• ಅನಿಲ್ ಹೆಚ್.ಟಿ.

ಪ್ರವಾಸಿಗರ ಸುರಕ್ಷತೆಗಾಗಿ ರಾಜ್ಯದಾದ್ಯಂತ ಇರುವ ಹೋಮ್‌ಸ್ಟೇಗಳಿಗೆ ಬಿಗಿ ನಿಯಮಗಳನ್ನು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದೆ. ಕೊಡಗು ಜಿಲ್ಲೆಯ ಕುಟ್ಟ ಗ್ರಾಮದಲ್ಲಿನ ಹೋಮ್‌ಸ್ಟೇಯೊಂದರಲ್ಲಿ ವಿದೇಶಿ ಪ್ರವಾಸಿಯ ಮೇಲೆ ಸಿಬ್ಬಂದಿಯಿಂದ ನಡೆದ ಅತ್ಯಾಚಾರ ಪ್ರಕರಣ ಮತ್ತು ಘಟನೆಯನ್ನು ಮುಚ್ಚಿಹಾಕಲು ಹೋಮ್‌ಸ್ಟೇ ಮಾಲೀಕ ಯತ್ನಿಸಿದ ಪ್ರಕರಣ ದೇಶವ್ಯಾಪಿ ಸುದ್ದಿಯಾಗುತ್ತಿರುವಂತೆಯೇ ಎಚ್ಚೆತ್ತುಕೊಂಡ ಪ್ರವಾಸೋದ್ಯಮ ಇಲಾಖೆ ಹೋಮ್‌ಸ್ಟೇಗಳಿಗೆ ಬಿಗಿ ನಿಯಮ ಜಾರಿಗೆ ತಂದು ನಿಯಮ ಪಾಲಿಸುವಂತೆ ಎಚ್ಚರಿಸಿದೆ.

ಇದನ್ನೂ ಓದಿ : ನಮ್ಮ ರೆಸಾರ್ಟ್‌, ಹೋಮ್‌ ಸ್ಟೇ ಮಾಲೀಕರೇಕೆ ಈ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ ?

ಹೋಮ್‌ಸ್ಟೇಗಳಿಗೆ ವಿಧಿಸಲಾಗಿರುವ ನಿಯಮಗಳೇನು?

- ಪ್ರವಾಸಿ ಅತಿಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಹೋಮ್‌ಸ್ಟೇಗಳು ಅಧಿಕೃತ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.

- ಪ್ರವಾಸೋದ್ಯಮ ಇಲಾಖೆಯಿಂದ ನೋಂದಣಿ ಪತ್ರ ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಎಲ್ಲ ಹೋಮ್‌ಸ್ಟೇ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ನೋಂದಣಿ ಪತ್ರ ಪಡೆದ ನಂತರವೇ ಹೋಮ್‌ಸ್ಟೇಗಳನ್ನು ನಡೆಸಬೇಕು.

- ನೋಂದಣಿ ಮಾಡಿಸದೇ ಅನಧಿಕೃತವಾಗಿ ಹೋಮ್‌ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ಅಂಥ ಹೋಮ್‌ಸ್ಟೇಗಳ ವಿರುದ್ಧ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ-2015ರಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
- ಹೋಮ್‌ಸ್ಟೇ ನಡೆಸುವ ಮಾಲೀಕರು ಕಡ್ಡಾಯವಾಗಿ ಷರತ್ತು ಪಾಲಿಸಬೇಕು. ಅಸ್ತಿತ್ವದಲ್ಲಿರುವ ಮತ್ತು ಹೊಸ ಹೋಮ್‌ಸ್ಟೇಗಳು ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ನೋಂದಾಯಿತ ಹೋಮ್‌ಸ್ಟೇಗಳ ಪಟ್ಟಿಯನ್ನು ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

- ಗಂಟೆ ಲೆಕ್ಕದಲ್ಲಿ ಯಾವುದೇ ಕೊಠಡಿಗಳನ್ನು ಬಾಡಿಗೆಗೆ ನೀಡುವಂತಿಲ್ಲ. ಹೋಮ್‌ಸ್ಟೇ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ಅನುಮತಿ ಪತ್ರ ಹಾಗೂ ಪರವಾನಗಿ ಪತ್ರಗಳನ್ನು ಪ್ರದರ್ಶಿಸಬೇಕು.

