• ಹೊಸ್ಮನೆ ಮುತ್ತು

ಪ್ರಕೃತಿಯ ಮಡಿಲಲ್ಲಿ ಅಡಗಿರುವ ತಾಣಗಳೇ ವಿಶೇಷ. ಅಂಥ ಮಹತ್ವದ ಸ್ಥಳಗಳಲ್ಲಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ 'ಕಂಚೀಕೈ' ಮಾಗಾರು ಶ್ರೀ ಮಹಾಗಣಪತಿ ದೇವಾಲಯವು ಪ್ರಮುಖವಾದುದು. ದಟ್ಟವಾದ ಹಸಿರಿನ ನಡುವೆ, ಮೌನವನ್ನೇ ತನ್ನ ಸಾರವನ್ನಾಗಿಸಿಕೊಂಡು ನಿಂತಿರುವ ಈ ದೇವಾಲಯವು ಶತಮಾನಗಳ ಇತಿಹಾಸವನ್ನು ಹೊಂದಿರುವ ಪ್ರಾಚೀನ ಉದ್ಭವ ಗಣಪತಿಯ ಪುಣ್ಯಕ್ಷೇತ್ರವಾಗಿದೆ.

ಈ ಪವಿತ್ರ ದೇಗುಲವು ಕೇವಲ ಕಲ್ಲಿನ ರಚನೆಯಾಗಿರದೆ, ಆಧ್ಯಾತ್ಮಿಕ ಶಕ್ತಿ ಮತ್ತು ಪ್ರಶಾಂತತೆಯ ಕೇಂದ್ರವಾಗಿದೆ. ಇಲ್ಲಿನ ಶಾಂತ ವಾತಾವರಣವು ಹಕ್ಕಿಗಳ ಇಂಚರ, ಮರಗಳ ತಂಪಾದ ನೆರಳು, ಗಾಳಿಯಲ್ಲಿ ಹರಡಿರುವ ಗಂಧದ ಸುವಾಸನೆ ಮತ್ತು ಹೂವಿನ ಪರಿಮಳದಿಂದಾಗಿ ದಿವ್ಯತೆಯನ್ನು ಪಡೆದಿದೆ. ಸದಾ ಹರಿಯುವ ಶರಾವತಿ ನದಿಯ ಕಲರವವು ಇಲ್ಲಿನ ಮೌನವನ್ನು ಮುರಿಯುವ ಏಕೈಕ ನಾದವಾಗಿದ್ದು, ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಹೊಸ ಚೈತನ್ಯವನ್ನು ನೀಡುತ್ತದೆ. ನಗರದ ಗದ್ದಲದಿಂದ ದೂರವಾದ ಈ ಸ್ಥಳಕ್ಕೆ ಹೆಜ್ಜೆ ಇಟ್ಟರೆ, ಮನಸ್ಸು ಪ್ರಕೃತಿಯ ಶಾಂತಿಯೊಂದಿಗೆ ಬೆರೆತು ಒಂದು ದೈವಿಕ ಅನುಭವಕ್ಕೆ ಸಾಕ್ಷಿಯಾಗುತ್ತದೆ.

ಸಂಕ್ಷಿಪ್ತ ಇತಿಹಾಸ ಮತ್ತು ದಂತಕಥೆ:

