Friday, September 5, 2025
Friday, September 5, 2025

ಜಾಲಿ ಜಾಲಿ….ಗಂಗಾಜಾಲಿ!

ಬೃಹತ್ ಬೆಳ್ಳಿಹೂಜಿಗಳನ್ನು ನೋಡಿದ ಬ್ರಿಟಿಷರಿಗೆ ಅತ್ಯಾಶ್ಚರ್ಯವಾಯಿತಂತೆ. ಜೈಪುರ ಚರಿತ್ರೆಕಾರರ ಪ್ರಕಾರ ಕಿಂಗ್ ಏಳನೆಯ ಎಡ್ವರ್ಡ್ ನು ಈ ಎರಡು ಹೂಜಿಗಳನ್ನು ನೋಡಲೆಂದೇ ಮಹಾರಾಜರ ಶಿಬಿರಕ್ಕೆ ವೈಯಕ್ತಿಕವಾಗಿ ಭೇಟಿಯಿತ್ತಿದ್ದನಂತೆ!

  • ವಿದ್ಯಾ.ವಿ. ಹಾಲಭಾವಿ

ಪ್ರಾಚೀನ ಭಾರತದಲ್ಲಿ ತಯಾರಾಗಿರುವ ಬೆಳ್ಳಿ ಕಲಾಕೃತಿಗಳಿಗಂತೂ ಬರವೇ ಇಲ್ಲ ಬಿಡಿ! ಆ ಕಾಲದಲ್ಲಿ ಬೆಳ್ಳಿಯ ಬೆಲೆಯೂ ಸಹ ಅತ್ಯಲ್ಪ ಅಂದರೆ ಪ್ರತೀ ಗ್ರಾಂಗೆ ಒಂದು ಆಣೆ ಅಥವಾ ಆರುಪೈಸೆ ಅಷ್ಟೆ! ರಾಜ ಮಹಾರಾಜರ ಮನೆತನಗಳಲ್ಲಿದ್ದ ಕಿಲೋಗಟ್ಟಲೆ ತೂಕವುಳ್ಳ ಬೆಳ್ಳಿ ವಸ್ತುಗಳನ್ನು ಕೆಲವು ಕಡೆ ಈಗಲೂ ನಾವು ನೋಡಬಹುದಾಗಿದೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ಹಾಗೂ ಐತಿಹಾಸಿಕ ಮಹತ್ವವುಳ್ಳ ವಸ್ತುಗಳೆಂದರೆ ರಾಜಸ್ಥಾನದ ಜೈಪುರ ಮಹಾರಾಜರ ಸಿಟಿ ಪ್ಯಾಲೇಸ್‌ನಲ್ಲಿರುವ ಎರಡು ಬೃಹತ್ ಗಾತ್ರದ ನೀರಿನ ಹೂಜಿಗಳು. ಗಂಗಾಜಾಲಿ ಎಂದು ಕರೆಯುವ ಇವುಗಳ ವಿಶೇಷತೆ ಏನು ಗೊತ್ತೆ? ಶುದ್ಧ ಬೆಳ್ಳಿಯಿಂದ ತಯಾರಿಸಿರುವ ಪ್ರತಿಯೊಂದು ಹೂಜಿಯೂ 345 ಕಿಲೋಗ್ರಾಂನಷ್ಟು ತೂಕವನ್ನು ಹೊಂದಿದ್ದು, 5 ಅಡಿ 2 ಇಂಚುಗಳಷ್ಟು ಉದ್ದ ಹಾಗೂ 14 ಅಡಿ 10 ಇಂಚುಗಳ ಸುತ್ತಳತೆಯನ್ನು ಹೊಂದಿದೆ. ತಲಾ 900 ಗ್ಯಾಲನ್ (4091 ಲೀಟರ್)ನಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

ಈ ಬೆಳ್ಳಿ ಜಾಡಿಗಳ ಹಿಂದೆ ಜನಪ್ರಿಯ ಕಥೆಯೊಂದು ಅಡಗಿದೆ. ಒಟ್ಟು ಮೂರು ನೀರಿನ ಜಾಡಿಗಳನ್ನು ಎರಡು ವರ್ಷದ ಅವಧಿಯಲ್ಲಿ (1894 ಹಾಗು 1896) ಜೈಪುರದ ಅರಮನೆಯಲ್ಲಿದ್ದ ಪರಿಣಿತ ಅಕ್ಕಸಾಲಿಗರು 14000ದಷ್ಟು ಅಪ್ಪಟ ಬೆಳ್ಳಿ ನಾಣ್ಯಗಳನ್ನು ಕರಗಿಸಿ ತಯಾರಿಸಿದ್ದಾರೆಂದು ತಿಳಿದು ಬರುತ್ತದೆ.

