• ಜಿತೇಂದ್ರ ಕುಂದೇಶ್ವರ

ಇವತ್ತಿನ ಕಾಲದಲ್ಲಿ ರಾಜಕಾರಣಿಯೊಬ್ಬರು ಸೈಕಲ್ ಹತ್ತಿ ನಾಲ್ಕು ಹೆಜ್ಜೆ ತುಳಿದರೆ ಸಾಕು, ಅದು ಬ್ರೇಕಿಂಗ್ ನ್ಯೂಸ್! ಫೊಟೋಶೂಟ್‌ಗಾಗಿ ಸೈಕಲ್ ಮೇಲೆ ಕುಳಿತರೆ ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಗುತ್ತದೆ. ಕ್ಯಾಮೆರಾಗಳು ಮುಗಿಬೀಳುತ್ತವೆ. ಆದರೆ, ಒಬ್ಬ ಶಾಸಕ ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಬರೋಬ್ಬರಿ 702 ಕಿಲೋಮೀಟರ್ ಸೈಕಲ್ ತುಳಿದು ಸಾಧನೆ ಮಾಡಿದರೂ ಸದ್ದುಗದ್ದಲವಿಲ್ಲ.

ಯಾಕೆ ಗೊತ್ತೇ? ಆ ಸಾಹಸ ಮಾಡಿದವರು ಎಸ್. ಸುರೇಶ್ ಕುಮಾರ್. ರಾಜಕಾರಣದ ಅಬ್ಬರವಿಲ್ಲದ, ಹಮ್ಮು-ಬಿಮ್ಮುಗಳಿಲ್ಲದ ಒಬ್ಬ 'ಸಜ್ಜನ' ರಾಜಕಾರಣಿ ಎಂಬುದೇ ಬಹುಶಃ ಅವರು ಸುದ್ದಿಯಾಗದಿರಲು ಕಾರಣ!

ಇದು ಕೇವಲ ಸವಾರಿ ಅಲ್ಲ, ಇದು ನೆನಪುಗಳ ಮೆರವಣಿಗೆ. ಡಿ. 28ಕ್ಕೆ ಸರಿಯಾಗಿ 51 ವರ್ಷಗಳ ಹಿಂದೆ, ಅಂದರೆ 1974ರಲ್ಲಿ ಯುವಕ ಸುರೇಶ್ ಕುಮಾರ್ ಅವರು ತಮ್ಮ ಸ್ನೇಹಿತರಾದ ವೆಂಕಟೇಶ್ ಮತ್ತು ಸೋಮನಾಥ್ ಜತೆ ಇದೇ ಹಾದಿಯಲ್ಲಿ ಸೈಕಲ್ ತುಳಿದಿದ್ದರು.

ಅಂದು ಕಿಸೆಯಲ್ಲಿ ಕಾಸಿರಲಿಲ್ಲ, ಸೈಕಲ್‌ನಲ್ಲಿ ಗೇರ್ ಇರಲಿಲ್ಲ, ರಸ್ತೆ ಚೆನ್ನಾಗಿರಲಿಲ್ಲ. ಆದರೆ ಎದೆಯಲ್ಲಿ ಮಾತ್ರ ಸ್ವಾಮಿ ವಿವೇಕಾನಂದರ ಆದರ್ಶವಿತ್ತು. ಆ ಸ್ಮರಣೀಯ ಯಾತ್ರೆಯ ಸುವರ್ಣ ಮಹೋತ್ಸವದ ಅಂಗವಾಗಿ, ಈಗಿನ 70ರ ಹರೆಯದಲ್ಲೂ ಅದೇ ಚೈತನ್ಯದೊಂದಿಗೆ ರಾಜಾಜಿ ನಗರದ 'ಪೆಡಲ್ ಪವರ್' ತಂಡದ 12 ಜನರೊಂದಿಗೆ ಕೇವಲ 37 ಗಂಟೆಗಳಲ್ಲಿ ಕನ್ಯಾಕುಮಾರಿ ತಲುಪಿ ಅಚ್ಚರಿ ಮೂಡಿಸಿದ್ದಾರೆ.

Untitled design (36)

ಸೈಕ್ಲಿಂಗ್ ಎನ್ನುವುದು ಇವರಿಗೆ 'ಪ್ಯಾಶನ್'

ಸುರೇಶ್ ಕುಮಾರ್ ಅವರಿಗೆ ಸೈಕಲ್ ಎಂಬುದು ಚುನಾವಣೆ ಕಾಲದ ಸ್ಟಂಟ್ ಅಲ್ಲ. ಪಿಯುಸಿ, ಲಾ ಕಾಲೇಜು ಇರಲಿ ಅಥವಾ ವಕೀಲರಾಗಿ ಕೋರ್ಟಿಗೆ ಹೋಗುವ ಸಂದರ್ಭವಿರಲಿ; ಸೈಕಲ್ ಇವರ ನಿತ್ಯ ಸಂಗಾತಿ.

ವರ್ಷದಲ್ಲಿ 8000 ಕಿಮೀ.

