ಆಕಾಶದಿಂದ ಭೂಮಿಗೆ ಹಾರುವ ಆಟ
ಕೆಳಗೆ ಹಾರುವ ಮುನ್ನವೇ ಸುತ್ತಲಿನ ವಾತಾವರಣವನ್ನು ನೋಡಿ ಕಣ್ತುಂಬಿಕೊಳ್ಳಬೇಕು. ಸುತ್ತಲಿನ ಗುಡ್ಡ, ಕಾಡು, ಕೆಳಗೆ ಹರಿಯುವ ನದಿ, ಎಲ್ಲವೂ ಮನಮೋಹಕವಾಗಿರುತ್ತವೆ. ಹಾರುವಾಗ ಅವೆಲ್ಲ ಏನೂ ಕಾಣಿಸುವುದಿಲ್ಲ. ಹಾರುವಾಗ ಆಗುವ ಸಣ್ಣ ಭಯ, ಏನೋ ಸ್ವಾತಂತ್ರ ಸಿಕ್ಕ ಅನುಭವ ಎಲ್ಲವೂ ಇರುವುದರಿಂದ ಸುತ್ತಲಿನ ವ್ಯೂ ಬಗ್ಗೆ ಗಮನ ಹೋಗುವುದಿಲ್ಲ. ನನಗೆ ಆ ಕ್ಷಣದಲ್ಲಿ ಎಕ್ಸೈಟ್‌ಮೆಂಟ್ ಭಯವನ್ನು ಒವರ್‌ಟೇಕ್ ಮಾಡಿತ್ತು.
- ಸಿಂಚನಾ ಪಂಡಿತ್
ಬೆಂಗಳೂರಿಂದ ಹಿಮಾಲಯ ಟ್ರೆಕ್ ಹೋಗುವ ಮೊದಲೇ ಮೊದಲೇ ಬಂಜಿ ಜಂಪಿಂಗ್ ಮಾಡಬೇಕು ಅಂತ ನಾನು ಮತ್ತು ಗೆಳೆಯರು ಅಂದ್ಕೊಂಡಿದ್ದೆವು. ಹಿಮಾಲಯ ಟ್ರೆಕ್ ಮುಗಿಸಿ ಹೃಷಿಕೇಶಕ್ಕೆ ಬಂದಾಗ ಎಕ್ಸೈಟ್ ಆಗಿದ್ದೆ. ಬಂಜಿ ಜಂಪ್ ಮಾಡಬೇಕು ಎನ್ನುವುದು ಬಹಳ ದಿನಗಳ ಆಸೆಯಾಗಿತ್ತು. ಹೃಷಿಕೇಶದಲ್ಲಿ ಹಲವು ಬಂಜಿ ಜಂಪಿಂಗ್ ಜಾಗಗಳಿವೆ. ಒಂದು ಜಾಗದಲ್ಲಿ ನಾವು ಬುಕ್ ಮಾಡಿದ್ದೆವು. ಅವರದ್ದೇ ಗಾಡಿಯಲ್ಲಿ ನಮ್ಮನ್ನು ಬಂಜಿ ಜಂಪಿಂಗ್ ಜಾಗಕ್ಕೆ ಕರೆದುಕೊಂಡು ಹೋದರು.
