ರಾಜು ಕುಟುಂಬದ ಕ್ರೇಜಿ ಟ್ರಿಪ್ !
ಸ್ಥಳೀಯ ವಾಹನ, ಬಂಡಿ, ಕಾಲ್ನಡಿಗೆ ಇವುಗಳನ್ನೇ ಸಂಚಾರ ಸಾಧನ ಮಾಡ್ಕೋತಿದ್ರು. ರಾಜ್ಯಗಳ ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳಲು ಹೊರಟಿದ್ದರಿಂದ, ಆಯಾ ನಗರಗಳ ಬಸ್ಗಳು, ಚಕ್ಕಡಿಗಳನ್ನೇ ಅವಲಂಬಿಸಿದ್ದರು. ಪ್ರವಾಸದಾದ್ಯಂತ ಯಾವುದೇ ಹೊಟೇಲ್ಗಳ ಮೇಲೆ ಅವಲಂಬನೆ ಇಲ್ಲದಂತೆ, ಏರ್ ಬಿ ಎನ್ ಬಿ ಮೂಲಕ ಅಪರಿಚಿತರ ಮನೆಗೆ ಅತಿಥಿಯಾಗಿ ಹೋಗಿ, ಅವರ ಮನೆಯವರಲ್ಲೊಬ್ಬರಾಗಿ ಅವರ ಆಚಾರ-ವಿಚಾರ, ಪದ್ಧತಿ, ಊಟದ ಶೈಲಿಯನ್ನು - ತಮ್ಮ ಮಕ್ಕಳಿಗೆ ತೋರಿಸಿದರು.
- ವಿನಯ್ ಖಾನ್
ಬೇಸಗೆಯ ರಜೆಯಲ್ಲಿ ಮಕ್ಕಳನ್ನು ಊರಿಗೆ ಕರೆದುಕೊಂಡು ಹೋಗುವುದು, ಇನ್ಯಾವುದೋ ಸ್ಥಳಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಕಾಮನ್. ಆದರೆ ಇಲ್ಲಿ ಒಂದು ಕುಟುಂಬ ಬೇಸಗೆ ರಜೆಯ ಪ್ರವಾಸವನ್ನು ಎಷ್ಟು ಅದ್ಭುತವಾಗಿ ಮಾಡಿದೆ ಎಂಬುದನ್ನು ನೀವು ಓದಿದರೆ ವಿಪರೀತ ಅಚ್ಚರಿ ಪಡುತ್ತೀರಿ. ಅವರ ಬಗ್ಗೆ ಹೆಮ್ಮೆ ಪಡುತ್ತೀರಿ. ಯಾಕಂದ್ರೆ ಅವರು ಬೇಸಗೆ ಪ್ರವಾಸಕ್ಕೆ ಹೋಗಿದ್ದು ಒಂದು ಸ್ಥಳಕ್ಕಲ್ಲ. ಅವರು ಈ ರಜೆಯಲ್ಲಿ ಕವರ್ ಮಾಡಿದ್ದು ಬರೋಬ್ಬರಿ 19 ದೇವಸ್ಥಾನ, 40ಕ್ಕೂ ಹೆಚ್ಚು ಹೊಟೇಲ್, ಥೀಮ್ ಪಾರ್ಕ್‌ಗಳು, 4 ಬೀಚ್‌ಗಳು, 9 ಮ್ಯೂಸಿಯಂಗಳು, 15ಕ್ಕೂ ಹೆಚ್ಚು ಕಡೆ ಸ್ಟೇ, 5 ಯುನೆಸ್ಕೋ ಸ್ಥಳಗಳು ಮತ್ತು 2 ಸಿನಿಮಾ. ಒಂದೂವರೆ ಬೇಸಗೆ ರಜೆಯಲ್ಲಿ ಇಷ್ಟು ನೋಡಿಬರುವುದು ಭಾರೀ ವಿಷಯವೇನಲ್ಲ ಅಂತ ನೀವು ಮೂಗು ಮುರಿಯುತ್ತಿದ್ದೀರಿ. ಅಲ್ವಾ? ಈಗ ಕೇಳಿ. ಇವರು ಇಷ್ಟೆಲ್ಲ ಸುತ್ತಿರೋದು ರೋಡ್ ಟ್ರಿಪ್ ಮೂಲಕ!
ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಮನೆಯ ಯಜಮಾನ ರಾಜು ಅವರಿಗೆ ತಮ್ಮ ಮಕ್ಕಳಾದ 13 ವರ್ಷದ ಶ್ರವಣ್, ಮತ್ತು 8 ವರ್ಷದ ವರ್ಷಣ್‌ಗೆ ದೇಶ ತೋರಿಸಬೇಕೆಂಬ ಆಸೆ ಹುಟ್ಟುತ್ತದೆ. ಬೇಸಗೆ ರಜೆಯಲ್ಲಿ ಅಜ್ಜ ಅಜ್ಜಿ ಮನೆಗೆ ಕರೆದುಕೊಂಡು ಹೋದರೂ ಮಕ್ಕಳು ಮೊಬೈಲ್‌ನಲ್ಲೇ ಕಾಲ ಕಳೆಯುತ್ತಾರೆ. ತಮ್ಮ ಮನೆಯಲ್ಲಿದ್ದರೂ ಮಕ್ಕಳು ಮೊಬೈಲ್‌ನಲ್ಲೇ ಕಾಲ ಕಳೆಯುತ್ತಾರೆ. ಇದನ್ನು ತಪ್ಪಿಸೋಕೆ ಇರೋ ಉಪಾಯ ಅಂದ್ರೆ ಅದು ನಾನ್ ಸ್ಟಾಪ್ ಪ್ರವಾಸ ಎಂದು ರಾಜು ಯೋಜನೆ ರೂಪಿಸುತ್ತಾರೆ. ನಿಜವಾದ ದೇಶ-ಸಂಸ್ಕೃತಿ, ಆಹಾರ ಪದ್ಧತಿ, ಭಾಷೆ, ಆಚಾರ ವಿಚಾರಗಳನ್ನು ತಿಳಿಸುವುದಕ್ಕೆ ರಾಜು ಅವರು ಹೆಚ್ಚೂ ಕಡಿಮೆ 6 ತಿಂಗಳುಗಳ ಕಾಲ ಪ್ಲ್ಯಾನ್ ಮಾಡಿ, 26 ದಿನಗಳ ರೋಡ್ ಟ್ರಿಪ್‌ಗೆ ಕುಟುಂಬ ಸಮೇತ ಹೊರಟುಬಿಡುತ್ತಾರೆ.

6767 ಕಿಮೀ ಸವಾರಿ
ಇವರ ರೋಡ್ ಟ್ರಿಪ್, ಆರಂಭ ಶೂರತ್ವದ ಥರ ಬರೀ ಬೆಂಗಳೂರು ಟು ಮೈಸೂರಿಗಷ್ಟೇ ಸೀಮಿತವಾಗಲಿಲ್ಲ. ಭರ್ತಿ 6767 ಕಿಮೀನಷ್ಟು ದೇಶವನ್ನು ಸುತ್ತುಹಾಕುತ್ತಾರೆ. ಅದಕ್ಕೆ ಅವರು ಆಯ್ಕೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಅವರ ಗೋಲ್ಡನ್ ಕ್ವಾಡ್ರಲಾಟರಲ್ ಹೈವೇಯನ್ನು. ಏಕೆಂದರೆ ಈ ದಾರಿ ಭಾರತದ ಹಲವಾರು ನಗರ ಮತ್ತು ಜಿಲ್ಲೆಗಳಿಗೆ ಕನೆಕ್ಟ್ ಆಗುವುದರಿಂದ ಯಾವುದೇ ಜಾಸ್ತಿ ತಾಪತ್ರಯಗಳಿರದೆ, ಜಾಸ್ತಿ ಸ್ಥಳಗಳನ್ನು ನೋಡಿ, ಬುತ್ತಿ ತುಂಬ ನೆನಪುಗಳನ್ನು ಹೊತ್ತುಕೊಂಡು ಬರುವುದು ಇವರ ಯೋಜನೆಯಾಗಿತ್ತು.
