ದಕ್ಷಿಣ ಕಾಶ್ಮೀರಕ್ಕೆ 6 ತಿಂಗಳಲ್ಲಿ 10.50 ಲಕ್ಷ ಪ್ರವಾಸಿಗರು!
ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ 2300 ಹೋಂ-ಸ್ಟೇಗಳು ಆನ್‍ಲೈನ್‍ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 150 ಹೋಟೆಲ್/ ರೆಸಾರ್ಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು, 53 ಹೊಟೇಲ್/ ರೆಸ್ಟೋರೆಂಟ್/ ರೆಸಾರ್ಟ್ ಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ.
- ಅನಿಲ್ ಹೆಚ್.ಟಿ.
ದಕ್ಷಿಣ ಕಾಶ್ಮೀರ, ಭಾರತದ ಸ್ವಿಟ್ಜರ್ ಲ್ಯಾಂಡ್ ಖ್ಯಾತಿಯ ಕೊಡಗು ಜಿಲ್ಲೆಗೆ ಜನವರಿಯಿಂದ ಜೂನ್ ಅಂತ್ಯದವರೆಗೆ 10.50 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕೊಡಗು ಜಿಲ್ಲಾ ಉಪನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದ್ದಾರೆ.
2018- 2019ರಲ್ಲಿ ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಮತ್ತು 2020-21ರಲ್ಲಿ ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಕೊಡಗು ಜಿಲ್ಲೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಉಂಟಾಗಿತ್ತು. ಆದರೆ ಕಳೆದ ವಷ೯ದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. 2023ರಲ್ಲಿ ಜಿಲ್ಲೆಗೆ 43 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರೆ 2024 ರಲ್ಲಿ 46 ಲಕ್ಷ ಪ್ರವಾಸಿಗರು ಬಂದಿದ್ದಾರೆ. ಜನವರಿಯಿಂದ ಜೂನ್ ಅಂತ್ಯದವರೆಗೆ 10.50 ಲಕ್ಷ ಪ್ರವಾಸಿಗರು ಭೇಟಿ ನೀಡಿರುವುದು ವಿವಿಧ ಪ್ರವಾಸಿ ತಾಣಗಳ ಪ್ರವೇಶ ಶುಲ್ಕಾಧಾರಿತ ಅಂಕಿಅಂಶಗಳಿಂದ ತಿಳಿದುಬಂದಿದೆ ಎಂದೂ ಅನಿತಾ ಭಾಸ್ಕರ್ ಪ್ರವಾಸಿ ಪ್ರಪಂಚಕ್ಕೆ ಮಾಹಿತಿ ನೀಡಿದರು.

23 ಪ್ರವಾಸಿ ತಾಣಗಳು ರಾಜ್ಯ ಪಟ್ಟಿಗೆ
ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ರಡಿ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ 778 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಯ 23 ಪ್ರವಾಸಿ ತಾಣ ಗುರುತಿಸಲ್ಪಟ್ಟಿದೆ.
ರಾಜರ ಗದ್ದುಗೆ, ಮಡಿಕೇರಿ ಕೋಟೆ, ನಾಲ್ಕು ನಾಡು ಅರಮನೆ, ಅಬ್ಬಿ ಜಲಪಾತ, ಮಂದಲ್ ಪಟ್ಟಿ, ರಾಜಾಸೀಟು, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಮಲ್ಲಳ್ಳಿ ಜಲಪಾತ, ನಿಶಾನಿಮೊಟ್ಟೆ, ಚೇಲಾವರ ಜಲಪಾತ, ಇರ್ಪು ಜಲಪಾತ, ದುಬಾರೆ, ಚೆಟ್ಟಳ್ಳಿ ಫಾರ್ಮ್ ಹೊನ್ನಮ್ಮನ ಕೆರೆ, ಮಕ್ಕಳಗುಡಿ ಬೆಟ್ಟ, ಚಿಕ್ಕಿಹೊಳೆ, ಕುಂದಬೆಟ್ಟ, ಬರಪೊಳೆ ರಾಫ್ಟಿಂಗ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ. ಈ ರೀತಿ ಗುರುತಿಸಲ್ಪಟ್ಟ ತಾಣಗಳಾಗಿವೆ.
