- ಗಣೇಶ್ ಭಟ್ ವಾರಾಣಸಿ

ಆಧುನಿಕ ಜಗತ್ತಿನಲ್ಲಿ ಮಾನವರು ಸಂವಹನಕ್ಕೆ ಬೇರೆ ಬೇರೆ ಮಾಧ್ಯಮಗಳನ್ನು ರೂಪಿಸಿಕೊಂಡಿದ್ದಾರೆ. ಅಂಚೆ, ಟೆಲಿಗ್ರಾಂ, ದೂರವಾಣಿ, ವಾಕಿಟಾಕಿ, ಪೇಜರ್ ಕಾಲವನ್ನು ಮೀರಿ ನಾವಿಂದು ಮೊಬೈಲ್ ಫೋನ್ ಯುಗದಲ್ಲಿ ಜೀವಿಸುತ್ತಿದ್ದೇವೆ. ಮೊಬೈಲ್ ಯುಗದಲ್ಲಿಯೂ 2ಜಿ, 3ಜಿ, 4ಜಿ ಹಾಗೂ 5ಜಿ ತಂತ್ರಜ್ಞಾನವನ್ನು ಕರಗತಮಾಡಿಕೊಂಡು ಅದೂ ಸಾಲುವುದಿಲ್ಲವೆಂದು 6ಜಿ ಕಡೆಗೆ ಸಾಗುತ್ತಿದ್ದೇವೆ. ಮೊಬೈಲ್ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲಿಯೂ ಯಾವುದಾದರೂ ಅಪಾಯಕ್ಕೆ ಸಿಲುಕಿದ್ದಾಗ ಎಸ್ಓಎಸ್ (ಸೇವ್ ಅವರ್ ಸೋಲ್ಸ್/ನಮ್ಮ ಜೀವಗಳನ್ನು ರಕ್ಷಿಸಿ) ಕರೆಗಳನ್ನು ಮಾಡುವ ಸೌಕರ್ಯ ನಮ್ಮ ಫೋನ್ ಗಳಲ್ಲಿವೆ. ಆದರೆ ಯಾವುದೇ ತಂತ್ರಜ್ಞಾನದ ಅರಿವೇ ಇಲ್ಲದ ಕಾಡು ಪ್ರಾಣಿಗಳೂ ಅಪಾಯದ ಪರಿಸ್ಥಿತಿಯನ್ನು ಇತರ ಪ್ರಾಣಿಗಳಿಗೆ ತಿಳಿಸಲು ತುರ್ತು ಕರೆಗಳನ್ನು ಮಾಡುತ್ತವೆ ಎಂದರೆ ಬಹಳ ಜನರಿಗೆ ಆಶ್ಚರ್ಯವಾಗಬಹುದು!

ಇತ್ತೀಚೆಗೆ ನಾವು 11 ಮಂದಿ ಬಂಧುಗಳು ವನ್ಯಜೀವಿಗಳ ದರ್ಶನ ಪಡೆಯುವ ಉದ್ದೇಶದಿಂದ ನಾಗರಹೊಳೆ ನ್ಯಾಷನಲ್ ಪಾರ್ಕ್ ಗೆ ತೆರಳಿ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯಡಿ ನಿರ್ವಹಿಸಲ್ಪಡುತ್ತಿರುವ ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್ ನಲ್ಲಿ ತಂಗಿದ್ದೆವು. ನಾವು ನೊಂದಾಯಿಸಿದ ಪ್ಯಾಕೇಜ್ ನಲ್ಲಿ ಮೂರು ದಿವಸಗಳ ಅವಧಿಯಲ್ಲಿ ಕಾಡಿನೊಳಗೆ ವಾಹನದ ಮೂಲಕ ಮೂರು ಸಫಾರಿಗಳು ಹಾಗೂ ಕಬಿನಿ ಹಿನ್ನೀರಿನಲ್ಲಿ ಬೋಟ್ ಮೂಲಕ ಒಂದು ಸಫಾರಿ ಇತ್ತು. ಕಬಿನಿ ಹಿನ್ನೀರಿನ ಒಂದು ಭಾಗದಲ್ಲಿ ನಾಗರಹೊಳೆ ಕಾಡು ಇದ್ದರೆ, ಇನ್ನೊಂದು ಭಾಗದಲ್ಲಿ ಬಂಡೀಪುರ ಕಾಡು ಇದೆ. ನಾವು ಹೋದ ಸಮಯ ಮಳೆಗಾಲವಾದುದರಿಂದ ನಾಗರಹೊಳೆ ಕಾಡಿನ ಅಂಚಿನಲ್ಲೆಲ್ಲಾ ನೀರು ತುಂಬಿತ್ತು.

