Saturday, March 21, 2026
Saturday, March 21, 2026

ಆನೆ ಬಂತೊಂದಾನೆ..

ಆನೆ ಬಂತೊಂದಾನೆ ಪದ್ಯ ಕೇಳಿದ್ದೀರಿ ಅಲ್ವಾ? ಸರಿ, ಹತ್ತಾರು ಗಜಪಡೆಗಳನ್ನು ಒಟ್ಟಿಗೆ ನೋಡಿದ್ದೀರಾ? ಆನೆಗಳು ಸಂಭ್ರಮದಿಂದ ಸ್ನಾನ ಮಾಡಿರುವುದನ್ನು ಎಂದಾದರೂ ಕಣ್ತುಂಬಿಕೊಂಡಿದ್ದೀರಾ? ಆನೆಯ ಜಲಕ್ರೀಡೆಯನ್ನು ನೀವು ನೋಡಬೇಕೆಂದರೆ ಸಕ್ರೆಬೈಲ್‌ಗೆ ಹೋಗಿ. ಹಾಂ. ಆ ಮಜಬೂತಾದ ದೃಶ್ಯವನ್ನು ನೋಡಲು ನಿಮಗೆ ಜೆಎಲ್‌ಆರ್‌ ಸರಿಯಾದ ಸಾಥ್.‌ ಜೆಎಲ್‌ಆರ್‌ನಲ್ಲಿ ಉಳಿಯಿರಿ. ಆನೆಗಳ ಹಿಂಡನ್ನು ಕಾಣಿರಿ