ಇದನ್ನೂ ಓದಿ: ಮಧುಮಲೈ ಕಾಡಿನಲ್ಲಿ ಹುಲಿ ಸಫಾರಿಯ ಕಥೆ
ನಾನು ಬಂಜಿ ಜಂಪ್ ಮಾಡುವ ವಿಷಯ ಮೊದಲು ಮನೆಯಲ್ಲಿ ಹೇಳಿರಲಿಲ್ಲ. ನದಿ ಸಮೀಪದಲ್ಲಿ ಬಂಜಿ ಜಂಪ್ ಮಾಡಬೇಕು ಎನ್ನುವುದು ನನ್ನ ಮತ್ತು ನನ್ನ ಫ್ರೆಂಡ್ಸ್ ಆಸೆಯಾಗಿತ್ತು. ಹಿಂದಿನ ರಾತ್ರಿ ಬುಕ್ ಮಾಡಿ ಅಪ್ಪಂಗೆ ಹೇಳಿದ್ದೆ. ರಿವರ್ ರಾಫ್ಟಿಂಗ್ ಇದೆ ಅಲ್ಲಿಗೆ ಹೋಗುತ್ತೇನೆ ಎಂದಾಗಲೇ ಅಪ್ಪನಿಗೆ ಭಯವಾಗಿತ್ತು. ಇನ್ನು ಬಂಜಿ ಜಂಪ್ ವಿಷಯ ಕೇಳಿದರೆ ಹೇಗೆ ತಾನೆ ನೆಮ್ಮದಿಯಿಂದ ಇರ್ತಾರೆ ಅನಿಸಿತು! ಅಮ್ಮನಿಗೆ ಹೇಳಿದ ಮೇಲಂತೂ ಅವರು ಯೂಟ್ಯೂಬ್ ಅಲ್ಲಿ ಬಂಜಿ ಜಂಪಿಂಗ್ ಅಂದ್ರೆ ಏನು ಅಂತೆಲ್ಲ ನೋಡಿ ಭಯಗೊಂಡು ಇಡೀ ರಾತ್ರಿ ನಿದ್ರೇನೇ ಮಾಡಿರಲಿಲ್ಲವಂತೆ.

ಕಾಲಿಗೆ ಸೇಫ್ಟಿ ಗೇರ್‌ಗಳನ್ನು ಹಾಕಿದ್ದರು. ಅದು ಸರಿಯಾಗಿ ಆಂಕಲ್ ಬಳಿ ಹಾಕಿದ್ದಕ್ಕೆ ಸರಿಯಾಗಿ ನಡೆಯಲೂ ಆಗುತ್ತಿರಲಿಲ್ಲ. ಚಿಕ್ಕ ಚಿಕ್ಕ ಹೆಜ್ಜೆಗಳನ್ನಿಟ್ಟುಕೊಂಡು ಹೋಗಬೇಕು. ಹುಷಾರಾಗಿ ನಡೆಯಲು ಸಹಾಯ ಮಾಡಲು ಅಲ್ಲಿನ ಸೂಪರ್‌ವೈಸರ್‌ಗಳು ಇದ್ದರು. ಆ ಎತ್ತರದಲ್ಲಿ ನಿಂತು ಜೋರಾಗಿ ಕಿರುಚಬೇಕು ಅನಿಸಿತು. ʼಕಿರುಚಬಹುದಾ?ʼ ಎಂದು ಸೂಪರ್‌ವೈಸರ್‌ಗೆ ಕೇಳಿದ್ದಕ್ಕೆ, ʼಇದು ಕಾಡು, ಇಲ್ಲಿ ಕಿರುಚುವ ಹಾಗಿಲ್ಲʼ ಎಂದು ಹೇಳಿದರು. ನಂತರ ಗೊತ್ತಾಯಿತು ಅವರು ಕಾಲೆಳೆಯಲು ಹಾಗೆ ಹೇಳಿದ್ದು ಎಂದು. ಮೊದಲು ಯಾರು ಜಂಪ್ ಮಾಡ್ತೀರ ಅಂತ ಕೇಳಿದಾಗ ಬಹಳ ಉತ್ಸಾಹದಿಂದ ನಾನು ಕೈ ಎತ್ತಿ ಮುಂದೆ ಹೋದೆ.
