ಔಷಧ ಮರೆತರೆ ಆಪತ್ತು
ನನ್ನ ಸ್ನೇಹಿತರೊಬ್ಬರು ಅಮೆರಿಕ ಪ್ರವಾಸಕ್ಕೆ ಹೋಗಿ ಬಂದಿದ್ದರು. ಅವರನ್ನೊಮ್ಮೆ ಮಾತನಾಡಿಸಿ ಬರುವ ಅಂತ ನಾನು ಅವರ ಮನೆಗೆ ಹೋಗಿದ್ದೆ. ಹೇಗಿತ್ತು ಪ್ರವಾಸ ಅನ್ನೋ ಹೊತ್ತಿಗೆ ʻಮತ್ತೊಮ್ಮೆ ಹೋಗುವಾಗ ಈ ಥರದ ನಿರ್ಲಕ್ಷ ದೇವರಾಣೆ ಇನ್ಮುಂದೆ ಮಾಡಲ್ಲಪ್ಪೋʼ ಎಂದರು. ನಾನು ಅರೆರೆ ಏನಾಯ್ತೋ ಅಂತ ಕೇಳಿದೆ. ಅದಕ್ಕೆ ಅವರು ಏನಾಯ್ತೆಂಬುದನ್ನು ಹೇಳಿದ್ದು ಹೀಗೆ.
ನನ್ನ ಸ್ನೇಹಿತ ಅಮೆರಿಕ ಪ್ರವಾಸಕ್ಕೆ ಒಂದು ತಿಂಗಳ ಮೊದಲೇ ಯೋಜನೆ ರೂಪಿಸಿದ್ದ. ಅದಕ್ಕಾಗಿ ಚಳಿಯಲ್ಲಿ ತೊಡಲು ಡೌನ್ ಜಾಕೆಟ್, ಹಿತವಾದ ವಾತಾವರಣ ಇರುವ ಕಡೆಗೆ ಹೋದಾಗ ತೊಡಲು ಸಾಮಾನ್ಯ ಹತ್ತಿಯ ಬಟ್ಟೆ, ಬೂಟ್‌ಗಳು, ಹ್ಯಾಂಡ್ ಗ್ಲೌಸ್, ಮಾಸ್ಕ್ ಹೀಗೆ ಸಾಕಷ್ಟು ಬಟ್ಟೆಗಳನ್ನೂ ಕೊಂಡೊಯ್ದಿದ್ದ. ಅಮೆರಿಕದಲ್ಲಿ ಎಲ್ಲವೂ ಕಾಸ್ಟ್ಲಿ ಅಂತಲೇ ಇಲ್ಲಿಂದ ಅಷ್ಟು ಸಾಮಾನುಗಳನ್ನು ಭಾರವಾದರೂ ಹೊತ್ತುಕೊಂಡು ಹೋಗಿದ್ದ. ಹೀಗೆ ಪ್ರವಾಸ ಹೋದಾಗ ಅಲ್ಲಿನ ಸ್ಥಳೀಯ ಆಹಾರಗಳನ್ನು ಸವಿಯುವುದು ಅವರ ರೂಢಿಯಾಗಿತ್ತು. ಹಾಗಾಗಿ ಆಹಾರಕ್ಕೇನೂ ವ್ಯವಸ್ಥೆಗಳನ್ನು ಮಾಡಿಕೊಂಡಿರಲಿಲ್ಲ. ಅಲ್ಲಲ್ಲೇ ಆಗಾಗ್ಗೆ ಸಿಗುವ ಆಹಾರಗಳನ್ನು ಸ್ವಾಹಾ ಮಾಡಿ ಪ್ರವಾಸ ಮಾಡುವ ಉಸಾಬರಿ ನಾನು ಅವರಿಂದಲೇ ಕಲಿತಿದ್ದೇನೆ.
ಇದನ್ನೂ ಓದಿ: ವಿಶೇಷ ಚೇತನರಿಗೆ ಆಂಧ್ರಪ್ರದೇಶ ಸರಕಾರದಿಂದ ಉಚಿತ ಪ್ರಯಾಣ ಸೌಲಭ್ಯ
ಈಗ ಮುಖ್ಯ ವಿಷಯಕ್ಕೆ ಬರೋಣ. ಸ್ನೇಹಿತ ಪ್ರವಾಸಕ್ಕೆ ಎಲ್ಲವನ್ನೂ ಸಿದ್ಧವಾಗಿಸಿಕೊಂಡಿದ್ದ. ಆದರೆ ಪ್ರಥಮ ಚಿಕಿತ್ಸೆ ಮತ್ತು ಬಿಪಿ ಮಾತ್ರೆಗಳ ಹೊರತು. ಇದೇ ಮುಂದೆ ಅವರಿಗೆ ಸುಮಾರು 75 ಡಾಲರ್ ಬೆಲೆ ತೆರುವಂತೆ ಮಾಡಿತು. ಪ್ರವಾಸಕ್ಕೆ ಹೋಗುವ ದಿನ ಗಡಿಬಿಡಿಯಲ್ಲಿ ಬಿಪಿ ಮಾತ್ರೆಗಳಿದ್ದ ಡಬ್ಬಿಯನ್ನು ಬ್ಯಾಗ್‌ನೊಳಗೆ ಸೇರಿಸುವುದನ್ನು ಮರೆತು ಬಿಟ್ಟಿದ್ದರು. ಅಮೆರಿಕದಲ್ಲಿ ಹೆಚ್ಚುಕಮ್ಮಿ ಯಾವುದೇ ಔಷಧಗಳ ದರ ನಮ್ಮಲ್ಲಿಗಿಂತ ಹತ್ತಾರು ಪಟ್ಟು ದುಬಾರಿ. ಡಾಕ್ಟರ್‌ಗಳು ಪ್ರಿಸ್ಕ್ರಿಪ್ಷನ್ ಬರೆದು ನೀಡದ ಹೊರತು ಅಲ್ಲಿನ ಮೆಡಿಕಲ್ ಶಾಪ್‌ಗಳಲ್ಲೂ ಔಷಧಗಳನ್ನು ನೀಡುವುದಿಲ್ಲ. ಡಾಕ್ಟರ್‌ಗಳೋ ಅಪಾಯಿಂಟ್‌ಮೆಂಟ್ ಇಲ್ಲದೆ ಸುಲಭಕ್ಕೆ ಸಿಗುವುದೇ ಇಲ್ಲ. ಹೇಗೋ ನನ್ನ ಇನ್ನೊಬ್ಬ ಸ್ನೇಹಿತ ಅಲ್ಲಿ ವಾಸವಾಗಿದ್ದರಿಂದ ಅಲ್ಲಿ ಅವರ ಫ್ಯಾಮಿಲಿ ಡಾಕ್ಟರ್ ಜತೆಗೆ ಅಪಾಯಿಂಟ್‌ಮೆಂಟ್ ತೆಗೆಸಿಕೊಟ್ಟರು. 15 ದಿನಗಳ ನನ್ನ ಸ್ನೇಹಿತನ ಬಿಪಿಗೆ, ಡಾಕ್ಟರ್ ಫೀಸ್ ಸೇರಿ ತಗುಲಿದ ವೆಚ್ಚ ಬರೋಬ್ಬರಿ 75 ಡಾಲರ್‌ಗಳು. ಹೀಗೆ ನಿಮ್ಮೊಂದಿಗೂ ಆಗದಿರಲು ಈ ಕೆಳಗಿನ ಕ್ರಮಗಳನ್ನು ಪಾಲಿಸಬಹುದು.
ಭಾರತದಲ್ಲೇ ಕಮ್ಮಿಬೆಲೆ.

ʻಭಾರತ ವಿಶ್ವದ ಔಷಧಾಲಯʼ ಎಂದು ಈಗಾಗಲೇ ಗುರುತಿಸಿಕೊಂಡಿದೆ. ಭಾರತ ವಿಶ್ವದಲ್ಲೇ ಅತ್ಯಂತ ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ಔಷಧಗಳನ್ನು ತಯಾರಿಸುವ ದೇಶ. ವಿಶ್ವದ ಬಹುತೇಕ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಬಹುಪಾಲು ಔಷಧಗಳ ಬೆಲೆ ಕಡಿಮೆ. ಹಾಗಾಗಿ ಯಾವುದೇ ವಿದೇಶ ಪ್ರವಾಸ ಮಾಡಿ, ಆದರೆ, ತಿಂಗಳಿಗೆ ಆಗುವಷ್ಟು ಔಷಧಗಳನ್ನು, ಪುಟ್ಟ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಭಾರತದಿಂದಲೇ ಕೊಂಡೊಯ್ಯಿರಿ. ಸುಖಾಸುಮ್ಮನೆ ವಿದೇಶಗಳಲ್ಲಿ ಹೆಚ್ಚುವರಿ ಹಣ ತೆತ್ತು ಔಷಧ ಖರೀದಿಸುವುದನ್ನು ತಪ್ಪಿಸಬಹುದು. ಇದೇ ಬಿಪಿ ಮಾತ್ರೆಗಳನ್ನು ನನ್ನ ಸ್ನೇಹಿತ ಭಾರತದಲ್ಲಿ ಖರೀದಿಸಿದ್ದರೆ 150-200 ರುಪಾಯಿ ಆಗಬಹುದಿತ್ತಷ್ಟೆ. 75 ಡಾಲರ್‌ಗಳಲ್ಲಂತೂ ಅವರ ಜನ್ಮಪೂರ್ತಿ ಬಳಕೆಗೆ ಮಾತ್ರೆಗಳು ಸಿಗುತ್ತಿದ್ದವು.
