ವಾಸಿಗಳಿಗೂ ಪ್ರಾಣಿಗಳಿಗೂ ಎಲ್ಲಿಲ್ಲದ ನಂಟು. ಪ್ರಾಣಿಗಳನ್ನು ನೋಡಲೆಂದೇ ಪ್ರವಾಸಿಗರು ದೇಶವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಪ್ರಾಣಿಗಳ ಛಾಯಾಗ್ರಹಣಕ್ಕಾಗಿ, ವಿಡಿಯೋದಲ್ಲಿ ಸೆರೆ ಹಿಡಿಯಲಿಕ್ಕಾಗಿ ಅರಣ್ಯಪ್ರವಾಸ ಮತ್ತು ಅರಣ್ಯವಾಸ ಮಾಡುವ ಆಸಕ್ತರಿದ್ದಾರೆ, ಅಧ್ಯಯನಕಾರರಿದ್ದಾರೆ, ಸಾಹಸಿಗಳಿದ್ದಾರೆ. ಇಲ್ಲಿ ಪ್ರಾಣಿಗಳು ಅಂದಾಕ್ಷಣ ನಮ್ಮ ಮನಸಿನಲ್ಲಿ ಬರುವುದು ವನ್ಯಜೀವಿಗಳ ಚಿತ್ರ ಮಾತ್ರ. ಆದರೆ ವಿಶ್ವ ಪ್ರಾಣಿಗಳ ದಿನ ಎಂಬುದು ವನ್ಯಜೀವಿಗಳ ದಿನ ಮಾತ್ರವಲ್ಲ, ಇದು ಜಗತ್ತಿನ ಎಲ್ಲ ಪ್ರಭೇದದ ಪ್ರಾಣಿಗಳಿಗಾಗಿ ಮೀಸಲಿರುವ ದಿನ. ಹಸು, ನಾಯಿ, ಬೆಕ್ಕುಗಳಿಂದ ಹಿಡಿದು ಜಲಚರ, ಉಭಯವಾಸಿಗಳ ತನಕ ಎಲ್ಲ ಜಾತಿಯ ಪ್ರಾಣಿಗಳನ್ನೂ ಒಳಗೊಂಡ ವಿಶ್ವ ಪ್ರಾಣಿಗಳ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 4ರಂದು ಆಚರಿಸಲಾಗುತ್ತದೆ.

ಅಂದ ಹಾಗೆ, ಈ ವರ್ಷದ ವರ್ಲ್ಡ್ ಅನಿಮಲ್ ಡೇ ಅತ್ಯಂತ ವಿಶೇಷವಾದದ್ದು. ಯಾಕಂದರೆ ಇದು ಶತಮಾನೋತ್ಸವ ವರ್ಷ. ವಿಶ್ವ ಪ್ರಾಣಿ ದಿನಕ್ಕೆ ಇಂದಿಗೆ ನೂರುವರ್ಷಗಳ ಸಂಭ್ರಮ. ಹೀಗಾಗಿ ಜಗತ್ತಿನ ಬಹಳಷ್ಟು ದೇಶಗಳು ಈ ವರ್ಷ ಅತ್ಯಂತ ಸಂಭ್ರಮದಿಂದ ಪ್ರಾಣಿದಿನ ಆಚರಿಸುತ್ತಿವೆ. ಈ ವರ್ಷದ ವಿಶ್ವ ಪ್ರಾಣಿಗಳ ದಿನದ ಧ್ಯೇಯ ವಾಕ್ಯ- ಸೇವ್ ಅನಿಮಲ್ಸ್, ಸೇವ್ ದ ಪ್ಲಾನೆಟ್. ಅಂದರೆ ’ಪ್ರಾಣಿಗಳನ್ನು ಉಳಿಸಿ, ಗ್ರಹವನ್ನು ಸಂರಕ್ಷಿಸಿ’. ಹೌದು. ಭೂಮಿಯಲ್ಲೊಂದು ಸಮತೋಲನ ಉಳಿಯಬೇಕು ಅಂದರೆ ಪ್ರಾಣಿಗಳ ಸಂರಕ್ಷಣೆ, ಪ್ರಾಣಿಗಳ ಪ್ರಭೇದಗಳ ಕಾಪಾಡಿಕೊಳ್ಳುವಿಕೆ ಅತ್ಯಂತ ಮುಖ್ಯ. ಇಲ್ಲಿ ಪ್ರತಿ ಪ್ರಾಣಿಗೂ ಒಂದೊಂದ ದನ ಮೀಸಲಿಡಲಾಗಿದೆ. ಪ್ರತಿ ಪ್ರಾಣಿಯನ್ನು ಉಳಿಸಲೂ ಅಭಿಯಾನಗಳು ನಡೆಯುತ್ತಿವೆ. ಪ್ರತಿ ಪ್ರಾಣಿಗೂ ಈ ಭೂಗ್ರಹದಲ್ಲಿ ಬದುಕುವ ಹಕ್ಕಿದೆ. ಅವುಗಳನ್ನು ಉಳಿಸುವ ಜವಾಬ್ದಾರಿ ಮನುಷ್ಯಪ್ರಾಣಿಯ ಮೇಲಿದೆ. ಈ ಜವಾಬ್ದಾರಿಯನ್ನು ನೆನಪಿಸುವುದು ವಿಶ್ವ ಪ್ರಾಣಿದಿನದ ಪ್ರಮುಖ್ಯ ಉದ್ದೇಶವೆಂದರೆ ತಪ್ಪಾಗದು.

