ಕಾಪು ಸಮುದ್ರ ತೀರದಲ್ಲಿ ಅಲೆಗಳು ಬಡಿಯುತ್ತಲೇ ಇರುತ್ತವೆ. ಆದರೆ ಕೆಲವು ಅಲೆಗಳು ಬಂಡೆಯನ್ನು ತಾಕಿದಾಗ ಕೇವಲ ನೊರೆ ಎಬ್ಬಿಸಿ ಹಿಂದಿರುಗುವುದಿಲ್ಲ; ಶಿಲೆಯ ಮೇಲೆ ಶಾಶ್ವತ ಗುರುತು ಬಿಟ್ಟು ಹೋಗುತ್ತವೆ. ಕಾಪು ಶ್ರೀ ಹೊಸ ಮಾರಿಗುಡಿಯ ಮಹಾ ಜೀರ್ಣೋದ್ಧಾರದ ನಂತರ ನಡೆದ ಬ್ರಹ್ಮಕಲಶೋತ್ಸವ ಎಂಬ ಮಹಾಕಾರ್ಯದಲ್ಲಿ ಇಂಥದ್ದೊಂದು ಅಳಿಸಲಾಗದ ಗುರುತು ಬಿಟ್ಟ ಮಹಾನ್ ವ್ಯಕ್ತಿ ಅಂದರೆ ಅದು ಡಾ. ಪ್ರಕಾಶ್ ಶೆಟ್ಟಿ ಬಂಜಾರ. ಎಂ.ಆರ್.ಜಿ. ಗ್ರೂಪಿನ ಚೇರ್‌ಮನ್ ಆಗಿ ವ್ಯವಹಾರ ಜಗತ್ತಿನಲ್ಲಿ ಅಪ್ರತಿಮ ಯಶಸ್ಸು ಕಂಡಿರುವ ಅವರು, ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಈ ಅತ್ಯಂತ ಅದ್ದೂರಿ ಬ್ರಹ್ಮಕಲಶೋತ್ಸವ ನಡೆಸಿಕೊಟ್ಟು ಇಲ್ಲಿನ ಕೇಂದ್ರ ಶಕ್ತಿ ಎನಿಸಿಕೊಂಡರು. ಈ ಭವ್ಯ ಕಾರ್ಯಸಾಧನೆ ಒಬ್ಬ ಮನುಷ್ಯನ ನಂಬಿಕೆ, ಶ್ರಮ ಮತ್ತು ಸಂಘಟನಾ ಶಕ್ತಿಯ ಪರಿಣಾಮ ಎಂದರೆ ತಪ್ಪಾಗದು. ಇದು ಕಾಪು ಹೊಸ ಮಾರಿಗುಡಿಯ ಇತಿಹಾಸ, ವೈಭವ ಮತ್ತು ಅದರ ಹಿಂದಿರುವ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಅಸಾಮಾನ್ಯ ಯೋಗದಾನದ ಕಥೆ.

