ಆಲಂಬಾಡಿಯೆಂಬ ಅಚ್ಚರಿ..
ಆಲಂಬಾಡಿಯಂತೂ ಜನಪದದಲ್ಲಿ ಅದರಲ್ಲೂ ಮಾದೇಶ್ವರ ಕಾವ್ಯದಲ್ಲಿ ಜನಜನಿತ. ಆಲಂಬಾಡಿ ಬಸಪ್ಪ, ಆಲಂಬಾಡಿ ಜುಂಜೇಗೌಡರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ! ಇತಿಹಾಸದೊಂದಿಗೆ ಬೆಸುಕೊಂಡಿರುವ ಆಲಂಬಾಡಿಯ ಜನಪದ ಇತಿಹಾಸ ತಿಳಿಯಲೇ ಬೇಕು..
- ಕೆ.ಶ್ರೀಧರ್ (ಕೆ.ಸಿರಿ)
ಆಲಂಬಾಡಿ ನೋಡಲೆಂದು ಕಾರಿನಲ್ಲಿ ಮಲೈ ಮಹದೇಶ್ವರ ಬೆಟ್ಟವನ್ನು ಬಳಸಿಕೊಂಡು ಹೊರಟೆವು. 'ಉಘೇ ಮಾದಪ್ಪ' ಎಂದು ಉಘೇ ಹಾಕಿ, ನಮ್ಮ ಕಾರು ಸೀದಾ ಗೋಪಿನಾಥಂ ರಸ್ತೆಯನ್ನು ಹಿಡಿಯಿತು. ಮಾರ್ಗ ಮಧ್ಯದಲ್ಲಿ ಕಿವಿಯ ಮೇಲೆ ಒಂದು ಮಲ್ಲಿಗೆ ಹೂವು, ಹಣೆಗೆ ಫಳ್ಳನೆ ಹೊಳೆವ ವಿಭೂತಿಯನ್ನಿಟ್ಟುಕೊಂಡು ನಾವು ಬರುವ ದಾರಿಯನ್ನೇ ಕಾಯುತ್ತಿದ್ದ ಗೈಡ್ ಹುಚ್ಚಯ್ಯ ಕೈಬೀಸಿ ನಮ್ಮ ಕಾರನ್ನು ನಿಲ್ಲಿಸಿ, ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡ.
ಲೈಟಾಗಿ ಬಿಸಿಲು ತನ್ನ ಕೆಲಸವನ್ನು ಶುರು ಮಾಡಿಕೊಂಡಿತ್ತು, ಹುಚ್ಚಯ್ಯನ ಮಾತು, ಕತೆಗಳನ್ನು ನೋಡುತ್ತಿದ್ದರೆ ಯಾಡನಂತೆ ಕಂಡರೂ ಆತ ಬಲೇ ಚಾಲಾಕಿ ಅಂತ ಮೈಲ್ ಬೆಟ್ಟ ತಲುಪಿದ ಮೇಲೆಯೇ ನಮಗೆ ಅರಿವಾಗುತ್ತದೆ. ದಾರಿಯುದ್ದಕ್ಕೂ ನವಿಲು, ಜಿಂಕೆಗಳ ದಂಡು ತಂಡೋಪ ತಂಡವಾಗಿ ಆ ಚಿಗುರೊಡೆದು ಹಸಿರು ಮೈದಾಳುವ ಅರಣ್ಯದಲ್ಲಿ ಮೇಯುತ್ತಿದ್ದವು. ಗೋಪಿನಾಥಂ ಗ್ರಾಮವನ್ನು ತಲುಪುವಾಗಲೇ ವೀರಪ್ಪನ್ ಮಾತು ಕತೆ ಆರಂಭವಾಯಿತು. ವೀರಪ್ಪನ್ ಕುರಿತಾಗಿ ಮಾತನಾಡುವಾಗ ಹುಚ್ಚಯ್ಯ "ಅಯ್ಯೋ ಬನ್ನಿ ಸಾರ್ ಆ ಕಾಲದಲ್ಲಿ ನಮ್ಮಂತ ಕಳ್ರೇ ಇರ್ಲಿಲ್ಲ. ನಾವು ಮೈಲ್ ಬೆಟ್ಟ ಹತ್ತಿ ಬಿದಿರ್ ಬೊಂಬಗಳ ಕದಿತಿದ್ವಿ, ಫಾರೆಸ್ಟ್ರು ಕೈಗೆ ತಗಲಾಕಂಡ್ರೆ ನಾವು ಇಲ್ಲೆ ಹತ್ತಿರದಲ್ಲಿ ಯೀರಪ್ಪನ ನೋಡಿದ್ವಿ ಅಂತೇಳಿ ತಪ್ಪಿಸ್ಗೋತಿದ್ವಿ" ಎಂದು ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸಿದ.