ಈ ಸ್ಥಳ ಹಿಂದೆ ಹಸುಗಳನ್ನು ಮೇಯಿಸುವ ಹುಲ್ಲುಗಾವಲಿನ ಗುಡ್ಡದ ಬುಡವಾಗಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಅಲ್ಲಿ ಪ್ರತಿದಿನ ಹಸುಗಳನ್ನು ಮೇಯಿಸುತ್ತಿದ್ದ ಒಬ್ಬ ಗೋಪಾಲಕನಿಗೆ ತನ್ನ ಹಸುಗಳಲ್ಲಿ ಒಂದು ಪ್ರತಿದಿನ ನಿರ್ದಿಷ್ಟ ಕಲ್ಲಿನ (ಶಿಲೆ) ಮೇಲೆ ತಾನಾಗಿಯೇ ಹಾಲು ಸುರಿಸಿ ಬರುತ್ತಿರುವುದು ಗಮನಕ್ಕೆ ಬಂತು. ಮೊದಲಿಗೆ ಇದನ್ನು ಗಮನಿಸಲಿಲ್ಲವಾದರೂ, ದಿನದಿಂದ ದಿನಕ್ಕೆ ಹಾಲು ಕಡಿಮೆಯಾಗುತ್ತಿರುವ ಮಾತು ಹಸುವಿನ ಮಾಲೀಕರಿಂದ ಕೇಳಿ ಬಂದಾಗ ಗೋಪಾಲಕನಿಗೆ ಸಂಶಯ ಬಂತು. ಒಂದು ದಿನ ಆ ಹಸುವನ್ನು ಹಿಂಬಾಲಿಸಿದಾಗ, ಅದು ಎಂದಿನಂತೆ ಪೊದೆಗಳ ಹಿಂದೆ ಸರಿದು, ಅಲ್ಲಿ ಏನನ್ನೂ ಗಮನಿಸದೇ ಅಲ್ಲಿರುವ ಶಿಲೆಯ ಮೇಲೆ ಹಾಲು ಸುರಿಸುವುದನ್ನು ಕಂಡ. ಈ ಅಚ್ಚರಿಯ ಘಟನೆಯನ್ನು ಕಂಡ ಗೋವಳ, ಊರಿನವರಿಗೆ ತಿಳಿಸಿ, ಜನರನ್ನು ಕರೆತಂದು ತೋರಿಸಿದಾಗ, ಹಸು ಹಾಲು ಸುರಿಸುತ್ತಿದ್ದ ಕಲ್ಲು ಗಣೇಶನ ಮುಖದ ಆಕಾರದಲ್ಲಿತ್ತು! ಇದು ಸಾಕ್ಷಾತ್ ಉದ್ಭವ ಗಣೇಶನೆಂದು ಮನಗಂಡು, ಆ ಸ್ಥಳವನ್ನು ಸ್ವಚ್ಛಗೊಳಿಸಿ, ಸಣ್ಣ ಗುಡಿಯನ್ನು ಕಟ್ಟಿ, ಪ್ರಾಣಪ್ರತಿಷ್ಠೆ ಮಾಡಲಾಯಿತು. ಇದೇ ಇಂದಿನ ಮಾಗಾರು ಶ್ರೀ ಮಹಾಗಣಪತಿ ದೇವಾಲಯದ ಆದ್ಯಂತ ಕಥೆಯಾಗಿದೆ.

Nandi at Magaru ganapati temple

ಈ ದೇವಾಲಯದ ಇನ್ನೊಂದು ವಿಶೇಷತೆಯೆಂದರೆ, ಎಲ್ಲೂ ಕಾಣದ ಏಕೈಕ ದಕ್ಷಿಣಾಭಿಮುಖದ ಉದ್ಭವ ಗಣಪತಿ. ಪ್ರಕೃತಿಯ ಸುಂದರ ತಾಣದಲ್ಲಿ ದಕ್ಷಿಣಾಭಿಮುಖಿಯಾಗಿ ಉದ್ಭವವಾಗಿ ಬಡವ ಶ್ರೀಮಂತರೆಂಬ ತಾರತಮ್ಯವಿಲ್ಲದೆ, ಜಾತಿ, ಮತ ಭೇದವೆಣಿಸದೆ ಮಾನವರಿಗೂ, ಸಕಲ ಜೀವ ರಾಶಿಗಳಿಗೂ ಅಭಯಹಸ್ತನಾಗಿ ಹಗಲು ರಾತ್ರಿ ಅನುಗ್ರಹಿಸುತ್ತಾ, ರಕ್ಷಿಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ. ತನ್ನೆದುರಲ್ಲೇ ನಿಂತು ತನ್ಮಯರಾಗಿ, ಭಕ್ತಿ ಭಾವದಿಂದ ಆರಾಧಿಸಿದರೆ ಸಾಕು, ಎಲ್ಲಾ ಸಂಕಷ್ಟಗಳನ್ನು ದೂರ ಮಾಡುತ್ತಾನೆ.

