- ಶರೀಫ ಗಂ ಚಿಗಳ್ಳಿ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಅನೇಕ ಪ್ರವಾಸಿಗರನ್ನು ಮತ್ತು ಭಕ್ತರನ್ನು ಸಳೆಯುವ ಪ್ರದೇಶವಾಗಿದೆ. ಚಾರಣಿಗರಿಗೂ ಉತ್ತಮ ಅನುಭವ ನೀಡುತ್ತದೆ. ಸಹ್ಯಾದ್ರಿ ಶ್ರೇಣಿಯಲ್ಲಿ ಮಲಗಿರುವ ಸುಂದರ ಗಿರಿಯಾಗಿದೆ. ಅನೇಕ ದೇವಸ್ಥಾನಗಳಿಗೆ ಆಶ್ರಯ ನೀಡಿದೆ ತೊಟ್ಟಿಲಾಗಿದೆ. ಇದು ಏಳು ಸುತ್ತಿನ ಐತಿಹಾಸಿಕ ಕೋಟೆಯಾಗಿದ್ದು, ಸೈನಿಕರು ಮತ್ತು ರಾಜ ಕುಟುಂಬದ ತರಬೇತಿ ಕೇಂದ್ರವಾಗಿ ಹಾಗೂ ಶಸ್ತ್ರಾಸ್ತ್ರ ಸಂಗ್ರಹಾಗಾರವಾಗಿ ಇತಿಹಾಸ ಪುಟಗಳಲ್ಲಿ ಗುರುತಿಸಿಕೊಂಡಿದೆ.

ಚಂದ್ರಗುತ್ತಿ ನಾಮ ಕಾರಣ

ಚಂದ್ರಗುತ್ತಿ, ಈ ಹೆಸರು ಪೌರಾಣಿಕ ಹಿನ್ನೆಲೆಯುಳ್ಳ ಸ್ಥಳವಾಗಿದೆ. ಶಿವಮೊಗ್ಗದಿಂದ 17ಕಿಮೀ ದೂರದಲ್ಲಿದ್ದು, ಇದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿದೆ. ಮಲೆನಾಡಿನ ಪ್ರಕೃತಿಯ ರಮ್ಯ ಸ್ಥಳಗಳಲ್ಲಿ ಒಂದಾಗಿದೆ. ದ್ವಾಪಾರದಲ್ಲಿ ಕೃಷ್ಣ ಮತ್ತು ಜರಾಸಂಧರ ನಡುವೆ ನಡೆದಾಗ ಕೃಷ್ಣ ಈ ಚಂದ್ರಗುತ್ತಿ ಗುಹೆಯಲ್ಲಿ ಬಂದು ಅಡಗಿ ಕುಳಿತಿದ್ದ. ಜರಾಸಂಧ ಕೃಷ್ಣನನ್ನು ಹುಡುಕಿದರು ಸಿಗದೆ ಹೋದಾಗ ಇಡಿ ಚಂದ್ರಗುತ್ತಿ ಬೆಟ್ಟವನ್ನು ಎತ್ತಿ ಅಲ್ಲಾಡಿಸಿದ. ಇದನ್ನು ನೋಡಿ ಜರಾಸಂಧನ ಹುಂಬುತನವನ್ನು ನೋಡಿ ಚಂದ್ರನು ನಕ್ಕನು ಇದೇ ಕಾರಣದಿಂದ ಈ ಬೆಟ್ಟಕ್ಕೆ ಚಂದ್ರಗುತ್ತಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಚಂದ್ರಗುತ್ತಿ

