ಐಪಿಎಲ್‌ಗಾಗಿ ಆಸ್ಟ್ರೇಲಿಯಾ ಪ್ರವಾಸ ರದ್ದು!
ಇತ್ತೀಚೆಗಷ್ಟೇ ನನಗೆ ಆಸ್ಟ್ರೇಲಿಯಾ ಪ್ರವಾಸ ಮಾಡುವ ಅವಕಾಶವಿತ್ತು. ಅಲ್ಲಿನ ತುಳುಕೂಟ ಆಯೋಜಿಸಿದ್ದ ʻಬಿಸು ಪರ್ಬʼ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದರು. ಆದರೆ ಐಪಿಎಲ್ ಕಾರಣದಿಂದ ಆಸ್ಟ್ರೇಲಿಯಾ ಪ್ರವಾಸವನ್ನು ಮಿಸ್ ಮಾಡಿಕೊಂಡಿದ್ದೆ.
ಕನ್ನಡ, ತುಳು ಮಾತ್ರವಲ್ಲದೆ ಕೊಂಕಣಿ ಭಾಷೆಯ ಚಿತ್ರಗಳಲ್ಲೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವವರು ನಟ ರೂಪೇಶ್ ಶೆಟ್ಟಿ. ನಿರೂಪಕ, ರೇಡಿಯೋ ಜಾಕಿ, ಗಾಯಕ ಮತ್ತು ಮಾಡೆಲ್ ಆಗಿಯೂ ಗುರುತಿಸಿಕೊಂಡಿರುವ ರೂಪೇಶ್, ಬಿಗ್‌ಬಾಸ್ ಕನ್ನಡ ಸೀಸನ್ 9ರ ಫೈನಲಿಸ್ಟ್. ಸದ್ಯ `ಹಲ್ಕಾ ಡಾನ್’ ಸಿನಿಮಾದಲ್ಲಿ ಸದ್ದು ಮಾಡ್ತಿರುವ ಶೆಟ್ಟಿ ಬಾಯ್, ಸದ್ಯದಲ್ಲೇ ತಮ್ಮ ಚೊಚ್ಚಲ ನಿರ್ದೇಶನದ ‘ಬ್ರೋ’ ಎಂಬ ತುಳು ಸಿನಿಮಾದ ತಯಾರಿಯಲ್ಲಿದ್ದಾರೆ. ಎಷ್ಟೇ ಬ್ಯುಸಿಯಾದರೂ ಕೆಲಸದ ವಿಚಾರವಾಗಿ ಟ್ರಾವೆಲ್ ಮಾಡುತ್ತಾ, ಮೈಂಡ್ ಫ್ರೀ ಮಾಡ್ಕೊಳ್ತೀನಿ ಅನ್ನೋದು ರೂಪೇಶ್ ಮಾತು.
ಇದನ್ನೂ ಓದಿ: ಎಲ್ಲವೂ ಮುಗಿದೇಹೋಯ್ತು ಎನಿಸಿದ ಕ್ಷಣ!
ವೃತ್ತಿಗಾಗಿ ನನ್ನ ಪ್ರವಾಸ
ಟ್ರಾವೆಲ್ ಮಾಡುವವರಲ್ಲಿ ಅನೇಕ ವಿಧದ ಜನರಿರುತ್ತಾರೆ. ಅವರಲ್ಲಿ ಕೆಲಸದ ನಿಮಿತ್ತ ಟ್ರಾವೆಲ್ ಮಾಡುವವರ ಗುಂಪಿಗೆ ನಾನು ಸೇರುವವನು. ಎಲ್ಲರಂತೆ ಪ್ಲ್ಯಾನ್ಡ್ ಟ್ರಾವೆಲ್ ಮಾಡುವುದು ನನಗೆ ಸದ್ಯಕ್ಕೆ ಕಷ್ಟ. ಪೂರ್ವ ಯೋಜಿತವಾಗಿ ಪ್ರವಾಸ ಮಾಡುವುದಾದರೆ ಧಾರ್ಮಿಕ ಪ್ರವಾಸವೇ ಹೆಚ್ಚು. ಬೇಕೆನಿಸಿದಾಗೆಲ್ಲ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ.