- ಬಾಡಿಗೆ ಅಥವಾ ಲೀಸ್ ಅಥವಾ ಉಪ ಬಾಡಿಗೆ ಮನೆಗಳನ್ನು ಹೋಮ್‌ಸ್ಟೇಗಳಾಗಿ ನೋಂದಾಯಿಸಲು ಅವಕಾಶವಿಲ್ಲ.
- ಹೋಮ್‌ಸ್ಟೇ ಮಾಲೀಕರು ಕಡ್ಡಾಯವಾಗಿ ಈ ಸ್ಥಳದಲ್ಲಿ ವಾಸವಿರಬೇಕು.
- ಹೋಮ್-ಸ್ಟೇನಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿರುವುದರ ಜತೆಗೆ ಅವು 24*7 ಸರಿಯಾಗಿ ಕಾರ್ಯನಿರ್ವಹಿಸಬೇಕು. 30 ದಿನಗಳ ಫುಟೇಜ್‍ಗಳು ಸಿಸಿಟಿವಿಯಲ್ಲಿ.

- ಹೋಮ್‌ಸ್ಟೇಗೆ ನೇಮಿಸಿಕೊಳ್ಳುವ ಸಿಬ್ಬಂದಿಗಳ ಹಿನ್ನೆಲೆ ಪರಿಶೀಲನೆಯನ್ನು ಪೊಲೀಸ್ ಇಲಾಖೆಯ ಮುಖಾಂತರ ಕಡ್ಡಾಯವಾಗಿ ನಡೆಸಬೇಕು.
- ಅತಿಥಿಗಳ ದೂರುಗಳು, ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಹೋಮ್‌ಸ್ಟೇ ರಿಸೆಪ್ಷನ್‌ನಲ್ಲಿ ಫೀಡ್‌ ಬ್ಯಾಕ್‌ ರಿಜಿಸ್ಟರ್, ದೂರು ರಿಜಿಸ್ಟರ್ ಮತ್ತು ಪ್ರತಿಕ್ರಿಯೆ ಪುಸ್ತಕ ನಿರ್ವಹಿಸಬೇಕು.
- ಹೋಮ್‌ಸ್ಟೇ ನಡೆಸುವ ಮಾಲೀಕರು ಅತಿಥಿಗಳಿಗೆ ಕಡ್ಡಾಯವಾಗಿ ಬೆಳಗಿನ ಉಪಾಹಾರವನ್ನು ನೀಡಬೇಕು.
- ಸ್ವಚ್ಛತೆ, ಆರೋಗ್ಯ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತೆಗೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು.

Untitled design (71)