ವಿಶ್ವ ಪ್ರಾಣಿ ದಿನದ ಹಿನ್ನೆಲೆ

ಪ್ರಾಣಿ ದಿನ ಮೊತ್ತಮೊದಲು ಆಚರಣೆಗೊಂಡಿದ್ದು 1925ರಲ್ಲಿ. ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿಯ ಜ್ಞಾಪಕಾರ್ಥವಾಗಿ ಅಕ್ಟೋಬರ್ 4ರಂದು ಇದು ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮಾರ್ಚ್ 4ರಂದು ಇದು ಜರ್ಮನಿಯ ಬರ್ಲಿನ್ ನಲ್ಲಿ ನಡೆದಿತ್ತು. ಐದು ಸಾವಿರ ಪ್ರಾಣಿಪ್ರಿಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ನಂಟರ ವಿಶ್ವಾದ್ಯಂತ ವ್ಯಾಪಿಸಿತು. 1929ರಿಂದ ಇದು ಪ್ರತಿ ವರ್ಷ ಅಕ್ಟೋಬರ್ 4ರಂದು ನಡೆದುಕೊಂಡು ಬರುತ್ತಿದೆ. ಇದು ಅಸ್ತಿತ್ವಕ್ಕೆ ಬರುವುದರ ಹಿಂದೆ ಹೆನ್ರಿಕ್ ಜಿಮ್ಮರ್ಮನ್ ಎಂಬ ಪ್ರಾಣಿಪ್ರಿಯನ ಅಪಾರ ಪರಿಶ್ರಮವಿದ. ಮೊದಲ ಪ್ರಾಣಿದಿನ ನಡೆದದ್ದು ಈತನ ನೇತೃತ್ವದಲ್ಲಿಯೇ. ಸೇಂಟ್ ಫ್ರಾನ್ಸಿಸ್ ಅಸಿಸಿ ಎಂಬ ಕ್ರೈಸ್ತ ಸಂತ ಪ್ರಾಣಿಗಳ ಬಗ್ಗೆ ಅತೀವ ಪ್ರೀತಿ ದಯೆ ಮತ್ತು ಕಾಳಜಿ ತೋರುತ್ತಿದ್ದುದರಿಂದ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ಇಂದಿಗೆ ಜಗತ್ತಿನ ತೊಂಬತ್ತಕ್ಕೂ ಹೆಚ್ಚು ದೇಶಗಳು ಅಕ್ಟೋಬರ್ ನಾಲ್ಕರಂದು ವಿಶ್ವ ಪ್ರಾಣಿ ದಿನ ಆಚರಿಸುತ್ತಿದ್ದು, ಅದರಲ್ಲಿ ಭಾರತವೂ ಒಂದಾಗಿದೆ. ಪ್ರಾಣಿಗಳ ಕಲ್ಯಾಣ ಜೀವವೈವಿಧ್ಯದ ಸಂರಕ್ಷಣೆ, ಮನುಷ್ಯ-ಪ್ರಾಣಿ ನಡುವಣ ಸಂಬಂಧ, ಇವೆಲ್ಲವೂ ಪ್ರಾಣಿದಿನದ ಚರ್ಚಾ ವಿಷಯಗಳಾಗಿವೆ.