ಆನೆಯ ಸವಾರಿ ಯಾರಿಗೆ ಇಷ್ಟವಿಲ್ಲ ಹೇಳಿ? ನಮ್ಮ ದೇಹಕ್ಕಿಂತ ಅದರ ದೇಹ ನೂರುಪಟ್ಟು ದೊಡ್ಡದಿದ್ದರೂ ನಮಗೆಲ್ಲ ಆನೆಯ ಮೇಲೆ ವಿಪರೀತ ಪ್ರೀತಿ ಮತ್ತು ಮಮತೆ. ಆನೆಯ ಸೊಂಡಿಲು ಮುಟ್ಟುತ್ತೇವೆ. ಅದರ ಕಿವಿ ಮುಟ್ಟಿ ಮುದಗೊಳ್ಳುತ್ತೇವೆ. ಅದರ ಹಣೆ ಮೇಲೆ ಕೈಯಿಟ್ಟು ನಮಸ್ಕಾರ ಮಾಡಿಕೊಳ್ಳುತ್ತೇವೆ. ಅದು ಘೀಳಿಟ್ಟರೆ ಹೆದರುತ್ತೇವೆ. ನಮಗೂ ಆನೆಗೂ ಬಾಲ್ಯದಿಂದಲೂ ಅವಿನಾಭಾವ ಸಂಬಂಧ. ಅದರ ಬಗ್ಗೆ ಹತ್ತಾರು ಕತೆಗಳನ್ನು ಕೇಳಿರುತ್ತೇವೆ. ಆನೆಯದ್ದೇ ಪದ್ಯಗಳನ್ನು ಕಂಠಪಾಠ ಮಾಡಿಕೊಂಡಿರುತ್ತೇವೆ. ಆನೆ ನಮಗೆ ಗಣಪನ ಮೂಲಕ ಬೆಸ್ಟ್‌ ಫ್ರೆಂಡ್‌ ಅಂತಾಗಿ ಬಿಟ್ಟಿರುತ್ತಾನೆ. ಎಲ್ಲಿ ನೋಡದಿದ್ದರೂ ಗಣಪನ ಮುಖದಲ್ಲಿ ಆನೆಯನ್ನು ನೋಡಿರುತ್ತೇವೆ. ಅವನ ಆಕಾರ ಮತ್ತು ದಂತ ನಮ್ಮನ್ನು ಇನ್ನಿಲ್ಲದಂತೆ ಆಕರ್ಷಿಸಿರುತ್ತದೆ. ಜಾತ್ರೆ, ಹಬ್ಬದ ಕಾರ್ಯಕ್ರಮ, ರ‍್ಯಾಲಿ ಏನೇ ಇರಲಿ ಅಲ್ಲಿ ಆನೆ ಇದ್ದರೆ ಅಲ್ಲಿನ ಸಂಭ್ರಮ ಹೆಚ್ಚಾಗುತ್ತದೆ. ಮೊದಲೆಲ್ಲ ಆನೆ ಸರ್ಕಸ್‌ ಅಂತಲೇ ಇರುತ್ತಿತ್ತು ನೆನಪಿದ್ಯಾ? ನಮ್ಮ ಬಾಲ್ಯದ ದಿನಗಳನ್ನು ನಾವು ಅಂಥ ಸರ್ಕಸ್‌ಗಳನ್ನು ನೋಡಿಕೊಂಡೇ ಕಳೆದಿದ್ದೇವೆ. ಆನೆಯನ್ನು ಒಬ್ಬ ಪಳಗಿಸಿರುತ್ತಾನೆ. ಅವನ ತಾಳಕ್ಕೆ ತಕ್ಕಂತೆ ಇದು ಕುಣಿಯುತ್ತದೆ. ಅಷ್ಟಗಲದ ಆನೆಗೆ ಇಷ್ಟಗಲದ ಬಟ್ಟೆ, ತಲೆಗೊಂದು ಟೊಪ್ಪಿ, ಕಣ್ಣಿಗೆ ಕೂಲಿಂಗ್‌ ಗ್ಲಾಸ್.‌ ಅಬ್ಬಾ! ಆನೆಯ ವಯ್ಯಾರವನ್ನು ನೋಡುವುದೇ ಕಣ್ಣಿಗೆ ಹಬ್ಬ. ದಸರಾವಂತೂ ಆನೆಗಳಿಂದಲೇ ಪ್ರಸಿದ್ಧ. ಊರಲ್ಲಿ ಜಾತ್ರೆ ಜರುಗಿದಾಗ ಅಲ್ಲಿ ಆನೆ ಇತ್ತು ಅಂದರೆ ಅದರ ಸುತ್ತ ನಿಲ್ಲುವವರ ಸಂಖ್ಯೆಯೂ ಹಾಗೇ ಹೆಚ್ಚಿರುತ್ತದೆ. ಆನೆ ಸೊಂಡಿಲಲ್ಲಿ ಸ್ವಲ್ಪ ಹಣ ಇಟ್ಟು, ಅದೇ ಸೊಂಡಿಲಿನಿಂದ ಆಶೀರ್ವಾದ ಮಾಡಿಸಿಕೊಳ್ಳುವುದು ಇದೆಲ್ಲವೂ ಮನಸಿಗೆ ಹೆಚ್ಚು ಖುಷಿಕೊಡುತ್ತದೆ. ಆನೆಗೆ ದೊಡ್ಡ ಸೊಂಡಿಲು, ದೊಡ್ಡ ದೊಡ್ಡ ಕಿವಿ, ಒಂದಂತಸ್ತು ಮನೆಗಿಂತ ದೊಡ್ಡದಾದ ದೇಹವಿದ್ದರೂ ಮನುಷ್ಯನಾದವನು ಆನೆಗಳನ್ನು ಇಷ್ಟಪಡುತ್ತಾನೆ. ಮಕ್ಕಳೂ ಆನೆ ಮೇಲೆ ಕೂತು ಸವಾರಿ ಮಾಡಲು ಇಷ್ಟಪಡುತ್ತಾರೆ. ಆನೆ ಕಾಡಲ್ಲಿದ್ದಾಗ ಮಾತ್ರ ಜನ ನೋಡಿ ಹೆದರಬಹುದು. ಆದರೆ, ಅದೇ ಆನೆ ನಾಡಿನಲ್ಲಿ ಮಾವುತನ ಜತೆಗಿದ್ದರೆ? ಯಾವುದೋ ದೊಡ್ಡ ಮೆರವಣಿಗೆಯಲ್ಲಿ ಅತ್ತಿಂದಿತ್ತ ವಾಲಾಡುತ್ತ, ಗಾಂಭೀರ್ಯದಿಂದ ನಡೆಯುತ್ತಾ, ಆಗಾಗ ಸೊಂಡಿಲನ್ನು ಎತ್ತಿ ಘೀಳಿಡುವುದು, ಪಟಾಕಿ ಹಚ್ಚಿದಾಗ ಹೆದರುವುದು ಎಲ್ಲ ನೋಡಿರುತ್ತೀರಿ. ಅರೆರೆ.. ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡನ ಆನೆ ನಾಟಕವನ್ನು ನೆನಪು ಮಾಡಿಕೊಳ್ಳಿ. ನಿಮಗೆ ಆನೆಯ ಬುದ್ದಿವಂತಿಕೆ ಚೇಷ್ಟೆ ಮತ್ತು ಕಿತಾಪತಿಗಳೆಲ್ಲವೂ ನೆನಪಾಗುತ್ತವೆ. ಮತ್ತೊಂದು; ಹೆಣ್ಣುಮಕ್ಕಳು ಸೊಂಟವನ್ನು ಆ ಕಡೆ ಈ ಕಡೆ ಮಾಡುತ್ತ ನಡೆದರೆ ಅವರನ್ನು ಗಜಗಾಮಿನಿ ಎಂದು ಕರೆಯುತ್ತಾರೆ. ಅದೇ ಒಬ್ಬ ತುಂಬಾ ಗಂಭೀರವಾಗಿರುವವರನ್ನು ನೋಡಿ ಗಜಗಾಂಭೀರ್ಯ ಎಂದು ಕರೆಯುತ್ತಾರೆ. ಅದೇ ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಗಜಾನನನನ್ನು ಪೂಜಿಸುತ್ತೇವೆ. ಹಾಗೆ ಶುಕ್ರವಾರ ಗಜಲಕ್ಷ್ಮಿಯನ್ನು ಪೂಜಿಸುತ್ತೇವೆ. ವ್ಯತ್ಯಾಸ ತೋರಿಸಲು ಅಜಗಜಾಂತರ ಎನ್ನುತ್ತೇವೆ. ಅಂದರೆ ಆಡು ಮತ್ತು ಆನೆಗೂ ಇರುವ ಅಂತರ ಎಂದರ್ಥ. ಭೀಮನಿಗೆ 10 ಸಾವಿರ ಗಜ ಬಲ ಇರುತ್ತಂತೆ. ಮಹಿಳೆಯರು ಉಟ್ಟುಕೊಳ್ಳುವ ಸೀರೆಯನ್ನು ಗಜಗಳಲ್ಲಿ ಅಳೆಯುತ್ತೇವೆ. ಹೀಗೆ ಆನೆಗಳ ಮೇಲೆ ನಮ್ಮ ಆಬ್ಸೆಶನ್‌ ಯಾವತ್ತೂ ಕಡಿಮೆಯಾಗಿಲ್ಲ. ಆಗ ಪುರಾಣದಲ್ಲೂ ಅಷ್ಟೇ, ಶಿವ ಗಣೇಶನ ಮುಖವನ್ನು ಕತ್ತರಿಸಿದ್ದಾಗ ಬೇರೆ ಪ್ರಾಣಿ ಮುಖ ಸಿಗದೆ ಆನೆಯ ಮುಖವನ್ನೇ ಅಂಟಿಸುತ್ತಾರೆ. ಇಂದ್ರನೂ ಬೇರೆ ಯಾವ ಪ್ರಾಣಿ ಸಿಗದೆ ಆನೆಯನ್ನೇ ತನ್ನ ವಾಹನವನ್ನು ಮಾಡಿಕೊಳ್ಳುತ್ತಾನೆ. ಅವನು ಶ್ವೇತವರ್ಣದ ಆನೆಯ ಅರಸ. ಆನೆಗಳ ಕಥೆ ಎಂದಿಗೂ ಮುಗಿಯುವುದಿಲ್ಲ. ಅವುಗಳ ಕತೆ ಅವುಗಳಷ್ಟೇ ದೊಡ್ಡವು!

