- ಡಾ. ಅಮ್ಮಸಂದ್ರ ಸುರೇಶ್

ಭಾರತೀಯ ವಾಸ್ತುಶಿಲ್ಪಕ್ಕೆ ವಿಶೇಷವಾಗಿ ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಗಳೆಂದರೆ, ಬಾದಾಮಿಯ ಗುಹಾಂತರ ದೇವಾಲಯಗಳು. ಮರಳುಗಲ್ಲಿನ ಬೆಟ್ಟಗಳಲ್ಲಿ ಬಂಡೆಗಳನ್ನು ಕತ್ತರಿಸಿ ಈ ವಾಸ್ತುಶಿಲ್ಪಗಳನ್ನು ನಿರ್ಮಿಸಲಾಗಿದೆ. ಅಗಸ್ತ್ಯ ಸರೋವರದ ಹಿನ್ನೆಲೆಯಲ್ಲಿ ಕಾಣುವ ಮರಳುಗಲ್ಲಿನ ಗುಹಾಂತರ ದೇವಾಲಯಗಳು, ಕಪ್ಪೆ ಆರ್ಯಭಟ್ಟನ ಶಾಸನ, ಬಾದಾಮಿಯ ಕೋಟೆ, ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಭೂತನಾಥ ದೇವಾಲಯಗಳ ಸಮೂಹಗಳು ದೃಶ್ಯ ವೈಭವಕ್ಕೆ ಹೆಸರುವಾಸಿಯಾಗಿವೆ. ಇಲ್ಲಿನ ವಿಶಿಷ್ಟ ಭೂದೃಶ್ಯಗಳಿಂದಾಗಿ ಬಾದಾಮಿ ಪ್ರವಾಸಿಗರ ಸ್ವರ್ಗ ಎನಿಸಿದೆ.

ಕರ್ನಾಟಕದ ಬಹುಭಾಗವನ್ನು ಕ್ರಿ.ಶ 6 ಮತ್ತು 8ನೇ ಶತಮಾನದ ನಡುವೆ ಬಾದಾಮಿ ಚಾಲುಕ್ಯರು ಆಳ್ವಿಕೆ ಮಾಡಿದರು. ವಾತಾಪಿ ಎಂದು ಕರೆಯಲಾಗುತ್ತಿದ್ದ ಬಾದಾಮಿ ಪಟ್ಟಣ ಚಾಲುಕ್ಯರ ರಾಜ್ಯಧಾನಿಯಾಗಿತ್ತು. ಚಾಲುಕ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ ಒಂದನೇ ಪುಲಕೇಶಿ ಕ್ರಿ.ಶ 6ನೇ ಶತಮಾನದಲ್ಲಿ ಬಾದಾಮಿಯನ್ನು ನಿರ್ಮಿಸಿದನು ಎಂಬ ಉಲ್ಲೇಖವಿದೆ.

badami

ಬೌದ್ಧ, ಹಿಂದೂ ಮತ್ತು ಜೈನ ದೇವಾಲಯಗಳ ಸಂಕೀರ್ಣವಾಗಿರುವ ಈ ಗುಹಾಂತರ ಮಂದಿರಗಳು ಎಲ್ಲೋರಾ ಗುಹೆಗಳೊಂದಿಗೆ ಗಮನಾರ್ಹವಾದ ಹೋಲಿಕೆಗಳನ್ನು ಹೊಂದಿವೆ. ಇಲ್ಲಿನ ಪ್ರತಿಯೊಂದು ಗುಹೆಗಳು ಬೇರೆ ಬೇರೆ ಪರಿಕಲ್ಪನೆ ಆಧಾರಿತ ಕೆತ್ತನೆಗಳನ್ನು ಹೊಂದಿರುವುದು ವಿಶೇಷ. ಮೊದಲ ಗುಹೆಯಲ್ಲಿ ಶಿವತಾಂಡವ ನೃತ್ಯದ ಚಿತ್ರಣವಿದೆ. ಎರಡನೆಯ ಮತ್ತು ಮೂರನೆಯ ಗುಹೆಗಳಲ್ಲಿ ಭಗವಾನ್ ವಿಷ್ಣುವನ್ನು ಮತ್ತು ವಿಷ್ಣುವಿನ ಅವತಾರಗಳನ್ನು ಚಿತ್ರಿಸಿದ್ದರೆ, ನಾಲ್ಕನೆಯ ಗುಹೆಯನ್ನು ಜೈನ ಧರ್ಮದ ತೀರ್ಥಂಕರುಗಳಿಗೆ ಸಮರ್ಪಿಸಲಾಗಿದೆ.