ಮೊದಲ ದಿನ ಮಧ್ಯಾಹ್ನ ಮೇಲೆ 3 ಗಂಟೆಗೆ ನಮ್ಮ ಮೊದಲ ಕಾಡಿನ ಸಫಾರಿ ಆರಂಭವಾಯಿತು. ನಮ್ಮ ತಂಡಕ್ಕೆ ಸಫಾರಿಗಾಗಿ ಒಂದು ತೆರೆದ ವ್ಯಾನ್ ನ ವ್ಯವಸ್ಥೆಯನ್ನು ಮಾಡಲಾಗಿತ್ತು. ತಂಡದಲ್ಲಿದ್ದ ಮಕ್ಕಳನ್ನು ವಾಹನದ ಮಧ್ಯ ಭಾಗದ ಸೀಟುಗಳಲ್ಲಿ ಕುಳ್ಳಿರಿಸಲಾಯಿತು. ಸಫಾರಿ ಹೋಗುವುದು ಖುಷಿಯ ವಿಷಯವಾಗಿದ್ದರೂ ತೆರೆದ ವಾಹನದಲ್ಲಿ ಕಾಡಿಗೆ ಹೋಗುವಾಗ ಯಾವುದಾದರೂ ಪ್ರಾಣಿಗಳು ಆಕ್ರಮಣ ಮಾಡಿದರೆ ಏನು ಮಾಡುವುದು ಎನ್ನುವ ಹೆದರಿಕೆ ಕೆಲವರ ಮನಸ್ಸಿನ ಒಳಗೆ ಇತ್ತು. ನಮ್ಮನ್ನು ಕರೆದೊಯ್ಯಲು ನಿಗದಿಯಾಗಿದ್ದ ಡ್ರೈವರ್ ಸಫಾರಿ ಡ್ರೈವಿಂಗ್ ನಲ್ಲಿ ಹದಿನೆಂಟು ವರ್ಷಗಳ ಅನುಭವವನ್ನು ಹೊಂದಿರುವುದನ್ನು ತಿಳಿದಾಗ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.

nagarahole b

ನಮಗೆ ಕಾಡಿನ ಎಲ್ಲಾ ಪ್ರಾಣಿಗಳನ್ನು ನೋಡುವ ಆಸೆ ಇದ್ದಿದ್ದರೂ ಹುಲಿಯನ್ನು ನೋಡುವ ಆಸೆ ತುಸು ಹೆಚ್ಚೇ ಇತ್ತು. ಮಕ್ಕಳಿಗೂ ಹುಲಿಯನ್ನು ನೋಡುವ ಬಯಕೆ ಹೆಚ್ಚಿತ್ತು. ಹುಲಿಯನ್ನು ಕಾಣುವ ಕುತೂಹಲವನ್ನು ತಡೆಯಲಾಗದ ನಮ್ಮ ತಂಡದ ಅತಿ ಕಿರಿಯ ಸದಸ್ಯ ಮಿಲಿಂದ್ “ಸಫಾರಿಯಲ್ಲಿ ಹುಲಿಯ ದರ್ಶನವಾಗುವ ಸಾಧ್ಯತೆ ಇದೆಯೇ?” ಎಂದು ಡೈವರ್ ಬಳಿ ಕೇಳಿದ. “ಬೇಸಗೆಯಲ್ಲಿ ಸಫಾರಿ ಮಾಡಿದರೆ ಹುಲಿಯು ಕಾಣಸಿಗುವ ಸಾಧ್ಯತೆ 90% ಇದೆ, ಆದರೆ ಈಗ ಮಳೆಗಾಲವಾದ ಕಾರಣ ಹುಲಿಯು ಸಿಗುವ ಸಾಧ್ಯತೆ 10% ಮಾತ್ರ” ಎಂದಾಗ ಮಕ್ಕಳೂ ಸೇರಿದಂತೆ ನಮಗೆಲ್ಲರಿಗೂ ಬಹಳ ನಿರಾಸೆಯಾಯಿತು. ಬೇಸಗೆಯಲ್ಲಿ ನೀರು ಕುಡಿಯಲು ಹಾಗೂ ನೀರಿನಲ್ಲಿ ಮುಳುಗುಹಾಕಲು ಹುಲಿಗಳು ಕಾಡಿನೊಳಗಿನಿಂದ ಹೊರಬಂದು ಹಿನ್ನೀರಿನೆಡೆಗೆ ಸಾಗುವ ಕಾರಣ ಆ ಸಂದರ್ಭದಲ್ಲಿ ಹುಲಿಗಳು ಹೆಚ್ಚಾಗಿ ಕಾಣಸಿಗುತ್ತವೆ ಎಂಬುದು ಡ್ರೈವರ್ ನ ವಿವರಣೆಯಾಗಿತ್ತು.