ಬರವಣಿಗೆಗೆ ಬೆಸ್ಟ್ ಮಂಗಳೂರಿನ ಕಡಲತೀರ
ನನ್ನೂರು ಗಡಿನಾಡು ಕಾಸರಗೋಡಿನ ಉಪ್ಪಳ ಎಂಬಲ್ಲಿ. ಆದರೂ ನನಗೆ ಮಂಗಳೂರೆಂದರೆ ಬಹಳ ಪ್ರೀತಿ. ವಿದೇಶಿಗರನ್ನೂ ಆಕರ್ಷಿಸುವ ಅನೇಕ ಬೀಚ್‌ಗಳು ಹಾಗೂ ಐತಿಹಾಸಿಕ ಮಹತ್ವವಿರುವ ಸಾಕಷ್ಟು ದೇವಾಲಯಗಳು ಈ ಕರಾವಳಿ ನಗರದಲ್ಲಿದೆ. ಮಂಗಳೂರು ಬೀಚ್‌ಗಳ ಪೈಕಿ ನನ್ನಿಷ್ಟದ ಕಡಲತೀರ ಸೋಮೇಶ್ವರ ಬೀಚ್. ಬಿಡುವಾದಾಗಲೆಲ್ಲ ಒಬ್ಬನೇ ಹೋಗಿ ಸೋಮೇಶ್ವರ ಕಡಲತೀರದಲ್ಲೊಂದಷ್ಟು ಹೊತ್ತು ಕಳೆಯುತ್ತೇನೆ. ಬರವಣಿಯ ಸಂದರ್ಭಗಳಲ್ಲಂತೂ ಮಂಗಳೂರಿನ ಸಮುದ್ರ ತೀರ..ಅಲ್ಲಿನ ದೇವಾಲಯಗಳೇ ನನಗೆ ಸೂರ್ತಿ ನೀಡುತ್ತವೆ.

ಮುಂಬೈ ಜೀವನ ನನಗೆ ಹೊಸತಲ್ಲ
ಚಿತ್ರೀಕರಣದ ಭಾಗವಾಗಿ ಅಥವಾ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕೆ ಅನೇಕ ಕಡೆಗಳಿಗೆ ಹೋಗುತ್ತಿರುತ್ತೇನೆ. ಚೆನ್ನೈ, ಮುಂಬೈಗೆ ಅದೆಷ್ಟು ಬಾರಿ ಹೋಗಿದ್ದೇನೆಂಬುದು ಲೆಕ್ಕ ಹಾಕುವುದು ಕಷ್ಟ. ಕೆಲಸದ ನಿಮಿತ್ತ ಮುಂಬೈನಲ್ಲಿ 20-25 ದಿನಗಳ ಕಾಲ ಉಳಿದುಕೊಂಡಿದ್ದೆ. ಸ್ಟಾರ್ ಸ್ಪೋರ್ಟ್ ಗೆ ಕೆಲಸ ಮಾಡುವುದರಿಂದ ಐಪಿಎಲ್ ಇದ್ದಾಗಲೆಲ್ಲ ಮುಂಬೈಗೆ ಹೋಗುತ್ತೇನೆ. ಅಲ್ಲಿ ಒಬ್ಬನೇ ಆಟೋಗಳಲ್ಲಿ, ಮೆಟ್ರೋದಲ್ಲಿ ಓಡಾಡುತ್ತೇನೆ. ಅಲ್ಲಿನ ಜನರಿಗೆ ಅಷ್ಟಾಗಿ ನನ್ನನ್ನು ಪರಿಚಯವಿಲ್ಲದಿರುವುದರಿಂದ ಅವರ ನಡುವೆ ನಾನೂ ಒಬ್ಬನಾಗಿ ನಡೆದಾಡುತ್ತೇನೆ.