WORLD ANIMAL DAY

ಭಾರತದ ಇಲ್ಲಿಯೂ ಲೀಡರ್!

ಜೀವವೈವಿಧ್ಯ ವಿಚಾರಕ್ಕೆ ಬಂದರೆ ಭಾರತ ವಿಶ್ವದ ಹದಿನೇಳು ದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ. ಮೆಗಾಡೈವರ್ಸ್ ರಾಷ್ಟ್ರಗಳಲ್ಲಿ ಭಾರತಕ್ಕೆ ಸ್ಥಾನವಿದೆ. ಭೂಮಂಡಲದಲ್ಲಿ ಭಾರತ ಆವರಿಸಿರೋದು ಕೇವಲ 2.4% ಮಾತ್ರ. ಆದರೆ ಪ್ರಪಂಚದ ಸುಮಾರು ಎಂಟು ಪರ್ಸೆಂಟ್ ಪ್ರಾಣಿ ಪ್ರಭೇದಗಳು ಭಾರತದಲ್ಲಿವೆ ಎಂಬುದು ಅಚ್ಚರಿಯ ಅಂಕಿಅಂಶ. ಕೇವಲ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಾಣಿ ಪ್ರಭೇದಗಳಿವೆ. ಸಸ್ತನಿಗಳ ಪ್ರಭೇದವೇ ಸುಮಾರು ನಾಲ್ಕುನೂರನ್ನು ಮೀರುತ್ತದೆ. ಭಾರತದಲ್ಲಿ 1200ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ. ಐನೂರಕ್ಕೂ ಹೆಚ್ಚು ಹಾವು ಹುಪ್ಪಟೆಯಂಥ ಸರೀಸೃಪಗಳು ನಮ್ಮಲ್ಲಿವೆ. ಉಭಯವಾಸಿ ಅಂದಾಕ್ಷಣ ನಮಗೆ ಗೊತ್ತಿರುವುದು ಕಪ್ಪೆಯೊಂದೇ. ಆದರೆ ಭಾರತದಲ್ಲಿ ನಾಲ್ಕುನೂರಕ್ಕೂ ಹೆಚ್ಚು ಉಭಯವಾಸಿ ಪ್ರಭೇದಗಳಿವೆ. ಎರಡೂವರೆ ಸಾವಿರಕ್ಕೂ ಹೆಚ್ಚು ಜಾತಿಗಳ ಮೀನುಗಳು ನಮ್ಮಲ್ಲಿವೆ. ಹುಲಿ, ಸಿಂಹ, ಏಷಿಯನ್ ಆನೆಗಳು, ಖಡ್ಗಮೃಗ, ಹಿಮ ಚಿರತೆ ಸೇರಿದಂತೆ ಭಾರತದಲ್ಲಿ ಕಂಡುಬರುವ ಪ್ರಾಣಿಗಳ ಸಂಖ್ಯೆ ದೊಡ್ಡದು. ವಿಶ್ವ ಸಂರಕ್ಷಣಾ ನಕ್ಷೆಯಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ ದಕ್ಕುವಲ್ಲಿ ಪ್ರಾಣಿಗಳ ಪಾತ್ರ ಹಿರಿದು.