New Project (30)

ಆನೆಗಳ ಬಗ್ಗೆ ಇಷ್ಟೊಂದು ಮಾತು ಯಾಕೆಂದರೆ, ಕರ್ನಾಟಕದಲ್ಲಿ ಆನೆಗಳಿಗೆಂದೇ ಪ್ರಸಿದ್ಧವಾದ ಸ್ಥಳವಿದೆ. ಅದರ ಹೆಸರು ಸಕ್ರೆಬೈಲ್‌ ಆನೆ ಕ್ಯಾಂಪ್. ಸಕ್ಕರೆ ಸಾಮಾನ್ಯವಾಗಿ ಇರುವೆಗಳ ಬಯಲು, ಅದೇ ಈ ಸಕ್ರೆಬೈಲ್‌ ಹಿಂಡಾದ ಆನೆಗಳ ಬಯಲು. ಈ ಮೇಲೆ ಆನೆಗಳ ವರ್ಣನೆಯನ್ನೇ ಓದಿದ್ದೀರಿ. ಅದಕ್ಕಿಂತ ಜಾಸ್ತಿ ವರ್ಣನೆ ಮಾಡಬಹುದಾದ ವಿಚಾರಗಳು ಈ ಸಕ್ರೆಬೈಲ್‌ ಆನೆ ಶಿಬಿರದಲ್ಲಿ ಸಿಗುತ್ತದೆ. ತುಂಗಭದ್ರಾ ನದಿಯ ತಟದಲ್ಲಿನ ಬಯಲಲ್ಲಿರುವ ಈ ಶಿಬಿರ ಹಲವಾರು ಆನೆಗಳ ಆಟ, ಪಾಠ, ಊಟ ವಸತಿಗಳಿಗೆ ʼಶಾಲೆʼಯಾಗಿದೆ. ಬೆಳ್ಳಂ ಬೆಳಗ್ಗೆ ತುಂಗಭದ್ರಾ ನದಿ ತಟದಲ್ಲಿ ಆನೆಗಳೆಲ್ಲ ಆಟವಾಡುತ್ತ, ಸೊಂಡಿಲಿನಿಂದ ನೀರನ್ನು ಚಿಮುಕಿಸಿಕೊಳ್ಳುತ್ತ, ಅದರ ಮಾವುತರು ಆನೆಗಳ ಮೈಯುಜ್ಜುತ್ತಾ, ಸಣ್ಣ ಸಣ್ಣ ಆನೆಮರಿಗಳು ಅದರ ತಾಯಿಯನ್ನು ಬೆಂಬಿಡದೆ ಪೀಡಿಸುತ್ತಾ ಇರುವ ದೃಶ್ಯಗಳು ಸರ್ವೇ ಸಾಮಾನ್ಯ. ಸ್ನಾನ ಆದ ನಂತರ ಚಿಕ್ಕಮಕ್ಕಳ ಥರ, ಆನೆಯನ್ನು ಒಣಗಿಸಿ, ಅದರ ಕೂದಲುಗಳನ್ನು ಬಾಚಿ, ಪೌಡರ್‌ ಥರ ಬಣ್ಣವನ್ನು ಹಚ್ಚಿ, ಅವುಗಳ ತಿಂಡಿಗೆ ಸಿದ್ಧಮಾಡುತ್ತಾರೆ. ಅವುಗಳು ಊಟಮಾಡುವುದನ್ನೂ ನೀವು ನೋಡಬಹುದು. ನಿಮಗೆ ಗೊತ್ತಾ? ಆನೆಗಳಿಗೆ ತುಂಬಾ ಸಮೀಪದಲ್ಲಿ ನಿಂತು ನೀವು ಊಟ ಮಾಡಿಸಬಹುದು. ಆನೆ ಹಿಂಡುಗಳಲ್ಲಿ ನೀವೂ ಒಬ್ಬರಾಗಬಹುದು.