- ಕಡ್ಡಾಯವಾಗಿ ಒಣತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳ ಸಂಗ್ರಹಣೆಗೆ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡಬೇಕು. ಮರುಬಳಕೆ, ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಮತ್ತು ತ್ಯಾಜ್ಯದ ಸರಿಯಾದ ವಿಲೇವಾರಿಯನ್ನು ಕಡ್ಡಾಯವಾಗಿ ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುವಂತಿಲ್ಲ.
- ಹೋಮ್‌ಸ್ಟೇ ಸ್ಥಳೀಯ ಅಲಂಕಾರ, ಅಧಿಕೃತ ಪಾಕಪದ್ಧತಿ, ಸ್ಥಳೀಯ ಚಟುವಟಿಕೆಗಳು ಇತ್ಯಾದಿಗಳ ಮೂಲಕ ಸ್ಥಳೀಯ ಅನುಭವವನ್ನು ಅತಿಥಿಗಳಿಗೆ ಒದಗಿಸಬೇಕು.
- ಆಗಮಿಸಿರುವ ಅತಿಥಿಗಳು ಸಾರ್ವಜನಿಕರಿಗೆ ತೊಂದರೆ ನೀಡದಂತೆ ಅಥವಾ ನೆರೆಹೊರೆಯವರಿಗೆ ತೊಂದರೆ ನೀಡದಂತೆ, ಹೋಮ್‌ಸ್ಟೇ ಮಾಲೀಕರು ಮುಂಚೆಯೇ ಸೂಚಿಸಿರಬೇಕು. ಈ ನಿಟ್ಟಿನಲ್ಲಿ ಪ್ರವಾಸಿಗರಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕು.
- ಹೋಮ್‌ಸ್ಟೇ ಕನಿಷ್ಠ 1 ಮತ್ತು ಗರಿಷ್ಠ 6 ಬಾಡಿಗೆ ಕೊಠಡಿಗಳನ್ನು ಒದಗಿಸಬೇಕು. ಗರಿಷ್ಠ 12 ಹಾಸಿಗೆಗಳನ್ನು ಹೊಂದಿರಬಹುದು. ಮಕ್ಕಳಿಗಾಗಿ ಹಾಸಿಗೆಗಳನ್ನು ಹೊರತುಪಡಿಸಿ ಒಂದು ಕೋಣೆಯಲ್ಲಿ 3ಕ್ಕಿಂತ ಹೆಚ್ಚು ಹಾಸಿಗೆಗಳು ಇರುವಂತಿಲ್ಲ. ಹೋಮ್‌ಸ್ಟೇಯಲ್ಲಿ ಯಾವುದೇ ಕೊಠಡಿಯನ್ನು ಡಾರ್ಮೆಟರಿಯಾಗಿ ನಿರ್ವಹಿಸಲಾಗುವುದಿಲ್ಲ ಮತ್ತು ಹೋಮ್‌ಸ್ಟೇಯಲ್ಲಿ ಬಂಕ್ ಹಾಸಿಗೆಗಳನ್ನು ಒದಗಿಸಲಾಗುವುದಿಲ್ಲ. ಯಾವುದೇ ಸಮಯದಲ್ಲಿ ಗರಿಷ್ಠ 12 ವಯಸ್ಕರು ಹೋಮ್‌ಸ್ಟೇಯಲ್ಲಿ ಅತಿಥಿಗಳಾಗಿ ಉಳಿಯಬಹುದು.
- ಹೋಮ್‌ಸ್ಟೇನಲ್ಲಿ ಅತಿಥಿಗಳು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

- ಪ್ರವಾಸೋದ್ಯಮ ಇಲಾಖೆಯ ಅನುಮೋದನೆ ಅಥವಾ ನೋಂದಣಿ ಇಲ್ಲದೇ ಹೋಮ್‌ಸ್ಟೇಗಳು ಕಾರ್ಯನಿರ್ವಹಿಸುತ್ತಿರುವ ಕಾನೂನುಬಾಹಿರವೆಂದು ಪರಿಗಣಿಸಲಾಗಿ ಹೋಮ್‌ಸ್ಟೇ ಮಾಲೀಕರು ಮತ್ತು ಪ್ರವರ್ತಕರ ವಿರುದ್ಧ ಕೆ.ಟಿ.ಟಿ.ಎಫ್ ಕಾಯ್ದೆ-2015ರಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ

- ಅತಿಥಿಗಳು ಬಂದಾಗ ಹೋಮ್-ಸ್ಟೇ ರಿಜಿಸ್ಟರ್ನಲ್ಲಿ ಅವರ ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ ಪಡೆಯುವುದು ಹಾಗೂ ವಿದೇಶಿಯರು ಬಂದಾಗ ಅವರ ವೀಸಾ ಪಾಸ್‌ಪೋರ್ಟ್ ಪರಿಶೀಲಿಸಿ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. (ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಭೌತಿಕವಾಗಿ)

- ವಿದೇಶಿಯರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ (ಸಿ’ ಫಾರ್ಮ್ ನಲ್ಲಿ ನೀಡುವುದು) ಅಥವಾ ನಿಗದಿತ ಮಾರ್ಗಸೂಚಿಗಳ ಪ್ರಕಾರ ಸಲ್ಲಿಸಬೇಕು.