ಭಾರತ ನಂಬರ್ ಒನ್

ಅಂಕಿಅಂಶಗಳ ಪ್ರಕಾರ ಭಾರತವೇ ಅತಿ ಹೆಚ್ಚಿ ಹುಲಿಗಳನ್ನು ಹೊಂದಿರುವ ದೇಶ. 1973ರಲ್ಲಿ 1800 ಹುಲಿಗಳನ್ನು ಹೊಂದಿದ್ದ ಭಾರತ ಈಗ ಮೂರೂವರೆ ಸಾವಿರ ಹುಲಿಗಳನ್ನು ತನ್ನ ಕಾಡಿನ ಒಡಲಲ್ಲಿ ಇಟ್ಟುಕೊಂಡಿದೆ. ಜಗತ್ತಿನಲ್ಲಿರುವ ಒಟ್ಟು ಹುಲಿಗಳಲ್ಲಿ ಶೇ.75ರಷ್ಟು ಹುಲಿಗಳು ಭಾರತದಲ್ಲೇ ಇವೆ. ಸಿಂಹಗಳು ಮಾತ್ರ ಈಗ ಗುಜರಾತ್ ನ ಗಿರ್ ಅರಣ್ಯಕ್ಕೆ ಸೀಮಿತವಾಗಿದೆ. ಕಳೆದ ವರ್ಷದ ಗಣತಿಯ ಪ್ರಕಾರ 674 ಸಿಂಹಗಳು ಭಾರತದಲ್ಲಿವೆ. ಖಡ್ಗಮೃಗದ ಸಂಖ್ಯೆಯಲ್ಲಿ ಭಾರತವೇ ಟಾಪರ್. ಒಂದು ಕೊಂಬಿನ ಖಡ್ಗಮೃಗಗಳು ಭಾರತದಲ್ಲಿ 2600ಕ್ಕೂ ಹೆಚ್ಚಿವೆ. ಇವು ಕೇವಲ ಕಾಜಿರಂಗ ನ್ಯಾಷನಲ್ ಪಾರ್ಕ್ ಒಂದರಲ್ಲೇ ಇವೆ.

ಕರ್ನಾಟಕದ ಪಾತ್ರವೂ ಇದೆ

ಯೆಸ್. ಪ್ರಾಣಿ ಜಗತ್ತಿಗೆ ಕರ್ನಾಟಕದ ಭೂಪಟದಲ್ಲಿ ವಿಶೇಷ ಜಾಗವಿದೆ. ಈ ರಾಜ್ಯದ ಇಪ್ಪತ್ತು ಪರ್ಸೆಂಟ್ ಭೂಮಿ ಕಾಡಿನಿಂದ ಆವೃತವಾಗಿದೆ. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶದ ಕಾಡುಗಳು ರಾಜ್ಯದ ಬಹುದೊಡ್ಡ ಆಸ್ತಿ. ಯುನೆಸ್ಕೋ ವಿಶ್ವಪರಂಪರೆ ಪಟ್ಟಿಯಲ್ಲಿ ಜಾಗಪಡೆದಿರುವ ಪಶ್ಚಿಮಘಟ್ಟದ ಕಾಡುಗಳಲ್ಲಿ ಅಪರೂಪದ ಪ್ರಾಣಿಗಳಿವೆ.