ಪ್ರತಿಯೊಂದು ಗುಹೆಯನ್ನು ಸರಳವಾದ ಮೆಟ್ಟಿಲುಗಳನ್ನು ಏರುವ ಮೂಲಕ ಪ್ರವೇಶಿಸಬಹುದು. ಹಿಂದೂ ದೇವತೆಗಳು ಮತ್ತು ನಟರಾಜನಾಗಿ ನೃತ್ಯ ಮಾಡುವ ಶಿವನ ಪ್ರಮುಖ ಕೆತ್ತನೆಯನ್ನು ಒಂದನೇ ಗುಹೆಯಲ್ಲಿ ಕಾಣಬಹುದು. ಈ ಗುಹೆಯಲ್ಲಿ ಕೆತ್ತಲ್ಪಟ್ಟಿರುವ ಶಿವ ಮತ್ತು ಪಾರ್ವತಿಯರ ಸಮ್ಮಿಲನದ ಅರ್ಧನಾರೇಶ್ವರನ ಉಬ್ಬುಶಿಲ್ಪವು ಚಾಲುಕ್ಯ ದೊರೆಗಳು ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಮೂಲಕ ಸಮಾನತೆಯ ದೂರದೃಷ್ಟಿಯನ್ನು ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ಗುಹೆಯ ಪ್ರತಿಯೊಂದು ಛಾವಣಿಯು ಕೆತ್ತಿದ ಫಲಕಗಳನ್ನು ಒಳಗೊಳ್ಳುವ ಮೂಲಕ ಆಕರ್ಷಕವಾಗಿದೆ. ಛಾವಣಿಯ ಮೇಲೆ ವಿದ್ಯಾಧರ ದಂಪತಿಗಳ ಚಿತ್ರಗಳು, ಪ್ರಣಯ ಮತ್ತು ಕಾಮಪ್ರಚೋದಕ ಮಿಥುನ ದೃಶ್ಯಗಳ ಜೋಡಿಗಳ ಕೆತ್ತನೆಗಳನ್ನು ಕಾಣಬಹುದು. ಗುಹೆಯಲ್ಲಿರುವ ಆಕೃತಿಗಳನ್ನು ಕೆತ್ತಿದ ಆಭರಣಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ.

ಗರ್ಭಗೃಹ, ಸಭಾಮಂಟಪ ಮತ್ತು ಮುಖ ಮಂಟಪಗಳನ್ನು ಹೊಂದಿರುವ ಎರಡನೆಯ ಗುಹೆಯ ಪ್ರವೇಶದ್ವಾರದ ಎರಡೂ ಬದಿಯಲ್ಲಿ ಬೃಹತ್ ದ್ವಾರಪಾಲಕರು ಪ್ರವಾಸಿಗರನ್ನು ಸ್ವಾಗತಿಸುತ್ತಾರೆ. ಒಳ ಪ್ರವೇಶಿಸಿದರೆ, ಹರಿ-ಹರ, ಅರ್ಧನಾರೀಶ್ವರ, ಮಹಿಷಮರ್ದಿನಿ, ದ್ವಿ ಮತ್ತು ಬಹು ಗಣೇಶ ಮತ್ತು ಕಾರ್ತಿಕೇಯರ ಕೆತ್ತನೆಗಳನ್ನು ಕಾಣಬಹುದು. ಪಶ್ಚಿಮ ಭಾಗದಲ್ಲಿ ವಿಸ್ತೃತ ಗುಹೆಯ ಮೇಲೆ ಪ್ರತ್ಯೇಕ ನಟರಾಜ ಶಿಲ್ಪದ ಪಕ್ಕದಲ್ಲಿ ವಿಷ್ಣುವಿನ ದೊಡ್ಡ ಉಬ್ಬುಶಿಲ್ಪವಿದೆ. ವಿಷ್ಣುವಿನ ದಂತಕಥೆಯನ್ನು ತ್ರಿವಿಕ್ರಮ ರೂಪದಲ್ಲಿ ಚಿತ್ರಿಸಲಾಗಿದೆ. ವರಾಹ ಕಲಾಕೃತಿಯನ್ನು ವೃತ್ತದಲ್ಲಿ ಚಿತ್ರಿಸಲಾಗಿದೆ. ದೇವಾಲಯದ ಒಳಗೆ ಭಾಗವತ-ಪುರಾಣದಂಥ ಹಿಂದೂ ಗ್ರಂಥಗಳ ಕಥೆಗಳನ್ನು ಪ್ರತಿನಿಧಿಸುವ ಅಲಂಕರಣಗಳನ್ನು ಕಾಣಬಹುದು.

ಸುರುಳಿಯಾಕಾರದ ಸರ್ಪದ ಮೇಲೆ ವಿಷ್ಣು ಕುಳಿತಿರುವ ಭವ್ಯ ಕೆತ್ತನೆ ಹಾಗೂ ಅನಂತ, ಭೂದೇವಿಯೊಂದಿಗೆ ವರಾಹ, ಹರಿಹರ. ನಿಂತಿರುವ ಭಂಗಿಯಲ್ಲಿ ನರಸಿಂಹ , ತ್ರಿವಿಕ್ರಮ ಮತ್ತು ವಿರಾಟ ವಿಷ್ಣುವಿನ ಶ್ರೇಷ್ಠ ಕೆತ್ತನೆಗಳನ್ನು ಮೂರನೆಯ ಗುಹೆಯಲ್ಲಿ ನೋಡಬಹುದು. ಇದು ಉಳಿದ ಎಲ್ಲಾ ಗುಹಾಲಯಗಿಂತ ಅತಿ ದೊಡ್ಡದಾಗಿದ್ದು, ಕರ್ನಾಟಕದ ಪ್ರಾಚೀನ ಕಲೆಯ ಪ್ರಬುದ್ಧ ಹಂತವನ್ನು ಪ್ರದರ್ಶಿಸುವ ಉತ್ತಮ ಕೆತ್ತನೆಗಳನ್ನು ಒಳಗೊಂಡಿದೆ.

