ಭಾರತದ ಪ್ರಮುಖ ಗ್ಲಾಸ್ ಬ್ರಿಡ್ಜ್ ಗಳು ಇಲ್ಲಿವೆ ನೋಡಿ
ಭಾರತದ ಕೆಲವೇ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಗ್ಲಾಸ್ ಬ್ರಿಡ್ಜ್ಗಳಲ್ಲಿ ನಡೆದಾಡುವುದು ಸಾಹಸ ಪ್ರಿಯರಿಗೆ ರೋಮಾಂಚನವನ್ನು ಉಂಟುಮಾಡುತ್ತದೆ. ಉತ್ತರದ ಗಾಜಿನ ಸೇತುವೆಯಿಂದ ಸುತ್ತಲಿನ ಪರಿಸರವನ್ನು ಸಂಭ್ರಮಿಸುವುದು ಪ್ರಕೃತಿ ಪ್ರಿಯರಿಗೂ ಖುಷಿಯ ವಿಚಾರ.
ಗ್ಲಾಸ್ ಬ್ರಿಡ್ಜ್‌ಗಳಲ್ಲಿ ನಡೆದಾಡಿ, ಪ್ರಕೃತಿಯ ಸೊಬಗನ್ನು ಅನುಭವಿಸುವ ಖುಷಿಯೇ ಬೇರೆ. ಅಂತಹ ಅನುಭವ ಕರ್ನಾಟಕದ ಮಂದಿಗೆ ಲಭ್ಯವಾಗೋದು ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ. ಕೊಡಗಿನ ಮಡಿಕೇರಿಯ ನಂದಿ ಮೊಟ್ಟೆ ಬಳಿಯ 2024ರಲ್ಲಿ ನಿರ್ಮಾಣ ಮಾಡಲಾಗಿದ್ದ ಗ್ಲಾಸ್ ಬ್ರಿಡ್ಜ್ ಪ್ರವಾಸಿಗರಿಗೆ ಹೊಸ ಲೋಕವನ್ನೇ ಪರಿಚಯಿಸಿತ್ತು. ಆದರೆ ಕರ್ನಾಟಕದ ಹೊರತಾಗಿ ಭಾರತದ ಯಾವ್ಯಾವ ಭಾಗಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಗ್ಲಾಸ್ ಬ್ರಿಡ್ಜ್ ಗಳು ಕಾಣಸಿಗುತ್ತವೆ ನಿಮಗೆ ಗೊತ್ತಾ ?
ಗ್ಲಾಸ್ ಬ್ರಿಡ್ಜ್ 900 ಕಂಡಿ ವಯನಾಡ್, ಕೇರಳ
ಕೇರಳದ ವಯನಾಡ್‌ನಲ್ಲಿ ನಿರ್ಮಾಣವಾಗಿರುವ ತೊಳ್ಳಾಯಿರಂ ಕಂಡಿ ಗ್ಲಾಸ್ ಬ್ರಿಡ್ಜ್ ನೆಲದಿಂದ 100 ಅಡಿ ಎತ್ತರದಲ್ಲಿದ್ದು, ಖಾಸಗಿ ರೆಸಾರ್ಟ್ 900 ಕಂಡಿಯ ಒಡೆತನದಲ್ಲಿದೆ. ಇಟಲಿಯಿಂದ ಆಮದು ಮಾಡಿಕೊಳ್ಳಲಾದ ವಿಶೇಷವಾದ ಫೈಬರ್‌ಗ್ಲಾಸ್‌ನಿಂದ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡಲು 100ರೂಪಾಯಿ ಟಿಕೆಟ್ ಪಡೆದುಕೊಳ್ಳಲೇಬೇಕು.

ವಾಗಮೋನ್ ಗಾಜಿನ ಸೇತುವೆ, ಕೇರಳ
ಕೇರಳದ ವಯನಾಡ್ ಮಾತ್ರವಲ್ಲದೆ ಇಡುಕ್ಕಿ ಜಿಲ್ಲೆಯಲ್ಲೂ ಅತ್ಯಾಕರ್ಷಕ ಗಾಜಿನ ಸೇತುವೆ ನಿರ್ಮಾಣವಾಗಿದ್ದು, ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಇಡುಕ್ಕಿಯ ವಾಗಮೋನ್‌ನಲ್ಲಿರುವ ವಾಗಮೋನ್ ಗಾಜಿನ ಸೇತುವೆಯು ಇಡುಕ್ಕಿ ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ (ಡಿಟಿಪಿಸಿ) ಸಾಹಸ ಉದ್ಯಾನವನದಲ್ಲಿ 2023 ನಿರ್ಮಾಣಗೊಂಡಿದೆ. 40 ಮೀಟರ್‌ಗಿಂತಲೂ ಹೆಚ್ಚು ವಿಸ್ತರಿಸಿರುವ ಭಾರತದ ಅತಿ ಉದ್ದದ ಕ್ಯಾಂಟಿಲಿವರ್ ಗಾಜಿನ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ಕೈ ವಾಕ್ ಪೆಲ್ಲಿಂಗ್, ಸಿಕ್ಕಿಂ
ಸಿಕ್ಕಿಂ ರಾಜ್ಯದಲ್ಲಿರುವ ಪ್ರೇಕ್ಷಣೀಯ ತಾಣಗಳು ಹಲವು. ತ್ಸೋಮ್ಗೊ ಸರೋವರ(Tsomgo Lake), ನಾಥುಲಾ ಪಾಸ್(Nathula Pass), ಯುಮ್ತಾಂಗ್ ಕಣಿವೆ (Yumthang Valley) ಮತ್ತು ಗುರುಡೊಂಗ್ಮಾರ್ ಸರೋವರ (Gurudongmar Lake) ಹೀಗೆ ಸಾಲು ಸಾಲು ಪ್ರವಾಸಿ ಸ್ಥಳಗಳ ನಡುವೆ ಎಲ್ಲರ ಕಣ್ಣು ನೆಟ್ಟಿರುವುದು ಸಿಕ್ಕಿಂನ ಸ್ಕೈ ವಾಕ್ ಪೆಲ್ಲಿಂಗ್ ನತ್ತ..ಸಮುದ್ರ ಮಟ್ಟದಿಂದ 7,200 ಅಡಿ ಎತ್ತರದಲ್ಲಿರುವ ಸಿಕ್ಕಿಂ ಸ್ಕೈವಾಕ್, ಸಿಕ್ಕಿಂನ 137 ಅಡಿ ಎತ್ತರದ ಚೆನ್ರೆಜಿಗ್ ಪ್ರತಿಮೆಯ ವಿಹಂಗನ ನೋಟವನ್ನು ನೀಡುತ್ತದೆ. ಹಿಮದಿಂದ ಆವೃತವಾದ ಹಿಮಾಲಯದ ಹಿನ್ನೆಲೆಯಲ್ಲಿ ನೆಲೆಗೊಂಡಿರುವ ಈ ಎತ್ತರದ ಮಾರ್ಗವು ಸಂದರ್ಶಕರಿಗೆ ತೀಸ್ತಾ ಮತ್ತು ರಂಗಿತ್ ನದಿಗಳ ಪಕ್ಷಿನೋಟವನ್ನು ಒದಗಿಸುತ್ತದೆ. ಟಿಕೆಟ್‌ಗಳ ದರ 50 ರೂಪಾಯಿಯಾಗಿದ್ದು, ಸ್ಕೈವಾಕ್ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುತ್ತದೆ.

ಗ್ಲಾಸ್ ಬ್ರಿಡ್ಜ್ ರಾಜಗೀರ್, ಬಿಹಾರ
ಬಿಹಾರಕ್ಕೆ ತೆರಳಿದವರು ತಪ್ಪದೇ ಭೇಟಿ ನೀಡಬೇಕಾದ ಪ್ರವಾಸಿ ತಾಣಗಳಲ್ಲಿ ಒಂದು ನಳಂದಾದ ರಾಜಗೀರ್ ಗ್ಲಾಸ್ ಬ್ರಿಡ್ಜ್. ಕಮರಿಯ ಮೇಲೆ 200 ಅಡಿ ಎತ್ತರದಲ್ಲಿ ನೇತಾಡುತ್ತಿರುವ ಈ 85 ಅಡಿ ಉದ್ದ ಮತ್ತು 6 ಅಡಿ ಅಗಲದ ಗಾಜಿನ ಸೇತುವೆ, ಚೀನಾದ ಪ್ರಸಿದ್ಧ ಸ್ಕೈವಾಕ್‌ಗಳಿಂದ ಸ್ಫೂರ್ತಿ ಪಡೆದಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ.

ಒಟ್ಟಿನಲ್ಲಿ ಫೈಬರ್‌ಗ್ಲಾಸ್‌ನಂತಹ ಸುಧಾರಿತ ವಸ್ತುಗಳಿಂದ ನಿರ್ಮಿಸಲಾದ ಈ ಸೇತುವೆಗಳು ಸಂದರ್ಶಕರಿಗೆ ಸುರಕ್ಷಿತ ಅನುಭವವನ್ನು ನೀಡುತ್ತದೆ. ಸಾಹಸ ಪ್ರಿಯರಿಂದ ಹಿಡಿದು ಪ್ರಕೃತಿ ಪ್ರೇಮಿಗಳಿಗೂ ಸಹ ವಿಸ್ಮಯಕಾರಿ ದೃಶ್ಯಾವಳಿಗಳನ್ನು ಸವಿಯಲು ಅವಕಾಶ ಕಲ್ಪಿಸುತ್ತವೆ.