ಬೆಳ್ಳಿ ಹೂಜಿಗಳು ತಯಾರಾದ ಆರು ವರ್ಷಗಳ ನಂತರ ಜೈಪುರದ ರಾಜಮನೆತನದವರು ಅದನ್ನು ಬಳಸಿಕೊಳ್ಳುವ ಅವಕಾಶ ಒದಗಿ ಬಂದಿತು. ಅದು ಯಾವಾಗ ಗೊತ್ತೇ? 1902ರಲ್ಲಿ ಕಿಂಗ್ ಏಳನೆಯ ಎಡ್ವರ್ಡ್ ರ ಪಟ್ಟಾಭಿಷೇಕದಲ್ಲಿ ಭಾಗವಹಿಸಲು ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣ ಬೆಳೆಸುವಾಗ.

ರಾಣಿ ವಿಕ್ಟೋರಿಯಾಳ ಮರಣದ ನಂತರ ಅವರ ಮಗನಾದ ಕಿಂಗ್ ಏಳನೆಯ ಎಡ್ವರ್ಡ್ ಬ್ರಿಟಿಷ್ ಸಾಮ್ರಾಜ್ಯವನ್ನು ವಹಿಸಿಕೊಂಡರು.ಅವರು ತಮ್ಮ ಪಟ್ಟಾಭಿಷೇಕ ಮಹೋತ್ಸವಕ್ಕೆ ಪ್ರಮುಖ ಭಾರತೀಯ ಮಹಾರಾಜರುಗಳಿಗೆ ಆಹ್ವಾನವನ್ನು ನೀಡಿದರು. ಜೈಪುರದ ಮಹಾರಾಜ ಎರಡನೆಯ ಮಾಧೋಸಿಂಗ್ ಅವರುಗಳಲ್ಲಿ ಒಬ್ಬರು. ಆದರೆ ಈ ಆಹ್ವಾನವು ಭಾರತೀಯ ರಾಜರುಗಳಿಗೆ ಸಂದಿಗ್ಧತೆಯನ್ನು ಉಂಟು ಮಾಡಿತು. ಏಕೆಂದರೆ ಆ ದಿನಗಳಲ್ಲಿ ಯುರೋಪ್ ದೇಶವನ್ನು ತಲುಪಲು ಸಮುದ್ರ ಮಾರ್ಗದಲ್ಲೇ ಪ್ರಯಾಣಿಸಬೇಕಿತ್ತು ಮತ್ತು ಸಂಪ್ರದಾಯಸ್ಥ ಹಿಂದೂಗಳು ಸಮುದ್ರವನ್ನು ದಾಟಲು ಅವಕಾಶವಿರಲಿಲ್ಲ.

ಮಹಾನ್ ಹಿಂದೂ ಧರ್ಮಪರಿಪಾಲಕನಾಗಿದ್ದ ಮಹಾರಾಜ ಮಾಧೋಸಿಂಗ್‌ರಿಗೆ, ಅವರ ಪುರೋಹಿತರು ಈ ಧಾರ್ಮಿಕ ಆಜ್ಞೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.ಆಹ್ವಾನವನ್ನು ನಿರ್ಲಕ್ಷಿಸುವುದು ದುರಹಂಕಾರದ ನಡೆಯಾಗುತ್ತದೆ ಮತ್ತು ಆ ಕರೆಯನ್ನು ತಿರಸ್ಕರಿಸಿ ಕಿಂಗ್ ಎಡ್ವರ್ಡ್ ನ ಕೋಪಕ್ಕೆ ಗುರಿಯಾಗುವುದು ಮಾಧೋಸಿಂಗ್ ರಿಗೆ ಇಷ್ಟವಿರಲಿಲ್ಲ.ಚಿಂತಿತರಾಗಿದ್ದ ಮಹಾರಾಜರು ಧಾರ್ಮಿಕ ಮುಖಂಡರ ಸಭೆಗಳನ್ನು ಕರೆದರು. ಸಾಕಷ್ಟು ಚರ್ಚೆಗಳಾದ ನಂತರ ಕಿರೀಟಧಾರಣ ಮಹೋತ್ಸವಕ್ಕೆ ಲಂಡನ್ ಗೆ ಹೋಗಬಹುದು ಎಂದು ನಿರ್ಧರಿಸಿದರು.

