Sunday, September 13, 2026
Sunday, September 13, 2026

ಮಲೆನಾಡಿನ ಹಸಿರ ಮಡಿಲಿನಲ್ಲಿ ಸುಂದರ ಪಯಣ

ಹೊರನಾಡಿನ ಸನಿಹದಲ್ಲಿರುವ ಕ್ಯಾತನಮಕ್ಕಿಯೆಂಬ ಬೆಟ್ಟದ ಮೇಲಿನ ರೋಮಾಂಚಕ ಜೀಪು ಪಯಣ, ಅಲ್ಲಿನ ಕಣ್ಮನ ಸೆಳೆಯುವ ಹಸಿರಿನ ಸ್ವರ್ಗ, ದಟ್ಟ ಅರಣ್ಯದ ನಡುವೆ ಇರುವ ಸೂರಮನೆ ಜಲಪಾತದ ಸೊಬಗು ಹಾಗೂ ಜನಮಾನಸದಲ್ಲಿ ನೆಲೆಸಿರುವ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿಯ ದಿವ್ಯ ದರ್ಶನದ ಸುಂದರ ಚಿತ್ರಣ ಇಲ್ಲಿದೆ.

  • ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನಲ್ಲಿ ಹಸಿರ ಸಿರಿ ಎಂದೊಡನೆ ನೆನಪಿಗೆ ಬರುವ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಮೊದಲ ಸಾಲಿನಲ್ಲಿದೆ. ಇಲ್ಲಿನ ಹಲವು ಬೆಟ್ಟದ ಶ್ರೇಣಿಗಳು ನಮ್ಮನ್ನು ಹೊಸ ಅನುಭವದತ್ತ ಕರೆದೊಯ್ಯುತ್ತವೆ. ಮಳೆಯ ಆರಂಭಿಕ ದಿನಗಳಲ್ಲಿ ಮಲೆನಾಡಿನ ಬೆಟ್ಟಗಳತ್ತ ನಮ್ಮ ಪಯಣ ಸಾಗಿತು. ಮೊದಲಿಗೆ ಕೊಟ್ಟಿಗೆಹಾರದ ನೀರುದೋಸೆಯನ್ನು ಸವಿದು, ದೇವರಮನೆಯ ಬೆಟ್ಟದ ಶ್ರೇಣಿಗಳ ನೆನಪಿನಲ್ಲಿ ಹೊರನಾಡಿನ ಅನ್ನಪೂರ್ಣೆಯ ಪ್ರಸಾದ ಸ್ವೀಕರಿಸಿದ ನಂತರವೂ ಹಸಿರ ಸಿರಿಯ ಗುಂಗು ಇನ್ನೂ ಹಾಗೆ ಇತ್ತು. ತಕ್ಷಣ ನನ್ನ ಸಹೋದ್ಯೋಗಿಯಾಗಿದ್ದ ಗುರು ಅವರು ʼಕ್ಯಾತನಮಕ್ಕಿಯನ್ನು ನೋಡದಿದ್ದರೆ ಹೇಗೆ?ʼ ಎಂದರು. ಸರಿ, ಸಂಜೆಯ ನಾಲ್ಕೂವರೆ ಆಗಿದ್ದರೂ ನಮ್ಮ ಪಯಣ ಸಾಗಿದ್ದೇ ಕ್ಯಾತನಮಕ್ಕಿಯೆಂಬ ಅನೂಹ್ಯ ಲೋಕದತ್ತ.

ಜಿಟಿ ಜಿಟಿ ಮಳೆಯ ನಡುವೆ, ಅಳುಕಿನಲ್ಲಿಯೇ 'ತುಂಬಾ ಸಮಯವಾಗಿರಬಹುದು' ಎಂದು ಗೊಣಗುತ್ತಲೇ ಸುಮಾರು ಎಂಟು ಕಿಮೀ. ಸಾಗಿದೆವು. ಆ ಸಮಯದಲ್ಲಿಯೂ ಇಲ್ಲಿಯ ಕ್ಯಾತನಮಕ್ಕಿಗೆ ಹೋಗುವ ಆರಂಭಿಕ ಸ್ಥಳದಲ್ಲಿ ಜೀಪುಗಳು ಇನ್ನೂ ಇದ್ದುದ್ದನ್ನು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟೆವು.