ಧಾರ್ಮಿಕ ಕ್ಷೇತ್ರಗಳಾಗಿ ತಲಕಾವೇರಿ - ಭಾಗಮಂಡಲ
ತಲಕಾವೇರಿ-ಭಾಗಮಂಡಲ ದೇವಾಲಯಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟು ಧಾರ್ಮಿಕ ಕ್ಷೇತ್ರ (Spiritual) ಗಳ ಪಟ್ಟಿಗೆ ಸೇರಿಸುವಂತೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಲ್ಲಿ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ನೂತನ ಪ್ರವಾಸೋದ್ಯಮ ನೀತಿ 2024-29 ರಡಿಯಲ್ಲಿ ಕೃಷಿ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಫಾರ್ಮ್ ಸ್ಟೇ, ಪಾರಂಪರಿಕ ಹೊಟೇಲ್, ಪಾರಂಪರಿಕ ಪ್ರವಾಸೋದ್ಯಮ ಯೋಜನೆ, ಹೊಟೇಲ್ ಬಜೆಟ್, ಹೋಟೆಲ್ ಪ್ರೀಮಿಯಂ, ರಸ್ತೆ ಬದಿ ಸೌಲಭ್ಯಗಳ ಹಾಗೂ ಇತರೆ ಯೋಜನೆಗಳನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಇಲ್ಲಿಯವರೆಗೆ 2300 ಹೋಂ-ಸ್ಟೇಗಳು ಆನ್‍ಲೈನ್‍ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 150 ಹೋಟೆಲ್/ ರೆಸಾರ್ಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು, 53 ಹೊಟೇಲ್/ ರೆಸ್ಟೋರೆಂಟ್/ ರೆಸಾರ್ಟ್ ಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ.
‘ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಹಿನ್ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು’ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವಂತೆಯೇ ಕೊಡಗಿನ ಹಾರಂಗಿ ಜಲಾಶಯದಲ್ಲಿ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳನ್ನು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ನಡೆಸಲು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜೆಎಲ್‍ಆರ್) ನಿಗಮದ ವತಿಯಿಂದ ಪರವಾನಗಿ ನೀಡಿ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿರುತ್ತದೆ.
ಕುಶಾಲನಗರ ತಾಲ್ಲೂಕು ದುಬಾರೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಬರ್ಪುಹೊಳೆ ಪ್ರವಾಸಿ ತಾಣಗಳಲ್ಲಿ ರಿವರ್ ರಾಫ್ಟಿಂಗ್ ನಡೆಸಲು ಪರವಾನಗಿ ನೀಡಲಾಗಿರುತ್ತದೆ ಎಂದೂ ಅನಿತಾ ಭಾಸ್ಕರ್ ತಿಳಿಸಿದರು.