gangajali 3

ಗೋಮಾಂಸವನ್ನು ಬೇಯಿಸದ ಅಥವಾ ಬಡಿಸದ ಹಡಗಿನಲ್ಲಿ ಪ್ರಯಾಣಿಸಬಹುದು. ದಿನ ನಿತ್ಯ ಪೂಜೆ ಮಾಡಲು ತಮ್ಮ ಕುಟುಂಬ ದೇವತೆಯ ವಿಗ್ರಹವನ್ನು ತಮ್ಮ ಜೊತೆ ಹಡಗಿನಲ್ಲಿ ತೆಗೆದು ಕೊಂಡು ಹೋಗುವುದು. ಭಾರತೀಯ ಮಣ್ಣಿನಲ್ಲೇ ಇರುವುದರ ಸಾಂಕೇತಿಕವಾಗಿ ಜೈಪುರದ ಪವಿತ್ರ ಮಣ್ಣನ್ನು ದೇವರ ವಿಗ್ರಹವಿರುವ ಪೀಠದ ಕೆಳಗೆ ಮತ್ತು ಮಹಾರಾಜರು ಮಲಗುವ ಹಾಸಿಗೆಯ ಕೆಳಗೆ ಹರಡುವುದು. ಪ್ರಾರ್ಥನಾ ಅವಧಿಗಳಲ್ಲಿ ತಮ್ಮ ಮನೆದೇವರಿಗೆ ಅರ್ಪಿಸಿದ ನೈವೇದ್ಯವನ್ನು ಮಾತ್ರ ಸೇವಿಸುವುದು. ಕೊನೆಯದಾಗಿ ಭಾರತದಿಂದ ದೂರವಿರುವ ಮೂರು ತಿಂಗಳುಗಳ ಅವಧಿಯಲ್ಲಿ ಗಂಗಾ ಜಲವನ್ನು ಹೊರತು ಪಡಿಸಿ ಬೇರೆ ಯಾವ ನೀರನ್ನು ಸಹ ಕುಡಿಯುವಂತಿಲ್ಲ. ಈ ಎಲ್ಲಾ ಷರತ್ತುಗಳಿಂದ ಮಹಾರಾಜರು ಸಮಾಧಾನಗೊಂಡರು ಮತ್ತು ಗ್ರೇಟ್ ಬ್ರಿಟನ್‌ಗೆ ಪ್ರಯಾಣ ಮತ್ತು ವಾಸ್ತವ್ಯದ ಸಮಯದಲ್ಲಿಈ ಎಲ್ಲಾ ಪರಿಸ್ಠಿತಿಗಳನ್ನು ಗಮನಿಸಿ ಸೂಕ್ತ ವ್ಯವಸ್ಥೆಯನ್ನು ಮಾಡುವಂತೆ ತಮ್ಮ ಆಸ್ಥಾನ ಅಧಿಕಾರಿಗಳಿಗೆ ಆದೇಶಿಸಿದರು.

ಏತನ್ಮಧ್ಯೆ ಮಹಾರಾಜರ ಪ್ರವಾಸ ಯೋಜಕ (ಟ್ರಾವೆಲ್ ಏಜೆಂಟ್)ರನ್ನು ಗೋಮಾಂಸವನ್ನು ಬೇಯಿಸದ ಅಥವಾ ಬಡಿಸದ ಹಡಗನ್ನು ಬಾಡಿಗೆ ಪಡೆಯುವಂತೆ ಕೇಳಲಾಯಿತು. ಪಾಶ್ಚಿಮಾತ್ಯ ಜಗತ್ತಿನ ಗೋಮಾಂಸದ ಅಭಿರುಚಿಯನ್ನು ತಿಳಿದಿದ್ದರಿಂದ ಇದು ಒಂದು ದೊಡ್ಡ ಕ್ರಮವಾಗಿತ್ತು. ಅದೃಷ್ಟವಶಾತ್ ಮಹಾರಾಜರ ಏಜೆಂಟರು ಆಗಷ್ಟೇ ಪೂರ್ಣಗೊಂಡಿದ್ದ ಇನ್ನೂ ಯಾರೂ ಪ್ರಯಾಣ ಮಾಡಿರದ ‘ಒಲಂಪಿಯಾ’ ಎಂಬ ಪ್ರಯಾಣಿಕ ನೌಕೆಯನ್ನು ಪಡೆಯುವಲ್ಲಿ ಸಫಲರಾದರು. ಹಡಗಿನಲ್ಲಿ ಯು.ಕೆಗೆ ಹೋಗಿ ವಾಪಸ್ ಬರುವುದು ಮತ್ತು ಅಲ್ಲಿ ಒಂದು ತಿಂಗಳು ಕಾಯುವುದೂ ಸೇರಿದಂತೆ ಒಂದೂವರೆ ಮಿಲಿಯನ್ ರೂಪಾಯಿಗಳ ಮೊತ್ತ ಬಾಡಿಗೆಗೆ ವೆಚ್ಚವಾಯಿತು.