- ಅಧಿಕಾರಿಗಳು ತಪಾಸಣೆ ನಡೆಸುವ ಸಮಯದಲ್ಲಿ ಹೋಮ್‌ಸ್ಟೇ ಸಂಬಂಧಿಸಿದ ದಾಖಲಾತಿಗಳು ಹಾಗೂ ನೇಮಿಸಿಕೊಂಡ ನೌಕರರ ದಾಖಲಾತಿಗಳು, ರಿಜಿಸ್ಟರ್ ಪುಸ್ತಕ ಹಾಗೂ ಸಿಸಿ ಟಿವಿಗಳ ಡಾಟಾಗಳನ್ನು ಪರಿಶೀಲಿಸುವ ಸಮಯದಲ್ಲಿ ಮಾಲೀಕರು ಸಹಕರಿಸಬೇಕು.
- ಸೂಕ್ತ ಮಾಹಿತಿ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಹೋಮ್‌ಸ್ಟೇಗಳ ಬಗ್ಗೆ ಹಾಗೂ ಹೋಮ್‌ಸ್ಟೇ ನೋಂದಣಿ ಮಾಡಿಕೊಳ್ಳುವ ಬಗ್ಗೆ ಸಾರ್ವಜನಿಕರು ದೂರು/ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಆಯಾ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು.

ಅವೈಜ್ಞಾನಿಕ ನಿಯಮ – ಹೋಮ್‌ಸ್ಟೇ ಉದ್ಯಮಿಗಳ ಅಸಮಾಧಾನ

ಪ್ರವಾಸೋದ್ಯಮ ಇಲಾಖೆಯ ಹೊಸ ನಿಯಮಗಳ ಬಗ್ಗೆ ಕೊಡಗು ಜಿಲ್ಲೆಯ ಕೆಲವು ಹೋಮ್‌ಸ್ಟೇ ಮಾಲೀಕರು ಪ್ರವಾಸಿ ಪ್ರಪಂಚದೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹೋಮ್‌ಸ್ಟೇ ವಹಿವಾಟನ್ನು ಮಾಡಿಕೊಂಡಿದ್ದೇವೆ. ಪ್ರತಿ ಉದ್ಯಮ ರಂಗದಂತೆ ಹೋಮ್‌ಸ್ಟೇಗಳಲ್ಲಿಯೂ ಕೆಲವು ಸಮಸ್ಯೆಗಳು ಎದುರಾಗುತ್ತದೆ. ಇಂಥ ಸಂದರ್ಭ ಸಮಸ್ಯೆಗೆ ಕಾರಣವಾದ ಹೋಮ್‌ಸ್ಟೇ ವಿರುದ್ಧ ಕ್ರಮ ಕೈಗೊಳ್ಳಬೇಕೇ ವಿನಾ ಕಠಿಣ ನಿಯಮಗಳ ಮೂಲಕ ಆತಿಥ್ಯಕ್ಕೆ ಹೆಸರಾದ ಹೋಮ್‌ಸ್ಟೇ ವಿರುದ್ಧವೇ ಚಾಟಿ ಬೀಸುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

Untitled design (72)