New Project (26)

ಸಕ್ರೆಬೈಲ್‌ ಆನೆ ಶಿಬಿರ ಶಿವಮೊಗ್ಗ ನಗರದಿಂದ ಸರಿ ಸುಮಾರು 14 ಕಿಮೀ ದೂರವಿದ್ದು, ಆನೆಗಳ ಸಂರಕ್ಷಣೆಯ ಇತಿಹಾಸವನ್ನೇ ಹೊಂದಿದೆ. ಕರ್ನಾಟಕ ಅರಣ್ಯ ಇಲಾಖೆಯಿಂದ ಶುರುವಾದ ಈ ಶಿಬಿರ ಆನೆಗಳಿಗೆ ಟ್ರೇನಿಂಗ್‌ ಮಾಡುವಲ್ಲಿ ಅತಿ ದೊಡ್ಡ ಶಿಬಿರವೂ ಹೌದು. ಈ ಶಿಬಿರದಲ್ಲಿ ಕರ್ನಾಟಕದಾದ್ಯಂತ ಆನೆಗಳ ಬಿಡಾರವಿದ್ದು, ಅದಕ್ಕೆ ಯಾವುದಾದರೂ ರೋಗವಿದ್ದರೆ, ಅದರ ಉಪಚಾರ ಮಾಡುತ್ತಾರೆ. ಅದಕ್ಕೆ ಪೋಷಣೆಯಾಗಿಲ್ಲವೆಂದರೆ ಅದನ್ನೂ ನೋಡಿಕೊಳ್ಳುತ್ತಾರೆ. ಯಾವುದಾದರೂ ಆನೆ ಮಾತು ಕೇಳಲಿಲ್ಲವೆಂದರೆ, ಮದ ಏರುವ ಹಾಗೇನಾದರೂ ಮಾಡುತ್ತಿದ್ದರೆ? ಇಲ್ಲಿನ ಮಾವುತರು ಅದನ್ನು ಸರಿಮಾಡುತ್ತಾರೆ. ಇಂಥ ಕಾರಣಗಳಿಂದಲೇ ಸಕ್ರೆಬೈಲ್‌ ಪ್ರಾಣಿಗಳನ್ನು ಇಷ್ಟಪಡುವವರಿಗೆ ಕಾಡನ್ನು ಇಷ್ಟಪಡುವವರಿಗೆ ಫೇವರಿಟ್‌ ಸ್ಪಾಟ್‌ ಆಗಿದೆ.

ಇಷ್ಟೆಲ್ಲ ಇದ್ದ ಈ ಜಾಗದಲ್ಲಿ ಜೆಎಲ್‌ಆರ್‌ ಇಲ್ಲದಿದ್ದರೆ ಹೇಗೆ? ಸಕ್ರೆಬೈಲ್‌ಗೆ ಬರುವ ಪ್ರವಾಸಿರಿಗೆ, ವನ್ಯಜೀವಿಗಳನ್ನು ಇಷ್ಟಪಡುವವರಿಗೆ, ಅಥವಾ ಎಲ್ಲವೂ ಬೋರ್‌ ಆಗಿ, ಸ್ವಲ್ಪ ಬದಲಾವಣೆ ಬೇಕೆಂದು ಬರುವವರಿಗೆ, ಜೆಎಲ್‌ಆರ್‌ ತನ್ನ ಬಾಗಿಲನ್ನು ಸದಾ ಪ್ರೀತಿಯಿಂದ ತೆರೆದಿರುತ್ತದೆ. ಈ ಕ್ಯಾಂಪ್‌ನಲ್ಲಿ ನಾವಷ್ಟೇ ಸ್ನಾನ ಮಾಡುವುದಲ್ಲ ಆನೆಗಳಿಗೂ ಸ್ನಾನ ಮಾಡಿಸಬಹುದು. ಆನೆಗಳ ಜತೆ ಸಂಭಾಷಣೆ ಮಾಡಬಹುದು, ಅವುಗಳನ್ನು ಹತ್ತಿರದಿಂದ ನೋಡುತ್ತ ನಿಲ್ಲಬಹುದು. ಅದರ ಆಶೀರ್ವಾದ ಪಡೆಯುವುದಂತೂ ಬೇರೆಯದ್ದೇ ಮಜಾ. ಈ ಜೆಎಲ್‌ಆರ್‌ ಕ್ಯಾಂಪ್ ಪ್ರವಾಸಿಗರಿಗೆ, ಕುಟುಂಬದ ಜತೆಸಮಯ ಕಳೆಯಲು ಹೋಗುವವರಿಗೆ, ಆರಾಮವಾಗಿ ಶಾಂತವಾಗಿ ಸಮಯ ಕಳೆಯುವವರಿಗೆಲ್ಲ ತುಂಬಾ ಫೇಮಸ್‌ ಆಗಿದೆ. ನೀವು ಈ ಶಿಬಿರಕ್ಕೆ ಭೇಟಿನೀಡಿದ ತಕ್ಷಣ ಒಳ್ಳೆಯ ವೆಲ್‌ಕಮ್‌ ಡ್ರಿಂಕ್‌ ಕೊಡುತ್ತಾರೆ. ಅದಾದ ಮೇಲೆ ಚೆಕ್‌ಇನ್‌ ಆಗಿ, ಸ್ವಲ್ಪ ವಿಶ್ರಾಂತಿ ಪಡೆಯಬಹುದು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಸ್ಟಾಫ್‌ಗಳ ಆತಿಥ್ಯ. ಬಾಯಿ ರುಚಿಯನ್ನು ಹೆಚ್ಚಿಸುವ ಊಟ ಮಾಡಿದಮೇಲೆ ಸ್ವಲ್ಪ ವಿಶ್ರಾಂತಿ ಮಾಡಿ, ಇಲ್ಲೇ ಸಮೀಪದಲ್ಲಿರುವ ಶೆಟ್ಟಿಹಳ್ಳಿ ವನ್ಯಜೀವಿ ಶಿಬಿರಕ್ಕೆ ವಾಕಿಂಗ್‌ ಹೋಗಬಹುದು. ಈ ಕ್ಯಾಂಪ್‌ ಹಸಿರು ಕಾಡಿನ ಮಧ್ಯದಲ್ಲಿ ಇರುವುದರಿಂದ ಅತ್ಯದ್ಭುತವಾದ ಬ್ರೆತ್‌ಟೇಕಿಂಗ್‌ ಸೀನರಿಗಳು ಕಾಣುತ್ತವೆ. ಇಲ್ಲಿ ಪಕ್ಷಿವೀಕ್ಷಣೆ, ನೇಚರ್‌ ವಾಕಿಂಗ್‌ಗಾಗಿ ನಿಮ್ಮ ಪ್ರೀತಿ ಪಾತ್ರರ ಜತೆಗೆ ನಿಸರ್ಗದಲ್ಲಿ ಸಮಯ ಕಳೆಯಲು ಇಲ್ಲಿಗೆ ಹೋಗಬಹುದು. ಅದರ ಮರುದಿನವೇ ಆನೆ ಕ್ಯಾಂಪ್‌ನತ್ತ ನಿಮ್ಮ ಪಯಣ. ಹಾಂ. ಗಜ ಗಾಂಭೀರ್ಯದಿಂದಲೇ ಪಯಣ ಬೆಳೆಸಿ.