ಟ್ರಾವೆಲ್ ಏಜೆನ್ಸಿಗಳು ಸಹಾಯ ಮಾಡಬಹುದು
ನೀವು ಯಾವುದಾದರು ಟ್ರಾವೆಲ್ ಕಂಪೆನಿಯೊಂದಿಗೆ ನಿಮ್ಮ ವಿದೇಶ ಪ್ರವಾಸ ಮಾಡುತ್ತಿದ್ದರೆ, ನೇರವಾಗಿ ಅವರನ್ನೇ ಒಮ್ಮೆ ಕೇಳಬಹುದು. ತುರ್ತು ಸಂದರ್ಭಗಳಲ್ಲಿ ಬಳಕೆಗಾಗಿ ಕೆಲವು ಟ್ರಾವೆಲ್ ಕಂಪೆನಿಗಳು ತಮ್ಮ ವಾಹನಗಳಲ್ಲೇ ಪ್ರಥಮ ಚಿಕಿತ್ಸೆ ಸೇರಿ ಒಂದಷ್ಟು ಔಷಧಗಳನ್ನು ಕ್ಯಾರಿ ಮಾಡುತ್ತವೆ. ಪ್ರವಾಸಿ ತಾಣದಲ್ಲಿನ ತಮ್ಮ ಸಹಾಯಕ ಸಂಸ್ಥೆಯಿಂದಲೂ ಔಷಧಗಳನ್ನು ನಿಮಗೆ ತಲುಪಿಸಬಲ್ಲವು.
ವೆಬ್‌ಸೈಟ್‌ಗಳನ್ನು ಬಳಸಿ
ವಿದೇಶಗಳಲ್ಲಿ ಉಳಿಯುವ ಸಾಕಷ್ಟು ಜನರು ಒಂದಲ್ಲ ಒಂದು ಔಷಧಗಳ ಪೂರೈಕೆದಾರ ವೆಬ್‌ಸೈಟ್‌ನ ಪ್ರೈಮ್ ಸದಸ್ಯರಾಗಿರುತ್ತಾರೆ. ಉದಾಹರಣೆಗೆ ಅಮೆಜಾನ್ ಫಾರ್ಮಸಿಯ RxPass ಇದರಲ್ಲಿ ಕೇವಲ 5-6 ಡಾಲರ್‌ಗಳನ್ನು ಪಾವತಿಸಿ ತಿಂಗಳು ಪೂರ್ತಿ ಬಿಪಿ ಮಾತ್ರೆಗಳನ್ನು ಪಡೆಯಬಹುದು. Mark Cuban Cost, Plus Drugs, Walmart Pharmacy ಹೀಗೆ ಔಷಧಗಳನ್ನು ಖರೀದಿಸಲು ಸಾಕಷ್ಟು ವೆಬ್‌ಸೈಟ್‌ಗಳಿವೆ. ಅವುಗಳು ನೇರವಾಗಿ ಕಂಪೆನಿಗಳಿಂದ ರೋಗಿಗಳಿಗೆ ಪೂರೈಕೆ ಮಾಡುವುದರಿಂದ ಮಧ್ಯವರ್ತಿಯ ಖರ್ಚುಗಳನ್ನು ಉಳಿತಾಯ ಮಾಡಿಕೊಳ್ಳಬಹುದು. ಆದರೆ ಇವುಗಳಿಗೂ ಡಾಕ್ಟರ್‌ಗಳು ನೀಡುವ ಪ್ರಿಸ್ಕ್ರಿಪ್ಷನ್ ಬೇಕೇ ಬೇಕು.
