• ಅನಂತ್ ಹರಿತ್ಸ

ಬಳ್ಳಿಗಾವೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿನ ಪುಟ್ಟ ಗ್ರಾಮ. ಈ ಸ್ಥಳ ಹೊಯ್ಸಳರ ರಾಜ ವಿಷ್ಣುವರ್ಧನನ ರಾಣಿ, ನಾಟ್ಯರಾಣಿ ಶಾಂತಲೆ ಹಾಗೂ ವಚನಕಾರ ಅಲ್ಲಮ ಪ್ರಭುವಿನ ಜನ್ಮಸ್ಥಳ.

ಇದು ಕಲ್ಯಾಣಿಯ ಚಾಲುಕ್ಯರ ದಕ್ಷಿಣ ರಾಜಧಾನಿಯಾಗಿತ್ತೆಂದು ಹೇಳಲಾಗಿದೆ. ಇಲ್ಲಿನ ಕೇದಾರೇಶ್ವರ ದೇವಾಲಯವನ್ನು ಮೊದಲು ಚಾಲುಕ್ಯರು ನಿರ್ಮಿಸಿ ಕ್ರಿಶ 1059ರಲ್ಲಿ ಹೊಯ್ಸಳರ ರಾಜ ವಿನಯಾದಿತ್ಯ ಪೂರ್ಣಗೊಳಿಸಿದನು. ಈ ದೇವಾಲಯವನ್ನು ದಕ್ಷಿಣದ ಕೇದಾರವೆಂದೂ ಕರೆಯಲಾಗಿದೆ. ಮುಖ ಮಂಟಪದಿಂದ ಹದಿನೈದು ಅಡಿಗಳ ಅಂತರದಲ್ಲಿನ ದೇವಾಲಯದ ಶುಖನಾಸಿಯಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಇತರೆ ದೇವಾಲಯಗಳಲ್ಲಿ ಇದನ್ನು ಮುಖ ಮಂಟಪದಲ್ಲಿ ಸ್ಥಾಪಿಸಿರುವುದನ್ನು ನಾವು ಗಮನಿಸಬಹುದು. ಕೆತ್ತನೆಗಳು ಸೊಗಸಾಗಿದ್ದು ಸಳ ಮತ್ತು ಹುಲಿಯ ಹೋರಾಟದ ಶಿಲ್ಪವು ಗಮನ ಸೆಳೆಯುತ್ತದೆ. ದೇವಾಲಯದ ಒಳಗೆ ನಲವತ್ನಾಲ್ಕು ಕಲ್ಲಿನ ಕಂಬಗಳಿದ್ದು, ಮೂರು ಗೋಪುರಗಳನ್ನು ನಿರ್ಮಿಸಲಾಗಿದೆ. ಇದನ್ನು ತ್ರಿಕೂಟಕ ದೇವಾಲಯ ಎಂದು ಕರೆಯಲಾಗಿದೆ.

Balligave

ಇದರ ಪಕ್ಕದಲ್ಲಿ ಅಲ್ಲಮ ಪ್ರಭುವಿನ ಹೆಸರಿನಲ್ಲಿ ಕರೆಯಲ್ಪಡುವ ದೇವಾಲಯವಿದ್ದು, ಅದು ನಗರೇಶ್ವರ ದೇವಾಲಯ. ವಚನಕಾರ ಅಲ್ಲಮ ಪ್ರಭುಗಳು ತಮ್ಮ ಹೆಚ್ಚಿನ ಸಮಯವನ್ನು ಇಲ್ಲಿ ಕಳೆಯುತ್ತಿದ್ದುದರಿಂದ ದೇವಾಲಯಕ್ಕೆ ಈ ಹೆಸರು ಬಂದಿದೆ.

ಗ್ರಾಮದ ಮಧ್ಯೆ ತ್ರಿಪುರಾಂತಕೇಶ್ವರ ದೇವಾಲಯವಿದೆ. ಅದು ಕೂಡಾ ಚಾಲುಕ್ಯರಿಂದ ಪ್ರಾರಂಭವಾಗಿ ಹೊಯ್ಸಳರಿಂದ ಪೂರ್ಣಗೊಂಡ ದೇವಾಲಯವಾಗಿದೆ. ಇದು ಅತ್ಯಂತ ಕಲಾತ್ಮಕತೆಯಿಂದ ಕೂಡಿದ್ದು, ಇಲ್ಲಿನ ಮಿಥುನದ ಕೆತ್ತನೆಗಳು ಅದ್ಭುತವಾಗಿವೆ. ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿದ್ದ ದೇವಾಲಯವನ್ನು ಜೀರ್ಣೋದ್ಧಾರ ಗೊಳಿಸಲಾಗಿದೆ. ಒಟ್ಟು ಪ್ರದೇಶ ಚುಟು ಶಾತವಾಹನರು, ಬನವಾಸಿಯ ಕದಂಬರು, ಬಾದಾಮಿಯ ಚಾಲುಕ್ಯರು, ಮಳಖೇಡದ ರಾಷ್ಟ್ರಕೂಟರು, ಕಲ್ಯಾಣಿಯ ಚಾಲುಕ್ಯರು, ದ್ವಾರ ಸಮುದ್ರದ ಹೊಯ್ಸಳರು ನಂತರದಲ್ಲಿ ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿತ್ತು.