ಕಾರ್ ಇದ್ದರೂ ಲೋಕಲ್ ಗಾಡಿ
ಇವರ ಬಳಿ ಕಾರ್ ಇಲ್ಲ ಅಂತ ಏನಲ್ಲ. ಆದರೆ, ಕಾರನ್ನು ಇವರು ಬಳಸಿದ್ದು ಕೇವಲ ಊರಿಂದ ಊರು ತಲುಪುವುದಕ್ಕೆ ಮಾತ್ರ. ಊರು ತಲುಪಿದ ನಂತರ ಕಾರ್ ನಿಲ್ಲಿಸಿ, ಸ್ಥಳೀಯ ವಾಹನ, ಬಂಡಿ, ಕಾಲ್ನಡಿಗೆ ಇವುಗಳನ್ನೇ ಸಂಚಾರ ಸಾಧನ ಮಾಡ್ಕೋತಿದ್ರು. ರಾಜ್ಯಗಳ ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳಲು ಹೊರಟಿದ್ದರಿಂದ, ಆಯಾ ನಗರಗಳ ಬಸ್ಗಳು, ಚಕ್ಕಡಿಗಳನ್ನೇ ಅವಲಂಬಿಸಿದ್ದರು. ಪ್ರವಾಸದಾದ್ಯಂತ ಯಾವುದೇ ಹೊಟೇಲ್ಗಳ ಮೇಲೆ ಅವಲಂಬನೆ ಇಲ್ಲದಂತೆ, ಏರ್ ಬಿ ಎನ್ ಬಿ ಮೂಲಕ ಅಪರಿಚಿತರ ಮನೆಗೆ ಅತಿಥಿಯಾಗಿ ಹೋಗಿ, ಅವರ ಮನೆಯವರಲ್ಲೊಬ್ಬರಾಗಿ ಅವರ ಆಚಾರ-ವಿಚಾರ, ಪದ್ಧತಿ, ಊಟದ ಶೈಲಿಯನ್ನು - ತಮ್ಮ ಮಕ್ಕಳಿಗೆ ತೋರಿಸಿದರು. ಹಾಗೆ, ಇವರು ಅಪರಿಚಿತರಾಗಿ ಹೋಗಿದ್ದ ಮನೆಯವರೆಲ್ಲ ಈಗ ಇವರಿಗೆ ಫ್ಯಾಮಿಲಿ ಫ್ರೆಂಡ್ಸ್.

ದಾರಿ ಇದ್ದ ಹಾಗೆ ಪಯಣ
ಇವರ ಪಯಣ ಯಾವತ್ತೂ ಒಂದೇ ರೀತಿಯಲ್ಲಿರಲಿಲ್ಲ. ಒಮ್ಮೊಮ್ಮೆ ಒಂದೊಂದು ಥರ ಇರುತ್ತಿತ್ತು. ಹೇಗೆಂದರೆ, ಒಂದಿನ ಒಂದೇ ಊರಲ್ಲಿ ಲೋಕಲ್ ಗಾಡಿಗಳಲ್ಲಿ ಪಯಣಿಸಿದರೆ, ಒಮ್ಮೊಮ್ಮೆ 600 ಕಿಮೀನಷ್ಟು ಡ್ರೈವಿಂಗ್ ಮಾಡಬೇಕಾಗಿತ್ತು. ಮಕ್ಕಳಿಗೆ ಜಾಸ್ತಿ ಕಂಫರ್ಟ್ ಕೊಡಬಾರದೆಂದು, ಎಸಿಯಿರದ ಮಾರುತಿ ಸುಝುಕಿ ಎಕೋ ಕಾರನ್ನು ತೆಗೆದುಕೊಂಡು ಹೋಗಿದ್ದರು. ಮೊದಲೇ ಹೇಳಿದ ಹಾಗೆ, ಒಮ್ಮೊಮ್ಮೆ ಒಂದೇ ಊರಲ್ಲಿ ಸುತ್ತುತ್ತಿದ್ದ ಕುಟುಂಬ ಒಮ್ಮೊಮ್ಮೆ ಊರು, ರಾಜ್ಯಗಳನ್ನು ಒಮ್ಮೆಲೆ ದಾಟುತ್ತಿದ್ದರು. ಅಲ್ಲಿನ ಸ್ಥಳೀಯ ಆಹಾರ ಪದ್ಧತಿ, ಭಾಷೆಗಳನ್ನು ಮಕ್ಕಳಿಗೆ ತೋರಿಸುವಲ್ಲಿ ಸಫಲರಾಗುತ್ತಿದ್ದರು.