ಈ ಗಿರಿಯು ಸಮುದ್ರ ಮಟ್ಟದಿಂದ 3 ಸಾವಿರ ಅಡಿ ಎತ್ತರವಿದ್ದು, ಜ್ವಾಲಾಮುಕಿ ಸ್ಪೋಟದಿಂದ ನಿರ್ಮಾಣವಾಗಿದೆ. ಬನವಾಸಿಯ ಕದಂಬರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು. ಬನವಾಸಿಯಿಂದ 14 ಕಿಮೀ ದೂರದಲ್ಲಿದ್ದು, ಇಲ್ಲಿಂದ ಬನವಾಸಿಗೆ ಸುರಂಗ ಮಾರ್ಗವಿತ್ತು ಎಂದು ನಂಬಲಾಗಿದೆ. ರೇಣುಕಾ ಯಲ್ಲಮ್ಮನ ದೇವಸ್ಥಾನದ ಹಿಂದಿನಿಂದ ಗಿರಿ ಹತ್ತಲು ದಾರಿಯಿದ್ದು, ಚಾರಣಿಗರಿಗೆ ಪ್ರಿಯವಾಗಿದೆ. ಈ ದಾರಿಯಿಂದ ಹಿಂದೆ ಹೋದಂತೆ ಏಳು ಸುತ್ತಿನ ಕೋಟೆ ಇದ್ದು, ಮಾರ್ಗದಲ್ಲಿ ಪಿರಂಗಿಗಳು, ಶಸ್ತ್ರಾಸ್ತ್ರ ಸಂಗ್ರಹಣಾ ಕೊಠಡಿಗಳು, ಮದ್ದು ಅರಿಯುವ, ಸಂಗ್ರಹಿಸುವ, ತುಂಬುವ ಪುರಾತನ ಕೊಠಡಿಗಳಿವೆ. 5 ಬಾವಿಗಳು, 1 ಶುದ್ಧ ಕುಡಿಯುವ ನೀರಿನ ಬಾವಿ, ಭೀಮ ಹೆಜ್ಜೆಯಿಟ್ಟು ಹೋದ ಕೊಳ ಎಂದು ನಂಬಲಾಗಿರುವ ಒಂದು ಕೊಳವಿದೆ. ಈ ಬೆಟ್ಟದ ತುದಿ ದುರ್ಗಿ ದ್ವೀಪದ ಮೇಲೆ ನಿಂತು ನೋಡಿದರೆ ಚಂದ್ರಗುತ್ತಿ ಸುತ್ತಲಿನ ಪ್ರದೇಶ ರುದ್ರರಮಣೀಯವಾಗಿ ಕಾಣುತ್ತದೆ.

1396ರ ಶಾಸನ, ಪ್ರಕಾರ ವಿಜಯ ನಗರದ ದೊರೆ ಹರಿಹರ ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದ ಕುರಿತು ಮತ್ತು ಬಚ್ಚಣ ಎಂಬ ಮಾಂಡಲಿಕ ಇದ್ದ ಕುರಿತು ತಿಳಿಸುತ್ತದೆ. ನಂತರ ಚಂದ್ರಗುತ್ತಿ ಕೆಲಾಡಿ ನಾಯಕರ ನಿಯಂತ್ರಣಕ್ಕೆ ಒಳಪಟ್ಟಿತ್ತು ಎನ್ನಲಾಗಿದೆ.

ಚಂದ್ರಗುತ್ತಿ ರೇಣುಕಾಂಬೆ ( ಗುತ್ತಿಯಮ್ಮ)

ಚಂದ್ರಗುತ್ತಿ (2)