ಚಟುವಟಿಕೆಗಳು

New Project (29)

ಪಕ್ಷಿ ವೀಕ್ಷಣೆ: ಬರ್ಡ್‌ ವಾಚಿಂಗ್‌ಗೆ ಹೇಳಿ ಮಾಡಿಸಿದ ತಾಣ. ನೂರಾರು ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಇದು ಪಕ್ಷಿ ಪ್ರೇಮಿಗಳ ಸ್ವರ್ಗ ಸದೃಶ ಲೋಕ.

ನೇಚರ್‌ ವಾಕಿಂಗ್‌ : ನೇಚರ್‌ ವಾಚಿಂಗ್‌ ಈ ಕ್ಯಾಂಪ್‌ನ ಪ್ರಮುಖ ಆಕರ್ಷಣೆ. ಇಲ್ಲಿ ಬರೀ ಆನೆಯನ್ನು ವೀಕ್ಷಿಸುವುದಷ್ಟೇ ಅಲ್ಲ, ಜೆಎಲ್‌ಆರ್‌ನಿಂದ ಶೆಟ್ಟಿಹಳ್ಳಿ ಕಾಡಿನತ್ತ ಟ್ರೆಕ್ಕಿಂಗ್‌ ಹೋಗಬಹುದು. ಗೆಸ್ಟ್‌ಗಳು ಕಾಡುಪ್ರಾಣಿಗಳನ್ನು ವೀಕ್ಷಿಸಿ, ಇಲ್ಲಿನ ಸಸ್ಯ ಮತ್ತು ಪ್ರಾಣಿ ಜಗತ್ತಿನ ಬಗ್ಗೆ ಸಾಕಷ್ಟು ಮಾಹಿತಿ ಪಡೆಯಬಹುದು. ಭೂರಮೆಯ ಸೌಂದರ್ಯವನ್ನು ಅನುಭವಿಸುತ್ತ, ಫೊಟೋ ಕ್ಲಿಕ್ಕಿಸಿಕೊಳ್ಳುತ್ತಾ. ನಿಮ್ಮ ಫೋನ್‌ ಮತ್ತು ಕ್ಯಾಮೆರಾದ ಮೆಮೊರಿ ಚಿಪ್‌ ಹಾಗೂ ಮಿದುಳಿನ ಮೆಮೊರಿಯನ್ನು ಭರ್ತಿ ಮಾಡಿಕೊಂಡು ಹೋಗಬಹುದು.

