Tuesday, July 21, 2026
Tuesday, July 21, 2026

ಕೊಚ್ಚಿಯಲ್ಲಿ ವಾಟರ್‌ ಮೆಟ್ರೋ

ಕೊಚ್ಚಿ ವಾಟರ್ ಮೆಟ್ರೋ ಪ್ರಯಾಣಿಕರಿಗೆ ಅಗ್ಗ ಮತ್ತು ಸುಗಮ ಸಂಚಾರವನ್ನು ಒದಗಿಸುತ್ತಿದೆ. ಇದರ ಗರಿಷ್ಟ ಶುಲ್ಕ ಕೇವಲ 40 ರು. ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ರಿಯಾಯಿತಿ ದರದ ಪಾಸ್‌ ಸೌಲಭ್ಯವೂ ಲಭ್ಯ. ಪೀಕ್ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಬೋಟ್ ಸೇವೆ ಲಭ್ಯವಿರುತ್ತದೆ. ಪ್ರತಿದಿನ ಸುಮಾರು 34,000 ಪ್ರಯಾಣಿಕರು ವಾಟರ್ ಮೆಟ್ರೋಗಳನ್ನು ಬಳಸುತ್ತಿದ್ದಾರೆ ಎಂಬು ಅಚ್ಚರಿಯ ಸಂಗತಿ.

  • ಲಕ್ಷ್ಮಣ್ ಗೊರ್ಲಕಟ್ಟೆ

ಮೇಲೆ ನೀಲಿ ಆಗಸ, ಕೆಳಗೆ ತಿಳಿನೀಲಿ ಬಣ್ಣದ ಶಾಂತ ಸರೋವರ, ಅದರ ಮಧ್ಯೆ ದ್ವೀಪಗಳು. ದೂರದಲ್ಲಿ ಲಂಗರು ಹಾಕಿ ನಿಂತ ದೊಡ್ಡ ದೊಡ್ಡ ಹಡಗುಗಳು, ತೀರದ ಅಲ್ಲಲ್ಲಿ ತಲೆಯೆತ್ತಿ ನಿಂತ ಗಗನಚುಂಬಿ ಕಟ್ಟಡಗಳು, ಮೀನಿನ ಬೇಟೆಯಾಡುತ್ತಿರುವ ಹಕ್ಕಿಗಳ ಹಾರಾಟ, ಈ ಸುಂದರ ಪರಿಸರದಲ್ಲಿ ಸಾಗಲು ಹವಾ ನಿಯಂತ್ರಿತ ಕೊಚ್ಚಿ ವಾಟರ್ ಮೆಟ್ರೋ! ಪಯಣಿಗನನ್ನು ಬೇರೊಂದು ಸುಂದರ ಲೋಕಕ್ಕೆ ಕೊಂಡೊಯ್ಯುವ ಅನುಭವ.

ಇದನ್ನೂ ಓದಿ: ಕೊಚ್ಚಿ ಬೀದಿಗಳಲ್ಲಿ ಕಥೆಯ ಚಿತ್ರಕಲೆ

ವಾಟರ್ ಮೆಟ್ರೋ

ಭಾರತದಲ್ಲಿ ಮೊದಲ ವಾಟರ್ ಮೆಟ್ರೋ ಪರಿಚಯಿಸಿದ ಹೆಗ್ಗಳಿಕೆ ಕೇರಳದ ಕೊಚ್ಚಿಗೆ ಸಲ್ಲುತ್ತದೆ. ಈ ಮೆಟ್ರೋ ಚಲಿಸುವುದು ವೆಂಬನಾಡು ಸರೋವರದ ಹಿನ್ನೀರಿನ ಮೇಲೆ. ಸುಮಾರು 90 ಕಿಮೀ ವಿಸ್ತೀರ್ಣದವರೆಗೆ. ಪೆರಿಯಾರ್ ಮತ್ತು ಮೂವತ್ತುಪುಜಾ ನದಿಗಳು ಸೇರಿ ಹತ್ತಾರು ದ್ವೀಪಗಳ ಸಮೂಹದಿಂದ ಈ ಸರೋವರ ಆವೃತವಾಗಿದೆ. ಇಲ್ಲಿ ಅರಬ್ಬೀ ಸಮುದ್ರದ ಅಲೆಗಳ ಏರಿಳಿತವಿಲ್ಲ. ಹಾಗಾಗಿ ಈ ಸರೋವರ ಸುರಕ್ಷಿತ ಬಂದರು. ಜಲ ಪರ್ಯಟನೆಗೂ ಅನುಕೂಲವಾದ ತಾಣ.