ಚಂದ್ರಗುತ್ತಿ ಎಂಬ ರಾಜನಿಗೆ ರೇಣುಕಾದೇವಿ ಎಂಬ ಮಗಳಿದ್ದಳು. ಅವಳನ್ನು ಸವದತ್ತಿಯ ಜಮದಗ್ನಿ ಋಷಿಗೆ ಮದುವೆ ಮಾಡಿ ಕೊಡಲಾಗಿತ್ತು. ಮರಳಿನ ಮಡಿಕೆ ಮತ್ತು ಹಾವಿನ ಸಿಂಬೆಯಿಂದ ಪೂಜೆಗೆ ನೀರು ತರಲು ಜಮದಗ್ನಿ ಅವಳನ್ನು ಕಳಿಸಿದ. ಆದರೆ, ರಾಜ ಪರಿವಾರದ ವಿಲಾಸಿ ಜೀವನ ನೋಡಿ ಮನಸು ಕೆದಕಿದ್ದರಿಂದ ಮಡಿಕೆ ಒಡೆದು ಹಾವು ಹರಿದು ಹೋಯಿತು. ಜಮದಗ್ನಿ ಮಹಾ ಕ್ರೌರ್ಯಕ್ಕೆ ಒಳಗಾಗಿ ರೇಣುಕಾದೇವಿಗೆ ಶಾಪವಿಟ್ಟ. ಕಾಡುಮೇಡು ಅಲೆಯುತ್ತಾ ರೇಣುಕಾ ದೇವಿ ಚಂದ್ರಗುತ್ತಿ ಪರ್ವತಕ್ಕೆ ಬಂದು ಒಂದು ಗುಹೆಯಲ್ಲಿ ನೆಲೆಸುತ್ತಾಳೆ. ಇಷ್ಟಾದರೂ ಕೋಪ ಕಡಿಮೆಯಾಗಾದ ಜಮದಗ್ನಿ ರೇಣುಕಾ ದೇವಿಯ ಶಿರಶ್ಚೇದನ ಮಾಡಲು ತನ್ನ ಮಕ್ಕಳಿಗೆ ಹೇಳುತ್ತಾನೆ. ಅದನ್ನು ನಿರಾಕರಿಸಿದಾಗ ಮಕ್ಕಳನ್ನೂ ಭಸ್ಮ ಮಾಡುತ್ತಾನೆ. ನಂತರ ಭಾರ್ಗವ ಪರಶುರಾಮನನ್ನು ಕರೆದು ತಾಯಿಯ ಶಿರಚ್ಛೇದನ ಮಾಡಲು ತಿಳಿಸುತ್ತಾನೆ. ತಂದೆಯ ಆಜ್ಞೆಯಂತೆ ರೇಣುಕಾ ದೇವಿ ಶಿರಚ್ಛೇದನ ಮಾಡಿದ್ದು ಚಂದ್ರಗುತ್ತಿ ಬೆಟ್ಟದ ಗುಹೆಯಲ್ಲಿ ಎಂದು ನಂಬಲಾಗಿದೆ. ಶಿರಚ್ಛೇದನದ ನಂತರ ದೇಹವನ್ನು ಅಲ್ಲೇ ಬಿಟ್ಟು ತಲೆಯನ್ನು ಮಾತ್ರ ತೆಗೆದುಕೊಂಡು ಹೋಗುತ್ತಾನೆ. ನಂತರ ಮೂರು ವರ ಕೇಳುವಂತೆ ಜಮದಗ್ನಿ ಆಜ್ಞಾಪಿಸಿದಾಗ, ತನ್ನ ತಾಯಿ ರೇಣುಕಾ ದೇವಿಗೆ ಮರುಜನ್ಮ, ತಮ್ಮದಿಂರ ಮರುಜನ್ಮ ಹಾಗೂ ಜಮದಗ್ನಿ ಮಹಾ ಕೊಪ್ಪ ತ್ಯೆಜಸುವಂತೆ ವರಗಳನ್ನು ಬೇಡುತ್ತಾನೆ. ಅಂದಿನಿಂದ ಈ ಸ್ಥಳದಲ್ಲಿ ರೇಣುಕಾ ದೇವಿ ಚಂದ್ರಗುತ್ತಿ ರೇಣುಕಾ ದೇವಿ, ಚಂದ್ರಗುತ್ತಿ ಯಲ್ಲಮ್ಮ, ಗುತ್ತಿಯಮ್ಮ ಎಂಬ ಹೆಸರುಗಳಿಂದ ಪ್ರಖ್ಯಾತಳಾಗಿದ್ದಾಳೆ ಎನ್ನುವ ಪೌರಾಣಿಕ ಹಿನ್ನೆಲೆ ಈ ಸ್ಥಳದಲ್ಲಿ ಆಳವಾದ ನಂಬಿಕೆಯಾಗಿದೆ.

ರೇಣುಕಾ ದೇವಿ ಶಾಪಗ್ರಸ್ಥಳಾಗಿದ್ದಾಗ ಕುಷ್ಠರೋಗದಿಂದ ಬಳಲಿ, ವಸ್ತ್ರವಿಲ್ಲದೆ ಬೆವಿನ ಸೊಪ್ಪು ಕಟ್ಟಿಕೊಂಡು, ಚಂದ್ರಗುತ್ತಿಯ ಕಾಡಿನಲ್ಲಿ ನಡೆದಾಡಿದ ಪ್ರತೀಕವಾಗಿ ಇಲ್ಲಿ ಜೋಗತಿಯರು ಹಿಂದಿನ ಕಾಲದಲ್ಲಿ ಬೆತ್ತಲ ಸೇವೆ ಮಾಡುತ್ತಿದ್ದರು. ಈಗ ಈ ಆಚರಣೆಗೆ ನಿಷೇಧವಿದೆ. ದೇವಿಗೆ ಉಡಿ ತುಂಬುವುದು, ಮುತ್ತು ಕಟ್ಟುವುದು ಮತ್ತು ಕಿವಿ ಚುಚ್ಚುವದು, ಪಡ್ಡಲಿಗೆ ತುಂಬಿಸುವದು, ಹರಕೆ, ಹವಣ ಮತ್ತು ಜೋಗತಿ ಹೊರುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಇಲ್ಲಿ ಇಂದಿಗೂ ಮಾಡುತ್ತಾರೆ.