ಆನೆಗಳ ಸ್ನಾನ: ಇಲ್ಲಿ ಆನೆಗಳು ಸ್ನಾನ ಮಾಡುವುದನ್ನು ಕಣ್ತುಂಬಿಕೊಳ್ಳಬಹುದು. ನಿಮಗೆ ಅಜ್ಜಯ್ಯನ ಅಭ್ಯಂಜನ ಗೊತ್ತು. ಗಜರಾಜನ ಮಜ್ಜನ ಗೊತ್ತಾ? ಆನೆಗಳು ಥೇಟ್‌ ಚಿಕ್ಕಮಕ್ಕಳ ಹಾಗೆ ಇಲ್ಲಿ ಸ್ನಾನ ಮಾಡುತ್ತವೆ. ಆನೆಗಳ ಜಲಕ್ರೀಡೆಯನ್ನು ಹತ್ತಿರದಿಂದಲೇ ನೋಡಬಹುದು. ಗಾಜನೂರು ಅಣೆಕಟ್ಟಿನ ಹಿನ್ನೀರಿನಲ್ಲಿ ಆನೆಗಳು ಸ್ನಾನ ಮಾಡುತ್ತಿರುತ್ತದವೆ. ಇಲ್ಲಿ ನೀವೂ ಆನೆಗಳಿಗೆ ಸ್ಕ್ರಬ್‌ ಮಾಡಬಹುದು. ನೀರಿನಿಂದ ಅವುಗಳ ಮೈ ತೊಳೆದು ತಿಕ್ಕಬಹುದು. ಊರಿಗೆ ಬಂದ ನಂತರ ಆನೆಗೂ ಸ್ನಾನ ಮಾಡಿಸಿದವನು ನಾನು ಎಂದು ಹೇಳಿಕೊಂಡು ಗತ್ತಿನಿಂದ ತಿರುಗಾಡಬಹುದು.

ವನ್ಯಜೀವಿ ಚಿತ್ರ ವೀಕ್ಷಣೆ: ಇಲ್ಲಿನ ಅತಿಥಿಗಳ ಜತೆ ಸೇರಿ ವನ್ಯಜೀವಿಗಳ ಸಿನಿಮಾ ಮತ್ತು ಡಾಕ್ಯುಮೆಂಟರಿ ವೀಕ್ಷಿಸಬಹುದು. ಈ ಮೂಲಕ ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಬಹುದು.

ಫೈರ್‌ಕ್ಯಾಂಪ್‌: ರೆಸಾರ್ಟ್‌ ಎಂದಮೇಲೆ ಫೈರ್‌ ಕ್ಯಾಂಪ್‌ ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಮೈ ಕೈ ಕಾಯಿಸಿಕೊಳ್ಳಲು ಫೈರ್‌ ಕ್ಯಾಂಪ್‌ ಬೇಕೇಬೇಕು. ರಾತ್ರಿ ಸಮಯದಲ್ಲಿ ಎಲ್ಲ ಅತಿಥಿಗಳು ಫೈರ್‌ ಕ್ಯಾಂಪ್‌ ಸುತ್ತ ಕುಳಿತು ಹರಟೆ ಹೊಡೆಯಬಹುದು.

ವಾಸ್ತವ್ಯ

New Project (31)

ಸಕ್ರೆಬೈಲ್ ಆನೆ ಕ್ಯಾಂಪ್‌ಗೆ ಬರುವ ಗೆಸ್ಟ್‌ಗಳಿಗೆ ಆರಾಮದಾಯಕವಾದ ಕಾಟೇಜ್‌ಗಳು ಮತ್ತು ಸುಸಜ್ಜಿತ ಟೆಂಟ್‌ಗಳು ಸೇರಿದಂತೆ ಹತ್ತು ಹಲವು ವಸತಿ ಆಯ್ಕೆಗಳಿವೆ. ಕೊಠಡಿಗಳು ಸ್ವಚ್ಛವಾಗಿದ್ದು, ಸಾಕಷ್ಟು ಸೌಕರ್ಯಗಳಿವೆ. ಕ್ಯಾಂಪ್‌ನ ವಾತಾವರಣವು ಫ್ರೆಂಡ್ಲಿಯಾಗಿದ್ದು ನಿಶ್ಚಿಂತೆಯಿಂದ ಉಳಿದುಕೊಳ್ಳಬಹುದು. ಕಾಡಿನ ನಡುವೆ ಉಳಿದುಕೊಂಡು ಮೃಗ ಖಗಗಳ ಸದ್ದಿಗೆ ಕಿವಿಕೊಡುತ್ತಾ ದಿವ್ಯ ಅನುಭೂತಿ ಪಡೆಯಬಹುದು. ಅಲ್ಲಿನ ಪ್ರತಿ ಸಿಬ್ಬಂದಿಯೂ ನಿಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡು ಉಪಚರಿಸುತ್ತಾರೆ. ಉಪಾಹಾರ, ಊಟ ಮತ್ತು ರಾತ್ರಿಯ ಭೋಜನವನ್ನು ಪ್ಯಾಕೇಜ್‌ನಲ್ಲಿಯೇ ಸೇರಿಸಲಾಗಿರುತ್ತದೆ. ಫುಡ್‌ ಮೆನ್ಯೂ ತೀರಾ ಸರಳವಾಗಿದ್ದರೂ ರುಚಿಕರವಾಗಿದೆ. ಹೆಚ್ಚಾಗಿ ಸ್ಥಳೀಯ ಆಹಾರವನ್ನು ತಯಾರಿಸಿ ಪ್ರೀತಿಯಿಂದ ಬಡಿಸುತ್ತಾರೆ. ಊಟವನ್ನು ವಿಶಿಷ್ಟವಾದ JLR ಬಫೆ ಶೈಲಿಯಲ್ಲಿ ನೀಡಲಾಗುತ್ತದೆ. ಊಟದ ನಂತರವೂ ನೇಚರ್‌ ವಾಕ್‌ಗೆ ಹೋಗಬಹುದು. ರೆಸಾರ್ಟ್‌ನಿಂದ ಆಚೆಗೆ ಬಂದು ತಂಪಾದ ಗಾಳಿಯಲ್ಲಿ ರಿಲ್ಯಾಕ್ಸ್‌ ಆಗಬಹುದು.