ಒಲಂಪಿಯಾ ನೌಕೆಯಲ್ಲಿ ಆರು ಐಷಾರಾಮಿ ಸೂಟ್ (ಹಲವಾರು ಕೊಠಡಿಗಳು ಸೇರಿರುವ ಒಂದು ದೊಡ್ಡ ವಿಲಾಸಿ ಸ್ಠಳ)ಗಳನ್ನು ಸಿದ್ಧಪಡಿಸಲಾಗಿತ್ತು. ಮೊದಲ ಮತ್ತು ಅತ್ಯಂತ ಐಷಾರಾಮಿ ಸೂಟ್, ಜೈಪುರ ರಾಜಮನೆತನದ ಮನೆ ದೇವರಾದ ಗೋಪಾಲ್‌ಜಿ ಗಾಗಿ. ಈ ದೇವತಾ ವಿಗ್ರಹಗಳನ್ನು ಮಹಾರಾಜರು ಪೂಜೆ ಮಾಡಲು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕಿತ್ತು. ಎರಡನೆಯ ಸೂಟ್ ಸ್ವತಃ ಮಹಾರಾಜರಿಗಾಗಿ, ಮೂರನೆಯದು ರಾಜ ಪುರೋಹಿತರಿಗಾಗಿ, ನಾಲ್ಕನೆಯ ಸೂಟ್ ಮಹಾರಾಜರ ಹತ್ತಿರದ ಸಂಬಂಧಿಗಳಲ್ಲಿ ಒಬ್ಬರರಾದ ತಾಜ್ಮಿ ಸರ್ದಾರರಿಗೆ ಮತ್ತು ಇತರ ಎರಡು ಸೂಟ್ ಗಳು ಗುಂಪಿನಲ್ಲಿರುವ ಬೇರೆ ಬೇರೆ ಸದ್ಯಸರಿಗೆ ನಿಗದಿಯಾಗಿತ್ತು. ಬೆಳ್ಳಿಜಾಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಪವಿತ್ರ ಗಂಗಾ ಜಲವನ್ನು ಮಹಾರಾಜರ ವಿಶೇಷ ಬಳಕೆಗಾಗಿ ಮತ್ತು ದೇವರ ಪ್ರಸಾದ ತಯಾರಿಸಲು ಬಳಸಲಾಯಿತು. ಈ ಜಾಡಿಗಳಲ್ಲಿದ್ದ ನೀರು ಮೂರು ತಿಂಗಳುಗಳ ಕಾಲ ಜೈಪುರದಿಂದ ದೂರವಿರುವ ಮಹಾರಾಜರಿಗೆ ಸಾಕಾಯಿತು.

ಸಮುದ್ರದ ಮುಖ್ಯ ದೇವರಾದ ವರುಣನನ್ನು ಸಂತೋಷ ಪಡಿಸುವ ಧಾರ್ಮಿಕ ಸಮಾರಂಭವನ್ನು ನಡೆಸಲೆಂದು 25 ಜನ ಅರ್ಚಕರ ಗುಂಪನ್ನು, ಬಾಂಬೆಯಿಂದ ಹೊರಡುವ ಎರಡು ದಿನ ಮೊದಲು ಹಡಗಿನಲ್ಲಿ ಕಳಿಸಲಾಯಿತು. ಪ್ರಾಯಶ್ಚಿತ್ತ ಸಮಯದಲ್ಲಿ ಮುತ್ತುಗಳು, ವಜ್ರಗಳು ಮತ್ತು ಚಿನ್ನದ ನಾಣ್ಯಗಳ ಸಾಂಕೇತಿಕ ಉಡುಗೊರೆಗಳನ್ನು ವಿಧ್ಯುಕ್ತವಾಗಿ ಸಮುದ್ರಕ್ಕೆ ಬಿಡಲಾಯಿತು. ಪವಿತ್ರಜಲವನ್ನು ತುಂಬಿಸಿದ್ದ ಮೂರು ಬೃಹತ್ ಬೆಳ್ಳಿ ಜಾಡಿಗಳನ್ನು ಮತ್ತು 75 ಟನ್ ಮಹಾರಾಜರ ವೈಯಕ್ತಿಕ ಸಾಮಾನುಗಳನ್ನು ಸ್ಟೀಮರ್‌ಗೆ ತುಂಬಿಸಿಕೊಂಡು ಇಡೀ ತಂಡವು ಬ್ರಿಟನ್‌ಗೆ ಪಯಣ ಬೆಳೆಸಿತು.