ಮೊದಲ ವಿಮಾನಯಾನ
ದುಬೈ, ಮಸ್ಕತ್, ಕತಾರ್,ಬಹ್ರೇನ್‌ನಂಥ ಯುಎಇ ದೇಶಗಳಿಗೆ ಆಗಾಗ ಹೋಗುತ್ತಿರುತ್ತೇನೆ. ಅರಬ್ ದೇಶಗಳೊಂದಿಗೆ ಆಪ್ತ ನಂಟಿದೆ. ಕುವೈಟ್‌ನಲ್ಲಿ ಕಾರ್ಯಕ್ರಮವೊಂದರ ನಿರೂಪಣೆಗಾಗಿ ಹೋಗಿರುವುದು ನನ್ನ ಮೊದಲ ವಿಮಾನ ಪ್ರಯಾಣ. ಅದು ನನ್ನ ಜೀವನದ ವಾವ್ ಮೂಮೆಂಟ್. ಅಲ್ಲಿಯವರೆಗೂ ಹೊರದೇಶಗಳ ಬಗ್ಗೆ ಮಾಹಿತಿಯಷ್ಟೇ ತಿಳಿದುಕೊಂಡಿದ್ದ ನನಗೆ, ನೇರವಾಗಿ ವಿದೇಶಿ ನೆಲದಲ್ಲಿ ಸುತ್ತಾಡುವ ಅವಕಾಶ ಸಿಕ್ಕಿತ್ತು. ಆದರೆ ಪ್ರಪಂಚವನ್ನು ನೋಡುವ ಆ ಮುಗ್ಧತನ ಇಂದು ಜೀವನದ ಅನುಭವಗಳ ಮೂಲಕ ಬದಲಾಗಿದೆ.
ನನಸಾಗದ ಆಸ್ಟ್ರೇಲಿಯಾ ಪ್ರವಾಸ
ಇತ್ತೀಚೆಗಷ್ಟೇ ನನಗೆ ಆಸ್ಟ್ರೇಲಿಯಾ ಪ್ರವಾಸ ಮಾಡುವ ಅವಕಾಶವಿತ್ತು. ಅಲ್ಲಿನ ತುಳುಕೂಟ ಆಯೋಜಿಸಿದ್ದ ʻಬಿಸು ಪರ್ಬʼ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಆಹ್ವಾನ ನೀಡಿದ್ದರು. ಆದರೆ ಐಪಿಎಲ್ ಕಾರಣದಿಂದ ಆಸ್ಟ್ರೇಲಿಯಾ ಪ್ರವಾಸವನ್ನು ಮಿಸ್ ಮಾಡಿಕೊಂಡಿದ್ದೆ.
ಥೈಲ್ಯಾಂಡ್.. ಬ್ಯಾಂಕಾಕ್
ʻಅನುಷ್ಕಾʼ ಎಂಬ ಕನ್ನಡ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ನಾನು ತಂಡದೊಂದಿಗೆ ಥೈಲ್ಯಾಂಡ್‌ಗೆ ಹೋಗಿದ್ದೆ. ಆದರೆ ಟೈಟ್ ಶೆಡ್ಯೂಲ್ ಆಗಿದ್ದರಿಂದ ಅಲ್ಲಿ ಹೆಚ್ಚಿಗೆ ಸಮಯ ಕಳೆಯಲಾಗಲಿಲ್ಲ. ʻಸರ್ಕಸ್ʼ ಸಿನಿಮಾ ಪ್ರಮೋಷನ್‌ಗಾಗಿ ಬ್ಯಾಂಕಾಕ್ ಹೋಗಿದ್ದೆ. ಆದರೆ ಅಲ್ಲಿ ಒಂದೆರಡು ದಿನಗಳ ಕಾಲ ಉಳಿದುಕೊಂಡು ಸುತ್ತಲಿನ ಅನೇಕ ಪ್ರವಾಸಿ ಆಕರ್ಷಣೆಗಳನ್ನು ನೋಡಿಬಂದಿದ್ದೆ.