ಇದನ್ನೂ ಓದಿ: ಪಡುಬಿದ್ರಿಯ ಒಡೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ

ಅದು 2025ರ ಫೆಬ್ರವರಿ 25. ಆ ಮುಂಜಾನೆ ಕಾಪುವಿನ ಆಕಾಶವು ಶಂಖ-ಘಂಟೆ ನಾದಗಳಿಂದ ತುಂಬಿ ಹೋಗಿತ್ತು. ಅಷ್ಟದಿಕ್ಕುಗಳಿಂದ ಭಕ್ತರ ಮೆರವಣಿಗೆ ಕಾಪು ಹೊಸ ಮಾರಿಗುಡಿಯ ಹಾದಿ ಹಿಡಿದಿತ್ತು. ₹99 ಕೋಟಿ ವೆಚ್ಚದಲ್ಲಿ ಸಂಪೂರ್ಣ ಶಿಲೆಯಿಂದ ಕಟ್ಟಿದ ಭವ್ಯ ದೇಗುಲದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಮೊದಲ ಘಳಿಗೆ ಅನಿಸಿಕೊಂಡಾಗ ಅಷ್ಟು ವರ್ಷಗಳ ಪ್ರಯಾಸ, ಶ್ರಮ, ತ್ಯಾಗ ಎಲ್ಲ ಒಂದು ಕ್ಷಣದಲ್ಲಿ ಸಾರ್ಥಕವಾದ ಅನುಭವ. ಆ ಕ್ಷಣದಲ್ಲಿ ಎಲ್ಲರ ಕಣ್ಣಲ್ಲೂ ನೀರು — ಶ್ರಮದ ಆನಂದಬಾಷ್ಪ. ಇದು ಶ್ರೀ ಹೊಸ ಮಾರಿಯಮ್ಮ ದೇವಾಲಯದ ಬ್ರಹ್ಮ ಕಲಶೋತ್ಸವ ಮಾತ್ರ ಅಲ್ಲ. ಇದು ಒಬ್ಬ ವ್ಯಕ್ತಿ ಡಾ. ಪ್ರಕಾಶ್ ಶೆಟ್ಟಿ ಬಂಜಾರ — ತಮ್ಮ ಉದ್ಯಮ ಶ್ರಮ, ನಾಯಕತ್ವ ಶಕ್ತಿ ಮತ್ತು ಅಮ್ಮನ ಮೇಲಿನ ಭಕ್ತಿಯನ್ನು ಒಂದೇ ಕೇಂದ್ರಕ್ಕೆ ತಂದು ನಿಲ್ಲಿಸಿ ಸಾಧಿಸಿದ ಮಹಾ ಕಾರ್ಯದ ಸಾಕ್ಷ್ಯ.

Untitled design - 2026-06-06T175224.703

ಒಂಬತ್ತು ದಿನದ ಸಿದ್ಧತೆ — ವರ್ಷಗಳ ಯೋಜನೆ

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ದೇವಸ್ಥಾನ ಅಭಿವೃದ್ಧಿ ಸಮಿತಿಯ ತಂಡ ಕಳೆದ ವರ್ಷ ಫೆಬ್ರವರಿ 24ರಂದು ಪತ್ರಿಕಾಗೋಷ್ಠಿ ನಡೆಸಿ ಒಂಬತ್ತು ದಿನದ ಸಂಪೂರ್ಣ ಕಾರ್ಯಕ್ರಮ ವಿವರ ಬಿಡುಗಡೆ ಮಾಡಿದಾಗಲೇ ಈ ಕಾರ್ಯಕ್ರಮ ಐತಿಹಾಸಿಕ ವೈಭವ ಕಾಣುವುದು ಖಾತರಿಯಾಗಿತ್ತು.

ಬೆಳಗ್ಗೆ ಧಾರ್ಮಿಕ ವಿಧಿ-ವಿಧಾನ, ಹಗಲೆಲ್ಲ ದೇವಿ ಪ್ರಸಾದ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 6ರಿಂದ ಗಣ್ಯರ ಔಪಚಾರಿಕ ಕಾರ್ಯಕ್ರಮ ಈ ಎಲ್ಲವನ್ನೂ ಒಳಗೊಂಡ ಒಂಬತ್ತು ದಿನಗಳ ಮಹೋತ್ಸವ ಕಂಡದ್ದು ಲಕ್ಷಾಂತರ ಭಕ್ತಾದಿಗಳ ಮಹಾಸಾಗರ. ಈ ಅದ್ದೂರಿ ಉತ್ಸವದ ಯಶಸ್ಸಿನ ರೂವಾರಿ ಡಾ. ಪ್ರಕಾಶ್‌ ಶೆಟ್ಟಿ.