ಮಯಿಲ್ ಮಲೈ ಎಂಬ ಅಚ್ಚರಿ
ಗೋಪಿನಾಥಂ ಸಫಾರಿ ಕೇಂದ್ರದಲ್ಲಿ ಸಫಾರಿ ವಾಹನವನ್ನೇರಿ ಮಯಿಲ್ ಬೆಟ್ಟದ ಕಡೆಗೆ ಹೊರಟೆವು. ಪ್ರಯಾಣ ಸಾಗಿ ಸಾಲುಬೆಟ್ಟಗಳ ಸರಮಾಲೆಯ ನಡುವೆ ದಟ್ಟ ಕಾನನದ ನಡುವೆ, ಕಾಡು ಹಾದಿಯಲ್ಲಿ ಸಾಗಿ ಮಯಿಲ್ ಬೆಟ್ಟದ ಕಡೆಗೆ ಬಂದಿಳಿದೆವು.
ಮಯಿಲ್ ಮಲೈಯನ್ನು ನೋಡಿದ ಹುಚ್ಚಯ್ಯ ಅತೀವ ಸಂತೋಷದಿಂದ "ನೋಡ್ಕಳೀ ಸಾರ್ ಇದೇ ಮೈಲ್ ಬೆಟ್ಟ" ಎಂದು ಹೇಳುತ್ತಾ ಯರ್ಕೆಯಂ ಹಳ್ಳದ ಕಡೆ ಹೊರಟ. ಈ ಯರ್ಕೆಯಂ ಹಳ್ಳದತ್ತರ ಹಿಂದ ಶಿವ ಭಕ್ತರು ವಾಸಿಸ್ತಿದ್ರಂತೆ? ಇಲ್ಲಿ ಸಾಕಷ್ಟು ಹಸುಗಳು ಇದ್ದಿದ್ದರಿಂದ ಹಾಲು, ತುಪ್ಪದ ಜಿಡ್ಡು ಕೈಗೆ ಎರಕೊಳ್ಳೊದಂತೆ ಅಂದ್ರೆ ಕೈಗೆಲ್ಲ ಮೆತ್ತಿಗೊಳ್ಳೊದಂತೆ ಪಶುಪಾಲನೆ ಸಮೃದ್ಧಿಯಿಂದ ಇತ್ತಂತೆ ಅದಕ್ಕೆ ಈ ಜಾಗನ ಯರ್ಕೆಯಂ ಹಳ್ಳಂತೇಳಿ ಹೆಸರು. ಕಾಡುಕನಕಾಂಬರ, ಗುಲಗಂಜಿ, ಜೇನಿನ ವಾಸನೆ ಬರೋ ಜಾಲ್ರೀ... ಹೂವಿನ ವಾಸನೆ ತೋರಿಸುತ್ತಾ ನಾಮದಳ್ಳಿ ಹನುಮಂತನ ಕಲ್ಲುಬಂಡೆಯ ತೋರಿಸಿ ಆ ಬಂಡೆ ಮೇಲೆ ಮೂಡಿದ್ದ ನಾಮನೂ ತೋರಿಸಿ "ಸಾರ್ ಇದು ನಾಮದಬಂಡೆ ಇದ್ರಿಂದಾನೆ ಈ ಜಾಗಕ್ಕೆ ಈ ಹೆಸರು ಬಂತು ಇಲ್ಲಿ ವೈಶ್ಣವರು ವಾಸ ಮಾಡ್ತಿದ್ದರು ಅಂತ ಪ್ರತೀತಿ ಇದೆ. ನೋಡಿ ದೊಡ್ಡಿ,ಗಾರೆಬಾವಿ, ಕೆರೆಗಳು, ಕಲ್ಲುಕಟ್ಟೆ ಅದೆ ಎಂದೇಳಿದಾಗ ನಾಮದಳ್ಳ ತನ್ನ ಪ್ರಾಚೀನ ಪರಂಪರೆಯ ಕುರುವುಗಳನ್ನು ಪುರಾಣ ಕೂಪದಂತೆ ನಮಗೆ ಪ್ರದರ್ಶಿಸುತ್ತಿತ್ತು. ಅಲ್ಲಿನ ಪರಿಸರ ನಮ್ಮಗಳಿಗೆ ತನ್ನ ತಲೆಮಾರಿನ ಕಥೆಯನ್ನು ಹೇಳಲು ಪ್ರಯತ್ನಿಸುವಂತೆ ಭಾಸವಾಯಿತು.