ಲಗೇಜ್ ಪ್ಯಾಕಿಂಗ್ ಕಲೆ ಸುಲಭವಲ್ಲ
ನಾನೊಬ್ಬ ಬ್ಯಾಡ್ ಟ್ರಾವೆಲ್ ಪ್ಲ್ಯಾನರ್. ಲಗೇಜ್ ಪ್ಯಾಕ್ ಮಾಡುವ ಕಲೆಯೂ ನನಗೆ ಒಲಿದಿಲ್ಲ. ಪ್ಯಾಕ್ ಮಾಡುವ ವೇಳೆ ನನಗೆ ಗೊಂದಲವೇ ಹೆಚ್ಚು. ಬಟ್ಟೆಯಿಂದ ತೊಡಗಿ ಅಗತ್ಯವಿರುವ ಸಣ್ಣಪುಟ್ಟ ವಸ್ತುಗಳನ್ನು ಜತೆಗಿಟ್ಟುಕೊಳ್ಳುವಲ್ಲಿಯೂ ನನಗೆ ಹಲವು ಆಯ್ಕೆಗಳು ಕಾಣುತ್ತವೆ. ಅದಕ್ಕೆ ರಿಸ್ಕ್ ಏಕೆ, ಎಲ್ಲವನ್ನೂ ಪ್ಯಾಕ್ ಮಾಡಿಬಿಟ್ಟರೆ ಹಾಕುವ ವೇಳೆಯಲ್ಲಿ ಅದರ ಬಗ್ಗೆ ಚಿಂತಿಸಿದರಾಯ್ತು ಎಂದುಕೊಳ್ಳುತ್ತೇನೆ. ಅದರಿಂದಲೇ ನನ್ನ ಲಗೇಜ್ ಹೆವಿಯಾಗಿಬಿಡುತ್ತದೆ.
ಮೀನೂಟ..ಬಾಡೂಟ
ನಾನು ಕರಾವಳಿ ಭಾಗದವನಾದ್ದರಿಂದ ಅಲ್ಲಿನ ಆಹಾರ ಬಹಳ ಇಷ್ಟವಾಗುತ್ತದೆ. ಇದು ಅನೇಕ ಬಾರಿ ಕಷ್ಟವೂ ಆಗುತ್ತದೆ. ಯಾಕೆಂದರೆ ಹೋದಲೆಲ್ಲ ನನಗೆ ಕರವಾಳಿಯ ಆಹಾರವನ್ನು ಹುಡುಕುವುದೇ ಕೆಲಸವಾಗಿಬಿಡುತ್ತದೆ.ಆದರೆ ಅರಬ್ ದೇಶಗಳಿಗೆ ಹೋದಾಗ ನನಗೆ ಆ ಸಮಸ್ಯೆಯಾಗುವುದಿಲ್ಲ. ಮಂಗಳೂರು ಫುಡ್ ಅಥವಾ ಕರಾವಳಿಯ ಸೀ ಫುಡ್ ಅಲ್ಲಿ ಹೆಚ್ಚಾಗಿ ಸಿಗುವುದರಿಂದ ನನಗೆ ಬಾಡೂಟ.