Untitled design - 2026-09-11T155108.106

ದಾರಿಯಿಲ್ಲದ ದಾರಿ

ಇಲ್ಲಿಂದ ಮುಂದಿನ ಸುಮಾರು 3 ಕಿಮೀ.ಗಳ ಪಯಣವೇ ಅತ್ಯಂತ ರೋಚಕವಾಗಿತ್ತು. ಸ್ವಲ್ಪ ದೂರದಲ್ಲಿರುವ ಅರಣ್ಯ ಇಲಾಖೆಯ ಕೇಂದ್ರದಲ್ಲಿ ಶುಲ್ಕ ಪಾವತಿಸಿ ಸಾಗಿದ್ದೇ, ದಾರಿಯಿಲ್ಲದ ದಾರಿಯಲ್ಲಿ ದಾರಿ ಹುಡುಕುತ್ತಾ! ಗುರಿ ತಲುಪುವವರೆಗೂ ನಮ್ಮಲ್ಲಿ ಭಯವೇ ತುಂಬಿತ್ತು. ಚಾಲಕನ ಮಾತುಗಳು ಕೇಳಿಸದಂತೆ, ರಸ್ತೆಯ ಏರು ತಗ್ಗುಗಳಲ್ಲಿ ನಮ್ಮ ಶರೀರವೂ ಕುಣಿಯುತ್ತಾ ಸಾಗುತ್ತಿತ್ತು. ವಾಹನ ನಿಲುಗಡೆಯತ್ತ ನಿಂತಾಗ ಅಲ್ಲಲ್ಲಿ ಹಸಿರು ಕಂಡರೂ, ʼಇದಕ್ಕಾಗಿ ಇಲ್ಲಿಗೆ ಬರಬೇಕಿತ್ತಾ?ʼ ಅನಿಸುತ್ತದೆ. ಆದರೆ ಬೆಟ್ಟದ ಮೇಲೆ ಸಾಗಿದಂತೆ ನಿಮ್ಮ ಶ್ರಮವನ್ನು ಮರೆಸುವಂಥ ಅನೂಹ್ಯ ಲೋಕ ನಮ್ಮ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ.

ಇದನ್ನು ಓದಿ : ನೀವು ಮೈಸೂರಿನಲ್ಲಿದ್ದೀರಾ? ಈ ಫಾಲ್ಸ್‌ಗಳಿಗೆ ಒಮ್ಮೆ ಹೋಗಿ

ಹಸಿರು ಬೆಟ್ಟಗಳ ಅನೂಹ್ಯ ಲೋಕ

ಕ್ಯಾತನಮಕ್ಕಿಯ ಬೆಟ್ಟದ ಮೇಲೆ ಹೋದರೆ ನಿಮಗೆ ಸಿಗುವ ಹಸಿರಿನ ಬೆಟ್ಟದ ಶ್ರೇಣಿಗಳು ನೀವು ಎತ್ತ ತಿರುಗಿದರೂ ಸುತ್ತಲೂ ಕಾಣುತ್ತವೆ. ಕುದುರೆಮುಖದ ಸಾಲಿನಲ್ಲಿ ಬರುವ ಇಲ್ಲಿನ ಬೆಟ್ಟಗಳು ಮಂಜಿನಲ್ಲಿ ಹೊಸ ಲೋಕವನ್ನೇ ಸೃಷ್ಟಿಸುತ್ತವೆ. ಸೂರ್ಯಾಸ್ತದ ಸಮಯದಲ್ಲಿ ಇಲ್ಲಿನ ಬೆಟ್ಟಗಳು ನಿಮ್ಮನ್ನು ಹೊಸ ಪ್ರಪಂಚದತ್ತ ಸಾಗುವಂತೆ ಮಾಡುತ್ತವೆ. ಸ್ಥಳೀಯವಾಗಿ 'ಗಾಳಿ ಗುಡ್ಡ' ಎಂದು ಕರೆಯುವ ಇಲ್ಲಿನ ಬೆಟ್ಟದ ಶ್ರೇಣಿಗಳು ಸುಮಾರು 3,800 ಅಡಿಯಿಂದ 5000 ಅಡಿಯವರೆಗೂ ಎತ್ತರವಾಗಿವೆ.