ಕರ್ನಾಟಕವೊಂದರಲ್ಲೇ 524 ಹುಲಿಗಳಿರೋದು ರಾಜ್ಯ ಹೆಮ್ಮೆ ಪಡುವ ವಿಷಯ. ಭಾರತದಲ್ಲಿ ಅತಿ ಹೆಚ್ಚು ಹುಲಿಗಳಿರುವುದು ಕರ್ನಾಟಕದಲ್ಲೇ. ಆನೆಗಳ ಸಂಖ್ಯೆಗೆ ಬಂದರೆ ರಾಜ್ಯಕ್ಕೆ ದ್ವಿತೀಯ ಸ್ಥಾನ. ಕೇರಳ ಪ್ರಥಮದಲ್ಲಿ ನಿಲ್ಲುತ್ತದೆ. ಇನ್ನು ಹಕ್ಕಿಗಳ ಪ್ರಭೇದವು ರಾಜ್ಯದಲ್ಲಿ ಐನೂರಕ್ಕೂ ಹೆಚ್ಚೇ ಇದೆ. ಹಂಪಿಯ ಪ್ರದೇಶದಲ್ಲೇ ಇನ್ನೂರಾ ಐವತ್ತು ಜಾತಿಯ ಹಕ್ಕಿಗಳು ಕಾಣಸಿಗುತ್ತವೆ. ಚಿರತೆಗಳ ಸಂಖ್ಯೆ ರಾಜ್ಯದಲ್ಲೇ ಅಧಿಕ. ಕರ್ನಾಟಕವನ್ನು ಚಿರತೆಗಳ ರಾಜ್ಯ ಅಂತಲೂ ಅನಧಿಕೃತವಾಗಿ ಕರೆಯಲಾಗಿದೆ. ಇಲ್ಲಿರುವ ಚಿರತೆಗಳ ಸಂಖ್ಯೆ ಎರಡು ಸಾವಿರಕ್ಕೂ ಅಧಿಕ.

ಅಭಯಾರಣ್ಯಗಳ ಅಭಯ

ಕರ್ನಾಟಕದಲ್ಲಿರುವಷ್ಟು ಅಭಯಾರಣ್ಯಗಳು ಇನ್ಯಾವ ರಾಜ್ಯದಲ್ಲೂ ಇಲ್ಲ. ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಬಂಡೀಪುರ, ಭದ್ರಾ ಹುಲಿ ಅಭಯಾರಣ್ಯ, ಕಾಳಿ ದಾಂಡೇಲಿ ಅರಣ್ಯ, ಬನ್ನೇರುಘಟ್ಟ, ಸಕ್ರೇಬೈಲ್, ರಾಣೆಬೆನ್ನೂರು, ಇವುಗಳ ಜತೆ ಗುಡವಿ, ರಂಗನತಿಟ್ಟು, ಥರದ ಪಕ್ಷಿಧಾಮಗಳಿಗೂ ಕೊರತೆಯಿಲ್ಲ.

ಬ್ಯಾಲೆನ್ಸ್ ತಪ್ಪುತ್ತಿದೆಯೇ?

ಪ್ರಾಣಿ ಸಂರಕ್ಷಣೆ ಎಂದಾಗ ಕೆಲವು ಪ್ರಶ್ನೆಗಳು ಸಹಜವಾಗಿ ಎದುರಾಗುತ್ತಿವೆ. ಕಾಡುಪ್ರಾಣಿಗಳು ಊರು ಪ್ರವೇಶಿಸಿ ಮನುಷ್ಯರ ಪ್ರಾಣಹಾನಿ ಮಾಡುತ್ತಿರುವುದು, ದಾಳಿಗಳು ಒಂದೆಡೆ ಕಂಡುಬರುತ್ತಿದ್ದರೆ, ಬೇಟೆ ಹೆಸರಲ್ಲಿ ಪ್ರಾಣಿಗಳನ್ನು ಕೊಲ್ಲುವ, ಮಾರಾಟಕ್ಕಾಗಿ ಪ್ರಾಣಿಗಳ ವಧಿಸುವ ಸುದ್ದಿಗಳೂ ನಿರಂತರವಾಗಿ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿ ಬೇಟೆ ಆಡಲಾಗುತ್ತಿದೆ. ಇನ್ನು ಸಾಕುಪ್ರಾಣಿಗಳ ವಿಚಾರದಲ್ಲೂ ಗೋಹತ್ಯೆ ಸಂಪೂರ್ಣವಾಗಿ ನಿಂತಿಲ್ಲ. ಬೀದಿನಾಯಿಗಳಿಂದ ಅಥವಾ ಒಟ್ಟು ನಾಯಿಸಂಖ್ಯೆಗಳಿಂದ ಸಮತೋಲನಕ್ಕೆ ಧಕ್ಕೆ ಆಗುತ್ತಿದೆ ಎಂಬ ಕೂಗೂ ಇದೆ. ಇಲ್ಲಿ ಮನಗಾಣಬೇಕಿರುವುದು ಏನು? ಪ್ರಾಣಿಗಳಿಗೂ ಭೂಮಿಯ ಮೇಲೆ ಬದುಕುವ ಹಕ್ಕು ಇದೆ. ಕಾಡುಪ್ರಾಣಗಳು ಊರಿಗೆ ನುಗ್ಗುತ್ತಿರುವುದಕ್ಕೆ ಕಾರಣ ಅವರ ಕಾಡಿಗೆ ನಾವು ನುಗ್ಗುತ್ತಿರುವುದು. ಅವುಗಳ ಆಹಾರ, ನೀರು ಇವೆಲ್ಲವೂ ಕಾಡುಗಳಲ್ಲಿ ಸಿಗದಂತಾಗಿರುವುದು. ಇದು ಒಪ್ಪಲೇಬೇಕು. ಅರಣ್ಯೋ ರಕ್ಷತಿಃ ರಕ್ಷಿತಃ ಅನ್ನೋ ಮಂತ್ರವೊಂದೇ ಪ್ರಾಣಿ ಮತ್ತು ಮನುಷ್ಯ ನಡುವೆ ಬ್ಯಾಲೆನ್ಸ್ ತರಬಲ್ಲದು.