ಮುಂದುವರೆದು 'ಸಾರ್ ಅಗೋ ಕಾಣುತ್ತಲ್ಲ ಅದು ಪಂಚಲಾಣೆ, ಬೆಜ್ಜಲಾಣೆ ಡೊಡ್ಡಿಗಳು, ಅದು ಜೀಯಜ್ಜಿ ಮೂಲೆ, ಅದು ಕಲ್ಲಬಿದ್ದಡುಗು ಅಂತ ಮಳೆ ಉಯ್ದಾಗ ಕಲ್ಲು ಬಿದ್ದು ಅಡಿಕಳ್ತಿದ್ವಂತೆ ನೋಡಿ ಆ ದೂರದಲ್ಲಿ ಕಾಣ್ತಿದ್ದಲ್ಲ ಅದೇ ದೈಯ್ಯ ಬರೆ ನೋಡ್ಕಳಿ" ಎಂದು ಯಾವುದೋ ಗಿಡದ ಕಾಯನ್ನು ಕಿತ್ತು ಮೂಡಿ ನೋಡಿ ಅದು ಈ ಕಾಯಿಯಲ್ಲವೆಂಬ ನಿರಾಸೆ ಭಾವದಿಂದ ಹುಚ್ಚಯ್ಯ ವಾಪಸ್ ಬಂದ.

ಮೊದಲನೇ ಜೇನು ದೈಯ್ಯದ ಬರೆಗೆ...
ಕುತೂಹಲ ತಡೆಯಲಾರದೆ ಗುಂಪಿನಲ್ಲಿದ್ದವನೊಬ್ಬ "ಹುಚ್ಚಯ್ಯ ಈ ಜೀಯಜ್ಜಿ ಮೂಲೆ, ದೈಯ್ಯದ್ ಬರೆ ಬಗ್ಗೆ ಹೇಳಿ" ಎಂದರು. ಅದಕ್ಕವನು "ಸಾರ್ ಜೀಯಜ್ಜಿ ಮೂಲೆಯಲ್ಲಿ ಜೀಯಜ್ಜಿ ದೊಡ್ಡಿಯತ್ತಂತೆ ಅದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದ್ರೆ ದೈಯ್ಯದ ಬರೆಲಿ ಅಲ್ಲಿ ಯಾರೇ ಜೇನು ಕಿತ್ರು ಮೊದಲ್ನೆ ಜೇನ್ನ ದೈಯ್ಯದ ಬರೆಗೆ ಬಿಡಬೇಕು, ಅಪ್ಪಿತಪ್ಪಿ ಫಸ್ಟ್ ಜೇನ್ನೇನಾದ್ರು ತಿಂದ್ರು ಅನ್ಕಳಿ ದೈಯ್ಯದ ರೀತಿ ಜೇನು ಕಚ್ಚಿ ಸಾಯಿಸ್ತವೆ ಸಾರ್" ಎಂದು ನಮ್ಮನ್ನು ನಗೆಗಡಲಲ್ಲಿ ತೇಲಿಸಿದ. ನಾವು ಕೇಳುವ ಮೊದಲೇ ಈ ಮೈಲ್ ಬೆಟ್ಟ ಅಂದ್ರೆ ತಮುಳಲ್ಲಿ ಮೈಲ್ ಅಂದ್ರೆ ನವಿಲು ಮೈಲ್ ಅಂದ್ರೆ ಬೆಟ್ಟ ನವಿಲು. ಬೆಟ್ಟಾನ ತಮುಳ್ನಾಡ್ ಮೆಲ್ಲಳ್ಳಿಯೋರು ಮೈಲ್ ಬೆಟ್ಟ ಅಂತ ಕರಿತಾವೆ ಸರ್ ಎಂದೇಳೆ, ನೋಡಿ ಈ ಬೆಟ್ಟ ನೋಡೋಕು ಮೈಲ್ (ನವಿಲ್) ತರಾನೆ ಅದೆ ಎಂದು ತೋರಿಸಿದ. ಮಧ್ಯೆ ಮಾತಿಗಿಳಿದ ಹುಚ್ಚಯ್ಯನ ಸಹಚರ "ಅಷ್ಟೇ ಅಲ್ಲ ಸಾರ್ ಈ ಮೈಲ್ ಬೆಟ್ಟದ ಮೇಲೆ ಮಲ್ಲೇಶ್ವರ ದೇವಸ್ಥಾನ ಇದೆ. ತಮಿಳುನಾಡಿನ ಮೆಲ್ಲಳ್ಳಿಯೋರು ಈವರೆಗೂ ಕೂಡ ಪೂಜೆ ಮಾಡ್ತಾರೆ. ಮಾರಿಗುಡಿ, ನೀರುಬಾವಿ, ರಾಗಿಬೀಸೋ ಕಲ್ಲು ಅದೆ ಅಲ್ಲಿ. ಹಿಂದೆ ಊರಿತ್ತಂತೆ, ಹುಲಿ ಹಾವಳಿ ಹೆಚ್ಚಾಗಿ ಜನ ಊರು ಬಿಟ್ರಂತೆ ಸಾರ್" ಎಂದು ಹೇಳುತ್ತಲೇ ಆಲಂಬಾಡಿಯ ಕಡೆ ನಡೆದವು.
ಆಲಂಬಾಡಿಯ ಜನಪದ ಇತಿಹಾಸ
ಆಲಂಬಾಡಿಯಂತೂ ಜನಪದದಲ್ಲಿ ಅದರಲ್ಲೂ ಮಾದೇಶ್ವರ ಕಾವ್ಯದಲ್ಲಿ ಜನಜನಿತ. ಆಲಂಬಾಡಿ ಬಸಪ್ಪ, ಆಲಂಬಾಡಿ ಜುಂಜೇಗೌಡರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ! ಆಲಂಬಾಡಿ ಅಳೆದುಳಿದು ಅಲ್ಲಲ್ಲಿ ಚದುರಿ ಹೋದ ಮನೆಗಳ ಕಂಡರೂ ಅಲ್ಲಿರುವ ಮಣ್ಣಿನಲ್ಲಿ ನಾಂಡಚಿನ ಚೂರುಗಳು, ಮಡಿಕೆಯ ತುಂಡುಗಳು, ರಾಗಿಕಲ್ಲು, ಸಾಲಿಗ್ರಾಮ ಕಲ್ಲುಗಳು ವ್ಯವಸಾಯ ಮಾಡಿದ ಭೂಮಿಯಿಂದ ಸಸಿಗಳಂತೆ ಬಿರಿದುಕೊಂಡು ತನ್ನ ಮೂಲ ಅಸ್ಮಿತೆಯ ಅಸ್ತಿತ್ವವನ್ನು ತಾಳಲು ಹೆಣಗಾಡುತ್ತಿವೆ. ಪಾಳುಬಿದ್ದ ಕೋಟೆಯೊಂದನ್ನಾದರೂ ಉಳಿಸಿ ಎಂದು ಕಂಬನಿಯಿಡುತ್ತಿರುವಂತಿದೆ. ಊರಿಂದಾಚೆಗೆ ತನ್ನ ಮೇಲ್ಛಾವಣಿಯ ಮೇಲೆ ರಕ್ಕಸ ಗಾತ್ರದ ಆಲದ ಮರ ಬೇರೂರಿ ಬೆಳೆದಿದ್ದರೂ ನಾನೊಂದು ಮದ್ದಿನಕೋಣೆಯೆಂದು ಭದ್ರವಾಗಿ ನೆಲೆನಿಂತು ತನ್ನ ಪ್ರಾಚೀನತೆಯನ್ನು ಇಂದಿನ ಪೀಳಿಗೆಗೂ ಸಾರುವಂತಿದೆ. ಈ ಮುದ್ದಿನ ಮನೆಯು ತಮಿಳಿನ ಕೆಲವು ದಾಖಲೆಗಳಲ್ಲಿ 'ಮಾರಿಕೋಟೆ'? ಎಂದು ಕರೆಸಿಕೊಂಡಿದ್ದು ಮನೆಯ ಕಟ್ಟಡಕ್ಕೆ ಬಳಸಿರುವ ಇಟ್ಟಿಗೆ, ಗಾರೆ ಪ್ರಾಚೀನ ಶಿಲಾಯುಗದ ಕೊಂಡಿಯೆಂದರೆ ಬಹುಶಃ ತಪ್ಪಾಗಲಾರದು.
ಆಲಂಬಾಡಿಯ ಇತಿಹಾಸವನ್ನು ಹೇಳುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಶಿಥಿವಾಸ್ಥೆಯಲ್ಲಿದ್ದರೂ ಶೈವ ಮತ್ತು ವೈಷ್ಣವ ಪಂಥಗಳ ಅಸ್ತಿತ್ವ, ರಾಮಾನುಜಾಚಾರ್ಯರು ಈ ಭಾಗಕ್ಕೆ ಬಂದು ಹೋಗಿರಬಹುದೆಂಬ ಕುರುಹುಗಳನ್ನು ಪುಷ್ಠೀಕರಿಸುತ್ತದೆ. ದೇವಾಲಯವು ಮೂರ್ನಾಲ್ಕು ರಾಜಮನೆತನಗಳಿಂದ ಜೀರ್ಣೋದ್ಧಾರಗೊಂಡಿದೆಯಾದರೂ ಮೂಲ ಸಂಸ್ಥಾಪಕ ರಾಜಮನೆತನವನ್ನು ಗುರುತಿಸಲು ಪುರಾವೆಗಳಿಲ್ಲ. ಪ್ರಮುಖವಾಗಿ ಚೋಳರು, ಗಂಗರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ಸಾಮಂತರು ಹಾಗೂ ಮೈಸೂರು ರಾಜಮನೆತನಗಳ ಆಳ್ವಿಕೆಗಳನ್ನು ಅಂದಾಜಿಸಬಹುದು. ಆಲಂಬಾಡಿಯ ನೋಡಿದ ನಮಗೆ ಮನಸ್ಸಿನಲ್ಲಿ ಯಾವುದೊ ಭಾರವಾದ ಭಾವನೆ ಆವರಿಸತೊಡಗಿತು. ಮುಸ್ಸಂಜೆಯ ಸಮಯವಾದ್ದರಿಂದ ಮಾರ್ಗಮಧ್ಯೆ ಸೂರ್ತಾಸ್ತದ ಸುಂದರ ದೃಶ್ಯವನ್ನು ನೋಡಿ ಕಣ್ತುಂಬಿಕೊಂಡು ಮನೆಯ ಹಾದಿ ಹಿಡಿದೆವು.