Kedareshwara temple

ಪ್ರೇಮಕ್ಕೆ ಆಲಯವಾಗಿದ್ದ ದೇವಾಲಯ

ಒಮ್ಮೆ ಬಿಟ್ಟಿ ದೇವನು ಬೇಲೂರಿಗೆ ಪಯಣಿಸುವಾಗ ಬಳ್ಳಿಗಾವೆಯಲ್ಲಿ ಕಾರಣಾಂತರಗಳಿಂದ ತಂಗಿದ್ದನು. ಮಾರನೆ ದಿನ ತ್ರಿಪುರಾಂತಕೇಶ್ವರ ದೇವಾಲಯದಲ್ಲಿ ನಾಟ್ಯ ಮಾಡುತ್ತಿದ್ದ ಅಪ್ರತಿಮ ಸುಂದರಿಯೊಬ್ಬಳನ್ನು ಕಂಡು ಪ್ರೇಮಾಂಕುರವಾಗಿ ಅವಳ ಬಳಿ ಹೋಗಿ ಪ್ರೇಮ ನಿವೇದನೆಯನ್ನು ಮಾಡುತ್ತಾನೆ. ಬಿಟ್ಟಿ ದೇವ ಹಿಂದೂ, ಆಕೆ ಜೈನ ಮತದವಳು. ಇದೇ ಕಾರಣಕ್ಕೆ ಮೊದಲು ಆಗದೆಂದು ತಿರಸ್ಕರಿದ್ದ ಆಕೆ ಒಂದು ನಿಂಬಂಧನೆ ವಿಧಿಸಿ ಒಪ್ಪುವುದಾದರೆ ಮದುವೆಯಾಗುವುದಾಗಿ ತಿಳಿಸಿದಳಂತೆ. ಪ್ರೇಮ ಪರವಶನಾಗಿದ್ದ ಬಿಟ್ಟಿ ದೇವನು ಅವಳ ನಿಬಂಧನೆಯಂತೆ ಜೈನ ಧರ್ಮಕ್ಕೆ ಸೇರಿ, ಆಕೆಯನ್ನು ವರಿಸುತ್ತಾನೆ. ಬಿಟ್ಟಿ ದೇವನಾಗಿದ್ದ ಹಿಂದು ರಾಜ, ಜೈನ ಧರ್ಮಕ್ಕೆ ಸೇರಿ ವಿಷ್ಣುವರ್ಧನನಾಗುತ್ತಾನೆ. ಆಕೆಯೇ ಇತಿಹಾಸ ಕಂಡ ಅತ್ಯದ್ಭುತ ನಾಟ್ಯ ಪ್ರವೀಣೆ, ನಾಟ್ಯ ರಾಣಿ ಶಾಂತಲೆ. ಈ ತ್ರಿಪುರಾಂತಕೇಶ್ವರ ದೇವಾಲಯ ವಿಷ್ಣುವರ್ಧನನ ಪ್ರೇಮದ ಸಾಕ್ಷಿಯಾಯಿತು.

ಒಂದೆಡೆ ಅಲ್ಲಮ ಪ್ರಭು ಹಾಗು ಶಾಂತಲೆಯ ಜನ್ಮ ಸ್ಥಾನ ಬಳ್ಳಿಗಾವಿಯಾದರೆ, ಕನ್ನಡದ ಮೊದಲ ಕವಯತ್ರಿ ಶಿವ ಶರಣೆ ಅಕ್ಕ ಮಹಾದೇವಿಯ ಜನ್ಮ ಸ್ಥಾನವು ಇಲ್ಲಿಂದ ಹತ್ತಾರು ಕಿಮೀ ದೂರದ ಉಡುತಡಿಯಾಗಿದೆ. ಇಂತಹ ಮಹಾನ್ ವ್ಯಕ್ತಿಗಳನ್ನು ನಾಡಿಗೆ ನೀಡಿದ ಪುಣ್ಯ ಸ್ಥಳವಿದು. ಇಂತಹ ಸ್ಥಳಗಳಿಗೆ ಮಕ್ಕಳೊಂದಿಗೆ ಭೇಟಿ ನೀಡುವುದು ನಮ್ಮ ನಾಡಿನ ಇತಿಹಾಸ, ಸಂಸೃತಿಯನ್ನು ಬಗ್ಗೆ ಈಗಿನ ಯುವ ಪೀಳಿಗೆಗೆ ಅಲ್ಪವಾದರೂ ಆಸಕ್ತಿ ಬರುವಂತೆ, ತಿಳಿಯುವಂತೆ ಮಾಡಬಹುದು.

ಇಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳು

ಯಾಣ, ಸಹಸ್ರಲಿಂಗ, ಗುಡವಿ ಪಕ್ಷಿಧಾಮ, ಬನವಾಸಿ, ಜೋಗ, ಕೆಳದಿ - ಇಕ್ಕೇರಿ, ಸಿಗಂದೂರು ಹತ್ತಿರವಿರುವ ಇತರೆ ಪ್ರೇಕ್ಷಣೀಯ ತಾಣಗಳು.

ದಾರಿ ಹೇಗೆ?

- ಶಿವಮೊಗ್ಗ ಮಾರ್ಗವಾಗಿ ಹೊರಟರೆ ಶಿಕಾರಿಪುರದಿಂದ ಶಿರಾಳಕೊಪ್ಪಕ್ಕೆ ಹೋಗಿ ಅಲ್ಲಿಂದ ಬಳ್ಳಿಗಾವೆ ತಲುಪಬಹುದು.

-ಹುಬ್ಬಳ್ಳಿ ಮಾರ್ಗವಾಗಿ ಹೊರಟರೆ ಹಾನಗಲ್ ಸೇರಿ ಅಲ್ಲಿಂದ ಆನವಟ್ಟಿಗೆ ಹೋಗಿ ಬಳ್ಳಿಗಾವಿ ತಲುಪಬಹುದು.