಪರಾಕ್ರಮಬಾಹು ದೊಡ್ಡದಾಗಿ ನಿರ್ಮಿಸಿದನೆಂದು ಹೇಳಲಾಗಿದೆ. ತದನಂತರ ಮಧುರೈನ ನಾಯಕ ಅರಸರಾದ ಪಾಂಡಯನು ಮತ್ತು ರಮಾನಂದ ರಾಜನು ಮತ್ತಷ್ಟು ಈ ದೇವಾಲಯವನ್ನು ಉನ್ನತಿಗೊಳಿಸಿದರು. ಅನೇಕ ರಾಜವಂಶಗಳು ಈ ಸ್ಥಳದಲ್ಲಿ ಆಳ್ವಿಕೆಯನ್ನು ಮಾಡಿದ್ದು, ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಈ ದೇವಾಲಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಎಷ್ಟೇ ರಾಜ ವಂಶಗಳು ಇಲ್ಲಿ ಆಳ್ವಿಕೆಯನ್ನು ನಡೆಸಿದರೂ ಇಲ್ಲಿ ಬದಲಾಗದೇ ಉಳಿದಿರುವ ಒಂದು ಅಂಶವೆಂದರೆ ಇಲ್ಲಿನ ದ್ರಾವಿಡ ಶೈಲಿಯ ವಾಸ್ತುಶಿಲ್ಪ.

ವಾಸ್ತುಶಿಲ್ಪ ಮತ್ತು ವೈಶಿಷ್ಟ್ಯ

ರಾಮನಾಥಸ್ವಾಮಿ ದೇವಾಲಯವನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಸಾಕಷ್ಟು ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದೆ. ಬರೋಬ್ಬರಿ 15 ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯವನ್ನು ಕಟ್ಟಲಾಗಿದ್ದು, ಎತ್ತರದ ಗೋಪುರವನ್ನು, ಬೃಹತ್‌ ಗೋಪುರಗಳನ್ನು, ಬೃಹತ್‌ ಗೋಡೆಗಳನ್ನು ಮತ್ತು ಬೃಹತ್‌ ನಂದಿಯನ್ನು ಹೊಂದಿದೆ. ಈ ದೇವಾಲಯದ ಪೂರ್ವದಲ್ಲಿ ಒಂದು ಗೋಪುರ ಹಾಗೂ ಪಶ್ಚಿಮದಲ್ಲಿ ಇನ್ನೊಂದು ಗೋಪುರವಿದೆ. ಪೂರ್ವದಲ್ಲಿರುವ ಗೋಪುರವು 5 ಹಂತಗಳೊಂದಿಗೆ 78 ಅಡಿ ಎತ್ತರವನ್ನು ಹೊಂದಿದೆ ಹಾಗೂ ಪಶ್ಚಿಮದಲ್ಲಿನ ಗೋಪುರವು 9 ಹಂತಗಳೊಂದಿಗೆ 126 ಅಡಿ ಎತ್ತರವನ್ನು ಹೊಂದಿದೆ. ಈ ಗೋಪುರವನ್ನು ರಾಜ ಗೋಪುರವೆಂದು ಕರೆಯಲಾಗುತ್ತದೆ. ರಾಮೇಶ್ವರಂ ದೇವಾಲಯವು ಒಟ್ಟು 3850 ಅಡಿ ಉದ್ದದ ಮೂರು ವಿವಿಧ ಬಗೆಯ ಪ್ರವೇಶಾಂಗಣವನ್ನು ಹೊಂದಿದೆ. ಇಲ್ಲಿನ ಮೂರನೇ ಪ್ರವೇಶಾಂಗಣವು ಅಗಾಧವಾದ 1212 ಸ್ತಂಭಗಳನ್ನು ಹೊಂದಿದ್ದು, ಪ್ರತಿಯೊಂದು ಸ್ತಂಭವು 30 ಅಡಿ ಎತ್ತರವನ್ನು ಪಡೆದಿದ್ದು ಈ ಪ್ರವೇಶಾಂಗಣವು ವಿಶ್ವದ ಅತಿ ಉದ್ದದ ಪ್ರವೇಶಾಂಗಣವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ದಾರಿ ಹೇಗೆ?

ಬಸ್ಸು, ರೈಲು, ವಿಮಾನದ ಮೂಲಕ ಚೆನ್ನೈ ಅಥವಾ ಮಧುರೈ ತಲುಪಿ ಅಲ್ಲಿಂದ ನೇರವಾಗಿ ಬಸ್ಸುಗಳ ಮೂಲಕ ರಾಮೇಶ್ವರಂ ತಲುಪಬಹುದಾಗಿದೆ. ಬೆಂಗಳೂರಿನಿಂದ ನೇರವಾಗಿ ಬಸ್ಸಿನ ಮೂಲಕ ತಲುಪಬಹುದಾಗಿದೆ.