ಒಂದು ತೀರದಲ್ಲಿ ಹಳೆಯ ಕೊಚ್ಚಿ ನಗರ, ಇನ್ನೊಂದು ತೀರದಲ್ಲಿ ಪ್ರಮುಖ ವಾಣಿಜ್ಯ ನಗರ ಎರ್ನಾಕುಲಂ ಇವೆ. ಸರೋವರದ ಮಧ್ಯೆ ಅಲ್ಲಲ್ಲಿ ಜನ ವಸಿತ ದ್ವೀಪಗಳಿದ್ದು, ನಡುವೆ ಸಂಚಾರಕ್ಕೆ ಈ ಹಿಂದೆ ಕೆಲವೇ ಕೆಲವು ಬೋಟ್‌ಗಳಿದ್ದವು. ಇವುಗಳಿಂದ ಹೆಚ್ಚುತ್ತಿದ್ದ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲಾಗದಾಗ ವಾಟರ್ ಮೆಟ್ರೋ ಯೋಜನೆ ಜನ್ಮ ತಾಳಿತು. ಜರ್ಮನ್ ಫೈನಾನ್ಸಿಯಲ್ ಕಾರ್ಪೊರೇಷನ್ ಆರ್ಥಿಕ ಬೆಂಬಲದೊಂದಿಗೆ ರಚಿತ ಕೊಚ್ಚಿ ವಾಟರ್ ಮೆಟ್ರೋವನ್ನು 25 ಏಪ್ರಿಲ್ 2023ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

Untitled design (9)

ಬ್ಯಾಟರಿ ಚಾಲಿತ ಕೋಚ್

23 ಬ್ಯಾಟರಿ ಚಾಲಿತ ಬೋಟುಗಳು 76 ಕಿಮೀ ಉದ್ದದ 6 ಜಲಮಾರ್ಗಗಳಲ್ಲಿ ಸಂಚರಿಸುತ್ತಿವೆ. ಪ್ರತಿಯೊಂದು ಬೋಟ್‌ ಎಸಿ ವ್ಯವಸ್ಥಿತ ಸುಮಾರು 100 ಆಸನಗಳನ್ನು ಹೊಂದಿವೆ. ಬೋಟ್‌ಗಳ ನಿಲ್ದಾಣಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸುರಕ್ಷತೆಗೆ ಒತ್ತುನೀಡಿ ಕಟ್ಟಲಾಗಿದೆ. ಪ್ರಯಾಣಿಕರು ಸುಲಭವಾಗಿ ಬೋಟ್ ಹತ್ತಿ ಇಳಿಯಲು ಟರ್ಮಿನಲ್ ಮತ್ತು ಪ್ಲಾಟ್‌ಫಾರ್ಮ್ ರಚನೆ ಮಾಡಲಾಗಿದೆ. ಸಮವಸ್ತ್ರಧಾರಿ ಪುರುಷ ಮತ್ತು ಮಹಿಳಾ ಸಿಬ್ಬಂದಿ ಪ್ರಯಾಣಿಕರಿಗೆ ನೆರವಾಗುತ್ತಾರೆ. ಈ ಮೆಟ್ರೋ ಬೋಟ್‌ಗಳು ಹಿಂದೆ- ಮುಂದೆ ಜತೆಗೆ ಎಡ- ಬಲಕ್ಕೂ ಚಲಿಸಬಲ್ಲವು.

ಅಗ್ಗದ ಮೆಟ್ರೋ

ಕೊಚ್ಚಿ ವಾಟರ್ ಮೆಟ್ರೋ ಪ್ರಯಾಣಿಕರಿಗೆ ಅಗ್ಗ ಮತ್ತು ಸುಗಮ ಸಂಚಾರವನ್ನು ಒದಗಿಸುತ್ತಿದೆ. ಇದರ ಗರಿಷ್ಟ ಶುಲ್ಕ ಕೇವಲ 40 ರು. ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ರಿಯಾಯಿತಿ ದರದ ಪಾಸ್‌ ಸೌಲಭ್ಯವೂ ಲಭ್ಯ. ಪೀಕ್ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಬೋಟ್ ಸೇವೆ ಲಭ್ಯವಿರುತ್ತದೆ. ಪ್ರತಿದಿನ ಸುಮಾರು 34,000 ಪ್ರಯಾಣಿಕರು ವಾಟರ್ ಮೆಟ್ರೋಗಳನ್ನು ಬಳಸುತ್ತಿದ್ದಾರೆ ಎಂಬು ಅಚ್ಚರಿಯ ಸಂಗತಿ.