ಚಂದ್ರಗುತ್ತಿ (1)

ಚಂದ್ರಗುತ್ತಿ ಗುಹೆಯಲ್ಲಿ ಯಲ್ಲಮ್ಮನ ಪುರಾತನ ಗರ್ಭಗುಡಿಯಿದೆ. ಅಲ್ಲಿ ನಿತ್ಯ ಪೂಜೆ ಪುನಸ್ಕಾರ ನಡೆಯುತ್ತವೆ. ಅಮಾವಾಸ್ಯೆ ಹುಣ್ಣಿಮೆಯ ದಿನ ಸಾಕಷ್ಟು ಭಕ್ತರು ಬರುತ್ತಾರೆ. ಮಂಗಳವಾರ, ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ದೇವಸ್ಥಾನ ದರ್ಶನಕ್ಕೆ ತೆರೆದಿರುತ್ತದೆ. ಮಾರ್ಚ್ ತಿಂಗಳಿನಲ್ಲಿ ಗುತ್ತಿಯಮ್ಮನ ಜಾತ್ರೆ ನಡೆಯುತ್ತದೆ. ಮಹಾನವಮಿಯಲ್ಲಿ ಸಡಗರದಿಂದಲೇ ದೀಪ ಹಾಕುತ್ತಾರೆ. ಅಂದು ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ.

150 ಕ್ಕೂ ಹೆಚ್ಚು ಮೆಟ್ಟಿಲುಗಳು ಹತ್ತಿ ದೇವಸ್ಥಾನಕ್ಕೆ ಹೋಗಬೇಕು. ದಾರಿಯಲ್ಲಿ ಕಾಲಭೈರವ, ಏಳು ಎಡೆಯ ನಾಗಪ್ಪ ದೇವರ ಮೂರ್ತಿಯ ದರ್ಶನವಾಗುತ್ತದೆ. ಅಲ್ಲೇ ಐತಿಹಾಸಿಕ ಕೋಟೆಗೆ ದಾರಿಯಿದೆ. ನಂತರ ಮೇಲೆ ಬಂದರೆ ಮಾತಂಗಿಯ ಗುಹೆ ಇದೆ. ಅಲ್ಲಿನ ಬಂಡೆಯ ಮಡಿಲಿನಲ್ಲಿ ದೇವಿ ನೆಲೆಸಿದ್ದಾಳೆ. ದೇವಸ್ಥಾನದ ಮುಂಭಾಗದಲ್ಲಿ ಪರಶುರಾಮನ ದೇವಸ್ಥಾನವಿದೆ. ಈ ದೇವಸ್ಥಾನದ ಹಿಂಭಾಗದ ದಾರಿಯಿಂದ ಹೋದರೆ ಹಳೆಯ ಕೋಟೆಗೆ ಹೋಗಬಹುದು. ದೇವಸ್ಥಾನದ ಮುಂದಿನ ಮೆಟ್ಟಿಲುಗಳನ್ನು ಇಳಿದು ಹೋದರೆ ಸದಾ ಕಾಲ ನೀರಿನಿಂದ ತುಂಬಿ ಹರಿಯುವ ಕೊಳವಿದೆ. ಇದರ ಮುಂದೆ ಉದ್ಭವ ತ್ರಿಶೂಲ ಬೀರಪ್ಪನ ದೇವಸ್ಥಾನವಿದೆ. ಅನೇಕ ತ್ರಿಶೂಲಗಳನ್ನು ಈ ದೇವಸ್ಥಾನದಲ್ಲಿ ಕಾಣಬಹುದು.