ರಮ್ಯಾ ಜತೆ ಉತ್ತರಾಖಂಡ ಪ್ರವಾಸ
ಯಾವ ಹಿರೋಯಿನ್ ಜತೆಗೆ ಟ್ರಾವೆಲ್ ಡೇಟ್ ಮಾಡುತ್ತೀರಿ ಎಂಬ ಪ್ರಶ್ನೆಗೆ ಬಂದರೆ ಉತ್ತರಿಸುವುದು ಕಷ್ಟ. ನನ್ನ ಕ್ರಶ್ ಹಿರೋಯಿನ್ ಗಳಲ್ಲಿ ಹಲವರು ಮದುವೆಯಾಗಿದ್ದಾರೆ. ಆದರೂ ಬಾಲಿವುಡ್‌ನಲ್ಲಿ ಕತ್ರಿನಾ ಜತೆ, ಸ್ಯಾಂಡಲ್‌ವುಡ್‌ನಲ್ಲಿ ಮೋಹಕತಾರೆ ರಮ್ಯಾ ಜತೆಗೆ ಉತ್ತರಾಖಂಡ ಪ್ರವಾಸ ಮಾಡುವ ಅವಕಾಶ ಸಿಕ್ಕರೆ ಮಿಸ್ ಮಾಡದೇ ಹೋಗಿಬರುತ್ತೇನೆ.
ಐಲ ದುರ್ಗೆಯ ಸನ್ನಿಧಿಯಲ್ಲೇ ನೆಮ್ಮದಿ
ಧಾರ್ಮಿಕ ಪ್ರವಾಸವೆಂದರೆ ನನ್ನೂರಿನ ದೇವಾಲಯಗಳಿಗೆ ಹೋಗುತ್ತಿರುತ್ತೇನೆ. ಕಾಸರಗೋಡಿನ ಐಲ ದುರ್ಗಾಪರಮೇಶ್ವರಿ ದೇವಾಲಯ ನನ್ನ ಮೊದಲ ಆಯ್ಕೆ. ನಮ್ಮಲ್ಲಿ ನಾಗದೇವರು, ಕುಟುಂಬದ ದೈವ ದೇವರುಗಳ ಆರಾಧನೆ ಹೆಚ್ಚು.ಭೂತಕೋಲಗಳಂಥ ಸಮಾರಂಭಗಳು ಆದಾಗ ಭಾಗಿಯಾಗುತ್ತೇನೆ. ಅದಕ್ಕೆ ಹೊರತಾಗಿ ಶೃಂಗೇರಿ, ಕೊಲ್ಲೂರಿನ ಮೂಕಾಂಬಿಕಾ ದೇವರ ಬಗ್ಗೆ ಅಪಾರ ಪ್ರೀತಿ, ಭಕ್ತಿ.
ಅಡ್ವೆಂಚರ್ ಟೂರ್ ನನಗಲ್ಲ
ನನಗೆ ಬಹುದಿನಗಳಿಂದ ಸೋಲೋ ಟ್ರಿಪ್ ಹೋಗುವ ಆಸೆಯಿದೆ. ಆದರೆ ಕೆಲಸದ ನಡುವೆ ಬಿಡುವಾಗುವುದಿಲ್ಲ. ಯಾವತ್ತೂ ಅಡ್ವೆಂಚರ್ ಟೂರಿಸಂ ಟ್ರೈ ಮಾಡಿಲ್ಲ, ಹಿಮಾಚಲ, ಕೇದಾರಗಳಂಥ ಜಾಗಗಳು ನನಗೆ ನೆಮ್ಮದಿ ನೀಡುವ ತಾಣಗಳು. ಅಲ್ಲಿಗೆ ಸದ್ಯದಲ್ಲೇ ಹೋಗಬೇಕೆಂದುಕೊಂಡಿದ್ದೇನೆ.