ನಾಗರಹೊಳೆ ಅಭಯಾರಣ್ಯದೊಳಗೆ ನಾವು ಹೊಕ್ಕಂತೆಯೇ ನಮಗೆ ಎದುರಾದ ಪ್ರಾಣಿ ಜಿಂಕೆ. ಬಿಳಿ ಚುಕ್ಕೆಯುಳ್ಳ ಜಿಂಕೆಗಳು ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದವು. ಕಾಡಿನ ಎಲ್ಲಾ ಮಾಂಸಾಹಾರಿ ಪ್ರಾಣಿಗಳ ಆಹಾರ ಶೃಂಖಲೆಯ ಮೊದಲ ಕೊಂಡಿಯಾಗಿರುವ ಜಿಂಕೆಗಳು ಕಾಡಿನಲ್ಲಿ ಅಷ್ಟು ಸಂಖ್ಯೆಯಲ್ಲಿ ಉಳಿದುಕೊಂಡಿರುವುದು ಪ್ರಕೃತಿಯ ವಿಸ್ಮಯವಲ್ಲದೇ ಬೇರೇನೂ ಅಲ್ಲ! ಸ್ವಲ್ಪ ಹೊತ್ತಿನ ನಂತರ ಬಹಳ ದಷ್ಟಪುಷ್ಟವಾಗಿದ್ದ ಕಾಡುಕೋಣಗಳ ಹಿಂಡು ನಮಗೆದುರಾಯಿತು. ಕಾಡೆಮ್ಮೆಗಳು ಹಾಗೂ ಕರುಗಳು ಆ ಹಿಂಡಿನಲ್ಲಿದ್ದವು. ನಮ್ಮ ವಾಹನ ಕಾಡುಕೋಣಗಳ ಸಮೀಪದಲ್ಲಿಯೇ ಸಾಗಿದರೂ ಅವುಗಳು ನಮ್ಮನ್ನು ನೋಡೇ ಇಲ್ಲವೆಂಬಂತೆ ವರ್ತಿಸಿದವು. ಸ್ವಲ್ಪ ಮುಂದೆ ಮಳೆಯಿಂದಾಗಿ ಮೆತ್ತನೆಯಾದ ಮಣ್ಣು ಇದ್ದ ಪ್ರದೇಶದಲ್ಲಿ ಹುಲಿಯ ಹೆಜ್ಜೆಗುರುತು ಇದ್ದುದನ್ನು ನಮಗೆ ಡ್ರೈವರ್ ತೋರಿಸಿದ.