ಸೂರಮನೆ (ಅಬ್ಬುಗುಡಿ) ಜಲಪಾತ

ಇಲ್ಲಿಗೆ ಸಮೀಪದಲ್ಲಿರುವ ನೋಡಲೇಬೇಕಾದ ಜಲಪಾತವಿದು. ಹೊರನಾಡಿನಿಂದ ಸುಮಾರು 11 ಕಿಮೀ. ದೂರದಲ್ಲಿರುವ ಈ ಜಲಪಾತ ಇಲ್ಲಿನ ಖಾಸಗಿ ಜಾಗದಲ್ಲಿದೆ. 'ಅಬ್ಬುಗುಡಿ ಜಲಪಾತ' ಎಂದು ಕರೆಯುವ ಈ ಜಲಪಾತವು ಸುಮಾರು 40 ಅಡಿ ಎತ್ತರದಿಂದ ಬೀಳುತ್ತದೆ.

Untitled design - 2026-09-11T154918.908

ವಾಹನ ನಿಲುಗಡೆ ಜಾಗದಿಂದ ಸುಮಾರು 15 ನಿಮಿಷಗಳ ಕಾಲ ಕಾಡಿನ ದಾರಿಯಲ್ಲಿ ಸಾಗಿದರೆ ಸಿಗುವ ಈ ಜಲಪಾತ ದಟ್ಟ ಅರಣ್ಯದಲ್ಲಿದೆ. ಮಳೆಗಾಲದಲ್ಲಿ ವೈಭವದಿಂದ ಹರಿಯುವ ಈ ಜಲಪಾತವು ಬೆಳಗ್ಗೆ 8ರಿಂದ ಸಂಜೆ 5ರವರೆಗೂ ತೆರೆದಿದ್ದು, ಪ್ರವೇಶ ದರ ರು. 50/- ಇರುತ್ತದೆ. ಮಳೆಗಾಲದಲ್ಲಿ ಜಿಗಣೆಗಳಿರುವುದರಿಂದ ಎಚ್ಚರವಿರಲಿ.

ಹೊರನಾಡು ಅನ್ನಪೂರ್ಣೇಶ್ವರಿ

ಅನ್ನಪೂರ್ಣೇಶ್ವರಿ ಎಂದ ಕೂಡಲೇ ತಕ್ಷಣ ನೆನಪಾಗುವ ದೇವಾಲಯವೆಂದರೆ ಅದು ಹೊರನಾಡು. ಸ್ಥಳಪುರಾಣದ ಪ್ರಕಾರ ಇದನ್ನು ಅಗಸ್ತ್ಯ ಮುನಿಗಳು ಸ್ಥಾಪಿಸಿದ್ದರು. ಶಿವನು ಶಾಪಗ್ರಸ್ತನಾಗಿದ್ದಾಗ ದೇವಿಯಿಂದ ಭಿಕ್ಷೆ ಸ್ವೀಕಾರ ಮಾಡಿ ಶಾಪ ಮುಕ್ತನಾದನು ಎಂಬ ನಂಬಿಕೆ ಇದೆ. ನಂತರದ ಕಾಲದಲ್ಲಿ ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿ ಮರು ಸ್ಥಾಪಿಸಲಾಯಿತು. 1973ರಲ್ಲಿ ವೆಂಕಟಸುಬ್ಬ ಜೋಯಿಸರು ಚಿಕ್ಕದಾಗಿದ್ದ ದೇವಾಲಯವನ್ನು ನವೀಕರಣ ಮಾಡಿದರು.