ಈ ಸನ್ನಿಧಾನದಲ್ಲಿ ಶ್ರೀ ಸೀತಾ, ಲಕ್ಷ್ಮಣ, ಹನುಮ ಸಹಿತ ಶ್ರೀರಾಮಚಂದ್ರ ದೇವರಲ್ಲದೆ, ಮತ್ತೊಂದು ಪ್ರಮುಖ ಶಕ್ತಿದೇವತೆ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ನಿತ್ಯಪೂಜೆ ನಡೆಯುತ್ತದೆ. ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳೂ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿವೆ. ಇಲ್ಲಿ ಗಣೇಶ ಚತುರ್ಥಿ, ಸಂಕಷ್ಟಹರ ಚತುರ್ಥಿ ಮುಂತಾದ ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ವಾರ್ಷಿಕವಾಗಿ 9 ದಿನಗಳ ರಾಮೋತ್ಸವ ಮತ್ತು ಅನ್ನಸಂತರ್ಪಣೆಯು ಸ್ಥಳೀಯ ಸಮುದಾಯದ ಸೇವೆ ಮತ್ತು ಭಕ್ತಿಯಿಂದ ನಿರಂತರವಾಗಿ ನಿರ್ವಹಿಸಲ್ಪಡುತ್ತದೆ. ಸಂಜೆ ಯಕ್ಷಗಾನ ಅಥವಾ ಬಯಲಾಟದಂಥ ಕಾರ್ಯಕ್ರಮಗಳು ನಡೆಯುವುದರಿಂದ, ಈ ದೇವಾಲಯವು ಆ ದಿನಕ್ಕೆ ಹಳ್ಳಿಯ ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಡುತ್ತದೆ. ಈ ವಿಶೇಷ ಸಂದರ್ಭಗಳಲ್ಲಿ, ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ಮಹಾಗಣಪತಿಯ ಪವಿತ್ರ ದರ್ಶನವನ್ನು ಪಡೆಯುತ್ತಾರೆ.

Ganapati temple

ತಲುಪುವ ಮಾರ್ಗ:

ಈ ಪವಿತ್ರ ದೇಗುಲವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಕಂಚಿಕೈ ಗ್ರಾಮದಲ್ಲಿ ಶರಾವತಿ ನದಿಯ ದಂಡೆಯ ಮೇಲಿದೆ. ಈ ಸ್ಥಳಕ್ಕೆ ರಸ್ತೆ ಸಾರಿಗೆ ಮತ್ತು ಜಲ ಸಾರಿಗೆ ಮೂಲಕ ತಲುಪಬಹುದು.

ರಸ್ತೆ ಮೂಲಕ:

ದೇವಸ್ಥಾನವು ಸಾಗರ ಪಟ್ಟಣದಿಂದ ಸುಮಾರು 41ಕಿ.ಮೀ ದೂರದಲ್ಲಿದೆ. ಸಾಗರದಿಂದ ಕಾರ್ಗಲ್ ಪಟ್ಟಣಕ್ಕೆ ಬಂದು, ಅಲ್ಲಿಂದ ಭಟ್ಕಳಕ್ಕೆ ಹೋಗುವ ರಸ್ತೆಯಲ್ಲಿರುವ ಅರಳಗೋಡು ಎಂಬ ಊರಿನಲ್ಲಿ ಎಡಕ್ಕೆ ತಿರುಗಿ, ಮಾಗಾರು ‘ಶ್ರೀ ಮಹಾಗಣಪತಿ ದೇವಸ್ಥಾನ ಕಂಚಿಕೈ ಮಹಾದ್ವಾರ’ದ ಮೂಲಕ ದೇವಸ್ಥಾನವನ್ನು ತಲುಪಬಹುದು. ಈ ಸ್ಥಳವು ವಿಶ್ವ ವಿಖ್ಯಾತ ಜೋಗ ಜಲಪಾತದಿಂದ ಸುಮಾರು 21ಕಿ.ಮೀ ದೂರದಲ್ಲಿದೆ. ಸಾಗರದಿಂದ ಕಾರ್ಗಲ್‌ಗೆ ನಿಯಮಿತ ಬಸ್ ಸೇವೆಗಳು ಲಭ್ಯವಿದ್ದು, ಅಲ್ಲಿಂದ ಸ್ಥಳೀಯ ಆಟೋ ಅಥವಾ ಟ್ಯಾಕ್ಸಿ ಮೂಲಕ ಕೂಡ ದೇವಸ್ಥಾನವನ್ನು ತಲುಪಬಹುದು.

ಜಲ ಸಾರಿಗೆ ಮೂಲಕ:

ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಜಲಸಾರಿಗೆಯ ಮೂಲಕವೂ ಈ ಭಾಗವನ್ನು ತಲುಪಬಹುದು. ಶಕ್ತಿ ದೇವತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ಲಾಂಚ್ (ಫೆರಿ) ಮೂಲಕ ಬಂದರೆ ಸುಮಾರು 21ಕಿ.ಮೀ ಆಗುತ್ತದೆ. (ಲಾಂಚ್‌ನ ಸಮಯ ಮತ್ತು ಲಭ್ಯತೆಯನ್ನು ಮುಂಚಿತವಾಗಿ ಪರಿಶೀಲಿಸುವುದು ಉತ್ತಮ)