ಗ್ರೀನ್ ಆಂಡ್ ಕ್ಲೀನ್
ʻಕರಾವಳಿ ಟೂರಿಸಂʼ ಅಭಿವೃದ್ಧಿಪಡಿಸುವ ಬಗ್ಗೆ ಸರಕಾರದಿಂದ ಅನೇಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಟೂರಿಸಂಗೆ ಸಾಕಷ್ಟು ಅವಕಾಶಗಳಿವೆ. ಆದರೆ ಇಲ್ಲಿನ ಮೂಲ ಸಂಸ್ಕೃತಿಗೆ ಧಕ್ಕೆಯಾಗದಂತೆ ಅಭಿವೃಧ್ಧಿಯ ಯೋಜನೆಗಳನ್ನು ರೂಪಿಸಬೇಕಿದೆ. ಒಂದು ವೇಳೆ ನನಗೆ ಕರ್ನಾಟಕದ ಪ್ರವಾಸೋದ್ಯಮದ ರಾಯಭಾರಿಯಾಗುವ ಅವಕಾಶ ಸಿಕ್ಕಿದರೆ ʻಗ್ರೀನ್ ಆಂಡ್ ಕ್ಲೀನ್ʼ ಎಂಬ ಧ್ಯೇಯದೊಂದಿಗೆ ನಗರದಲ್ಲೂ ಹಸಿರನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತೇನೆ.
ನಮ್ಮೂರಿನ ಕತೆಗಳಿಗೆ ಮೊದಲ ಆದ್ಯತೆ
ರಿಷಬ್, ರಕ್ಷಿತ್ ರಂಥ ನಟರು ಕಾಂತಾರದಂಥ ಸಿನಿಮಾಗಳ ಮೂಲಕ ಕರಾವಳಿಯ ಪರಿಸರ, ಕಲೆ, ಸಂಸ್ಕೃತಿಯನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ನನಗೂ ಅಂಥ ಆಸೆಯಿದೆ. ನಮ್ಮ ಮೂಲ ಸಂಸ್ಕೃತಿ, ಪರಂಪರೆಯನ್ನು ಊರಿನ ಕಥೆಯ ಮೂಲಕವೇ ಹೇಳಬೇಕೆಂದುಕೊಂಡಿದ್ದೇನೆ. ಆದರೆ ನಾನು ಇನ್ನೂ ಅವರ ಮಟ್ಟಕ್ಕೆ ಬೆಳೆದಿಲ್ಲ. ಆದ್ದರಿಂದ ನನ್ನ ಮೊದಲ ಉದ್ದೇಶ ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಬೇಕು ಎಂಬುದು. ಅದರ ಕತೆಗೆ ನಮ್ಮೂರನ್ನು ಬಳಸಿಕೊಳ್ಳುವ ಆಸೆಯಿದೆ.
ಆರೋಗ್ಯ ಇರುವಾಗಲೇ ದೇಶ ಸುತ್ತಿ
ದೇಶಗಳನ್ನು ಸುತ್ತಿ ಪಡೆಯುವ ಜ್ಞಾನ ಮಹತ್ತರವಾದುದು. ಜೀವನದ ನಿಜವಾದ ಅರ್ಥವೇ ನಮ್ಮ ಸುತ್ತಲಿನ ಪರಿಸರವನ್ನು ಎಕ್ಸ್‌ಪ್ಲೋರ್ ಮಾಡುವುದಾಗಿದೆ. ಆರೋಗ್ಯ ಇರುವಾಗಲೇ ದೇಶವನ್ನು ಸುತ್ತಿ ನೋಡಬೇಕು. ನಾವೆಲ್ಲರೂ ಕೆಲಸದ ನಡುವೆ ಜೀವನವನ್ನು ಸಂಭ್ರಮಿಸಲು ಮರೆತುಬಿಡುತ್ತೇವೆ. ಆದರೆ ವರ್ಷದಲ್ಲಿ ಇಷ್ಟು ದಿನ ಪ್ರವಾಸಕ್ಕೆಂದು ಇಟ್ಟರೆ ಜಗತ್ತು ಹಾಗೂ ಜನರನ್ನು ತಿಳಿಯುವ ಅವಕಾಶ ಸಿಗುತ್ತದೆ. ಲೈಫ್ ಸಿಂಪಲ್ ಆಗಿಬಿಡುತ್ತದೆ.