ಹಾರುವ ಕ್ಷಣ:
ಇನ್ನೇನು ಹಾರಬೇಕು ಎಂದಾಗ ಮನಸಿನಲ್ಲಿ ವಿಚಿತ್ರ ತಳಮಳ ಶುರುವಾಗುತ್ತದೆ. ಎಲ್ಲಾ ಗೇರ್ಸ್ ಎಲ್ಲ ಹಾಕ್ಕೊಂಡು, ಸೊಂಟಕ್ಕೆ ಹಗ್ಗದಂಥ ಗೇರ್ ಕಟ್ಟಿಕೊಂಡು, ರಾಂಪ್‌ನ ತುದಿಗೆ ಹೋಗಿ ನಿಂತುಕೊಳ್ಳಬೇಕು. ಅಲ್ಲಿ ನಿಂತಾಗ ಹಾರುವ ಮುನ್ನವೇ ಸುತ್ತಲಿನ ವಾತಾವರಣವನ್ನು ಕಣ್ತುಂಬಿಕೊಳ್ಳಬೇಕು. ಸುತ್ತಲಿನ ಗುಡ್ಡ, ಕಾಡು, ಕೆಳಗೆ ಹರಿಯುವ ನದಿ, ಎಲ್ಲವೂ ಮನಮೋಹಕವಾಗಿರುತ್ತವೆ. ಹಾರುವಾಗ ಅವೆಲ್ಲ ಏನೂ ಕಾಣಿಸುವುದಿಲ್ಲ. ಹಾರುವಾಗ ಆಗುವ ಸಣ್ಣ ಭಯ, ಏನೋ ಸ್ವಾತಂತ್ರ ಸಿಕ್ಕ ಅನುಭವ ಎಲ್ಲವೂ ಇರುವುದರಿಂದ ಸುತ್ತಲಿನ ವ್ಯೂ ಬಗ್ಗೆ ಗಮನ ಹೋಗುವುದಿಲ್ಲ. ನನಗೆ ಆ ಕ್ಷಣದಲ್ಲಿ ಎಕ್ಸೈಟ್‌ಮೆಂಟ್ ಭಯವನ್ನು ಒವರ್‌ಟೇಕ್ ಮಾಡಿತ್ತು.
ಅಲ್ಲೊಬ್ಬ ಆಸ್ಟ್ರೇಲಿಯನ್ ಇದ್ದವನು ನನಗೆ ಹೇಗೆ ಹಾರಬೇಕು ಎಂದು ಸಣ್ಣ ಮಾರ್ಗದರ್ಶನ ನೀಡಿದ್ದ. ಫುಲ್ ಫ್ಲಾಟ್ ಆಗಿ ಹಾರಬೇಕು. ಮೊಣಕಾಲನ್ನು ಬಗ್ಗಿಸಬಾರದು. Lean forward and then fall, ಕೈನ ಏರೋಪ್ಲೇನ್ ಥರ ಆಕಡೆ ಈ ಕಡೆ ಇಟ್ಟುಕೊಂಡು ಜಂಪ್ ಮಾಡಬೇಕು ಅಂತ ಹೇಳಿಕೊಟ್ಟಿದ್ದ. ಹಾರುವ ಮೊದಲು ನಿಮಗೆ ಮೂರು ಅವಕಾಶ ಇರತ್ತದೆ. ಒಂದು ಎರಡು ಮೂರು ಹೇಳ್ತೀವಿ. ಅಷ್ಟರಲ್ಲಿ ನೀವೇ ಹಾರಬೇಕು. ಇಲ್ಲ ಅಂದರೆ ಹಣ ವಾಪಸ್ ಮಾಡಲ್ಲ ಅಂತ ಹೇಳಿದ್ದರು. ಆದರೆ, ಅದು ಎಷ್ಟು ಸತ್ಯ ಎಷ್ಟು ಸುಳ್ಳು ಗೊತ್ತಿಲ್ಲ. ಎಲ್ಲರಿಗೂ ಅದನ್ನೇ ಹೇಳುತ್ತಿದ್ದರು.