ಕರ್ನಾಟಕ ಸುಮ್ಮನಿಲ್ಲ

ಹೌದು ಪ್ರಾಣಿಗಳ ಸಂರಕ್ಷಣೆಗೆ ರಾಜ್ಯ ಸಾಕಷ್ಟು ಅಭಿಯಾನಗಳನ್ನು ನಡೆಸಿದೆ. ಪಡೆಗಳನ್ನು ಇಟ್ಟಿದೆ.

ಟೈಗರ್ಸ್ ಕಿಂಗ್ ಡಮ್ ಮೂಲಕ ಇಂದಿಗೆ ಕರ್ನಾಟಕದಲ್ಲಿ ಐನೂರಕ್ಕೂ ಹೆಚ್ಚು ಹುಲಿಗಳನ್ನು ಉಳಿಸಿಕೊಳ್ಳಲಾಗಿದೆ. ಗಜಪಡೆ ಕಾವಲು ಮೂಲಕ ಆನೆಗಳನ್ನು ಕಾಪಾಡಿಕೊಂಡಿದ್ದೇವೆ. ಇಂದಿಗೆ ಜಂಬೂಸವಾರಿಯ ಮೂಲಕ ರಾಜ್ಯಕ್ಕೆ ಹೆಮ್ಮೆ ತರುತ್ತಿರುವ ಆನೆಗಳು ಗಜಪಡೆ ಕಾವಲು ಮಾಡಿದ ಅಭಿಯಾನದ ಫಲ. ಅದೇ ರೀತಿ ಹಂಪಿ ಹಕ್ಕಿ ಉತ್ಸವ, ಗಗನ ಚುಕ್ಕಿ ಬರ್ಡ್ ಫೆಸ್ಟ್ ಮುಂತಾದ ಕಾರ್ಯಕ್ರಮಗಳ ಮೂಲಕ ಹಕ್ಕಿಗಳನ್ನು ಉಳಿಸಿಕೊಳ್ಳುವ ಕೆಲಸವೂ ನಡೆದಿದೆ.

ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್

ಇದು ನಿಸ್ಸಂಶಯವಾಗಿ ರಾಜ್ಯದ ಹೆಮ್ಮೆ. ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಎಂಬ ಪರಿಕಲ್ಪನೆ ರಾಜ್ಯಾದ್ಯಂತ ವ್ಯಾಪಿಸಿ ಎಕೋಟೂರಿಸಂ ವಿಸ್ತರಣೆಯಾಗಿದ್ದು ರಾಜ್ಯದ ಮಟ್ಟಿಗೆ ಒಂದು ಕ್ರಾಂತಿ. ಇದರಿಂದಾಗಿ ಕಾಡು ಮತ್ತು ಮನುಷ್ಯರ ನಡುವೆ ಬಾಂಧವ್ಯ ಹೆಚ್ಚಾಗಿದೆ. ರಾಜ್ಯ ಪ್ರವಾಸಿಗಳು ಕಾಡಿನತ್ತ ಹೆಚ್ಚು ಒಲವು ಗೌರವ ತೋರುತ್ತಿದ್ದಾರೆ. ಪ್ರಾಣಿಗಳ ಜತೆಗಿನ ಸಂಪರ್ಕ ಸೇತು ನಿರ್ಮಾಣವಾಗಿದೆ.

JUNGLE LODGE  1

ನಾಯಿಬೆಕ್ಕುಗಳೂ ಪ್ರಾಣಿಗಳೇ!

ವಿಶ್ವ ಪ್ರಾಣಿಗಳ ದಿನ ಕೇವಲ ಕಾಡುಪ್ರಾಣಿಗಳಿಗೆ ಸೀಮಿತವಲ್ಲ. ನಾಯಿ, ಬೆಕ್ಕು, ಕೋತಿ, ಮೊಲ, ಹಸು, ಎತ್ತು, ಎಮ್ಮೆ, ಕುರಿ, ಕೋಳಿ ಕೂಡ ಈ ದಿನದ ಪ್ರಮುಖರೇ. ಇವುಗಳಿಗೂ ರಕ್ಷಣೆ, ಮಾನ್ಯತೆ ಬೇಕೇಬೇಕು. ಬದುಕುವ ಹಕ್ಕು ಅವುಗಳಿಗೂ ಇದೆ. ಆದರೆ ಅವು ಮನುಷ್ಯರಿಗೆ ಅಪಾಯ ತಂದೊಡ್ಡಬಾರದಷ್ಟೇ.
ಅಂಕಿಅಂಶದ ಪ್ರಕಾರ ಭಾರತದಲ್ಲಿ ಆರುಕೋಟಿಗೂ ಹೆಚ್ಚು ಬೀದಿನಾಯಿಗಳಿವೆಯಂತೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ನಾಯಿಕಡಿತದಿಂದ, ರೇಬಿಸ್ ನಿಂದ ಸಾಯುತ್ತಿದ್ದಾರಂತೆ. ಇಲ್ಲಿ ನಾಯಿಗಳನ್ನು ದೂರಲಾಗುವುದಿಲ್ಲ. ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಪ್ರಾಣಿಗಳ ಉಳಿವಿಗೆ ಮಾರ್ಗ