ಈ ನಿಯಮಗಳಲ್ಲಿ ಅನೇಕ ಅವೈಜ್ಞಾನಿಕತೆಯಿದೆ ಎಂದು ಹೇಳಿರುವ ಕೆಲವು ಮಾಲೀಕರು ಇದಕ್ಕೆ ಉದಾಹರಣೆ ನೀಡುತ್ತಾರೆ. 1 ಟಿಟಿ ವಾಹನದಲ್ಲಿ ಹೋಮ್‌ಸ್ಟೇಯೊಂದಕ್ಕೆ 15-16 ಮಂದಿ ಒಂದೇ ಕುಟುಂಬದವರು ಅಥವಾ ಸ್ನೇಹಿತರ ಬಳಗಕ್ಕೆ ಸೇರಿದವರು ಬರುತ್ತಾರೆ. ಇಂಥ ಸಂದರ್ಭ ನಿಯಮದ ಪ್ರಕಾರ ಕೇವಲ 12 ಮಂದಿಗೆ ಮಾತ್ರ ಹೋಮ್‌ಸ್ಟೇಯಲ್ಲಿ ತಂಗಲು ಅವಕಾಶ ನೀಡಿ ಉಳಿದ 4 ಮಂದಿಗೆ ಅವಕಾಶ ನಿರಾಕರಿಸುವುದು ಎಷ್ಟು ಸರಿ? ಆತಿಥ್ಯದ ಪ್ರವಾಸೋದ್ಯಮ ಈ ನಿಯಮದಲ್ಲಿ ಎಲ್ಲಿ ಅನ್ವಯವಾಗುತ್ತದೆ? ಅಂತೆಯೇ ಕೋಣೆಯೊಂದರಲ್ಲಿ ಹೆಚ್ಚುವರಿಯಾಗಿ 3 ಬೆಡ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅತಿಥಿಗಳ ಪೈಕಿ ಕುಟುಂಬದ ಇಬ್ಬರು ಹದಿಹರೆಯದ ಮಕ್ಕಳಿದ್ದಲ್ಲಿ 2 ಬೆಡ್‌ಗಳನ್ನು ಹೆಚ್ಚುವರಿಯಾಗಿ ಕೇಳುತ್ತಾರೆ. ಇಂಥ ಸಂದರ್ಭದಲ್ಲಿ ನಿಯಮ ಪ್ರಕಾರ 1 ಬೆಡ್ ಮಾತ್ರ ಎಂದು ಹೇಳಿದರೆ ಆತಿಥ್ಯ ಪಾಲಿಸಿದಂತಾಗುತ್ತದೆಯೇ?

ಇಷ್ಟಕ್ಕೂ ಪ್ರವಾಸೋದ್ಯಮ ಇಲಾಖೆ ಇಂಥ ನಿಯಮ ರೂಪಿಸುವಾಗ ಆಯಾ ಜಿಲ್ಲೆಗಳಲ್ಲಿರುವ ಹೋಮ್‌ಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಅಗತ್ಯಗಳನ್ನೂ ತಿಳಿದುಕೊಂಡು ಆನಂತರವೇ ನಿಯಮ ರೂಪಿಸಬೇಕು. ಸುಮಾರು 2 ದಶಕಗಳಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿರುವ ಹೋಮ್‌ಸ್ಟೇಗಳಿಗೆ ಇಂಥ ಅವೈಜ್ಞಾನಿಕ ನಿಯಮಗಳ ಮೂಲಕ ಕಡಿವಾಣ ಹಾಕಲು ಮುಂದಾದರೆ ಹೋಮ್‌ಸ್ಟೇ ನಿರ್ವಹಣೆಯಲ್ಲಿ ಮಾಲೀಕರಿಗೆ ಆಸಕ್ತಿಯೇ ಇಲ್ಲದಾಗಿ ಹೋಮ್‌ಸ್ಟೇ ಪರಿಕಲ್ಪನೆಯೇ ಹಾದಿ ತಪ್ಪಬಹುದು. ಪ್ರವಾಸೋದ್ಯಮ ವಲಯಕ್ಕೆ ಹೊಸದ್ದಾಗಿ ಬರುವವರಿಗೆ ಸ್ವಾಗತಾರ್ಹ ಅಂಶಗಳನ್ನು ಪ್ರವಾಸೋದ್ಯಮ ಇಲಾಖೆ ರೂಪಿಸಬೇಕೇ ವಿನಾ ಹೊಸ ನಿಯಮಗಳ ಪ್ರಕಾರ, ಮಾಲೀಕರನ್ನು, ಪ್ರವಾಸೋದ್ಯಮಿಗಳನ್ನು ಸಂಪರ್ಕಿಸದೇ ನಿಯಮಗಳ ಜಾರಿ ಸರಿಯಲ್ಲ. ಇದರಿಂದಾಗಿ ನಿಯಮ ಪಾಲಿಸಲಾಗದೇ, ಕಾನೂನು ಶಿಕ್ಷೆಗೆ ಆತಂಕಗೊಂಡು ಹೋಮ್‌ಸ್ಟೇ ಗಳನ್ನೇ ಮುಚ್ಚುವವರ ಸಂಖ್ಯೆ ಹೆಚ್ಚಾಗಬಹುದು ಎಂಬ ಕಳವಳವನ್ನು ಹೋಮ್‌ಸ್ಟೇ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.