ಭಾರತದಲ್ಲಿ ನೀವು ನೋಡಲೇಬೇಕಿರುವ 8 ಮ್ಯಾಂಗ್ರೋವ್ ಕಾಡುಗಳು..
ಸಮುದ್ರ ತಟದ ಉಪ್ಪು ನೀರು ಹಾಗೂ ಸಿಹಿ ನೀರು ಸಂಧಿಸುವ ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಕಂಡುಬರುವ ಮ್ಯಾಂಗ್ರೋವ್ ಕಾಡುಗಳನ್ನು ʼಕಾಂಡ್ಲಾ ಕಾಡುʼ ಎಂಬುದಾಗಿಯೂ ಹೇಳಲಾಗುತ್ತದೆ. ಭಾರತದಾದ್ಯಂತ ಪ್ರತಿಯೊಬ್ಬ ಪ್ರಕೃತಿ ಪ್ರಿಯನೂ ಭೇಟಿ ನೀಡಬೇಕಾದ ಪ್ರಮುಖ ಮ್ಯಾಂಗ್ರೋವ್ ಕಾಡುಗಳು ಯಾವುವು ಗೊತ್ತಾ ?
ಮ್ಯಾಂಗ್ರೋವ್ ಕಾಡುಗಳು ಎಂದಾಕ್ಷಣ ನಮ್ಮ ಕಣ್ಣೆದುರು ಬರುವುದು ಸಮುದ್ರ ತಣದಲ್ಲಿ ಎಕ್ರೆಗಟ್ಟಲೆ ಜಾಗದಲ್ಲಿ ದಟ್ಟವಾದ ಪೊದೆಯಂತೆ ಇಲ್ಲವೇ ಹೆಮ್ಮರಗಳಂತೆ ಹರಡಿ ನಿಂತಿರುವ ಗಿಡ-ಮರಗಳ ಕಾಡು ಪ್ರದೇಶ..ಸಮುದ್ರ ತಟದ ಉಪ್ಪು ನೀರು ಹಾಗೂ ಸಿಹಿ ನೀರು ಸಂದಿಸುವ ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಕಂಡುಬರುವ ಮ್ಯಾಂಗ್ರೋವ್ ಕಾಡುಗಳನ್ನು ʼಕಾಂಡ್ಲಾ ಕಾಡುʼ ಎಂಬುದಾಗಿಯೂ ಹೇಳಲಾಗುತ್ತದೆ.
ಕರ್ನಾಟಕದಲ್ಲಿ ಕರಾವಳಿ ಭಾಗದಲ್ಲಿ, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಶರಾವತಿ ನದಿ ಮುಖಜಭೂಮಿ ಮತ್ತು ಗೋಕರ್ಣ ಸಮೀಪದ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶವಾದ ನುಸಿಕೋಟೆ ಎಂಬಲ್ಲಿಯೂ ಕಾಂಡ್ಲಾ ಕಾಡುಗಳಿದ್ದು, ಪ್ರವಾಸಿಗರಿಗೆ ಮುಕ್ತವಾಗಿದೆ. ಆದರೆ ಭಾರತದಾದ್ಯಂತ ಪ್ರತಿಯೊಬ್ಬ ಪ್ರಕೃತಿ ಪ್ರಿಯರು ಭೇಟಿ ನೀಡಲೇಬೇಕಾದ ಪ್ರಮುಖ ಮ್ಯಾಂಗ್ರೋವ್ ಕಾಡುಗಳು ಯಾವುವು ? ಜುಲೈ 26ರಂದು ವಿಶ್ವ ಕಾಂಡ್ಲಾ ದಿನವನ್ನಾಗಿ ಆಚರಿಸಲಾಗುತ್ತಿದ್ದು ಅದಕ್ಕೂ ಮುನ್ನ ಈ ವಿಚಾರಗಳನ್ನು ನೀವೂ ತಿಳಿದುಕೊಳ್ಳಬೇಕಲ್ವೇ..
ಸುಂದರ್ ಬನ್ ಮ್ಯಾಂಗ್ರೋವ್ ಫಾರೆಸ್ಟ್:
ಭಾರತದ ಅತ್ಯಂತ ಪ್ರಸಿದ್ಧ ಮ್ಯಾಂಗ್ರೋವ್ ಕಾಡುಗಳಲ್ಲಿ ಒಂದಾಗಿರುವ ಸುಂದರ್ ಬನ್ ಮ್ಯಾಂಗ್ರೋವ್ ಕಾಡು, ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿದೆ. ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳ ಮುಖಜ ಭೂಮಿಯಲ್ಲಿರುವ ಈ ಕಾಡು ಸುಮಾರು 10,000 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಅಂಕುಡೊಂಕಾದ ಈ ಮ್ಯಾಂಗ್ರೋವ್ ಕಾಡಿನ ನಡುವೆ ಜಲಮಾರ್ಗದ ಮೂಲಕ ದೋಣಿ ವಿಹಾರವನ್ನು ಮಾಡುತ್ತಾ, ಅಲ್ಲಿರುವ ಜಲಚರ ಜೀವಿಗಳು, ಸರೀಸೃಪಗಳು, ಮರಗಳ ನಡುವೆ ಸುಶ್ರಾವ್ಯವಾಗಿ ಕೂಗಿ ಕರೆವ ವಿಭಿನ್ನ ಜಾತಿಯ ಪಕ್ಷಿಗಳನ್ನೂ ಸಹ ಕಣ್ತುಂಬಿಕೊಳ್ಳಬಹುದು.

ಅಂಡಮಾನ್ - ನಿಕೋಬಾರ್ ದ್ವೀಪಗಳು :
ಬಂಗಾಳ ಕೊಲ್ಲಿಯಲ್ಲಿರುವ ದ್ವೀಪ ಸಮೂಹವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಭಾರತದ ಅತ್ಯಂತ ಪ್ರಾಚೀನವಾದ ಮ್ಯಾಂಗ್ರೋವ್ ಕಾಡುಗಳಿಂದ ಆವೃತವಾಗಿವೆ. ಮ್ಯಾಂಗ್ರೋವ್ ತೊರೆಗಳನ್ನು ಹೊಂದಿರುವ ಮಹಾತ್ಮ ಗಾಂಧಿ ಸಾಗರ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮತ್ತು ಪಕ್ಷಿ ವೀಕ್ಷಣೆಗೆ ಅವಕಾಶಗಳಿವೆ. ಈ ದ್ವೀಪಗಳು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದ್ದು, ಬೆರಗುಗೊಳಿಸುವ ಹವಳದ ದಿಬ್ಬಗಳು, ವೈವಿಧ್ಯಮಯ ಸಮುದ್ರ ಜೀವಿಗಳು ಮತ್ತು ಸೊಂಪಾದ ಮ್ಯಾಂಗ್ರೋವ್‌ಗಳೊಂದಿಗೆ ಪರಿಸರ ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದ ತಾಣವೆನ್ನಿಸಿಕೊಂಡಿದೆ.

ಭಿತರ್ಕಾನಿಕಾ ಮ್ಯಾಂಗ್ರೋವ್ :
ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿರುವ ಭಿತರ್ಕಾನಿಕಾ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಮಹತ್ವದ ಮ್ಯಾಂಗ್ರೋವ್ ಕಾಡನ್ನು ಹೊಂದಿರುವ ತಾಣವಾಗಿದೆ. ಅಲ್ಲದೆ ವೈವಿಧ್ಯಮಯ ವನ್ಯಜೀವಿಗಳ ನೆಲೆಬೀಡಾಗಿದೆ. ಬ್ರಹ್ಮಣಿ ಮತ್ತು ಬೈತರಾಣಿ ನದಿಗಳ ಮುಖಜ ಭೂಮಿಯಾಗಿರುವ ಭಿತರ್ಕಾನಿಕಾ ಮ್ಯಾಂಗ್ರೋವ್‌ಗಳಲ್ಲಿ ವೈವಿಧ್ಯಮಯ ಪಕ್ಷಿಗಳು ಮತ್ತು ಇತರ ವನ್ಯಜೀವಿಗಳು, ಮೊಸಳೆಗಳನ್ನು ಕಾಣಲು ದೋಣಿ ವಿಹಾರದ ಮೂಲಕ ತೆರಳಬಹುದು.
ಪಿಚಾವರಂ ಮ್ಯಾಂಗ್ರೋವ್ ಫಾರೆಸ್ಟ್:
ತಮಿಳುನಾಡಿನ ಚಿದಂಬರಂ ಬಳಿಯ ಪಿಚಾವರಂ, ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳಲ್ಲಿ ಒಂದಾಗಿದ್ದು, ಸುಮಾರು 1100 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ. ಹಿನ್ನೀರು, ಮ್ಯಾಂಗ್ರೋವ್ ದ್ವೀಪಗಳು ಮತ್ತು ನದೀಮುಖಗಳ ಸಂಕೀರ್ಣ ಜಾಲವು ಇದನ್ನು ಪ್ರತ್ಯೇಕಿಸುತ್ತಿದ್ದು, ಇದು ಕಯಾಕರ್‌ಗಳ ಸ್ವರ್ಗವಾಗಿದೆ. ಕಾವೇರಿ ಮತ್ತು ಕೊಲೆರೂನ್ ನದಿಗಳ ಮುಖಜ ಭೂಮಿಯಲ್ಲಿರುವ ಪಿಚಾವರಂ ಮ್ಯಾಂಗ್ರೋವ್ ಪರಿಸರ ಪ್ರವಾಸೋದ್ಯಮಕ್ಕೆ ಜನಪ್ರಿಯ ತಾಣ.

ಚೋರಾವ್ ದ್ವೀಪ ಮ್ಯಾಂಗ್ರೋವ್ ಕಾಡುಗಳು:
ಅದ್ಭುತವಾದ ಕಡಲತೀರಗಳಿಗೆ ಹೆಸರಾಗಿರುವ ಗೋವಾದಲ್ಲಿರುವ ಮ್ಯಾಂಗ್ರೋವ್ ಕಾಡುಗಳೂ ಸಹ ನಯನ ಮನೋಹರವಾಗಿದೆ. ಕಂಬರ್ಜುವಾ ಕಾಲುವೆ, ಮಾಂಡೋವಿ-ಜುವಾರಿ ನದೀಮುಖ ಮತ್ತು ಸಲೀಂ ಅಲಿ ಪಕ್ಷಿಧಾಮದಂತಹ ಸ್ಥಳಗಳು ಗೋವಾದ ಅಭಿವೃದ್ಧಿ ಹೊಂದುತ್ತಿರುವ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಗಳ ನೋಟವನ್ನು ನೀಡುತ್ತವೆ. ಈ ದ್ವೀಪವು ತನ್ನ ಹಚ್ಚ ಹಸಿರಿನ ಮ್ಯಾಂಗ್ರೋವ್ ಕಾಡುಗಳು ಮತ್ತು ವಿಶಿಷ್ಟ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರದೇಶಗಳು ಪಕ್ಷಿವೀಕ್ಷಕರಿಗೆ ಸ್ವರ್ಗವಾಗಿದ್ದು, ಹಲವಾರು ನಿವಾಸಿ ಮತ್ತು ವಲಸೆ ಪಕ್ಷಿ ಪ್ರಭೇದಗಳನ್ನು ಇಲ್ಲಿ ಕಾಣಲುಸಾಧ್ಯ. ಗೋವಾದ ಮ್ಯಾಂಗ್ರೋವ್‌ಗಳನ್ನು ಕಣ್ತುಂಬಿಕೊಳ್ಳಲು ದೋಣಿ ವಿಹಾರ ಮಾಡಿ ಅಥವಾ ಪ್ರಕೃತಿ ನಡಿಗೆಯನ್ನು ಕೈಗೊಳ್ಳಬಹುದು.
ಗಲ್ಫ್ ಆಫ್ ಕಚ್ ಮ್ಯಾಂಗ್ರೋವ್ಸ್:
ಪಶ್ಚಿಮ ಭಾರತದ ಗುಜರಾತ್ ರಾಜ್ಯದ ಕಛ್ ಕೊಲ್ಲಿಯ ಕರಾವಳಿಯಲ್ಲಿ ನೆಲೆಗೊಂಡಿರುವ ಮ್ಯಾಂಗ್ರೋವ್ ಗಳನ್ನು ಭಾರತದ ಅತಿದೊಡ್ಡ ಮ್ಯಾಂಗ್ರೋವ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವು ಅಳಿವಿನಂಚಿನಲ್ಲಿರುವ ಬಂಗಾಳ ಹುಲಿ ಸೇರಿದಂತೆ ವಿವಿಧ ವನ್ಯಜೀವಿಗಳಿಗೆ ನೆಲೆಯಾಗಿದೆ. ಈ ಅರಣ್ಯವು ಫ್ಲೆಮಿಂಗೋಗಳು, ಪೆಲಿಕನ್‌ಗಳು ಮತ್ತು ಹೆರಾನ್‌ಗಳು ಸೇರಿದಂತೆ ವಿವಿಧ ವಲಸೆ ಹಕ್ಕಿಗಳಿಗೆ ನೆಲೆಯಾಗಿರುವುದರಿಂದ ಪಕ್ಷಿ ವೀಕ್ಷಣೆಗೆ ಜನಪ್ರಿಯ ತಾಣವಾಗಿದೆ.

ವೆಂಬನಾಡ್ ಕೋಲ್ ವೆಟ್ ಲ್ಯಾಂಡ್:
ಕೇರಳದ ಸುಂದರವಾದ ಹಿನ್ನೀರಿನಲ್ಲಿರುವ ವೆಂಬನಾಡ್ ಕೋಲ್ ಜೌಗು ಪ್ರದೇಶವು ಮ್ಯಾಂಗ್ರೋವ್‌ಗಳು, ಜೌಗು ಪ್ರದೇಶಗಳ ತಾಣವಾಗಿದೆ. ಈ ಪ್ರದೇಶವು ಪರಿಸರ ವಿಜ್ಞಾನದ ದೃಷ್ಟಿಯಿಂದ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಶ್ರೀಮಂತವಾಗಿದೆ. ಇಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ, ಪಕ್ಷಿ ವೀಕ್ಷಣೆ ಮತ್ತು ಹೌಸ್‌ಬೋಟ್ ಕ್ರೂಸ್‌ಗಳ ಅನುಭವವನ್ನು ನೀವು ಪಡೆಯಲು ಸಾಧ್ಯ.
ಥಾಣೆ ಕ್ರೀಕ್ ಮ್ಯಾಂಗ್ರೋವ್:
ಥಾಣೆ ಕ್ರೀಕ್ ಮ್ಯಾಂಗ್ರೋವ್‌ಗಳು ಮುಂಬೈ ಮತ್ತು ನವಿ ಮುಂಬೈ ನಡುವೆ ಹರಿಯುವ ನದೀಮುಖವಾದ ಥಾಣೆ ಕ್ರೀಕ್‌ನ ಪೂರ್ವ ತೀರದಲ್ಲಿ ನೆಲೆಗೊಂಡಿವೆ. ಥಾಣೆ ಕ್ರೀಕ್ ಮ್ಯಾಂಗ್ರೋವ್‌ಗಳು ಭಾರತದ ಮಹಾರಾಷ್ಟ್ರ ರಾಜ್ಯದ ಮುಂಬೈ ಬಳಿ ಇರುವ ಒಂದು ಪ್ರಮುಖ ಜೌಗು ಪ್ರದೇಶವಾಗಿದೆ. ಪರಿಸರ ಸಂರಕ್ಷಣೆಯ ವಿಷಯದಲ್ಲಿ ಪ್ರಮುಖ ಪಾತ್ರವಹಿಸುವ ಈ ಮ್ಯಾಂಗ್ರೋವ್ ಸಸ್ಯಗಳನ್ನು ಸುನಾಮಿ, ಭೂಸವಕಳಿ, ಚಂಡಮಾರುತ, ಇಂತಹವುಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಹಾಗೂ ಕರಾವಳಿಯನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಭಾರತದ ಮ್ಯಾಂಗ್ರೋವ್ ಕಾಡುಗಳು ಪರಿಸರಕ್ಕೆ ಅತ್ಯಗತ್ಯ ಮಾತ್ರವಲ್ಲದೆ ಪ್ರಕೃತಿ ಪ್ರಿಯರಿಗೆ ವಿಶಿಷ್ಟ ಮತ್ತು ಸಮೃದ್ಧ ಅನುಭವಗಳನ್ನು ನೀಡುತ್ತವೆ. ಐಕಾನಿಕ್ ಸುಂದರ್‌ಬನ್ಸ್‌ನಿಂದ ಹಿಡಿದು ಭಿತರ್ಕಾನಿಕಾ ಮತ್ತು ಪಿಚಾವರಂನಂತಹ ಅಷ್ಟಾಗಿ ಹೆಸರು ಮಾಡದ ಮ್ಯಾಂಗ್ರೋವ್ ಕಾಡುಗಳೂ ಸಹ ಪ್ರಕೃತಿಯ ಅದ್ಭುತಗಳಿಗೆ ಸಾಕ್ಷಿಯಾಗಿದೆ. ಆದ್ದರಿಂದ ಅದ್ಭುತ ಮ್ಯಾಂಗ್ರೋವ್ ಕಾಡುಗಳ ಸುತ್ತ ನೀವೂ ಒಮ್ಮೆ ವಿಹರಿಸಿ ಬನ್ನಿ.