ಇದು ಚಿಕ್ಕವಯಸ್ಸಿಂದಲೇ ಮಕ್ಕಳಿಗೆ ಮೂಡಿಸಬೇಕಿರುವ ಜಾಗೃತಿ. ಶಾಲಾ ಪಠ್ಯಕ್ರಮದಿಂದಲೇ ವನ್ಯಜೀವಿ ಮತ್ತು ಪ್ರಾಣಿಗಳಾ ಬಗ್ಗೆ ಪ್ರೀತಿ ಹಾಗೂ ಅರಿವು ಮೂಡಿಸುವುದು ಅಗತ್ಯ. ಮಾತಿನಲ್ಲಿ ಪಾಠ ಕಲಿಯದಿದ್ದರೆ ದಂಡಂದಶಗುಣಂ ಭವೇತ್ ಎಂಬಂತೆ, ಕಾನೂನು ಮೂಲಕ ಅರಿವು ಮೂಡಿಸಬೇಕಾಗುತ್ತದೆ. ಅಕ್ರಮ ಬೇಟೆ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಬೇಕಾಗುತ್ತದೆ. ಸ್ಥಳೀಯ ಸಮುದಾಯಗಳನ್ನು ಒಳಗೊಂಡು ಕಾಡನ್ನು ಮತ್ತು ಪ್ರಾಣಿಗಳನ್ನು ಉಳಿಸುವ ಕೆಲಸ ಮಾಡುವ ಅಗತ್ಯವಿದೆ.ಜವಾಬ್ದಾರಿಯುತ ಪ್ರವಾಸೋದ್ಯಮ ನಾವೆಲ್ಲರೂ ಕಲಿಯಬೇಕಿರುವ ಇಂದಿನ ತುರ್ತು. ಪ್ರಾಣಿದಯೆ ನಮ್ಮ ಜೀವನದ ಭಾಗವಾಗಬೇಕಿದೆ. ಪ್ರಾಣಿಗಳನ್ನೂ ಬದುಕುವುದಕ್ಕೆ ಬಿಟ್ಟು ನಾವೂ ಬದುಕಬೇಕಿದೆ. ಆಗಲೇ ಈ ಪೃಥ್ವಿ ಸಮತೋಲನ ಕಾಪಾಡಿಕೊಂಡ ಉಳಿಯುತ್ತದೆ. ಸೇವ್ ಅನಿಮಲ್ ಸೇವ್ ದ ಪ್ಲಾನೆಟ್ ಧ್ಯೇಯವಾಕ್ಯಕ್ಕೆ ಬೆಲೆ ಕೊಟ್ಟು, ಈ ದಿನ ಪ್ರಾಣಿಗಳಿಗೊಂದು ವಿಶ್ ಮಾಡಿ. ಹ್ಯಾಪಿ ವರ್ಲ್ಡ್ ಅನಿಮಲ್ ಡೇ!

ವಿಶ್ವ ಪ್ರಾಣಿ ದಿನ -ಅಕ್ಟೋಬರ್ 4

ಸಂತ ಫ್ರಾನ್ಸಿಸ್ ಅಸ್ಸಿಸಿ ಸ್ಮರಣಾರ್ಥ ಆಚರಣೆ

ಧ್ಯೇಯ ವಾಕ್ಯ- ಸೇವ್ ಅನಿಮಲ್ ಸೇವ್ ದ ಪ್ಲಾನೆಟ್

ಇದು ಶತಮಾನೋತ್ಸವ ವರ್ಷ

ಪ್ರಸಿದ್ಧ ಘೋಷಗಳು

2022- ಶೇರ್ಡ್ ಪ್ಲಾನೆಟ್

2023-ಗ್ರೇಟ್ ಆರ್ ಸ್ಮಾಲ್ ಲವ್ ದೆಮ್ ಆಲ್

2024- ದ ವರ್ಲ್ಡ್ ಈಸ್ ದೆರ್ ಹೋಮ್ ಟೂ

ಪ್ರಾಣಿಸಂಘಗಳು

ಭಾರತದಲ್ಲಿ:

ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ

ಪೀಪಲ್ ಫಾರ್ ಅನಿಮಲ್ಸ್

ಪೀಟಾ

ಬ್ಲೂಕ್ರಾಸ್ ಆಫ್ ಇಂಡಿಯಾ

ಸರ್ವೋಹಮ್ ಅನಿಮಲ್ ಫೌಂಡೇಶನ್

ಕರ್ನಾಟಕದಲ್ಲಿ

ಕರ್ನಾಟಕ ಅನಿಮಲ್ ವೆಲ್ಫೇರ್ ಬೋರ್ಡ್

ಪ್ರಾಣಿ ರಕ್ಷಣೆಗೆ ಕಾನೂನು

ಪ್ರಿವೆನ್ಶನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ ಆಕ್ಟ್ 1960

ಡಾಗ್ ಬ್ರೀಡಿಂಗ್ ಅಂಡ್ ಮಾರ್ಕೆಟಿಂಗ್ ರೂಲ್ಸ್ 2017

ಅನಿಮಲ್ ಬರ್ತ್ ಕಂಟ್ರೋಲ್ ರೂಲ್ಸ್ 2023