ಸೀಸನ್‌

ಈ ಕ್ಯಾಂಪ್‌ ವರ್ಷಪೂರ್ತಿ ತೆರೆದಿರುತ್ತದೆ. ನಿಮ್ಮ ಬಿಡುವಿನ ದಿನದಲ್ಲಿ ಯಾವಾಗ ಬೇಕಾದರೂ ಭೇಟಿ ನೀಡಬಹುದು. ಆದರೂ ಸಕ್ರೆಬೈಲ್ ಆನೆ ಶಿಬಿರಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭದ ದಿನಗಳು. ಇದು ಸಾಮಾನ್ಯವಾಗಿ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳ ನಡುವೆ ಬರುತ್ತದೆ. ಈ ಸಮಯದಲ್ಲಿ ವಾತಾವರಣವು ಅದ್ಭುತವಾಗಿರುತ್ತದೆ.

New Project (25)

ಪ್ಯಾಕೇಜ್‌ಗಳು

ವುಡ್ ಕಾಟೇಜ್ ಪ್ಯಾಕೇಜ್

ಟೆಂಟ್‌ ಪ್ಯಾಕೇಜ್‌ಗಳು

ಡಾರ್ಮಿಟರಿ ಪ್ಯಾಕೇಜ್‌

ಈ ಪ್ಯಾಕೇಜ್‌ನಲ್ಲಿ ಸ್ನಾನಗೃಹದೊಂದಿಗೆ ವಾಸ್ತವ್ಯ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ. ಸಕ್ರೆಬೈಲ್ ಶಿಬಿರದಲ್ಲಿ ಆನೆಗಳ ವೀಕ್ಷಣೆ, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯಕ್ಕೆ ಚಾರಣ/ನೇಚರ್‌ ವಾಕಿಂಗ್. ಬಿಸಿನೀರಿನ ಸ್ನಾನ. ವಿಶಾಲವಾದ ಬಾಲ್ಕನಿ ಮತ್ತು ಹಬೆಯಾಡುವ ಬಿಸಿಬಿಸಿ ಕಾಫಿಯೊಂದಿಗೆ ಇಡೀ ಕ್ಯಾಂಪ್‌ ಅನ್ನು ಆನಂದಿಸಬಹುದು.

ದಿನಚರಿ

ದಿನ 1

1:00 PM - ಚೆಕ್-ಇನ್, ಸೆಟ್ಲ್ ಡೌನ್ ಮತ್ತು ಫ್ರೆಶ್ ಅಪ್: ಕ್ಯಾಂಪ್‌ಗೆ ಆಗಮಿಸಿದ ನಂತರ, ಅತಿಥಿಗಳು ಚೆಕ್ ಇನ್ ಆಗಬೇಕು. ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಅವರ ವಸತಿ ಸೌಕರ್ಯ ಮತ್ತು ಫ್ರೆಶ್ ಅಪ್ ಆಗಲು ಸಮಯವನ್ನು ನೀಡಲಾಗುತ್ತದೆ.

1:30 PM - 2:30 PM – ಗೋಲ್ ಘರ್‌ನಲ್ಲಿ ಊಟ: ಕ್ಯಾಂಪ್‌ನಲ್ಲಿ ಫುಡ್‌ ಏರಿಯಾವಾದ ಗೋಲ್ ಘರ್‌ನಲ್ಲಿ ರುಚಿಕರವಾದ ಊಟವನ್ನು ಆನಂದಿಸಲು ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ.

4:00 PM - 6:00 PM – ನೇಚರ್‌ ವಾಕಿಂಗ್‌ /ಆನೆ ವೀಕ್ಷಣೆ/ಪಕ್ಷಿ ವೀಕ್ಷಣೆ: ಈ ಸಮಯದಲ್ಲಿ, ಕ್ಯಾಂಪ್‌ನ ಸಿಬ್ಬಂದಿಗಳು ಅತಿಥಿಗಳನ್ನು ನೇಚರ್‌ ವಾಕಿಂಗ್‌ , ಆನೆ ಇರುವ ಸ್ಥಳಕ್ಕೆ ಮತ್ತು ಪಕ್ಷಿ ವೀಕ್ಷಣೆಯ ವಿಹಾರಕ್ಕೆ ಕರೆದೊಯ್ಯುತ್ತಾರೆ. ರೆಸಾರ್ಟ್‌ನ ಅನುಭವಿ ಸಿಬ್ಬಂದಿಗಳು ಕಾಡಿನ ನಿವಾಸಿಗಳು ಮತ್ತು ಅಲ್ಲಿ ವಾಸಿಸುವ ವಿವಿಧ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳುತ್ತಾರೆ.

