- ಕಿಗ್ಗಾಲು.ಜಿ.ಹರೀಶ್, ಮೂರ್ನಾಡು

'ಬಂದ ದಾರಿಯಲ್ಲೇ ವಾಪಸ್ ಹೋಗ್ಬೇಕಾ?' ಮಡಿಕೇರಿಯಿಂದ ಕಾರ್ ಡ್ರೈವ್ ಮಾಡಿಕೊಂಡು ಪ್ರಯಾಗ್ ರಾಜ್‌ಗೆ ತೆರಳಿ, ತ್ರಿವೇಣಿ ಸಂಗಮದಲ್ಲಿ ಮುಳುಗು ಹಾಕಿ ಮೇಲೆದ್ದಾಗ ಜತೆಗಾರ ಕಿರಣ್ ಕೇಳಿದ ಪ್ರಶ್ನೆ ಇದು.

ಹೌದಲ್ವಾ? ಬಂದ ದಾರಿಯಲ್ಲಿಯೇ ಬೇಡ. ಉಜ್ಜೈನ್, ಖಜುರಾಹೋ, ಅಜಂತಾ ಮೂಲಕ ಕರ್ನಾಟಕ ಸೇರಿಕೊಳ್ಳೋಣ ಅಂತ‌ ಹೇಳಿದೆ. ಅದು ಸರಿಯಾದ ನಿರ್ಧಾರ ಅಂತ ಅನ್ನಿಸಿದ್ದು ಮಧ್ಯಪ್ರದೇಶದ ಖಜುರಾಹೋ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದಾಗ.

ಚಂದೇಲ ರಾಜವಂಶಸ್ಥರು ಕ್ರಿಶ 950-1050ರ ಮಧ್ಯೆ ಸುಮಾರು ಎಂಬತ್ತಕ್ಕಿಂತಲೂ ಹೆಚ್ಚು ಭವ್ಯ ಮತ್ತು ಸುಂದರವಾದ ದೇವಾಲಯಗಳನ್ನು ಕಟ್ಟಿಸಿದ್ದರಂತೆ. ಆದರೆ, ಈಗ ಉಳಿದುಕೊಂಡಿರುವುದು ಇಪ್ಪತ್ತೆರಡು ಮಾತ್ರ. ಕಂದರಿಯಾ ಮಹಾದೇವ ಮತ್ತು ಚತುರ್ಭುಜ ವಿಷ್ಣು ದೇವಾಲಯಗಳಂತೂ ಮನೋಹರವಾಗಿವೆ.‌ ಈ ದೇವಾಲಯಗಳನ್ನು ನೋಡುವಾಗ ಬೇಲೂರು ಹಳೆಬೀಡು ದೇವಾಲಯಗಳು ಮನಪಟಲದಲ್ಲಿ ಹಾದು ಹೋಗುತ್ತವೆ. ಇಲ್ಲಿರುವ ಎಲ್ಲಾ ದೇವಾಲಯಗಳನ್ನು ಮರಳುಕಲ್ಲಿನಲ್ಲೇ ನಿರ್ಮಿಸಿದ್ದಾರೆ.

khajuraho

ಅಷ್ಟದಿಕ್ಪಾಲಕರು, ಅಪ್ಸರೆಯರು, ದ್ವಾರಪಾಲಕರು ಜತೆಗೆ ಮಿಥುನ ಶಿಲ್ಪಗಳು ಪ್ರವಾಸಿಗರ ಗಮನ ಸೆಳೆಯುತ್ತವೆ.

ಹೊಯ್ಸಳರ ವಾಸ್ತುಶಿಲ್ಪ ಮಾದರಿಯಲ್ಲೇ ಇದ್ದು, 10-15 ಅಡಿ ಎತ್ತರದ ಬುನಾದಿಯ ಮೇಲೆ ದೇವಾಲಯಗಳು ನಿರ್ಮಾಣವಾಗಿವೆ. ಗರ್ಭಗುಡಿಯ ಸನಿಹಕ್ಕೂ ಮೆಟ್ಟಿಲುಗಳನ್ನು ಹತ್ತಿಕೊಂಡೇ ಹೋಗಬೇಕು. ಇಲ್ಲಿ ಹಿಂದೂ ಮತ್ತು ಜೈನ ಎರಡೂ ಧರ್ಮಗಳಿಗೆ ಸೇರಿದ ಹಲವು ದೇವಾಲಯಗಳು‌ ಇವೆ.

ಸುತ್ತಲಿನ ಪ್ರದೇಶವನ್ನು ಶುಚಿಯಾಗಿ ನಿರ್ವಹಣೆ ಮಾಡಲಾಗಿದ್ದು, ಪ್ರವಾಸಿಗರಿಗೆ ಓಡಾಡಲು ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ದೇವಾಲಯಗಳನ್ನು ನೋಡುತ್ತಾ ಹಸಿವಾದರೆ ಹೊಟ್ಟೆ ತುಂಬಿಸಿಕೊಳ್ಳಲು ಕೆಫೆಟೇರಿಯಾ ವ್ಯವಸ್ಥೆಯೂ ಇದೆ.

ಖಜುರಾಹೋ ನಗರವನ್ನೂ ಅತ್ಯಂತ ಶುಚಿಯಾಗಿ ನಿರ್ವಹಣೆ ಮಾಡಿದ್ದಾರೆ. ವಿಶಾಲವಾದ ರಸ್ತೆಗಳು, ಇವುಗಳ ಇಕ್ಕೆಲಗಳಲ್ಲಿ ನೆರಳು ನೀಡುವ ಮರಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ನಗರದ ಜನಸಂಖ್ಯೆಯೂ ಮಿತವಾಗಿದ್ದು ವಾಹನ ದಟ್ಟಣೆಯ ಸಮಸ್ಯೆ ಇಲ್ಲವಾಗಿದೆ.

ದಾರಿ ಹೇಗೆ?

ಖಜುರಾಹೋದಲ್ಲಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿರುವ ಕಾರಣ ತಲುಪುವುದು ಸುಲಭ. ಮಧ್ಯಪ್ರದೇಶದ ಎಲ್ಲ ಭಾಗಗಳಿಂದ ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಖಜುರಾಹೋಗೆ ಭೇಟಿ ನೀಡಿದಾಗ ಇಲ್ಲಿ ಸಿಗುವ ವಿಶೇಷ ಪ್ಲೇಯಿಂಗ್ ಕಾರ್ಡ್, ಕೀ ಚೈನ್ ಮೊದಲಾದ ಸ್ಮರಣಿಕೆಗಳನ್ನು ಕೊಳ್ಳಲು ಮರೆಯದಿರಿ.

ಖಜುರಾಹೋ ನಾಮೋತ್ಪತ್ತಿ

ಖರ್ಜೂರ ಮತ್ತು ವಾಹಕ ಎಂಬ ಎರಡು ಪದಗಳು ಸೇರಿ ಖಜುರಾಹೋ ಎಂಬ ಹೆಸರು ಬಂದಿದೆ ಎಂಬುದು ಒಂದು ವಾದವಾದರೆ, ಖಜುರವಾಹಕ ಎಂಬುದು ಶಿವನ ಇನ್ನೊಂದು ಹೆಸರು. ಶಿವನು ಅತ್ಯಂತ ಉಗ್ರ ಸ್ವರೂಪದಲ್ಲಿರುವಾಗ ಚೇಳು ಮತ್ತು ಹಾವನ್ನು ಕಂಠಹಾರವಾಗಿ ಧರಿಸುವ ಕಾರಣ ಖಜುರಾಹೋ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.