ಕಾಡಿನಲ್ಲಿ ಒಂದು ಗಂಟೆ ಸುತ್ತಾಡಿದ ನಂತರ ಡೈವರ್ ಗೆ ಯಾವುದೋ ಪ್ರಾಣಿಯ ಸದ್ದು ಕೇಳಿಸಿದಂತಾಗಿ ವಾಹನವನ್ನು ನಿಲ್ಲಿಸಿ ’ಕಾಲ್’ ಕೇಳಿಸುತ್ತಿದೆ ಎಂದು ಹೇಳಿದ. ಹುಲಿ, ಚಿರತೆಗಳಂಥ ಪ್ರಾಣಿಗಳ ಇರುವನ್ನು ವಾಸನೆಯಿಂದ ಪತ್ತೆಹಚ್ಚಿ ಇತರ ಪ್ರಾಣಿಗಳಿಗೆ ಸೂಚನೆ ಕೊಡಲು ಜಿಂಕೆಗಳು ವಿಚಿತ್ರವಾಗಿ ಕೂಗುವ ಸದ್ದನ್ನು ’ಕಾಲ್’ ಎಂದು ಕರೆಯಲಾಗುತ್ತದೆ. ಇಂಥ ’ಕಾಲ್’ ಗಳ ಆಧಾರದಲ್ಲಿ ಹುಲಿ, ಚಿರತೆಗಳ ಇರುವಿಕೆ ಪತ್ತೆಹಚ್ಚುವುದರಲ್ಲಿ ಸಫಾರಿ ಡ್ರೈವರ್ ಗಳು ಬಹಳ ನಿಷ್ಣಾತರು. ನಮ್ಮ ವಾಹನದ ಪಕ್ಕದಲ್ಲಿದ್ದ ಜಿಂಕೆಯು ರಸ್ತೆಯ ಇನ್ನೊಂದು ಕಡೆಗೆ ನೋಡಿ ಭಯ ವಿಹ್ವಲತೆಯಿಂದ ಒಂದೇ ಸಮನೆ ಸದ್ದು ಮಾಡುತ್ತಿತ್ತು. ರಸ್ತೆಯಿಂದ ಸ್ವಲ್ಪ ದೂರದಲ್ಲೆಲ್ಲೋ ಪೊದೆಗಳ ಎಡೆಯಲ್ಲಿ ಹುಲಿ ಅಥವಾ ಚಿರತೆಯಿರುವುದು ಖಚಿತವಾಯಿತು. ಹುಲಿಯ ದರ್ಶನಕ್ಕೆಂದು ನಾವೆಲ್ಲಾ ಸದ್ದು ಮಾಡದೆ ಉಸಿರು ಬಿಗಿ ಹಿಡಿದು ಕಾದೆವು. ಆದರೆ ಕ್ರಮೇಣ ಜಿಂಕೆಯು ಕೂಗುವುದನ್ನು ಕಡಿಮೆ ಮಾಡಿ ಕೊನೆಗೆ ಕಾಡಿನಲ್ಲಿ ಮಾಯಯಿತು. ಆಗ ಡೈವರ್ ಹುಲಿಯು ದೂರ ಸಾಗಿದೆ ಎಂದು ಹೇಳಿ ಗಾಡಿಯನ್ನು ಸ್ಟಾರ್ಟ್ ಮಾಡಿದಾಗ ಹುಲಿಯು ಕಾಣಸಿಗುತ್ತದೆ ಎಂದು ಕುತೂಹಲದಿಂದ ಸಾಗಿದ್ದ ನಮಗೆಲ್ಲಾ ಬಹಳ ನಿರಾಸೆಯಾಯಿತು. ಕಾಡಿನ ಇನ್ನೊಂದು ಕಡೆಯಲ್ಲಿ ಆನೆಗಳಿವೆ ಎಂದು ಡ್ರೈವರ್ ಫೋನಿಗೆ ಇನ್ನೋರ್ವ ಸಫಾರಿ ಡ್ರೈವರ್ ಮೆಸೇಜ್ ಮಾಡಿದಾಗ ನಮ್ಮ ವಾಹನವು ಅಲ್ಲಿಗೆ ಧಾವಿಸಿತು. ಅಲ್ಲಿ 2-3 ಆನೆಗಳು ಮೇದುಕೊಂಡು ಇದ್ದವು. ಅಷ್ಟಾಗುವಾಗಲೇ ಸಂಜೆ 6 ಗಂಟೆಯಾದುದರಿಂದ ನಮ್ಮ ವಾಹನವು ಕ್ಯಾಂಪಿಗೆ ಹಿಂದಿರುಗಿತು.