ಶಾಲೆಯ ಪಠ್ಯಕ್ಕೂ ಸೈ
ಇವರ ಪ್ರಯಾಣದ ಮೊದಲನೇ ಗುರಿ, ತಮ್ಮ ಮಕ್ಕಳಿಗೆ ಶಾಲೆಯ ಇತಿಹಾಸ ಅಥವಾ ಬೇರೆ ಯಾವುದೋ ವಿಷಯದಲ್ಲಿ ಬರುವ ಸ್ಥಳಗಳನ್ನು ತೋರಿಸುವುದು. ಯಾವುದೋ ಸ್ಮಾರಕದ ಮುಂದೆ ನಿಂತಾಗ ಮಕ್ಕಳು, ʼಹೋ ಇದಾ, ನಮ್ಮ ಸಮಾಜ ವಿಜ್ಞಾನ ವಿಷಯದಲ್ಲಿ ಬಂದಿತ್ತುʼ ಎಂದೋ. ʼಈ ಊರಿನ ಬಗ್ಗೆ ನಮ್ಮ ಟೀಚರ್ ಹೇಳಿದ್ದರುʼ ಎನ್ನುವ ಹಲವಾರು ಉದ್ಗಾರಗಳನ್ನು ಕೇಳಿದ್ದರಂತೆ. ಆಹಾರಗಳನ್ನು ಸವಿಯುವುದರ ಜತೆಗೆ ಮಕ್ಕಳಿಗೆ ಗೋಡೆಗಳಾಚೆಗಿನ ನಿಜವಾದ ಭಾರತವನ್ನು ತೋರಿಸಬೇಕು. ಇಲ್ಲಿನ ಭಾಷೆಯ ವೈವಿಧ್ಯ ಹಾಗೂ ಜನವೈವಿಧ್ಯ ತೋರಿಸಬೇಕು ಎನ್ನುವುದು ಇವರ ಗುರಿಯಾಗಿತ್ತು.

ಭಾರದ ಜೇಬು ಬೇಕಿಲ್ಲ!
ಹೀಗೆ 26 ದಿನ ಕಾರಿನಲ್ಲಿ ರೋಡ್ ಟ್ರಿಪ್ ಮಾಡುವುದೆಂದರೆ, ಭಾರೀ ಖರ್ಚು ಎಂದು ಅಂದುಕೊಳ್ಳುತ್ತೀವಲ್ಲ ಹಾಗೇನೂ ಇಲ್ಲ. 26 ದಿನಗಳ ಕಾಲ 12 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಪ್ರಯಾಣ ಮುಗಿಸಿ ಬಂದಿರುವ ಇವರಿಗೆ ತಗುಲಿದ್ದು 1.5 ಲಕ್ಷ ರು., ಜಾಸ್ತಿ ಖರ್ಚನ್ನು ಮಾಡದೇ, ಮಿತವ್ಯಯದಲ್ಲಿ ಸುತ್ತಾಡುವುದೇ ಪ್ರಯಾಣದ ಗುಟ್ಟು ಎಂದು ತಿಳಿದಿದ್ದ ರಾಜು, ತಮ್ಮ ಕಾರಿಗೆ 14 ಬಾರಿ ಫುಲ್ ಟ್ಯಾಂಕ್ ಮಾಡಿಸಿ, 94 ಟೋಲ್ ಗೇಟ್‌ಗಳನ್ನು ದಾಟಿ, 6 ಕಡೆ ಕಾರಿನ ಚೆಕ್‌ಅಪ್ ಮಾಡಿಸಿದ್ದರು. ಇದಾದ ನಂತರ ಇದೇ ಒಂದುವರೆ ಲಕ್ಷದಲ್ಲಿ ಸ್ಟೇ ಆಗುವುದು, ಊಟ ತಿಂಡಿ, ಮ್ಯೂಸಿಯಂ ಅಥವಾ ಇನ್ನಿತರ ಸ್ಥಳಗಳ ಪ್ರವೇಶ ಶುಲ್ಕವನ್ನೂ ಕೊಟ್ಟಿದ್ದರು.