ಅಸಲಿಗೆ ಬ್ರಹ್ಮಕಲಶೋತ್ಸವಕ್ಕೆ ಎರಡು ವಾರ ಮೊದಲೇ ಪವಿತ್ರ ಸಿದ್ಧತೆ ಆರಂಭವಾಗಿತ್ತು. ಫೆಬ್ರವರಿ 12ರಂದು ಕುಂಭ ಸಂಕ್ರಮಣ ಪೂರ್ಣಿಮೆಯ ಶುಭ ಮುಹೂರ್ತದಲ್ಲಿ, ದೇವಸ್ಥಾನದ ಮುಖ್ಯ ಪುರೋಹಿತ ಜ್ಯೋತಿಷ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಅವರ ನೇತೃತ್ವದಲ್ಲಿ ಹರಿದ್ವಾರದಿಂದ ಪವಿತ್ರ ಗಂಗಾ ಜಲ ತರಲಾಗಿತ್ತು. ಹೊಸದಾಗಿ ಪ್ರತಿಷ್ಠಾಪಿಸಲ್ಪಟ್ಟ ಕಲಶಗಳಲ್ಲಿ ತರಲಾದ ಈ ಗಂಗಾ ಜಲ ಕಲಶಾಭಿಷೇಕಕ್ಕೆ ಬಳಸಲಾಗಿತ್ತು.

ಭವ್ಯ ಹೊರೆಕಾಣಿಕೆ ಮೆರವಣಿಗೆ

ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಎರಡು ದಿನ ಭವ್ಯ ಹಸಿರು ವಾಣಿ ಹೊರೆಕಾಣಿಕೆ ಮೆರವಣಿಗೆ ಆಯೋಜಿಸಲಾಗಿತ್ತು. ಇದೊಂದೇ ಮೆರವಣಿಗೆ ಸಾಕು ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಸಂಘಟನಾ ಶಕ್ತಿ ಏನೆಂಬುದು ಅರ್ಥವಾಗಲು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಮೂಡಬಿದ್ರಿ ಸೇರಿ ನೂರಾರು ವಾಹನಗಳಲ್ಲಿ ಹೊರೆಕಾಣಿಕೆ ಬಂದಿತ್ತು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಮತ್ತು ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ಈ ಮೆರವಣಿಗೆಯನ್ನು ಉದ್ಘಾಟಿಸಿದ್ದರು. ಸಾವಿರಾರು ಮಂದಿ ಕಾಲ್ನಡಿಗೆಯಲ್ಲಿ, ನೂರಾರು ವಾಹನಗಳಲ್ಲಿ NH 66ರ ಪಾಂಗಾಳದಿಂದ ಮಾರಿಗುಡಿ ತನಕ ಶೋಭಾಯಾತ್ರೆ ನಡೆಸಿದ್ದರು.

Untitled design - 2026-06-06T175206.093

ನಂತರ ಫೆ.23ರಂದು ಉಡುಪಿ, ಕಾಪು, ಹೆಬ್ರಿ, ಕಾರ್ಕಳ, ಬ್ರಹ್ಮಾವರ, ಕುಂದಾಪುರ, ಬೈಂದೂರು ತಾಲೂಕುಗಳು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಾಯೋಜಿತ ನವೋದಯ ಸ್ವಸಹಾಯ ಗುಂಪುಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮುಂಬೈ, ಪುಣೆ, ಸಾಗರ, ಹುಬ್ಬಳ್ಳಿ, ಬೆಂಗಳೂರಿನ ಭಕ್ತರ ಹಸಿರು ವಾಣಿ ಹೊರೆಕಾಣಿಕೆ ಭಂಡಾರ ಮೆರವಣಿಗೆ ಜರುಗಿತ್ತು.