elephant

ಎರಡನೇ ದಿನ ಬೆಳಗ್ಗೆ ಆರು ಗಂಟೆಗೇ ನಮ್ಮ ಸಫಾರಿ ವಾಹನ ಕಾಡಿನ ಇನ್ನೊಂದು ಮುಗ್ಗುಲಿನ ಕಡೆಗೆ ಸಾಗಿತು. ಕಬಿನಿಯ ಹಿನ್ನೀರಿನ ಬಳಿಗೆ ವಾಹನವನ್ನು ಡ್ರೈವರ್ ಒಯ್ದ ಸಂದರ್ಭದಲ್ಲಿ ಹಿನ್ನೀರಿನ ಮತ್ತೊಂದು ಭಾಗದ ಕಾಡಿನಿಂದ ಜಿಂಕೆಗಳ ಕಾಲ್ ಕೇಳಿಸಿತು. ಕೂಡಲೇ ನಮ್ಮ ವಾಹನ ಕಾಲ್ ಕೇಳಿಸಿದೆಡೆಗೆ ಸಾಗಿತು. ಅಲ್ಲಿ ಜಿಂಕೆಗಳ ಒಂದು ಹಿಂಡೇ ಇತ್ತು. ಹಿಂಡಿನಲ್ಲಿದ್ದ ಕೆಲವು ಜಿಂಕೆಗಳು ಅಪಾಯದ ಕರೆಗಳನ್ನು ಮಾಡುತ್ತಿದ್ದುವು. ಅವುಗಳ ಜೊತೆಗೆ ಮರದ ಮೇಲಿದ್ದ ಸಿಂಗಳೀಕಗಳು ಹಾಗೂ ಕೋತಿಗಳೂ ಕಿರುಚುತ್ತಿದ್ದವು. “ಸಿಂಗಳೀಕಗಳು ಮತ್ತು ಕೋತಿಗಳು ಸುಮ್ಮನೇ ’ಕಾಲ್’ ಮಾಡುವುದಿಲ್ಲ, ಅವುಗಳು ಮರದ ಮೇಲೆ ಇರುವುದರಿಂದ ಅವುಗಳಿಗೆ ಹುಲಿ ಚಿರತೆಗಳ ಚಲನೆಗಳು ಬಹಳ ಸ್ಪಷ್ಟವಾಗಿ ಕಾಣುವುದರಿಂದ ಅವುಗಳ ಎಚ್ಚರಿಕೆಯ ಕೂಗು ಯಾವತ್ತೂ ಸತ್ಯವಾಗಿರುತ್ತವೆ, “ಕಾಲ್’ ಬಹಳ ಸ್ಟ್ರಾಂಗ್ ಆಗಿರುವ ಕಾರಣ ಬಹಳ ಹತ್ತಿರದಲ್ಲೆಲ್ಲೋ ಹುಲಿ ಅಥವಾ ಚಿರತೆ ಇದೆ” ಎಂದು ಡೈವರ್ ಹೇಳಿದ. ಅಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕಾದೆವು. ಆದರೆ ಕ್ರಮೇಣ ಹುಲ್ಲೆಗಳ ಕೂಗು ದೂರವಾಯಿತು, ಕೋತಿಗಳ ಗಲಾಟೆಯೂ ಕಡಿಮೆಯಾಯಿತು. ಈ ಬಾರಿಯೂ ಹುಲಿಯ ದರ್ಶನ ಕೂದಲೆಳೆಯ ಅಂತರದಲ್ಲಿ ತಪ್ಪಿಹೋಯಿತು!