ಸ್ಟ್ರೈಟ್ ಫಾಲ್ ಆಗಿ ಹಾರಿದಾಗ ಜೋರಾಗಿ ಕಿರುಚಿದೆ. ಕೆಳಗಡೆ ಬೀಳುವಾಗ ಕಿರುಚಿ ಬಾಯಲ್ಲಿ ಗಾಳಿ ಹೋಗಿ ಉಸಿರು ಕಟ್ಟಿದ ಹಾಗಾಯಿತು. ಆಮೇಲೆ ಒಂದು ಸಲ ಎಂಜಲು ನುಂಗಿ ಮತ್ತೆ ಕಿರುಚಿದೆ. ಆಗ ಎಷ್ಟು ಕಿರುಚಬೇಕು, ಎಷ್ಟು ಕಿರುಚಬಾರದು ಅಂತ ಗೊತ್ತಾಗತೊಡಗಿತು. ಒಂದು ಸಲ ಕೆಳಗೆ ಹೋಗೋದು ಜೆರ್ಕ್ ಆಗಿ ಮೇಲೆ ಹೋಗೋದು ಹಿಂಗೆ ತುಂಬ ಸಲ ಆಗುತ್ತದೆ. ಒಮ್ಮೆ ಈ ಹಾರಾಟ ನಿಂತ ಮೇಲೆ ತಲೆ ಕೆಳಗಾಗಿ ಕೆಳಗೆ ಇಳಿಸುತ್ತಾರೆ. ನದಿ ಪಕ್ಕದಲ್ಲಿ ಇಬ್ಬರು ನಿಂತು, ಅಲ್ಲಿದ್ದ ಹಾಸಿಗೆಯ ಮೇಲೆ ಇಳಿಸುತ್ತಾರೆ. ಮೇಲಿಂದ ಕೆಳಗಿನವರೆಗೆ ತಲೆ ಕೆಳಗಾಗಿ ಬರುವಷ್ಟರಲ್ಲಿ ಸರಿಯಾಗಿ ಉಸಿರಾಡಲು ಸ್ವಲ್ಪ ಸಮಯ ಸಿಕ್ಕಿತು. ತಲೆ ಮೊದಲು ಕೆಳಗಿಟ್ಟು ಆಮೇಲೆ ಬೆನ್ನು ಮೇಲೆ ಮಲಗಿಸಿ ಎಲ್ಲ ಗೇರ್ಸ್ ತೆಗೆದು ಕಳಿಸುತ್ತಾರೆ.
ನೆನಪಿಡಿ:
ಈ ಇಡೀ ಅಡ್ವೆಂಚರ್ ಗೇಮ್ ಮಸ್ತ್ ಮಜ ಇತ್ತು. ನಿಮಗೆ ಏನೇ ಆದರೂ ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಲೆಟರ್ ಮೇಲೆ ಸಹಿ ಹಾಕಿಸಿಕೊಳ್ಳುತ್ತಾರೆ. ಇದು ಎಂಭತ್ತು ಮೀಟರ್‌ನ ಬಂಜಿ ಜಂಪಿಂಗ್. ಪ್ರತಿ ಬಾರಿಯೂ ಆ ಕ್ಷಣವನ್ನು ನೆನಪಿಸಿಕೊಂಡಾಗ ಮತ್ತೆ ಅದೇ ಜಾಗದಲ್ಲಿ ನಿಂತು ಸುತ್ತಲಿನ ವೈ ನೋಡುತ್ತಾ ಇನ್ನೇನು ಹಾರಲು ಸಿದ್ಧವಾಗುತ್ತಿದ್ದೇನೆ ಎಂಬ ಅನುಭವ ಆಗುತ್ತದೆ. ಕೆಲವರಿಗೆ ಭಯ ಆಗುತ್ತದೆ. ಒಮ್ಮೆ ಆ ಭಯವನ್ನು ಹಿಂದೆ ಹಾಕಿದರೆ ವಿಶೇಷವಾದ ಅನುಭವ ಸಿಗುವುದು ಖಂಡಿತ. ಜೀವನದಲ್ಲಿ ಮರೆಯಲಾಗದ ಸಾಹಸ ಇದಾಗಿರುತ್ತದೆ. ಅತಿ ಡೇಂಜರಸ್ ಅಡ್ವೆಂಚರ್ ಗೇಮ್ ಎಂದು ಕೂಡ ಇದನ್ನು ಹೇಳುತ್ತಾರೆ.
ಮಾಹಿತಿ ಪೆಟ್ಟಿಗೆ:
*ಬಂಜಿ ಜಂಪಿಂಗ್ ಎನ್ನುವುದು ಅತ್ಯಂತ ಭಯಾನಕ ಹಾಗೂ ಡೇಂಜರಸ್ ಅಡ್ವೆಂಚರ್ ಕ್ರೀಡೆ ಎಂದು ಪರಿಗಣಿಸಲಾಗಿದೆ.
*ಹೃಷಿಕೇಶ, ಗೋವಾ ಸೇರಿದಂತೆ ಹಲವು ಕಡೆ ಬಂಜಿ ಜಂಪ್ ಮಾಡಬಹುದು
*ನ್ಯೂಜಿಲ್ಯಾಂಡ್‌ನಲ್ಲಿ ಈ ಕ್ರೀಡೆ ಮೊದಲು ಶುರುವಾಗಿದ್ದು.
ಲೇಖಕರು: ಚಾರಣಿಗರು