ನವದಿನಗಳ ವೈಭವ

ಬ್ರಹ್ಮಕಲಶೋತ್ಸವದ ಮೊದಲ ದಿನ ಐತಿಹಾಸಿಕ ಆರಂಭವಾದದ್ದು ಫೆಬ್ರವರಿ 25ರಂದು. ಪ್ರಮುಖ ತಂತ್ರಿ ವೇದಮೂರ್ತಿ ಕೆ.ಜಿ. ರಾಘವೇಂದ್ರ ತಂತ್ರಿ ಅವರ ಮಾರ್ಗದರ್ಶನದಲ್ಲಿ ವೇದ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಮತ್ತು ಕಲ್ಯ ಆರ್ಚಕ ವಿ. ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಪ್ರಮುಖ ಆಚರಣೆಗಳು ನಡೆದಿದ್ದವು.

ಮಹಾ ಸ್ವರ್ಣ ಪೀಠ ಪ್ರತಿಷ್ಠಾಪನೆ

ಒಂಬತ್ತು ದಿನಗಳ ಉತ್ಸವದ ಅತ್ಯಂತ ಮಹತ್ವದ ದಿನ ಅಂದರೆ ಅದು ಮಾರ್ಚ್ 2. ಈ ದಿನ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿ ಇಬ್ಬರ ಪ್ರತಿಷ್ಠಾಪನೆ ಜರುಗಿತು. ಮಾರಿಯಮ್ಮ ದೇವಿಯ ಮಧ್ಯಸ್ಥಿ ಉಚ್ಚಂಗಿ ದೇವಿ ಮತ್ತು ಮಾರಿಯಮ್ಮ ದೇವಿ ಇಬ್ಬರಿಗೂ ಸ್ವರ್ಣ ಪೀಠ ಸಮರ್ಪಿತ. ಭಕ್ತರು ದೇಣಿಗೆ ನೀಡಿದ ಚಿನ್ನ ಬಳಸಿ ₹1.5 ಕೋಟಿ ವೆಚ್ಚದ 20 ಕಿ.ಗ್ರಾಂ ಬಂಗಾರದ ಗದ್ದುಗೆ ನಿರ್ಮಿಸಿ ದೇವಿಯನ್ನು ಸ್ಥಾಪಿಸಲಾಗಿದ್ದು ಇದೇ ಸಂದರ್ಭದಲ್ಲಿ.ಮಾರ್ಚ್ 2ರ ಸಂಜೆ ಸ್ವರ್ಣ ಗದ್ದುಗೆ, ಬೆಳ್ಳಿ ರಥ, ಬಂಗಾರದ ಮೊಗ, ಬಂಗಾರ ಲೇಪಿತ ಪಾದ ಪೀಠ — ಈ ಎಲ್ಲ ದಾನ ಕಾಣಿಕೆಗಳ ಉಡುಗೊರೆ ಬಿಚ್ಚಿ ತೋರಿಸುವ ಕಾರ್ಯವನ್ನು ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉದ್ಘಾಟನೆ ಮಾಡಿದ್ದರು.