ಬಾಂಬೆ ತೀರದಿಂದ ಹೊರಟ ಕೆಲದಿನಗಳ ನಂತರ ಕೆಂಪು ಸಮುದ್ರದಲ್ಲಿ ನೌಕೆಯು, ಪ್ರಬಲ ಬಿರುಗಾಳಿಗೆ ಸಿಲುಕಿ ಹೊಯ್ದಾಡತೊಡಗಿತು.ಇದರಿಂದ ತಳಮಳ ಹೊಂದಿದ ಬ್ರಾಹ್ಮಣ ಪುರೋಹಿತರು, ಹಿಂದೂ ಧರ್ಮಗ್ರಂಥಗಳಲ್ಲಿರುವುದನ್ನು ಉಲ್ಲಂಘಿಸಿ ಮಹಾರಾಜರು ಸಾಗರವನ್ನು ದಾಟುತ್ತಿರುವುದರಿಂದ ವರುಣ ದೇವನು ಅತೃಪ್ತಿ ಹೊಂದಿದ್ದಾನೆ, ಅದಕ್ಕಾಗಿ ಮೂರು ಬೃಹತ್ ಕುಡಿಕೆಗಳಲ್ಲಿ ಒಂದನ್ನು ಸಮುದ್ರಕ್ಕೆ ಎಸೆಯ ಬೇಕೆಂದು ಸಲಹೆ ನೀಡಿದರು. ಅವರು ಹೇಳಿದಂತೆ ಮಹಾರಾಜರು ನಡೆದುಕೊಂಡರು. ಸಮುದ್ರವು ಶಾಂತವಾಗಿ ನಂತರದ ಪ್ರಯಾಣವು ಯಾವುದೇ ಅಡೆತಡೆ ಇಲ್ಲದೆ ಮುಕ್ತಾಯಗೊಂಡಿತು.

gangajali 5

ಬೃಹತ್ ಬೆಳ್ಳಿಹೂಜಿಗಳನ್ನು ನೋಡಿದ ಬ್ರಿಟಿಷರಿಗೆ ಅತ್ಯಾಶ್ಚರ್ಯವಾಯಿತಂತೆ. ಜೈಪುರ ಚರಿತ್ರೆಕಾರರ ಪ್ರಕಾರ ಕಿಂಗ್ ಏಳನೆಯ ಎಡ್ವರ್ಡ್ ನು ಈ ಎರಡು ಹೂಜಿಗಳನ್ನು ನೋಡಲೆಂದೇ ಮಹಾರಾಜರ ಶಿಬಿರಕ್ಕೆ ವೈಯಕ್ತಿಕವಾಗಿ ಭೇಟಿಯಿತ್ತಿದ್ದನಂತೆ!

ನೀವೇನಾದರೂ ಜೈಪುರ ಪ್ರವಾಸ ಕೈಗೊಂಡರೆ ಅಲ್ಲಿ ಸವಾಯಿ ಮಾನ್ ಸಿಂಗ್ ಸಿಟಿ ಪ್ಯಾಲೇಸ್‌ನ ಮ್ಯೂಸಿಯಂ ನಲ್ಲಿ ಪ್ರದರ್ಶನಕ್ಕಾಗಿ ಇಟ್ಟಿರುವ ಫಳಫಳನೆ ಹೊಳೆಯುವ ನೀರಿನ ಹೂಜಿಗಳನ್ನು ಕಣ್ತುಂಬಿಕೊಳ್ಳಬಹುದು. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಕಾರ, ಈ ಬೃಹತ್ ಬೆಳ್ಳಿ ಹೂಜಿಗಳು ಇಡೀ ವಿಶ್ವದಲ್ಲೇ ಅತ್ಯಂತ ಭಾರವಾದ ಬೆಳ್ಳಿಯ ಕಲಾಕೃತಿಗಳು ಎನ್ನುವ ಹೆಗ್ಗಳಿಕೆಯನ್ನು ಹೊಂದಿವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!