ಇದನ್ನು ಓದಿ : ಅರೆ..ನೀವಿನ್ನು ಮೇಲುಕೋಟೆ ನೋಡಿಲ್ವ?

ನವಗ್ರಹ ದೇವಾಲಯ, ಭಕ್ತರಿಗೆ ಅನ್ನ ಸಂತರ್ಪಣೆಗಾಗಿ ಅಡುಗೆ ಮನೆ ಮತ್ತು ಯಾತ್ರಿನಿವಾಸವನ್ನು ಸ್ಥಾಪನೆ ಮಾಡಿದರು. ಗರ್ಭಗುಡಿಯಲ್ಲಿ ದೇವಿಯು ಶಂಖ, ಚಕ್ರ, ಶ್ರೀಚಕ್ರ ಮತ್ತು ಗಾಯತ್ರಿಯನ್ನು ಹಿಡಿದಿರುವಂತಿದ್ದು, ಸ್ಥಾನಿಕ ಭಂಗಿಯಲ್ಲಿದ್ದಾಳೆ.

ದೇವಾಲಯವು ಪ್ರತಿದಿನ ಬೆಳಗ್ಗೆ 6:30 ರಿಂದ ರಾತ್ರಿ 9:30 ರವರೆಗೂ ತೆರೆದಿದ್ದು, ನಿತ್ಯ ಅನ್ನ ಸಂತರ್ಪಣೆ ಮತ್ತು ತಂಗಲು ಸುಸಜ್ಜಿತ ವಸತಿ ಗೃಹಗಳಿವೆ.

Untitled design - 2026-09-11T155014.448

ದಾರಿ ಹೇಗೆ?

ಕ್ಯಾತನಮಕ್ಕಿಯು ಹೊರನಾಡಿನಿಂದ ಸುಮಾರು 8 ಕಿಮೀ. ದೂರದಲ್ಲಿದ್ದು, ಇಲ್ಲಿಂದ 3 ಕಿ.ಮೀ. ಜೀಪಿನಲ್ಲಿ ಸಾಗಬೇಕು. ಒಂದು ಜೀಪಿಗೆ ಸುಮಾರು ರು. 1,500/- ಮತ್ತು ಅರಣ್ಯ ಇಲಾಖೆಯ ಶುಲ್ಕ ಒಬ್ಬರಿಗೆ ರು. 50/- ಇರುತ್ತದೆ. ಬೆಳಗ್ಗೆ ಸುಮಾರು 5 ರಿಂದ ಸಂಜೆ 6 ಗಂಟೆಯವರೆಗೆ ಪ್ರವೇಶವಿರುತ್ತದೆ. ನೀವು ಚಾರಣ ಪ್ರಿಯರಾದಲ್ಲಿ ಸುಮಾರು ಒಂದು ಗಂಟೆಯ ಚಾರಣ ಮಾಡಬಹುದು.

ಮಾಹಿತಿ ಪೆಟ್ಟಿಗೆ:

ಮಂಜಿನ ಸುಂದರ ಚಿತ್ರಣ ಹಾಗೂ ಮಳೆಯ ಸಿಂಚನ ಬೇಕಾದಲ್ಲಿ ಜುಲೈ ಇಂದ ಸೆಪ್ಟೆಂಬರ್ ವರೆಗೆ, ಮತ್ತು ಛಾಯಾಗ್ರಹಣಕ್ಕೆ ಉತ್ತಮ ಹಸಿರ ಸಿರಿ ಬೇಕಾದಲ್ಲಿ ಅಕ್ಟೋಬರ್ ಮಾಸದಿಂದ ಜನವರಿಯವರೆಗೆ ಭೇಟಿ ನೀಡುವುದು ಸೂಕ್ತ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..