ಮಹಾ ಬ್ರಹ್ಮಕಲಶೋತ್ಸವ

ಒಂಬತ್ತನೆಯ ದಿನ ಅಂದರೆ ಮಾರ್ಚ್ 5, ಇಡೀ ಮಹೋತ್ಸವದ ಪರಮಕ್ಷಣ. ಕಾಪು ಕಡಲ ತೀರ ಲಕ್ಷಾಂತರ ಭಕ್ತರ ಸಮುದ್ರವಾಗಿ ಮಾರ್ಪಟ್ಟಿತ್ತು. ವೇದಮೂರ್ತಿ ಕೆ.ಜಿ. ರಾಘವೇಂದ್ರ ತಂತ್ರಿ ಅವರ ಮಾರ್ಗದರ್ಶನದಲ್ಲಿ, ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಮತ್ತು ಇತರ ಪುರೋಹಿತರ ಸಮೇತ ಮಹಾ ಬ್ರಹ್ಮಕಲಶಾಭಿಷೇಕ ನಡೆಯಿತು. ಒಂದೊಂದು ವಿಧಿವಿಧಾನವೂ ಶ್ರದ್ಧಾಭಕ್ತಿಯ ಜತೆ ಅದ್ದೂರಿಯಾಗಿ ನಡೆಯಲು ಕಾರಣ ಪ್ರಕಾಶ್‌ ಶೆಟ್ಟಿಯವರ ಶಿಸ್ತುಬದ್ಧ ಆಯೋಜನೆ. ಮಂಗಳ ಗಣ ಯಾಗದ ಮೂಲಕ ಗಣೇಶನ ಆಶೀರ್ವಾದ ಪಡೆದು ಪ್ರಾರ್ಥನೆ ಸಲ್ಲಿಸಿ ನಂತರ ಶಾಂಭವಿ ಕಾಲಮಾತೃಕಾರಾಧನೆಯಿಂದ ಮೂಲ ಶಕ್ತಿ ಆವಾಹನೆ ಮಾಡುವ ವಿಧಿಯನ್ನು ನೆರವೇರಿಸಲಾಗಿತ್ತು. ರಾತ್ರಿ ಶಕ್ತಿ ಆರಾಧನೆಯ ನಂತರ ನಡೆದದ್ದು ಮಂಡಲಾಚರಣೆ. ಅಂತಿಮವಾಗಿ ಮಾರಿಯಮ್ಮ ದೇವಿಗೆ ಸ್ವರ್ಣ ಕಲಶ ಅಭಿಷೇಕ ಮಾಡುವ ಬ್ರಹ್ಮಕಲಶಾಭಿಷೇಕ. ಹರಿದ್ವಾರದ ಗಂಗಾ ಜಲ ತುಂಬಿದ ಕಲಶಗಳಿಂದ ದೇವಿಯ ಮೇಲೆ ಅಭಿಷೇಕ ನಡೆದಾಗ ಇಡೀ ಪರಿಸರ ಶಂಖ ಮತ್ತು ಭೇರಿ ಧ್ವನಿಯಿಂದ ಪ್ರತಿಧ್ವನಿಸಿತ್ತು. ರಾಜ್ಯ ಹಾಗೂ ದೇಶದ ಗಣ್ಯರು ಈ ಸಂಭ್ರಮದಲ್ಲಿ ಭಾಗಿಯಾಗಿ ಧನ್ಯರಾಗಿದ್ದರು.

Untitled design - 2026-06-06T175251.397

ಬ್ರಹ್ಮ ಕಲಶೋತ್ಸವದ ಹಿಂದಿನ ಶಕ್ತಿ ಡಾ. ಪ್ರಕಾಶ್ ಶೆಟ್ಟಿ

ಬ್ರಹ್ಮಕುಂಭಾಭಿಷೇಕ — ಮೊದಲ ವಿಧಿ. ಸಾವಿರ ಕಲಶಗಳ ಅಭಿಷೇಕ ಆರಂಭ. ಮಂಗಳಧ್ವನಿ, ನಾದಸ್ವರ, ಶಂಖ, ಭೇರಿ ನಾದಗಳ ನಡುವೆ ಈ ಶುಭ ಕ್ರಿಯೆ ಜರುಗಿತ್ತು.

ಆ ನಂತರ ಉಗ್ರಾಣ ಮುಹೂರ್ತದಲ್ಲಿ ದೇವಿಯ ಭಂಡಾರಕ್ಕೆ ಧಾನ್ಯ-ದ್ರವ್ಯ ಸಮರ್ಪಣೆಯಾಗಿ, ಪಾಕಶಾಲೆ ಉದ್ಘಾಟನೆಗೊಂಡು ಬ್ರಹ್ಮಕಲಶೋತ್ಸವದ ಅಡುಗೆ ಮನೆಯಲ್ಲಿ ಪ್ರಾರಂಭ ವಿಧಿ ನಡೆದಿತ್ತು.