6:30PM - 7:30PM - ವನ್ಯಜೀವಿ ಚಲನಚಿತ್ರ ಪ್ರದರ್ಶನ: ಅತಿಥಿಗಳು ವನ್ಯಜೀವಿ ಚಲನಚಿತ್ರ ಪ್ರದರ್ಶನವನ್ನು ಆನಂದಿಸಬಹುದು, ಅಲ್ಲಿ ವೈವಿಧ್ಯಮಯ ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರಗಳು ಅಥವಾ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

7:30 - 8:30 PM- ಫೈರ್‌ಕ್ಯಾಂಪ್‌: ಅತಿಥಿಗಳಿಗಾಗಿ ಫೈರ್‌ಕ್ಯಾಂಪ್‌ ಇರುತ್ತದೆ. ಇಲ್ಲಿಗೆ ಬಂದ ಅತಿಥಿಗಳು ಇದರ ಸುತ್ತ ಕೂತು ಹರಟಬಹುದು, ವಿಶ್ರಾಂತಿ ಪಡೆಯಬಹುದು ಮತ್ತು ಬೇರೆ ಅತಿಥಿಗಳು ಮತ್ತು ಕ್ಯಾಂಪ್‌ನ ಸಿಬ್ಬಂದಿಯೊಂದಿಗೆ ಆಪ್ತವಾಗಿ ಮಾತನಾಡಬಹುದು. ಕಾಡಿನ ಬಗ್ಗೆ ಮತ್ತು ದಿನದ ಚಟುವಟಿಕೆಗಳ ಬಗ್ಗೆ ಕಥೆಗಳು, ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲು ಇದು ಉತ್ತಮ ಸಮಯ.

8:30 - 9:30 PM ಊಟ ಮತ್ತು ಫಾರೆಸ್ಟ್‌ ಸ್ಟೋರಿ: ಗೋಲ್ ಘರ್ ನಲ್ಲಿ ಊಟ ಮಾಡುವಾಗ, ಅತಿಥಿಗಳು ಇತರ ಅತಿಥಿಗಳು ಮತ್ತು ಸಿಬ್ಬಂದಿಯೊಂದಿಗೆ ಕಾಡಿನಲ್ಲಿ ತಮ್ಮ ಅನುಭವಗಳ ಕಥೆಗಳನ್ನು ಹೇಳುತ್ತ ಮತ್ತು ಸುಖ ದುಃಖ ಮಾತನಾಡುತ್ತ ಸಮಯ ಕಳೆಯಬಹುದು.

ದಿನ 2

6:00 - 6:15 AM- ವೇಕಪ್‌ ಕಾಲ್/ಚಹಾ/ಕಾಫಿ: ಅತಿಥಿಗಳನ್ನು ಬೆಳಗ್ಗೆ ಬೇಗನೆ ಎಬ್ಬಿಸಲಾಗುತ್ತದೆ ಮತ್ತು ಅವರ ದಿನವನ್ನು ಪ್ರಾರಂಭಿಸಲು ಚಹಾ ಅಥವಾ ಕಾಫಿಯನ್ನು ನೀಡಲಾಗುತ್ತದೆ.

6:30 - 9:30 AM- ಶೆಟ್ಟಿಹಳ್ಳಿ ವನ್ಯಜೀವಿ ಮತ್ತು ಆನೆಗಳ ಜತೆ ಚಾರಣ: ಈ ಸಮಯದಲ್ಲಿ, ಪ್ರವಾಸಿಗರು ಶೆಟ್ಟಿಹಳ್ಳಿ ವನ್ಯಜೀವಿ ಪ್ರದೇಶದಲ್ಲಿ ಚಾರಣ ಕೈಗೊಳ್ಳುತ್ತಾರೆ. ಇದು ನೈಸರ್ಗಿಕ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸಲು, ವನ್ಯಜೀವಿಗಳನ್ನು ವೀಕ್ಷಿಸಲು ಮತ್ತು ಆನೆಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಬಹುದು. ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ಒಳನೋಟಗಳು ಮತ್ತು ಮಾಹಿತಿಯನ್ನು ಒದಗಿಸುವ ಅನುಭವಿಗಳು ಚಾರಣದೊಂದಿಗೆ ಇರುತ್ತಾರೆ. ಆನೆಗಳೊಂದಿಗೆ ಬೆರೆಯಲು ಮತ್ತು ಅವುಗಳ ಸ್ನಾನದ ಸಮಯವನ್ನು ಆನಂದಿಸಲು ಆನೆ ಶಿಬಿರಕ್ಕೆ ಭೇಟಿ ನೀಡಿ.

9:30 - 10:15 AM- ಉಪಾಹಾರ: ಅತಿಥಿಗಳಿಗೆ ಅಚ್ಚುಕಟ್ಟಾದ ಉಪಾಹಾರವನ್ನು ನೀಡಲಾಗುತ್ತದೆ. ಇದು ಅವರ ಶಕ್ತಿಯನ್ನು ತುಂಬಲು ಮತ್ತು ರುಚಿಕರವಾದ ಊಟವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.

10:30 AM- ಚೆಕ್ಔಟ್: ಉಪಾಹಾರದ ನಂತರ, ಅತಿಥಿಗಳು ತಮ್ಮ ಚೆಕ್ಔಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಸಂಪರ್ಕ:

ಸಕ್ರೆಬೈಲ್ ಆನೆ ಶಿಬಿರ, ಸಕ್ರೆಬೈಲ್, ಗಾಜನೂರು

ಶಿವಮೊಗ್ಗ- 577202

ಮ್ಯಾನೇಜರ್: ಕೆ.ಎಂ. ಪ್ರವೀಣ್ ಕುಮಾರ್

ಬುಕಿಂಗ್ ವಿಚಾರಣೆ ಮತ್ತು ಸಂಪರ್ಕ : 9480887180

ಇಮೇಲ್ ಐಡಿ: info@junglelodges.com

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