ಒಬ್ಬ ಸಕ್ರಿಯ ರಾಜಕಾರಣಿ 2025ರ ಈ ವರ್ಷವೊಂದರಲ್ಲೇ ಇವರು ಬರೋಬ್ಬರಿ 8000 ಕಿಲೋಮೀಟರ್ ಸೈಕ್ಲಿಂಗ್ ಮುಗಿಸಿದ್ದಾರೆ ಎಂದರೆ ನಂಬಲೇಬೇಕು. ತಿರುಪತಿ, ಧರ್ಮಸ್ಥಳಕ್ಕೆ ಸೈಕಲ್ ಮೂಲಕವೇ ಹೋಗಿ ಬಂದ ಇವರು, ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಫಿಟ್ನೆಸ್ ಮಂತ್ರ

ಕೃಷ್ಣಗಿರಿ ಬಳಿ ಮಗಳೊಂದಿಗೆ ಸೈಕ್ಲಿಂಗ್ ಮಾಡುತ್ತಿದ್ದ ಒಬ್ಬ ಶಾಲಾ ಶಿಕ್ಷಕನ ಭೇಟಿ ಯಾದೆ. ಕೇವಲ ಫ್ಯಾಶನ್ ಗೋಸ್ಕರ 8 ದಿನದಲ್ಲಿ 1090 ಕಿಮೀ ಕ್ರಮಿಸಿದ ಏಕಾಂಗಿ ಸೈಕ್ಲಿಸ್ಟ್‌ ವಿನೋದ್ ಕುಮಾರ್ ಭೇಟಿಯಾದೆ. ಜನರು ಮಾಲ್‌ಗಳಿಗೆ ಹೋಗಿ ಕೃತಕ ಗಾಳಿ ಸೇವಿಸುವ ಬದಲು, ಸೈಕಲ್ ಹತ್ತಿ ಪ್ರಕೃತಿಯ ಮಡಿಲಿಗೆ ಬರಬೇಕು. ವ್ಯಕ್ತಿ ಫಿಟ್ ಆದರೆ ಸಮಾಜ ಫಿಟ್ ಆಗುತ್ತದೆ" ಎನ್ನುತ್ತಾರೆ ಸುರೇಶ್ ಕುಮಾರ್.

ತಿರುವನಲ್ವೇಲಿಯಲ್ಲಿ ಮಾಜಿ ಎಂಪಿಯೊಬ್ಬರ ಮನೆಯಲ್ಲಿ ವಾಸ್ತವ್ಯ ಹೂಡಿ, ಹಳ್ಳಿ ಜನರ ಸಮಸ್ಯೆಗಳನ್ನು ಆಲಿಸಿದೆ. 1974ರಲ್ಲಿ ಹರ್ಕ್ಯುಲಸ್ ಸೈಕಲ್ ಇತ್ತು, ಟ್ರಾಫಿಕ್ ಕಡಿಮೆಯಿತ್ತು. ಇಂದು ಸುವರ್ಣ ಚತುಷ್ಪಥ ರಸ್ತೆಗಳಿವೆ, ಹೈಟೆಕ್ ಸೈಕಲ್‌ಗಳಿವೆ. ಆದರೆ ಅಂದೂ ಇಂದೂ ಬದಲಾಗದ್ದು ಎಂದರೆ ಸೈಕಲ್ ತುಳಿಯುವಾಗ ಸಿಗುವ ಆ 'ಪರಮಾನಂದ'ಎಂಬುದು ಸುರೇಶ್ ಕುಮಾರ್ ಮನದಾಳದ ಮಾತು.

ವಿವೇಕಾನಂದರ ಪಾದದಡಿ

ಕನ್ಯಾಕುಮಾರಿಯ ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಂಗಮ ಸ್ಥಳದಲ್ಲಿ ವಿವೇಕಾನಂದರ ಸ್ಮಾರಕವನ್ನು ಕಂಡಾಗ ಸುರೇಶ್ ಕುಮಾರ್ ಭಾವುಕರಾಗುತ್ತಾರೆ. 16ನೇ ವಯಸ್ಸಿನಲ್ಲಿ ಇದೇ ಸ್ಮಾರಕದ ನಿರ್ಮಾಣಕ್ಕೆ ಇವರು ಕೂಪನ್ ಮಾರಾಟ ಮಾಡಿ ಹಣ ಸಂಗ್ರಹಿಸಿದ್ದರು!

ಏಕನಾಥ್ ರಾನಡೆ ಅವರ ಸಾಹಸಗಾಥೆಯನ್ನು ನೆನೆಯುತ್ತಾ, ವಿವೇಕಾನಂದರ ಧ್ಯಾನ ಮಂಟಪದಲ್ಲಿ ಕುಳಿತಾಗ ಸಿಗುವ ಶಾಂತಿ ಇನ್ಯಾವ ಅಧಿಕಾರದಲ್ಲೂ ಇಲ್ಲ ಎಂಬುದು ಅವರ ನಂಬಿಕೆ.

ರಾಜಕೀಯ ಅಂದರೆ ಕೆಸರೆರಚಾಟದ ಈ ಕಾಲದಲ್ಲಿ, ಸೈಕಲ್ ಏರಿ ಆರೋಗ್ಯ ಮತ್ತು ಪರಿಸರದ ಪಾಠ ಮಾಡುವ ಸುರೇಶ್ ಕುಮಾರ್ ಅವರಂಥ 'ಸಜ್ಜನ' ನಾಯಕರು ಇಂದಿನ ಯುವಜನತೆಗೆ ಮಾದರಿ.