ಸ್ವಲ್ಪ ಹೊತ್ತಿನ ಬಳಿಕ ಇನ್ನೋರ್ವ ಸಫಾರಿ ಡ್ರೈವರ್ ನಮ್ಮ ಡ್ರೈವರ್ ಗೆ ಮೆಸೇಜ್ ಮಾಡಿ ಸ್ವಲ್ಪ ದೂರದಲ್ಲಿ ಹುಲಿಯೊಂದು ಸಫಾರಿ ರಸ್ತೆಯ ಮೇಲೆ ಮಲಗಿಕೊಂಡಿದೆ ಎಂದು ತಿಳಿಸಿದನು. ಕೂಡಲೇ ನಮ್ಮ ವಾಹನ ಆ ಕಡೆಗೆ ಸಾಗಿತು. ಅಲ್ಲಿ ಐದಾರು ವಾಹನಗಳು ನಿಂತಿದ್ದವು. ಆದರೆ ನಾವು ಅಲ್ಲಿಗೆ ತಲುಪುವ ವೇಳೆಗೆ ಹುಲಿ ಕಾಡಿನೊಳಗೆ ಸೇರಿಕೊಂಡಾಗಿತ್ತು. ನಾವು ಅರ್ಧಗಂಟೆ ಅಲ್ಲಿ ಕಾದೆವು. ಹುಲಿಯ ಸುಳಿವೇ ಇಲ್ಲ. ಒಂದೊಂದಾಗಿಯೇ ವಾಹನಗಳು ಅಲ್ಲಿಂದ ಜಾಗ ಖಾಲಿ ಮಾಡಲು ತೊಡಗಿದವು. ಬೇಸತ್ತ ನಮ್ಮ ವಾಹನವೂ ಮುಂದೆ ಸಾಗಿತು. ಒಂದು ಕಿಲೋಮೀಟರ್ ಮುಂದೆ ಬಂದಾಗ ನಮ್ಮ ಡ್ರೈವರಿಗೆ ಏನನಿಸಿತೋ! ವಾಹನವನ್ನು ಹಿಂದಕ್ಕೆ ತಿರುಗಿಸಿ ಪುನ: ಮೊದಲು ವಾಹನವನ್ನು ನಿಲ್ಲಿಸಿದ್ದೆಡೆಗೆ ತಂದ. ಡ್ರೈವರನ ಹಳೆಯ ಅನುಭವವೋ, ಸಿಕ್ಸ್ತ್ ಸೆನ್ಸೋ , ಜಿಂಕೆಗಳ ಕಾಲ್ ಕೇಳಿಸಿತೋ ಯಾವುದೋ ಒಂದು ಆತನನ್ನು ಪುನ: ಹಿಂದೆ ಎಳೆದು ತಂದಿತು. ನಾವು ನೊಡಲು ಕಾತರಿಸುತ್ತಿದ್ದ ಪ್ರಾಣಿ ಹುಲಿ ಅಲ್ಲಿ ಗಂಭೀರವಾಗಿ ನಡೆಯುತ್ತಿತ್ತು. ನಾವೆಲ್ಲಾ ಸದ್ದಿಲ್ಲದೇ ಹುಲಿಯನ್ನು ಗಮನಿಸತೊಡಗಿದೆವು. ನಮ್ಮ ವಾಹನವು, ನಡೆಯುತ್ತಿದ್ದ ಹುಲಿಗೆ ಸಮಾನಾಂತರವಾಗಿ ತೀರಾ ಹತ್ತಿರದಿಂದ ಹುಲಿಯ ನಡಿಗೆಯಷ್ಟೇ ನಿಧಾನವಾಗಿ ಚಲಿಸತೊಡಗಿತು. ಹುಲಿಗೆ ನಮ್ಮ ಉಪಸ್ಥಿತಿಯ ಬಗ್ಗೆ ಕ್ಯಾರೇ ಇರಲಿಲ್ಲ. ಸುಮಾರು 7-8 ನಿಮಿಷಗಳ ಕಾಲ ನಮಗೆಲ್ಲಾ ದರ್ಶನ ಕೊಟ್ಟ ಹುಲಿ ಕಾಡಿನಲ್ಲಿ ಅಂತರ್ಧಾನವಾಯಿತು. ಅದು ಆರು ತಿಂಗಳ ವಯಸ್ಸಿನ ಮೂರು ಮರಿಗಳ ತಾಯಿ ಹುಲಿ ಎಂದು ಡ್ರೈವರ್ ನಮಗೆ ತಿಳಿಸಿದನು. ಅದಾಗಲೇ ಬೆಳಿಗ್ಗೆ 9 ಆಗುತ್ತಾ ಬಂದಿತ್ತು. ಹೊಟ್ಟೆ ಚುರುಗುಟ್ಟಲು ಶುರುವಾಗಿತ್ತು. ಆದರೆ ಸಹಜವಾದ ಕಾಡಿನಲ್ಲಿ ಸ್ವಚ್ಛಂದವಾಗಿದ್ದ ಹುಲಿಯನ್ನು ತೀರಾ ಹತ್ತಿರದಿಂದ ನೋಡಿದ ಸಂತೃಪ್ತಿ ನಮ್ಮದಾಗಿತ್ತು. ನಮ್ಮ ವಾಹನ ಕ್ಯಾಂಪಿನೆಡೆಗೆ ತಿರುಗಿತು.