ಅರಣಿ ಮಥನ ಕ್ರಮದ ಮೂಲಕ ನೈಸರ್ಗಿಕವಾಗಿ ಅಗ್ನಿ ಹೊತ್ತಿಸಿ ನಡೆಸಲಾದ ಹವನ ಕಾರ್ಯ. 24 ತೆಂಗಿನ ಕಾಯಿ ಸಮರ್ಪಣೆ ಸೇರಿದ ಈ ಯಜ್ಞ ಬ್ರಹ್ಮಕಲಶೋತ್ಸವದ ಅತ್ಯಂತ ಪ್ರಮುಖ ವಿಧಿ. ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರು ಸಮಿತಿ ಪ್ರಮುಖರೊಂದಿಗೆ ಈ ಮೊದಲ ದಿನ ಪ್ರಾರಂಭ ಕ್ರಿಯೆಯಲ್ಲಿ ಸ್ವತಃ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಆರಂಭಗೊಂಡ ಮೇಲೆ ಪ್ರತಿ ದಿನ ಒಂದಿಲ್ಲೊಂದು ವಿಶೇಷ ವಿಧಿ ಜರುಗಿದ್ದವು. ಫೆಬ್ರವರಿ 12ರಂದು ಹರಿದ್ವಾರದಿಂದ ತರಲಾದ ಗಂಗಾ ಜಲ ಪ್ರತಿದಿನ ಕಲಶಾಭಿಷೇಕಕ್ಕೆ ಬಳಸಲಾಯಿತು. ಬೆಳಗ್ಗಿನ ವೇಳೆ ಯಜ್ಞ-ಹವನ, ಮಂಗಳ ಗಾನ, ವೇದ ಪಾರಾಯಣ; ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ; ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ — ಈ ತ್ರಿಕಾಲ ಕ್ರಮ ಒಂಬತ್ತು ದಿನ ನಡೆಯಿತು.

ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ನಿರ್ವಹಣಾ ಕ್ರಮ ಗಮನ ಸೆಳೆದದ್ದು ಇಲ್ಲೇ. ಒಂಬತ್ತು ದಿನ ಒಂದೇ ಒಂದು ವ್ಯತ್ಯಯ ಇಲ್ಲದಂತೆ ಸಾವಿರಾರು ಭಕ್ತರಿಗೆ ಪ್ರತಿ ದಿನ ಊಟ ಮಾಡಿಸಿ, ಧಾರ್ಮಿಕ ಕ್ರಿಯೆ ನಡೆಸಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು ಸಣ್ಣ ಸಾಧನೆ ಅಲ್ಲ.

ಮಹಾ ಅನ್ನ ಸಂತರ್ಪಣೆ

ಬ್ರಹ್ಮಕಲಶಾಭಿಷೇಕ ಮುಗಿದ ಬಳಿಕ ಲಕ್ಷಾಂತರ ಭಕ್ತರಿಗೆ ಮಹಾ ಅನ್ನ ಸಂತರ್ಪಣೆ ನಡೆಯಿತು. ಒಂಬತ್ತು ದಿನ ನಿರಂತರ ಊಟ ಹಾಕಿದ ಈ ಭಂಡಾರ ಯೋಜನೆ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ವ್ಯವಸ್ಥಾ ಚಾತುರ್ಯದ ಮಹಾ ನಿದರ್ಶನ.

