ಉತ್ತರ ಕರ್ನಾಟಕದ ರಂಗನತಿಟ್ಟು...
ಪ್ರತಿ ವರ್ಷ ಜಮ್ಮು ಕಾಶ್ಮೀರದ ಲಡಾಕ್, ಲೇಹ್, ರಶಿಯಾ, ಮಲೇಶಿಯಾ, ಆಸ್ಟ್ರೇಲಿಯಾ, ಟಿಬೆಟ್, ಭೂತಾನ್, ಮ್ಯಾನ್ಮಾರ್, ನ್ಯೂಜಿಲ್ಯಾಂಡ್, ಸೈಬೇರಿಯಾಗಳಿಂದ ಹಲವಾರು ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.
ಉತ್ತರ ಕರ್ನಾಟಕ (north karntaka) ದ ರಂಗನತಿಟ್ಟು(rangana tittu) ಎಂದೇ ಕರೆಯುವ "ಮಾಗಡಿ ಪಕ್ಷಿಧಾಮ" (magadi bird sanctuary) ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿನ ಸುಮಾರು 70 ಹೆಕ್ಟೆರ್ ವಿಸ್ತೀರ್ಣದ ಮಳೆಯಾಧಾರಿತ ಕೆರೆಯೇ ಪಕ್ಷಿಧಾಮವಾಗಿ ರೂಪಿತಗೊಂಡಿದೆ. ಇದು 900 ಹೆಕ್ಟೇರ್ ಜಲಾನಯನ ಪ್ರದೇಶವನ್ನು ಹೊಂದಿದೆ. ಈ ಪಕ್ಷಿಧಾಮವು ಶಿರಹಟ್ಟಿಯಿಂದ 8 ಕಿ.ಮೀ., ಗದಗದಿಂದ 27 ಕಿ .ಮೀ .ದೂರದಲ್ಲಿದೆ. ಇಲ್ಲಿಗೆ ಅಕ್ಟೋಬರ್ ಅಂತ್ಯಕ್ಕೆ ದೇಶ ವಿದೇಶಗಳಿಂದ ವಿವಿಧ ಪಕ್ಷಗಳು ಆಗಮಿಸಲಾರಂಭಿಸುವವು. ನವೆಂಬರ್ ತಿಂಗಳ ಎರಡನೇ ವಾರದ ಹೊತ್ತಿಗೆ ಸಂಪೂರ್ಣ ಕೆರೆಯ ನೀrರಿನ ಮೇಲೆಲ್ಲ ಪಕ್ಷಿಗಳು ಹರಡಿ ತೇಲುತ್ತಿರುತ್ತವೆ.
ವೈವಿಧ್ಯಮಯ ಪಕ್ಷಿಗಳು:
ಇಲ್ಲಿಯ ಪಕ್ಷಿಗಳು ಒಂದಕ್ಕಿಂತ ಒಂದು ವಿಭಿನ್ನ. ಇಲ್ಲಿ ಸುಮಾರು 166 ವಿವಿಧ ಜಾತಿಯ ಹಕ್ಕಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಸುಮಾರು 44 ಜಾತಿಯವು ವಿದೇಶಗಳಿಂದ ವಲಸೆ ಬಂದಂಥವು. ತಟ್ಟೆ ತಲೆಯ ಹೆಬ್ಬಾತು, ಬೂದು ಹೆಬ್ಬಾತು (ಗ್ರೇಲಾಗ್ ಗೂಸ್), ಕಂದು ಬಾತು (ಬ್ರಾಹ್ಮಿಣಿ ಶೆಲ್ಡಕ್ ), ಸೂಜಿಬಾಲದ ಬಾತು (ನಾರ್ದರ್ನ್ ಪಿನ್ವೇಲ್), ಚಲುಕ ಬಾತು (ನಾರ್ದರ್ನ್ ಷೋವೆಲರ್), ನಾಮದ ಬಾತು (ಯುರೋಪಿಯನ್ ವಿಜನ್), ಬಿಳಿ ಹುಬ್ಬಿನ ಬಾತು (ಗಾರ್ಗನಿ), ಕಂದು ತಲೆ ಬಾತು (ಕಾಮನ್ ಪೊಚ್ಚರ್ಡ್)... ಮುಂತಾದ ಬಾತುಗಳು ಇಲ್ಲಿಗೆ ವಲಸೆ ಬರುತ್ತವೆ. ವಿವಿಧ ನೀರಕ್ಕಿ, ನೀರ್ನಡಿಗೆ, ನೆಲವಾಸಿ, ಮರವಾಸಿ ಹಕ್ಕಿಗಳನ್ನು ಹತ್ತಿರದಿಂದ ನೋಡಬಹುದಾಗಿದೆ. ಮಾಗಡಿ ಕೆರೆಗೆ 10 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಪ್ರತಿ ವರ್ಷ ವಲಸೆ ಬರುತ್ತವೆ.
ಎಲ್ಲೆಲ್ಲಿಂದ ಬರುತ್ತವೆ:
ಪ್ರತಿ ವರ್ಷ ಜಮ್ಮು ಕಾಶ್ಮೀರದ ಲಡಾಖ್, ಲೇಹ್, ರಶಿಯಾ, ಮಲೇಶಿಯಾ, ಆಸ್ಟ್ರೇಲಿಯಾ, ಟಿಬೆಟ್, ಭೂತಾನ್, ಮ್ಯಾನ್ಮಾರ್, ನ್ಯೂಜಿಲೆಂಡ್, ಸೈಬೇರಿಯಾಗಳಿಂದ ವಲಸೆ ಬರುತ್ತವೆ. ಈ ಅಪರೂಪದ ವಿದೇಶಿ ಅತಿಥಿಗಳು ಈ ಕೆರೆಗೆ ನವೆಂಬರ್ ತಿಂಗಳಲ್ಲಿ ಬಂದಿಳಿದು ಫೆಬ್ರವರಿ ಅಂತ್ಯಕ್ಕೆ ತಮ್ಮ ದೇಶಗಳಿಗೆ ಮರಳುತ್ತವೆ.
ಪಕ್ಷಿಗಳ ಸ್ವರ್ಗ:
ಪಕ್ಷಿಗಳ ಸ್ವರ್ಗವೆಂದೇ ಮಾಗಡಿ ಕೆರೆಯನ್ನು ಕರೆಯಲಾಗುತ್ತದೆ. ಇಲ್ಲಿಗೆ ಹಾರಿ ಬರುವ ಬಗೆ ಬಗೆಯ ಪಕ್ಷಿಗಳ ಕಲರವ, ಈಜು ಮರಿಗಳನ್ನು ನೋಡಲು ರಾಜ್ಯದ ದೂರು ದೂರದ ಊರುಗಳಿಂದ ಪಕ್ಷಿ ವೀಕ್ಷಕರು, ಪಕ್ಷಿ ಪ್ರಿಯರು, ಹವ್ಯಾಸಿ ಛಾಯಾಗ್ರಾಹಕರು, ಶಾಲಾ ಮಕ್ಕಳು ಮಾಗಡಿ ಪಕ್ಷಿಧಾಮ ನೋಡಲು ಬರುತ್ತಾರೆ. ವಿವಿಧ ದೇಹದ ಹಕ್ಕಿಗಳನ್ನು ನೋಡಿ ಕಣ್ಣು ತುಂಬಿಕೊಳ್ಳುತ್ತಾರೆ. ಪಕ್ಷಿಗಳು ಸಾಮಾನ್ಯವಾಗಿ ಮೀನು, ಉಭಯಚರಗಳು, ಹಾವುಗಳು, ಮೃದ್ವಂಗಿಗಳು ಇತ್ಯಾದಿಗಳನ್ನು ತಿನ್ನುತ್ತವೆ. ಹಗಲು ಹೊತ್ತಿನಲ್ಲಿ ಕೆರೆಯ ನೀರಲ್ಲಿ ತೇಲಾಡಿ, ಸಂಜೆಯಾಗುತ್ತಿದ್ದಂತೆ ಚಿಗುರೆಲೆ, ದವಸ ಧಾನ್ಯಗಳಂತಹ ಆಹಾರವನ್ನು ಅರಸಿ ಬೆಳೆ ಇರುವ ಕೃಷಿ ಭೂಮಿಯತ್ತ ಹೊರಡುತ್ತವೆ. ಮುಂಜಾನೆಯ ಹೊತ್ತಿಗೆ ಮತ್ತೆ ಮರಳಿ ಬರುತ್ತವೆ.
ಪಕ್ಷಿಗಳ ರಂಗೋಲಿ:
ಕೇರಿಯಲ್ಲಿ ಗುಂಪು ಗುಂಪಾಗಿ ವಿಹರಿಸುವ ಬಣ್ಣ ಬಣ್ಣದ ಈ ಹಕ್ಕಿಗಳು ನೀರಿನಲ್ಲಿ ರಂಗೋಲಿ ಹಾಕಿದಂತೆ ಭಾಸವಾಗುತ್ತದೆ. ಆಹಾರ ಅರಸಿಕೊಂಡು ಗುಂಪು ಗುಂಪಾಗಿ ಹಾರುವ ಹಕ್ಕಿಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಈ ಪಕ್ಷಿಗಳು 15 ರಿಂದ 20 ಸಾವಿರ ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ.
ಭೇಟಿಯ ಸಮಯ:
ಪಕ್ಷಿಧಾಮಕ್ಕೆ ಭೇಟಿಕೊಡಲು ನವೆಂಬರ್ ತಿಂಗಳ ಎರಡನೆ ವಾದದಿಂದ ಮಾರ್ಚ್ ಮೂರನೇ ವಾರದ ಅವಧಿ ಅತಿ ಉತ್ತಮ. ಮುಂಜಾನೆ ಸುಮಾರು 8.30ರ ಸುಮಾರಿಗೆ ಅವು ಮರಳಿ ಬರುವ ಹೊತ್ತಿಗೆ ಅಲ್ಲಿದ್ದರೆ ಉತ್ತಮ. ಸಂಜೆ 5ರ ಸುಮಾರಿಗೆ ಇಲ್ಲಿಂದ ಆಹಾರ ಹುಡುಕಲು ಶುರುಮಾಡುತ್ತವೆ. ಅರಣ್ಯ ಇಲಾಖೆಯ ವೀಕ್ಷಣಾ ಗೋಪುರ ಉತ್ತಮ ನೋಟವನ್ನು ಒದಗಿಸುತ್ತದೆ. ಇದು ಕರ್ನಾಟಕದ ಜೀವ ವೈವಿಧ್ಯದ ಹಾಟ್ ಸ್ಪಾಟ್ ಗಳಲ್ಲಿ ಒಂದಾಗಿದೆ.