badami 1

ಜೈನ ಧರ್ಮದ ಪ್ರತಿಮೆಗಳನ್ನು ಹೊಂದಿರುವ ನಾಲ್ಕನೇ ಗುಹೆಯು ಗರ್ಭಗೃಹದಲ್ಲಿ ಮಹಾವೀರನ ಮೂರ್ತಿ, ಮುಖ ಮಂಟಪದಲ್ಲಿ ಪಾರ್ಶ್ವನಾಥ-ಬಾಹುಬಲಿಯರ ಬೃಹತ್ ಶಿಲ್ಪಗಳಿವೆ. ಇಲ್ಲಿರುವ ಬಾಹುಬಲಿಯ ಮೂರ್ತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪುರಾತನವಾದುದು ಎಂಬ ಖ್ಯಾತಿಯನ್ನು ಹೊಂದಿದೆ. ಅಗಸ್ತ್ಯ ತೀರ್ಥದ ಪೂರ್ವ ದಿಕ್ಕಿನಲ್ಲಿರುವ ಭೂತನಾಥ ದೇವಾಲಯಗಳ ಸಮೂಹ ಅತ್ಯಂತ ರಮಣೀಯವಾಗಿದೆ. ಈ ದೇವಾಲಯಗಳ ಪೈಕಿ ಮೂರು ಅಂತಸ್ತುಗಳನ್ನು ಒಳಗೊಂಡಿರುವ ಮುಖ್ಯ ದೇವಾಲಯವಾದ ಭೂತನಾಥ ಮಂದಿರವು ದ್ರಾವಿಡ ಶೈಲಿಯಲ್ಲಿದ್ದು ಏಳರಿಂದ ಎಂಟನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಪಕ್ಕದಲ್ಲೇ ಇರುವು ಮಲ್ಲಿಕಾರ್ಜುನ ದೇವಾಲಯವು ನಾಗರ ಶೈಲಿಯಲ್ಲಿದ್ದು ಹನ್ನೊಂದರಿಂದ ಹನ್ನೆರಡನೇ ಶತಮಾನದ ಅವಧಿಯಲ್ಲಿ ಬಾದಾಮಿ ಚಾಲುಕ್ಯರು ನಿರ್ಮಿಸಿದರು ಎಂದು ಹೇಳಲಾಗುತ್ತದೆ.

ಅಗಸ್ತ್ಯ ತೀರ್ಥದ ಉತ್ತರ ಭಾಗದಲ್ಲಿರುವ ಗುಡ್ಡದ ಒಂದು ಬದಿಯಲ್ಲಿ ಕಪ್ಪೆ ಆರ್ಯಭಟ್ಟನ ಶಾಸನವಿದೆ. “ಸಾಧುಗೆ ಸಾಧು ಮಾಧುರ್ಯಂಗೆೆ ಮಾಧರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್, ಮಾಧವನೀತನ್ ಪೆರನಲ್ಲ” ಎಂಬ ಸಾಲುಗಳನ್ನು ಹೊಂದಿರುವ ಈ ಶಾಸನವು ಕರ್ನಾಟಕದ ಅಜ್ಞಾತ ವೀರನೊಬ್ಬನ ಗುಣಗಳನ್ನು ಮುಕ್ತವಾಗಿ ವಿವರಿಸುತ್ತವೆ. ಇದು ಕನ್ನಡದಲ್ಲಿ ಸಿಕ್ಕಿರುವ ಮೊಟ್ಟಮೊದಲ ತ್ರಿಪದಿಗಳನ್ನು ಒಳಗೊಂಡಿರುವ ಶಾಸನವಾಗಿದೆ.

ಬಾದಾಮಿಯ ಕೋಟೆ ಪ್ರಸಿದ್ಧ ಪುರಾತತ್ವ ತಾಣವಾಗಿದೆ. ಚಾಲುಕ್ಯ ಸಾಮ್ರಾಜ್ಯದ ಪ್ರಸಿದ್ದ ದೊರೆ ಪುಲಕೇಶಿ ನಿರ್ಮಿಸಿದ ಈ ಕೋಟೆ ಚಾಲುಕ್ಯರ ಪ್ರಮುಖ ಆಡಳಿತ ಸ್ಥಾನವಾಗಿತ್ತು. ಬಾದಾಮಿ ಪಾರಂಪರಿಕ ತಾಣಗಳು ಚಾಲುಕ್ಯರ ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿವೆ.