ಪ್ರವಾಸಕ್ಕೆಂದು ತೆರಳುವ ಅನೇಕ ಮಂದಿ ಮತ್ತೆ ತವರು ನೆಲಕ್ಕೆ ಮರಳುವುದಿಲ್ಲ ಏಕೆ ಗೊತ್ತಾ?
ದೇಶ – ವಿದೇಶಗಳನ್ನು ಸುತ್ತಾಡಬೇಕೆಂದು ತೆರಳುವ ಅದೆಷ್ಟೋ ಪ್ರವಾಸಿಗರು ಆ ದೇಶಗಳನ್ನು ಕಂಡು, ಬೆರಗಾಗಿ ವಿದೇಶದಲ್ಲೇ ಉಳಿಯುವ ನಿರ್ಧಾರ ಕೈಗೊಳ್ಳುತ್ತಾರೆ. ಅದು ಏಕಾಏಕಿ ತೆಗೆದುಕೊಳ್ಳುವ ನಿರ್ಧಾರವಾಗಿರುವುದಿಲ್ಲ. ಬದಲಾಗಿ ಈ ನಿರ್ಧಾರದ ಹಿಂದೆ ಅನೇಕ ಕಾರಣಗಳಿರುತ್ತವೆ. ಅವು ಯಾವುವು ಗೊತ್ತಾ?
ಪ್ರವಾಸವು ಹೊಸ ಅನುಭವಗಳ ಜಗತ್ತನ್ನು ನಮ್ಮ ಮುಂದೆ ತೆರೆಯುತ್ತದೆ. ಭೇಟಿ ನೀಡುವ ಪರಿಸರಗಳ ವಿಭಿನ್ನ ಸಂಸ್ಕೃತಿಗಳು, ಸ್ಥಳೀಯ ಪದ್ಧತಿಗಳು, ಸಂಪ್ರದಾಯಗಳು, ಹೊಸ ಭಾಷೆ ಮತ್ತು ಭಿನ್ನ ಜೀವನಶೈಲಿಗಳಿಗೆ ಪ್ರವಾಸಿಗರು ಮಾರುಹೋಗುವಂತೆ ಮಾಡುತ್ತದೆ. ಸ್ವದೇಶಕ್ಕಿಂತಲೂ ವಿದೇಶಿ ಭೂಮಿಯಲ್ಲಿದ್ದರೆ ಅನೇಕ ಅವಕಾಶಗಳು ಲಭ್ಯವಾಗುವುದೆಂಬ ಚಿಂತನೆಯು ಪ್ರವಾಸಕ್ಕೆ ಬೇರೆ ನೆಲಕ್ಕೆ ಭೇಟಿ ನೀಡುವ ಅನೇಕರನ್ನು ಅಲ್ಲೇ ನೆಲೆಯೂರುವಂತೆ ಮಾಡುತ್ತದೆ.
ಹೌದು, ಪ್ರವಾಸ, ವ್ಯಾಪಾರ ಅಥವಾ ಇನ್ಯಾವುದೇ ಉದ್ದೇಶಗಳಿಗಾಗಿ ಬೇರೆ ದೇಶಗಳಿಗೆ ಭೇಟಿ ನೀಡುವ ಅನೇಕರು ಮತ್ತೆ ಸ್ವದೇಶಗಳಿಗೆ ಮರಳಲು ಹಿಂಜರಿಯುತ್ತಾರಂತೆ. ಅದಕ್ಕೆ ಕಾರಣಗಳೇನು ಗೊತ್ತಾ?
ವೈಯಕ್ತಿಕ ಬೆಳವಣಿಗೆಗೆ ಅವಕಾಶಗಳು:
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ತಮ್ಮ ಊರಿಗಿಂತ ವಿದೇಶಗಳೇ ಅನೇಕರಿಗೆ ಅಚ್ಚುಮೆಚ್ಚು. ಅನ್ಯ ದೇಶಗಳಲ್ಲಿ ವಾಸಿಸುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗುವುದರ ಜೊತೆಗೆ, ನಮ್ಮ ನಿಲುವು, ನಿರ್ಧಾರಗಳಿಗೆ ಯಾರ ಅನುಮತಿಯ ಅಗತ್ಯವಿಲ್ಲದೆ ಸ್ವತಂತ್ರ್ಯರಾಗಿರುವ ಅವಕಾಶ ಸಿಗಲಿದೆಯತೆ. ವಿದೇಶಿ ಪರಿಸರದಲ್ಲಿ ಸಂಚರಿಸುವಾಗ ಎದುರಿಸುವ ಸವಾಲುಗಳಿಂದಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂಬುದು ಅನೇಕರ ನಂಬಿಕೆ. ಇದಲ್ಲದೆ, ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಬೆರೆಯುವುದರಿಂದ ವೈವಿಧ್ಯಮಯ ದೃಷ್ಟಿಕೋನಗಳು ಲಭ್ಯವಾಗಲಿದ್ದು, ಪ್ರಪಂಚದ ವಿಶಾಲ ತಿಳುವಳಿಕೆಗೆ ಇದು ಕಾರಣವಾಗಬಹುದಂತೆ.
ವಿದೇಶದಲ್ಲಿ ವೃತ್ತಿ ಸೌಲಭ್ಯಗಳು:
ಜಾಗತಿಕ ಉದ್ಯೋಗ ಮಾರುಕಟ್ಟೆಯು ಹಲವಾರು ವೃತ್ತಿ ಅವಕಾಶಗಳನ್ನು ನೀಡುತ್ತದೆ. ಅನೇಕರು ತಮ್ಮ ಕೌಶಲ್ಯ ಮತ್ತು ಅರ್ಹತೆಗಳಿಗೆ ಇತರ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಹಾಗೂ ತಕ್ಕ ವರಮಾನವೂ ಲಭ್ಯವಾಗುತ್ತದೆ ಎಂದು ನಂಬಿದ್ದಾರೆ. ವಿದೇಶಗಳಲ್ಲಿ ವೃತ್ತಿಯಲ್ಲಿರುವುದೆಂದರೆ ವಿಶಿಷ್ಟ ಅನುಭವವನ್ನು ನೀಡುವುದರ ಜೊತೆಗೆ ಅಂತರರಾಷ್ಟ್ರೀಯ ಉದ್ಯೋಗ ಮಾರುಕಟ್ಟೆಗೆ ಅವರನ್ನು ಪರಿಚಯಿಸಲು ಸಹಾಯಮಾಡುತ್ತದೆ.

ಪ್ರೀತಿ ಮತ್ತು ಸಂಬಂಧಗಳು
ವಿದೇಶಗಳಲ್ಲಿ ಭೇಟಿಯಾಗುವ ಅದೆಷ್ಟೊ ಮಂದಿಯ ನಡುವೆ ಉತ್ತಮ ಬಾಂಧವ್ಯ ರೂಪುಗೊಂಡಿರುವ ಉದಾಹರಣೆಗಳಿವೆ. ಅದರಲ್ಲೂ ಹೊಸ ಸಂಬಂಧಗಳಲ್ಲಿರುವ ಉತ್ಸಾಹ ಮತ್ತು ನವೀನತೆಯು ತವರೂರಿಗೆ ಮರಳುವ ಯೋಚನೆಯನ್ನೂ ಮರೆಸುವಂತೆ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಸಂಬಂಧಗಳು ಪ್ರೀತಿಯಿಂದ ಪ್ರಾರಂಭವಾಗಿ, ಮದುವೆಯ ಹಂತವನ್ನು ತಲುಪುವುದಿದೆ. ವಿದೇಶದಲ್ಲಿ ಹೊಸ ಜೀವನವನ್ನು ಪ್ರಾರಂಭವಾದರೆ, ಸಂಗಾತಿಯೊಂದಿಗೆ ಪ್ರೀತಿ, ಒಡನಾಟವನ್ನು ಬಿಟ್ಟು ಹೋಗುವುದು ಕಷ್ಟಕರವೆನ್ನಿಸಬಹುದು.
ಜೀವನ ಗುಣಮಟ್ಟ
ವಿದೇಶದಲ್ಲಿ ಉಳಿಯುವ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣಗಳಲ್ಲಿ ಒಂದು ವಿದೇಶದಲ್ಲಿ ಜೀವನದ ಗುಣಮಟ್ಟ ಉತ್ತಮವಾಗಿರುವುದು. ಶಿಕ್ಷಣ, ಆರೋಗ್ಯ ಕ್ಷೇತ್ರ, ವೃತ್ತಿ ಸೌಕರ್ಯಗಳೆಲ್ಲವೂ ಗುಣಮಟ್ಟದ್ದಾದರೆ ದೇಶ ಸುತ್ತಲು ಬಂದ ಪ್ರವಾಸಿಗ ಅಲ್ಲೇ ಬೇರೂರುವ ಮನಸ್ಸು ಮಾಡಲು ಕಾರಣವಾಗುತ್ತದೆ.

ಸಾಹಸ ಪ್ರವೃತ್ತಿ
ಸಾಹಸವೆಂದರೆ ಅನೇಕ ಪ್ರವಾಸಿಗರಿಗೆ ಅಚ್ಚುಮೆಚ್ಚು. ಅದರಲ್ಲೂ ವಿದೇಶಿ ನೆಲದಲ್ಲಿ ಹೊಸತನ್ನು ಕಲಿಯುವುದು, ಹೊಸ ಸ್ಥಳಗಳನ್ನು ಅನ್ವೇಷಿಸುವುದು, ಹೊಸ ಜನರನ್ನು ಭೇಟಿಯಾಗುವ ಮತ್ತು ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವ ಉತ್ಸಾಹವಿದ್ದಪ್ರವಾಸಿಗರು ವಿದೇಶದಲ್ಲಿ ಉಳಿಯುವ ನಿರ್ಧಾರವನ್ನು ಕೈಗೊಳ್ಳುತ್ತಾರೆ.
ರಾಜಕೀಯ ಮತ್ತು ಸಾಮಾಜಿಕ ಅಂಶಗಳು
ವಿದೇಶದಲ್ಲಿ ಉಳಿಯುವ ನಿರ್ಧಾರದಲ್ಲಿ ರಾಜಕೀಯ ಮತ್ತು ಸಾಮಾಜಿಕ ಅಂಶಗಳು ಸಹ ಮುಖ್ಯ ಪಾತ್ರ ವಹಿಸಬಹುದು. ಕೆಲವರಿಗೆ, ಅವರ ತಾಯ್ನಾಡಿನಲ್ಲಿನ ರಾಜಕೀಯ ವಾತಾವರಣ ಅಥವಾ ಸಾಮಾಜಿಕ ಸಮಸ್ಯೆಗಳು ಸಾಕೆನ್ನಿಸಿಬಿಟ್ಟಿರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಪ್ರಗತಿಪರ ನಿಲುವು ಹೊಂದಿರುವ ದೇಶದಲ್ಲಿ ಅಥವಾ ಅವರ ಮೌಲ್ಯಗಳಿಗೆ ಹೊಂದಿಕೆಯಾಗುವ ಸರ್ಕಾರದಲ್ಲಿ ವಾಸಿಸುವ ಅವಕಾಶ ಲಭ್ಯವಾದರೆ ಪ್ರವಾಸಿಗರು ಹೆಚ್ಚಿಗೆ ಆಕರ್ಷಿತರಾಗುತ್ತಾರೆ.
ಅನಿರೀಕ್ಷಿತ ಸಂದರ್ಭಗಳು
ಕೆಲವೊಮ್ಮೆ, ಅನಿರೀಕ್ಷಿತ ಸಂದರ್ಭಗಳು ವಿದೇಶದಲ್ಲಿ ಪ್ರವಾಸಿಗರನ್ನು ಶಾಶ್ವತವಾಗಿ ವಾಸ್ತವ್ಯ ಕಂಡುಕೊಳ್ಳುವಂತೆ ಮಾಡುತ್ತದೆ. ನೈಸರ್ಗಿಕ ವಿಕೋಪಗಳು, ರಾಜಕೀಯ ಕ್ರಾಂತಿಗಳು, ವೈಯಕ್ತಿಕ ತುರ್ತು ಪರಿಸ್ಥಿತಿಗಳು ಮಾತ್ರವಲ್ಲದೆ ಕಾನೂನು ಅಥವಾ ಆರ್ಥಿಕ ಸಮಸ್ಯೆಗಳು ಸಹ ಪ್ರವಾಸಿಗರು ಸ್ವಂತ ಊರಿಗೆ ಮರಳದೇ ಇರಲು ಕಾರಣವಾಗುತ್ತದೆ. ಈ ಸವಾಲುಗಳು ವ್ಯಕ್ತಿಗಳು ತಮ್ಮ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ಅವರ ಆತಿಥೇಯ ದೇಶದಲ್ಲಿ ಜೀವನವನ್ನು ಕಟ್ಟಿಕೊಳ್ಳಲು ಕಾರಣವಾಗುತ್ತದೆ.

ದೇಶ ಸುತ್ತುವುದು, ಪ್ರಪಂಚದೆಲ್ಲೆಡೆ ಪ್ರವಾಸ ಕೈಗೊಳ್ಳುವುದು ಪ್ರವಾಸಿಗರಿಗೆ ಋಷಿಯ ವಿಚಾರ. ಆದರೆ ಅನೇಕ ಬಾರಿ ಇಂತಹ ಪ್ರವಾಸಗಳು ಆ ಸ್ಥಳಗಳೊಂದಿಗಿನ ಹೊಸ ಬಂಧ ಬೆಸೆದುಕೊಳ್ಳಲೂ ಸಹ ಕಾರಣವಾಗುತ್ತದೆ.