ʼಇಂದಿನ ಮಕ್ಕಳು ಆಧುನಿಕತೆಯ ಕಾರಣದಿಂದ ನಾಲ್ಕು ಗೋಡೆಗಳ ನಡುವೆ ಇರುವ ಜೈಲುವಾಸಿಗಳಾಗುತ್ತಿದ್ದಾರೆ. ಅವರಿಗೆ ಆದಷ್ಟು ಜಾಸ್ತಿ ಹೊರಗಿನ ಪ್ರಪಂಚ ತೋರಿಸಬೇಕು. ಆಗಲೇ ಮಕ್ಕಳ ಪ್ರೌಢಿಮೆ ಹೆಚ್ಚುವುದು. ಅವರು ಹೆಚ್ಚೆಚ್ಚು ಪ್ರಯಾಣ ಮಾಡಿದಂತೆಲ್ಲ, ಹೆಚ್ಚೆಚ್ಚು ಸ್ಥಳ ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ, ಆಚಾರ-ವಿಚಾರಗಳಿಗೆ ಒಗ್ಗಿದಂತೆ ಅವರ ಲೋಕಜ್ಞಾನವೂ ಹೆಚ್ಚುತ್ತದೆ. ಅವರ ರೀತಿಯಲ್ಲೇ ಹೆಚ್ಚು ಹೆಚ್ಚು ಪಾಲಕರು ತಮ್ಮ ಮಕ್ಕಳನ್ನು ಇಂಥ ಪ್ರವಾಸಕ್ಕೆ ಕರೆದುಕೊಂಡು ಹೋಗುವುದರಿಂದ ಮಕ್ಕಳ ಬೆಳವಣಿಗೆಗೂ ಪೂರಕʼ. ಇದು ರಾಜು ಅವರ ಅಭಿಪ್ರಾಯ.

ಹೋದ ಸ್ಥಳಗಳು
12 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶ
- ಗುಜರಾತಿನ ಅಹಮದಾಬಾದ್‌ನ ಸಾಬರಮತಿ ಆಶ್ರಮ
- ದೆಹಲಿಯ ಕುತುಬ್ ಮಿನಾರ್, ಇಂಡಿಯಾ ಗೇಟ್
- ಆಗ್ರಾದ ತಾಜ್ ಮಹಲ್
- ಕೋಲ್ಕತ್ತಾದ ಎಂಜಿ ರೋಡ್, ವಿಕ್ಟೋರಿಯಾ ಮೆಮೋರಿಯಲ್, ಹೌರಾ ಬ್ರಿಡ್ಜ್
- ಓಡಿಸ್ಸಾದ ಕೋನಾರ್ಕ್ ಸೂರ್ಯ ದೇವಾಲಯ, ಪುರಿಯ ಜಗನ್ನಾಥ ದೇವಸ್ಥಾನ
- ಚೆನ್ನೈನ ವಿಜಿಪಿ ಯುನಿವರ್ಸಲ್ ಕಿಂಗ್‌ಡಮ್
- ಆಂಧ್ರಪ್ರದೇಶದ ಪೆನುಗೊಂಡದ ವಾಸವಿ ಮೂಲವಿರಾಟ್, ವಿಶಾಖಪಟ್ಟಣಂನ ಕುರ್ಸುರಾ ಮ್ಯೂಸಿಯಂ
- ವಾರಾಣಸಿಯ ಗಂಗಾರತಿ
ಇವು ಅವರು ಭೇಟಿ ಕೊಟ್ಟ ಕೆಲವು ಪ್ರಮುಖ ಸ್ಥಳಗಳಷ್ಟೆ. ಪೂರ್ತಿ ಲಿಸ್ಟ್ ಇನ್ನೂ ದೊಡ್ಡದಿದೆ.
ಒಂದು ದಾಖಲೆಯನ್ನೂ ನಿರ್ಮಿಸಿದ್ದಾರೆ
ಈ ಗೋಲ್ಡನ್ ಕ್ವಾಡ್ರಲ್ಯಾಟರಲ್ ಹೈವೇ ದೇಶದಲ್ಲೇ ಅತೀ ದೊಡ್ಡ ಹೈವೇಯೂ ಹೌದು. ಈ ಹೈವೇಯಲ್ಲಿ ಹಲವಾರು ವ್ಲಾಗರ್‌ಗಳು ಪ್ರವಾಸ ಮಾಡಿದ್ದರು. ಆದರೆ, ಈ ರೀತಿ ಮಕ್ಕಳನ್ನು ಕಟ್ಟಿಕೊಂಡು ಪ್ರವಾಸಕ್ಕೆ ಹೋಗಿದ್ದು ರಾಜು ಅವರ ಕುಟುಂಬವೇ ಮೊದಲಂತೆ.