ವಿಜಯ್ ಪ್ರಕಾಶ್ ಸಂಗೀತ ಕಾರ್ಯಕ್ರಮ

ಮಾರ್ಚ್ 4 ಬೆಳಗ್ಗೆ 8ಕ್ಕೆ ಉಚ್ಚಂಗಿ ದೇವಿ ಪ್ರತಿಷ್ಠಾಪನೆ ಕ್ರಿಯೆ ನಡೆದಿತ್ತು. ಮಾರಿಯಮ್ಮ ದೇವಿಯ ಮುಂದೆ ಆಶ್ರಿತ ದೈವ ಉಚ್ಚಂಗಿ ದೇವಿ ಭಕ್ತರ ಅರ್ಜಿ ಕೇಳಿ ಅಮ್ಮನ ಬಳಿ ಮುಟ್ಟಿಸುತ್ತಾಳೆಂಬ ನಂಬಿಕೆ ಇದೆ. ಅಂದು ಮುಖ್ಯ ಸಾಂಸ್ಕೃತಿಕ ಆಕರ್ಷಣೆಯಾಗಿ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿದರು. ಸಾವಿರಾರು ಭಕ್ತರು ಆ ಭಕ್ತಿ ಭಜನೆಯಲ್ಲಿ ಮುಳುಗಿ ತೇಲಿದರು.

ರಘು ದೀಕ್ಷಿತ್ ಸಂಗೀತ ಕಚೇರಿ

ಮಹೋತ್ಸವದ ಕೊನೆಯ ರಾತ್ರಿ ಜನಪ್ರಿಯ ಕನ್ನಡ ಗಾಯಕ ರಘು ದೀಕ್ಷಿತ್ ಅವರ ಸಂಗೀತ ಕಚೇರಿ ಭಕ್ತ ಜನರನ್ನು ರೋಮಾಂಚನಗೊಳಿಸುವಂತಿತ್ತು. ಶ್ರೀ ಮಾರಿಯಮ್ಮ ದೇವಿಯ ಸ್ತುತಿಯಲ್ಲಿ, ಕಡಲ ಗಾಳಿ ತಂಗಾಳಿ ಬೀಸುತ್ತ ಕಾಪುವಿನ ರಾತ್ರಿ ಒಂದು ಅಲೌಕಿಕ ಅನುಭವ ನೀಡಿತ್ತು ಅಂದರೆ ಅದು ಅತಿಶಯೋಕ್ತಿ ಅಲ್ಲ.

ಮಹಾ ಮಠಾಧಿಪತಿಗಳ ಆಶೀರ್ವಾದ

ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಸಂಘಟನಾ ಶ್ರೇಷ್ಠತೆ ಗೋಚರಿಸಿದ್ದು ದೇಶದ ಪ್ರಮುಖ ಮಠಾಧಿಪತಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದ ರೀತಿಯಲ್ಲಿ. ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಸ್ವರ್ಣ ಗದ್ದುಗೆ ಉದ್ಘಾಟನೆ ಮಾಡಿ, ಬ್ರಹ್ಮಕಲಶ ಕ್ರಿಯೆಗೆ ಪ್ರಮುಖ ಆಶೀರ್ವಾದ ನೀಡಿದರೆ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಹೋತ್ಸವ ಪ್ರಯುಕ್ತ ಆಶೀರ್ವದಿಸಿದ್ದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ನವದುರ್ಗಾ ಲೇಖನ ಯಜ್ಞ ಚಾಲನೆ ಮಾಡಿದರೆ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹೊರೆಕಾಣಿಕೆ ಉದ್ಘಾಟನೆ ಮಾಡಿದ್ದರು.

Untitled design - 2026-06-06T175306.904

ಗಣ್ಯರ ಉಪಸ್ಥಿತಿ

ಮಹಾ ಬ್ರಹ್ಮಕಲಶೋತ್ಸವದ ಸಮಾರೋಪದ ಸಂದರ್ಭದಲ್ಲಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಡಾ. ಕೆ. ಪ್ರಕಾಶ್ ಶೆಟ್ಟಿ — ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ (MRJ ಗ್ರೂಪ್ CMD), ರತ್ನಾಕರ ಶೆಟ್ಟಿ ನಡಿಕೆರೆ, ಡಾ. ಕೆ. ವಿದ್ಯಾ ಕುಮಾರಿ,ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್ ಮುನಿಯಾಲ್ ಉದಯ ಕುಮಾರ ಶೆಟ್ಟಿ, ಸೇರಿದಂತೆ ಹಲವರು ಸೇರಿದ್ದರು. ನಟಿ ಪೂಜಾ ಹೆಗ್ಡೆ ಕುಟುಂಬ ಸಮೇತ ಬ್ರಹ್ಮಕಲಶೋತ್ಸವ ದಿನ ಭೇಟಿ ನೀಡಿ ದೇವಿ ದರ್ಶನ ಪಡೆದದ್ದು ವಿಶೇಷವಾಗಿತ್ತು.