Untitled design (7)

ಪರಿಸರಸ್ನೇಹಿ ವಾಟರ್ ಮೆಟ್ರೋ

ಈ ಮೆಟ್ರೋ ಒಂದು ಪ್ರಯಾಣದ ಸಾಧನವಷ್ಟೇ ಅಲ್ಲ. ಅದು ಕೊಚ್ಚಿ ನಗರದ ಪರಿಸರ ರಕ್ಷಣೆ ಮತ್ತು ಸಮಗ್ರ ಅಭಿವೃದ್ಧಿಗೂ ಪೂರಕ. ಕಸ ವಿಲೆ, ಕಳೆ ನಿರ್ಮೂಲನೆ, ಬೋಟ್ ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯಂಥ ಜವಾಬ್ದಾರಿಯನ್ನು ಹೊತ್ತು, ಸರಕಾರ, ಕೊಚ್ಚಿ ಬಂದರು ಮತ್ತು ನಗರ ಪಾಲಿಕೆಗಳ ಜತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿದೆ. ಕೊಚ್ಚಿ ವಾಟರ್ ಮೆಟ್ರೋದ ಧ್ಯೇಯ ವಾಕ್ಯ ʼThink Blue, Go Green, Connecting Miles, Connecting Lives!ʼ

ಆಧುನಿಕ ತಂತ್ರಜ್ಞಾನ

ವಾಟರ್ ಮೆಟ್ರೋ ಕೋಚ್‌ಗಳನ್ನು ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆ ವಿನ್ಯಾಸಗೊಳಿಸಿ ತಯಾರಿಸಿದೆ. ಇವು 2022ರಲ್ಲಿ ʼGussies Electric Boatʼ ಪ್ರಶಸ್ತಿಯನ್ನು ಗಳಿಸಿವೆ. ಕೊಚ್ಚಿ ವಾಟರ್ ಮೆಟ್ರೋ ವಿಶ್ವ ಸಂಸ್ಥೆಯ ʼHabitat– World Cities Report on Climate Action’ನಲ್ಲಿ ಗುರುತಿಸಲ್ಪಟ್ಟಿದೆ. ಕೊಚ್ಚಿ ವಾಟರ್ ಮೆಟ್ರೋದ ಯಶಸ್ಸನ್ನು ಅನುಸರಿಸಿ ಭಾರತದ ವಿವಿಧ ರಾಜ್ಯಗಳು ವಾಟರ್ ಮೆಟ್ರೋ ಆರಂಭಿಸಲು ಉತ್ಸುಕರಾಗಿವೆ. ಕರ್ನಾಟಕದಲ್ಲಿ ʼಮಂಗಳೂರು ವಾಟರ್ ಮೆಟ್ರೋʼ ಯೋಜನೆಯನ್ನು ರೂಪಿಸಿದ್ದು, ಅದನ್ನು ರಾಜ್ಯ ಸರಕಾರ 2025ರಲ್ಲಿ ಅನುಮೋದಿಸಿದೆ. ಈ ಯೋಜನೆ ಆದಷ್ಟು ಬೇಗನೆ ಕಾರ್ಯಗತವಾದರೆ ಕರಾವಳಿ ಜನರಿಗೆ ಅದೊಂದು ದೊಡ್ಡ ಉಡುಗೊರೆ.

ಕೊಚ್ಚಿ ವಾಟರ್ ಮೆಟ್ರೋ, ಅಲ್ಲಿನ ಜನರಿಗೆ ಒಂದು ಪ್ರಮುಖ ಪ್ರಯಾಣ ಸಾಧನ. ಕೇರಳ ಪ್ರವಾಸಿಗರಿಗೆ ಅದೊಂದು ವಿಶಿಷ್ಟ ಅನುಭವ. ಕೊಚ್ಚಿ ಕೇರಳದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕೊಚ್ಚಿ ಮತ್ತು ಎರ್ನಾಕುಲಂ ಅವಳಿ ನಗರಗಳು. ಅಲ್ಲಿಗೆ ಹೋದಾಗ ಮತ್ತನ್ಚೆರಿ ಪ್ಯಾಲೇಸ್, ಚೀನಾದ ಮೀನು ಬಲೆಗಳು, ಐತಿಹಾಸಿಕ ಚರ್ಚ್ ಮುಂತಾದವುಗಳನ್ನು ವೀಕ್ಷಿಸಲು ಕೊಚ್ಚಿ ವಾಟರ್ ಮೆಟ್ರೋ ಬಳಸಬಹುದು.

ದಾರಿ ಹೇಗೆ?

ಬೆಂಗಳೂರು ಮತ್ತು ಮೈಸೂರುಗಳಿಂದ ಎರ್ನಾಕುಲಂಗೆ ಬಸ್ ಮತ್ತು ರೈಲು ಸಂಪರ್ಕವಿದೆ. ಬೆಂಗಳೂರಿನಿಂದ ಕೊಚ್ಚಿ ನಗರಕ್ಕೆ ವಿಮಾನ ಪ್ರಯಾಣದ ಸೌಲಭ್ಯವೂ ಇದೆ. ಅಲ್ಲಿಂದ ಜಲ ಮೆಟ್ರೋ ಪ್ರಯಾಣ ಆನಂದಿಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