ಜೆನರಿಕ್ ಔಷಧ ಬಳಸಿ

ಜೆನರಿಕ್ ಔಷಧಗಳು ಬ್ರಾಂಡ್ ಔಷಧಗಳಿಗಿಂತ ಸುಮಾರು 60-70 ಪ್ರತಿಶತ ಕಡಿಮೆ ಬೆಲೆಗೆ ನಿಮಗೆ ಸಿಗುತ್ತವೆ. ಹಾಗಂತ ಇವುಗಳು ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಎಂದು ಯೋಚಿಸಬೇಡಿ. ಇವುಗಳು ಮೂಲ ಔಷಧಗಳಿಗಿಂತ ಕಡಿಮೆ ಬೆಲೆಗೆ ಮಾರಾಟವಾಗಲು ಒಂದು ಕಾರಣವಿದೆ. ಸಾಮಾನ್ಯವಾಗಿ ಯಾವುದೇ ಒಂದು ಕಂಪೆನಿ ಔಷಧಗಳನ್ನು ಕಂಡುಹಿಡಿದಾಗ ಅವುಗಳ ಮೇಲೆ ಪೇಟೆಂಟ್ ಮಾಡಿಸುತ್ತದೆ. ಆಗ ಅದೊಂದೇ ಕಂಪೆನಿ ಆ ಔಷಧಗಳನ್ನು 10-15 ವರ್ಷಗಳ ಕಾಲ ತಯಾರಿಸಿ ಮಾರಬಲ್ಲದು. ಈ ಪೇಟೆಂಟ್ ಅವಧಿ ಮುಗಿದ ನಂತರ ಈ ಔಷಧಗಳನ್ನು ಯಾವುದೇ ಕಂಪೆನಿ ತಯಾರಿಸಿ ಮಾರಾಟ ಮಾಡಬಹುದು. ಆಗ ಕಂಪೆನಿ ಕೇವಲ ಔಷಧ ತಯಾರಿಕೆ ಮತ್ತು ಮಾರಾಟಕ್ಕೆ ಮಾತ್ರ ಹಣ ವ್ಯಯಿಸುವುದರಿಂದ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಮಾರಾಟ ಮಾಡುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿದೇಶ ಪ್ರವಾಸ ಮಾಡುವ ಮೊದಲು ನಿಮ್ಮ ಮೊಬೈಲ್‌ಗಳಲ್ಲಿ ಡಾಕ್ಟರ್‌ಗಳಿಂದ ಔಷಧಗಳ ಜೆನರಿಕ್ ಹೆಸರುಗಳನ್ನು ಬರೆಸಿದ ಪ್ರಿಸ್ಕ್ರಿಪ್ಷನ್ ಇರಲಿ. ಇದರಿಂದ ಔಷಧಕ್ಕೆ ವ್ಯಯಿಸುವ ಶೇಕಡ 50-60 ಪ್ರತಿಶತದಷ್ಟು ಹೆಚ್ಚುವರಿ ಹಣ ಉಳಿತಾಯ ಮಾಡಬಹುದು.
ಪ್ರವಾಸ ವಿಮೆ ಮಾಡಿಸಿ
ವಿದೇಶ ಪ್ರವಾಸ ಮಾಡುವಾಗ ಟ್ರಾವೆಲ್ ಏಜೆನ್ಸಿಗಳು ನೀವು ಕೇಳಿದರೆ ಪ್ರವಾಸಕ್ಕೆ ಆರೋಗ್ಯ ವಿಮೆ ಮಾಡಿಕೊಡುತ್ತವೆ. ಇದರಲ್ಲಿ ನೀವು ಅಮೆರಿಕ ಪ್ರವಾಸ ಮಾಡುವುದಾದರೆ ಪ್ರವಾಸದ ವೇಳೆ ಹಠಾತ್ ಅನಾರೋಗ್ಯ ಅಥವಾ ಅಪಘಾತ ಸಂಭವಿಸಿದರೆ ಅದರಿಂದ 100 ಡಾಲರ್‌ಗಿಂತ ಹೆಚ್ಚು ಹಣ ಖರ್ಚಾದರೆ ಆ ಹಣವನ್ನು ವಿಮೆಯ ಮೂಲಕ ರಿಕವರ್ ಮಾಡಿಕೊಳ್ಳಬಹುದು. ʻ100 ಡಾಲರ್‌ಗಿಂತ ಕಡಿಮೆ ಖರ್ಚಾದರಂತೂ ಗಯಾ ಪೇಮೆಂಟ್ ಪಾನಿ ಮೆʼ.