ಫೆಬ್ರವರಿ 25ರಿಂದ ಮಾರ್ಚ್ 5 ಈ ಒಂಬತ್ತು ದಿನಗಳ ಬ್ರಹ್ಮಕಲಶೋತ್ಸವ ಕೇವಲ ಒಂದು ಧಾರ್ಮಿಕ ಕಾರ್ಯಕ್ರಮ ಆಗಿ ಉಳಿಯಲಿಲ್ಲ. ಇದು ಕರಾವಳಿ ಕರ್ನಾಟಕದ ಸಂಸ್ಕೃತಿ, ಭಕ್ತಿ ಮತ್ತು ಸಮುದಾಯ ಶಕ್ತಿ ಒಂದಾಗಿ ಸೇರಿದ ಮಹಾ ಘಟ್ಟ. ಇಂಥ ಧಾರ್ಮಿಕ ಸಂಭ್ರಮದ ಹಿಂದಿನ ಶಕ್ತಿ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಮುಂದಾಳತ್ವ ನಿಜಕ್ಕೂ ಅಭಿನಂದನಾರ್ಹ.

ಕಾಪು ಶ್ರೀ ಹೊಸ ಮಾರಿಗುಡಿ ನಮ್ಮ ಯೋಜನೆ ಅಲ್ಲ, ಅಮ್ಮನ ಸಂಕಲ್ಪ. ನಾವು ಕೇವಲ ಒಂದು ನಿಮಿತ್ತ ಮಾತ್ರ. ಈ ಮಹಾಕಾರ್ಯದಲ್ಲಿ ಸಾವಿರಾರು ಭಕ್ತರ ಪ್ರೀತಿ, ನಂಬಿಕೆ ಮತ್ತು ಸಹಕಾರ ಇದೆ. 18 ದೇಶಗಳಲ್ಲಿ ಇರುವ ಭಕ್ತರನ್ನು ಒಂದೇ ಧ್ಯೇಯದಡಿ ಒಗ್ಗೂಡಿಸುವ ಶಕ್ತಿ ನಮ್ಮದಲ್ಲ, ಅದು ಅಮ್ಮ ಮಾರಿಯಮ್ಮನ ಆಶೀರ್ವಾದ. ₹99 ಕೋಟಿ ಸಂಗ್ರಹವಾಗಿರುವುದು ಹಣದ ಸಾಧನೆ ಅಲ್ಲ; ಅದು ಭಕ್ತಿಯ ಶಕ್ತಿ ಎಷ್ಟೊಂದು ದೊಡ್ಡದು ಎಂಬುದಕ್ಕೆ ಸಾಕ್ಷಿ. ಅಧ್ಯಕ್ಷ ಸ್ಥಾನ ನನಗೆ ಗೌರವವಲ್ಲ, ಅದು ಅಮ್ಮ ಕೊಟ್ಟ ಸೇವೆಯ ಅವಕಾಶ. ಈ ದೇಗುಲ ಮುಂದಿನ ಹಲವು ಶತಮಾನಗಳವರೆಗೆ ಭಕ್ತರಿಗೆ ಆಶ್ರಯವಾಗಲಿ, ಸಮಾಜವನ್ನು ಒಗ್ಗೂಡಿಸಲಿ ಎಂಬುದೇ ನನ್ನ ಪ್ರಾರ್ಥನೆ.

- ಡಾ. ಪ್ರಕಾಶ್ ಶೆಟ್ಟಿ ಬಂಜಾರ