ಮಂದಲ್ ಪಟ್ಟಿ - ಒಂದು ಜಿಲ್ಲೆ ಒಂದು ತಾಣ
‘ಒಂದು ಜಿಲ್ಲೆ ಒಂದು ತಾಣ’ ಅಡಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪಿಪಿಪಿ ಮಾದರಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲೆಯ ಮಂದಲ್‍ಪಟ್ಟಿ ಪ್ರವಾಸಿ ತಾಣವನ್ನು ಸರ್ಕಾರದಿಂದ ಆಯ್ಕೆ ಮಾಡಲಾಗಿದೆ. ಅದರಂತೆ ಮಂದಲ್ ಪಟ್ಟಿಗೆ ತೆರಳುವ ರಸ್ತೆ ಜಂಕ್ಷನ್‍ನಲ್ಲಿ 50 ಲಕ್ಷ ವೆಚ್ಚದಲ್ಲಿ ಗಾಳಿಬೀಡು ಗ್ರಾಮ ಪಂಚಾಯತ್‍ಯಿಂದ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದೂ ಅನಿತಾ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ Zero waste Travel
ಕೊಡಗು ಜಿಲ್ಲೆಯಲ್ಲಿ Zero waste Travel ಅಂದ್ರೆ ಶೂನ್ಯ ತ್ಯಾಜ್ಯ ಪ್ರವಾಸವನ್ನು ಜಾರಿ ಗೊಳಿಸಿದ್ದು, ಅದರಂತೆ ಜಿಲ್ಲೆಯಲ್ಲಿರುವ ಪ್ರವಾಸಿ ಟ್ಯಾಕ್ಸಿಗಳಲ್ಲಿ ವಾಹನದಿಂದ ಹೊರಗೆ Plastic ತ್ಯಾಜ್ಯವನ್ನು ಬಿಸಾಡದಂತೆ ತಡೆಯಲು ಬ್ಯಾಗ್‍ಗಳನ್ನು ವಿತರಿಸಲಾಗುತ್ತದೆ. ಕೊಡಗಿಗೆ ಬರುವ ಪ್ರವಾಸಿಗರನ್ನು ಇಲ್ಲಿನ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಬಾಡಿಗೆ ಕಾರು ಚಾಲಕರು, ಮಾಲೀಕರು ಕೊಡಗಿನ ಪ್ರವಾಸೋದ್ಯಮದ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗು ಪ್ರವಾಸೋದ್ಯಮ ಉತ್ತೇಜನಕ್ಕೆ ವಾಹನ ಚಾಲಕರನ್ನು ಕೂಡ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ.
- ವೆಂಕಟ್ ರಾಜಾ, ಜಿಲ್ಲಾಧಿಕಾರಿ, ಕೊಡಗು
ಪ್ರವಾಸಿ ಪ್ರಪಂಚಕ್ಕೆ ಶ್ಲಾಘನೆ
ಪ್ರವಾಸಿ ಪ್ರಪಂಚ ವಾರಪತ್ರಿಕೆ ಬಗ್ಗೆ ಕೊಡಗು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯರು ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ವೆಂಕಟ್ ರಾಜ್ ಅಧ್ಯಕ್ಷತೆಯಲ್ಲಿ ಆಯೋಜಿತ ಸಭೆಯಲ್ಲಿ ಪ್ರವಾಸಿ ಪ್ರಪಂಚ ವಾರಪತ್ರಿಕೆ ಕರ್ನಾಟಕ ಪ್ರವಾಸೋದ್ಯಮದ ಬಹಳ ವರ್ಷಗಳ ಬೇಡಿಕೆಯನ್ನು ಈಡೇರಿಸಿದೆ. ಕರ್ನಾಟಕದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂಥ ಪತ್ರಿಕೆಯ ಅಗತ್ಯವಿತ್ತು. ವಿಶ್ವದಗಲದ ಪ್ರವಾಸಿ ಸುದ್ದಿಗಳನ್ನು ಪ್ರಕಟಿಸುತ್ತಿರುವ ಪ್ರವಾಸಿ ಪ್ರಪಂಚ ಅತ್ಯುತ್ತಮ ಗುಣಮಟ್ಟದಲ್ಲಿ ಪ್ರಕಟವಾಗುವ ಮೂಲಕ ಪ್ರವಾಸಿಗರು ಮಾತ್ರವಲ್ಲದೇ ಪ್ರವಾಸೋದ್ಯಮಿಗಳನ್ನೂ ಸೆಳೆದಿದೆ ಎಂದೂ ಪ್ರವಾಸೋದ್ಯಮ ಅಭಿವೖದ್ದಿ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಪ್ರವಾಸೋದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.