ಐತಿಹಾಸಿಕ ಕೋಟೆಗಳು

ಈ ಪ್ರದೇಶದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ನೈಸರ್ಗಿಕ ಮೇರೆಗಳು ನಿರ್ಮಾಣವಾದವು. ಅದರಲ್ಲಿ ಚಂದ್ರಗುತ್ತಿ ಬೆಟ್ಟವೂ ಒಂದಾಗಿದೆ. ಈ ಕಪ್ಪು ಗ್ರಾನೈಟ್ ಬಂಡೆಗಳ ಮೇಲೆ ಕದಂಬ ಅರಸರು ಏಳು ಸುತ್ತಿನ ಕೋಟೆ ಕಟ್ಟಿದ್ದ ಕುರುಹುಗಳಿವೆ. ಅಪಾರ ಸಂಪತ್ತು, ಅರಣ್ಯ, ವನ್ಯಜೀವಿ ಮತ್ತು ಆಡಳಿತದ ದೃಷ್ಟಿಯಿಂದಲೂ ಪ್ರಾಶಸ್ತ್ಯವಾಗಿದ್ದ ಈ ಪ್ರದೇಶ ಶತ್ರು ರಾಜ್ಯದ ಅರಸರ ದಾಳಿಗಳಿಂದ ರಕ್ಷಣೆ ಪಡೆಯಲೂ ಉತ್ತಮವೆಂದು ಕದಂಬ ಅರಸರು ಇಲ್ಲಿ ಏಳು ಸುತ್ತಿನ ಕೋಟೆ ಕಟ್ಟಿರಬಹುದು ಎನ್ನಲಾಗಿದೆ.

ಬೃಹದಾಕಾರದ ಬಂಡೆಗಳ ಮೇಲೆ ಕೆತ್ತಿದ ಕಲ್ಲುಗಳಿಂದ ಕೋಟೆಯ ಗೋಡೆಗಳನ್ನು ಕಟ್ಟಲಾಗಿದೆ. ಮಧ್ಯದಲ್ಲಿ ಸಂಚಾರಕ್ಕೆ ದಾರಿ, ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಕನ್ನಡವನ್ನು ಕಟ್ಟಿ ಆಳಿದ್ದ ರಾಜವಂಶದ ಇತಿಹಾಸದ ಜತೆಗೆ ಪ್ರಕೃತಿಯ ಸುಂದರ ತಾಣವಾಗಿ ಕಾಪಿಟ್ಟುಕೊಂಡಿರುವ ಈ ತಾಣ ಅದ್ಭುತಗಳಲ್ಲೇ ಅದ್ಭುತ.

ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು

ವರ್ಷಪೂರ್ತಿ ನಡೆಯುವ ಯಲ್ಲಮ್ಮನ ಹರ ಜಾತ್ರೆ, ಚಂದ್ರಗುತ್ತಿಯ ರಮ್ಯ ಪರಿಸರ, ಕೋಟೆ, ಐತಿಹಾಸಿಕ ಅಧ್ಯಯನ ಇತ್ಯಾದಿಗಳನ್ನು ಸವಿಯಲು ಅನೇಕರು ಇಲ್ಲಿಗೆ ಬರುತ್ತಾರೆ. ಇವರ ಅನುಕೂಲಕ್ಕಾಗಿ ಸರಕಾರ ಒತ್ತು ನೀಡಬೇಕು. ವಸತಿ ಗೃಹ, ಶೌಚಾಲಯ, ಮಾರುಕಟ್ಟೆ, ಉಪಾಹಾರ ಗೃಹ, ಹೊಟೇಲ್‌, ಸಾರಿಗೆ ಸಂಪರ್ಕ ಇತ್ಯಾದಿ ಸವಲತ್ತುಗಳನ್ನು ಒದಗಿಸಬೇಕು. ಪುರಾತತ್ವ ಇಲಾಖೆಯ ಅಡಿಯಲ್ಲಿ ಚಂದ್ರಗುತ್ತಿಯನ್ನು ಜಿರ್ಣೋದ್ದಾರಕ್ಕೆ ಒಳಪಡಿಸಿ ಚಂದ್ರನಂತೆ ಸುಂದರವಾಗಿ ಹೊಳೆಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು.