Tuesday, July 29, 2025
Tuesday, July 29, 2025

ನಿಮ್ಮ ಮಕ್ಕಳು ಪ್ರಾಣಿಪ್ರಿಯರಾಗಿದ್ದರೆ ಈ ಸ್ಥಳಗಳಿಗೆ ತಪ್ಪದೇ ಹೋಗಿ ಬನ್ನಿ..

ನಿಮ್ಮ ಮಕ್ಕಳು ಪ್ರಕೃತಿ ಪ್ರಿಯರಾ ? ಪ್ರಾಣಿ, ಪಕ್ಷಿ, ಜಲಚರ ಜೀವಿಗಳೆಂದರೆ ಅವರಿಗೆ ವಿಶೇಷ ಆಸಕ್ತಿಯಿದೆಯಾ? ಹಾಗಾದರೆ ಬನ್ನೇರುಘಟ್ಟ ಜೈವಿಕ ಉದ್ಯಾನವನ, ಮೈಸೂರು ಮೃಗಾಲಯ ತೋರಿಸಿಬರುವುದಷ್ಟೇ ಅಲ್ಲ. ದೇಶ ವಿದೇಶಗಳ ಈ ಪ್ರಮುಖ ಪ್ರವಾಸಿ ತಾಣಗಳಿಗೆ ಒಮ್ಮೆಯಾದರೂ ಕರೆದುಕೊಂಡು ಹೋಗಿ.

ಪ್ರಾಣಿಗಳೆಂದರೆ ಎಲ್ಲರಿಗೂ ಅಚ್ಚಮೆಚ್ಚು. ಅದರಲ್ಲೂ ಮಕ್ಕಳಿಗಂತೂ ತಾವು ಪಠ್ಯ ಪುಸ್ತಕ, ಕಾರ್ಟೂನ್‌, ಸಿನಿಮಾಗಳಲ್ಲಿ ನೋಡಿದ್ದ ವಿಶೇಷವಾದ ಪ್ರಾಣಿಗಳನ್ನು ವಾಸ್ತವವಾಗಿ ಕಾಣುವುದೆಂದರೆ ಅದೇನೋ ಸಂಭ್ರಮ, ಉಲ್ಲಾಸ. ಅದಕ್ಕಾಗಿ ಬಿಡುವಾದಾಗಲೆಲ್ಲಾ ಕರ್ನಾಟಕದ ಮೈಸೂರು ಮೃಗಾಲಯ, ಬನ್ನೇರುಘಟ್ಟ ಜೈವಿಕ ಉದ್ಯಾನವನ, ಮಂಗಳೂರಿನ ಪಿಲಿಕುಳ ಪಕ್ಷಿಧಾಮ, ಶಿವಮೊಗ್ಗದ ಸಕ್ರೆಬೈಲು ಆನೆ ಕ್ಯಾಂಪ್‌, ಗದಗದ ಬಿಂಕದಕಟ್ಟಿ ಮೃಗಾಲಯ, ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯಗಳಿಗೆಲ್ಲಾ ಭೇಟಿ ನೀಡುತ್ತಾರೆ.

ಆದರೆ ರಾಜ್ಯದ ಗಡಿ ದಾಟಿ, ದೇಶ ವಿದೇಶಗಳಲ್ಲಿ ನಿಮ್ಮ ಮಕ್ಕಳು ಭೇಟಿ ನೋಡಲೇಬೇಕಾದ ಜನಪ್ರಿಯವಾಗಿರುವ ಕೆಲವು ತಾಣಗಳಿವೆ. ಮಕ್ಕಳ ಯೋಚನೆಗಳಿಗೆ ಬಣ್ಣ ಹಚ್ಚಲು, ಮುಕ್ತವಾಗಿ ಪಕ್ಷಿ, ಪ್ರಾಣಿ, ಜಲಚರ ಜೀವಿಗಳನ್ನು ತಿಳಿಯಲು ಇಲ್ಲಿ ಸಾಕಷ್ಟು ಅವಕಾಶಗಳಿವೆ. ಆ ಪ್ರವಾಸಿತಾಣಗಳ ಮಾಹಿತಿ ಇಲ್ಲಿವೆ.

ಕೀನ್ಯಾದ ಡ್ರೀಮಿ ಮ್ಯಾನರ್‌ನಲ್ಲಿ ಜಿರಾಫೆಗಳೊಂದಿಗೆ ಕಾಲ ಕಳೆಯಿರಿ:

ಜಿರಾಫೆಗಳನ್ನು ನೋಡುವುದೇ ಚಂದ. ಉದ್ದ ಕತ್ತಿನ ಅತೀ ಎತ್ತರದ ಈ ವಿಶೇಷವಾದ ಪ್ರಾಣಿಗಳು ಕರ್ನಾಟಕದ ಮೃಗಾಲಯಗಳಲ್ಲಿ ಕಾಣಸಿಗುತ್ತವೆಯಾದರೂ, ದಕ್ಷಿಣ ಆಫ್ರಿಕಾದ ಕಾಡುಗಳಲ್ಲಿ ನೆಲೆ ಕಂಡುಕೊಂಡಿವೆ. ಅದರಲ್ಲೂ ವಿಶೇಷವಾಗಿ ಜಿರಾಫೆಗಳನ್ನು ನೋಡುವುದಕ್ಕೆ ಕೀನ್ಯಾದ ಜಿರಾಫೆ ಮ್ಯಾನರ್‌ಗೆ ಭೇಟಿ ನೀಡಲೇಬೇಕು. ಇಲ್ಲಿ140 ಎಕರೆ ಸ್ಥಳೀಯ ಅರಣ್ಯದಲ್ಲಿ ಅಳಿವಿನಂಚಿನಲ್ಲಿರುವ ನುಬಿಯನ್/ರೋಥ್‌ಚೈಲ್ಡ್ ಜಿರಾಫೆಗಳು ಕಾಣಸಿಗುತ್ತಿದ್ದು, ಪ್ರವಾಸಿಗರೊಂದಿಗೆ ಅವು ಮುಕ್ತವಾಗಿ ಬೆರೆಯುತ್ತವೆ.

giraffe-manor-kenya-1688957864

ಬೆಲ್ಜಿಯಂ ಮೃಗಾಲಯದಲ್ಲಿ ವಾಲ್ರಸ್‌ಗಳೊಂದಿಗೆ ಆಟವಾಡಿ:

ಬೆಲ್ಜಿಯಂನ ಬ್ರೂಗೆಲೆಟ್‌ನಲ್ಲಿ ಚೀವ್ರೆಸ್ ವಾಯುನೆಲೆಯಿಂದ ಸುಮಾರು 5 ನಿಮಿಷಗಳ ದೂರದಲ್ಲಿರುವ ವನ್ಯಜೀವಿ ಉದ್ಯಾನವನ ಪೈರಿ ಡೈಜಾ. ಇಲ್ಲಿನ ಪ್ರಮುಖ ಆಕರ್ಷಣೆ ʼ ವಾಲ್ರಸ್‌ ಹೌಸ್‌ʼ. ವಾಲ್ರಸ್‌ ಗಳನ್ನು ನೋಡಲು ಬಯಸುವ ಪ್ರವಾಸಿಗರಿಗಾಗಿ ವಿಶೇಷವಾದ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದ್ದು, ರಾತ್ರಿ ಉಳಿದುಕೊಳ್ಳಲೂ ಸಹ ವಿಶೇಷ ವ್ಯವಸ್ಥೆಯನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ. ಮಕ್ಕಳಿಗೆ ವಾಲ್ರಸ್‌ ಗಳ ಚಲನವಲನಗಳನ್ನು ನೋಡುವುದೇ ಖುಷಿಯುಂಟುಮಾಡಬಹುದು. ಇಲ್ಲಿ ವಾಲ್ರಸ್ ಗಳನ್ನು ನೋಡುವುದಷ್ಟೇ ಅಲ್ಲದೆ, ಹಲವಾರು ತಳಿಯ ಕರಡಿಗಳು, ತೋಳಗಳು, ಸಮುದ್ರ ಸಿಂಹಗಳು, ಹುಲಿಗಳು, ಪೆಂಗ್ವಿನ್‌ಗಳು ಮತ್ತು ಇನ್ನೂ ಅನೇಕ ಪ್ರಾಣಿ ವರ್ಗಗಳನ್ನು ಕಣ್ತುಂಬಿಕೊಳ್ಳಬಹುದು.

30969700-0-image-a-3_1595238759729

ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿ ಶಾರ್ಕ್‌ಗಳೊಂದಿಗೆ ಈಜಿಕೊಳ್ಳಿ:

ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿರುವ ಸುಂದರ ಹಾಗೂ ಶಾಂತವಾದ ಕಡಲತೀರ ಲಾ ಜೊಲ್ಲಾ. 6,000 ಎಕರೆ ವಿಸ್ತೀರ್ಣದ ಅಂಡರ್‌ವಾಟರ್ ಪಾರ್ಕ್ ಸಹ ಇಲ್ಲಿದ್ದು, ಶಾರ್ಕ್‌ ಸೇರಿದಂತೆ ಅನೇಕ ಬಗೆಯ ಜಲಚರ ಜೀವಿಗಳನ್ನು ಕಣ್ತುಂಬಿಕೊಳ್ಳಬಹುದು. ಸ್ನಾರ್ಕ್ಲಿಂಗ್, ಕಯಾಕಿಂಗ್‌ ಹಾಗೂ ಶಾರ್ಕ್‌ಗಳೊಂದಿಗೆ ಈಜಾಡಲು ಇಲ್ಲಿ ಪ್ರವಾಸಿಗರಿಗೆ ಅವಕಾಶವಿದೆ. ಮಕ್ಕಳು ದೈತ್ಯ ಗಾತ್ರದ ಶಾರ್ಕ್‌ಗಳನ್ನು ನೋಡುತ್ತಾ ಕಾಲ ಕಳೆಯಲು ಇದು ಸೂಕ್ತ ತಾಣ.

ಪೆರುವಿನ ಅಪರೂಪದ ಗುಲಾಬಿ ನದಿಯಲ್ಲಿ ಡಾಲ್ಫಿನ್‌ಗಳನ್ನು ವೀಕ್ಷಿಸಿ:

ಅಮೆಜಾನ್ ನದಿ ಡಾಲ್ಫಿನ್, ಇದನ್ನು ಗುಲಾಬಿ ನದಿ ಡಾಲ್ಫಿನ್ ಅಥವಾ ಬೊಟೊ ಎಂದೂ ಕರೆಯುತ್ತಾರೆ. ಇದು ಸಿಹಿನೀರಿನಲ್ಲಿ ಮಾತ್ರ ವಾಸಿಸುತ್ತದೆ. ಇದು ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್, ಗಯಾನಾ, ಪೆರು ಮತ್ತು ವೆನೆಜುವೆಲಾದ ಅಮೆಜಾನ್ ಮತ್ತು ಒರಿನೊಕೊ ನದಿ ಜಲಾನಯನ ಪ್ರದೇಶಗಳಲ್ಲಿ ಕಂಡುಬರುತ್ತದೆ. ಸ್ನೇಹಪರ ಸ್ವಭಾವ ಮತ್ತು ಹೆಚ್ಚಿನ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿರುವ ಈ ಡಾಲ್ಫಿನ್‌ ಗಳು ಮಕ್ಕಳಿಗೆ ಅಚ್ಚಮೆಚ್ಚಿನದಾಗುವುದರಲ್ಲಿ ಸಂದೇಹವಿಲ್ಲ.

amazon_pink_river_dolphin_trexperience_3

ಉಗಾಂಡಾದಲ್ಲಿದೆ ಮಕ್ಕಳ ಸ್ನೇಹಿ ಸಫಾರಿ :

ಸಫಾರಿ ಹೋಗುವುದೆಂದರೆ ಮಕ್ಕಳಿಗೆ ಕೌತುಕದ ವಿಚಾರ. ಸಫಾರಿ ತೆರಳಿ, ಪ್ರಾಣಿ, ಪಕ್ಷಿಗಳನ್ನು ಸಮೀಪದಿಂದ ನೋಡುವ ಅವಕಾಶಕ್ಕಾಗಿ ಮಕ್ಕಳು ಹಾತೊರೆಯುತ್ತಾರೆ. ಅಂತಹ ಮಕ್ಕಳು ಹಾಗೂ ಸಫಾರಿ ಪ್ರಿಯರಿಗೆ ಉಗಾಂಡಾದಲ್ಲಿದೆ ಮಕ್ಕಳ ಸ್ನೇಹಿ ಸಫಾರಿ. ಇಲ್ಲಿನ ರುಬೋಂಡೋ ದ್ವೀಪದಲ್ಲಿ ಜಿರಾಫೆ, ಆನೆ, ಖಡ್ಗಮೃಗಗಳು ಮತ್ತು ಹಿಪ್ಪೋಗಳು ವಾಸವಾಗಿದ್ದು, ಇವುಗಳನ್ನು ಖಾಸಗಿ ಲ್ಯಾಂಡ್ ರೋವರ್‌ಗಳಲ್ಲಿ ತೆರಳುವ ಮೂಲಕ ಆನಂದಿಸಬಹುದು. ಇಲ್ಲಿ ಚಿಂಪಾಂಜಿ ಟ್ರೆಕ್ಕಿಂಗ್ , ಮಕ್ಕಳಿಗಾಗಿ ಗೇಮ್ ಡ್ರೈವ್‌ಗಳು ಇದ್ದು, ಮಕ್ಕಳು ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬಹುದು.

ಅಸ್ಸಾಟೀಗ್ ದ್ವೀಪದ ಕಾಡು ಕುದುರೆಗಳನ್ನು ವೀಕ್ಷಿಸಿ:

ಮಕ್ಕಳಿಗೆ ಕುದುರೆಗಳೆಂದರೆ ಅಚ್ಚುಮೆಚ್ಚು. ನೆಚ್ಚಿನ ಕಾರ್ಟೂನ್‌ಗಳಲ್ಲಿ ಕಾಣಸಿಗುವ ಕುದುರೆಗಳನ್ನು ನೋಡಬಯಸುವ ಮಕ್ಕಳಿಗೆ ಅಸ್ಸಾಟೀಗ್ ದ್ವೀಪ ಒಳ್ಳೆಯ ಆಯ್ಕೆ. ಯಾಕೆಂದರೆ ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ಕರಾವಳಿಯಲ್ಲಿರುವ ಅಸ್ಸಾಟೀಗ್ ದ್ವೀಪವು ಕುದುರೆಗಳು ಅದರಲ್ಲೂ ಕಾಡು ಕುದುರೆಗಳ ತಾಣವಾಗಿದೆ. ಕುದುರೆಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ಮೇಯುತ್ತಿರುವ ಅಥವಾ ಓಡುತ್ತಿರುವ ಕೆಲವು ಅದ್ಭುತ ನೋಟಗಳು ಮಕ್ಕಳಿಗೆ ಇಲ್ಲಿ ಲಭ್ಯವಾಗಲಿದೆ.

f0d2f8_abfe64597b244f8581d64d06eac7390e~mv2

ರಾಷ್ಟ್ರೀಯ ಪಕ್ಷಿಧಾಮದಲ್ಲಿವೆ 150 ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು:

ಪಕ್ಷಿ ವೀಕ್ಷಣೆಗಾಗಿ ಯಾವಾಗಲೂ ಆಕಾಶದತ್ತ ಕಣ್ಣು ನೆಟ್ಟಿರುವ ಮಕ್ಕಳಿಗೆ, ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿರುವ ರಾಷ್ಟ್ರೀಯ ಪಕ್ಷಿ ಧಾಮ ಒಂದೊಳ್ಳೆ ಆಯ್ಕೆ. ಪಕ್ಷಿಗಳಿಗೆ ಮೀಸಲಾಗಿರುವ ಅಮೆರಿಕದ ಏಕೈಕ ಸ್ವತಂತ್ರ ಒಳಾಂಗಣ ಮೃಗಾಲಯ ಇದಾಗಿದ್ದು, 150 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಪ್ರತಿನಿಧಿಸುವ 500 ಕ್ಕೂ ಹೆಚ್ಚು ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ.

ನಾರ್ವೆಯಲ್ಲಿ ತಿಮಿಂಗಿಲ, ಹಿಮಸಾರಂಗ, ಹಿಮಕರಡಿಗಳನ್ನು ನೋಡಲು ಮರೆಯದಿರಿ:

ನಾರ್ವೆಯ ಪ್ರವಾಸ ಪ್ರಾಣಿ ಪ್ರಿಯರಿಗೆ ಖುಷಿ ನೀಡುವುದು ಖಚಿತ. ಯಾಕೆಂದರೆ ಇಲ್ಲಿನ ಟ್ರೋಮ್ಸೋ ಮತ್ತು ವೆಸ್ಟರಾಲೆನ್ ದ್ವೀಪಸಮೂಹದಿಂದ ತಿಮಿಂಗಿಲಗಳು ಆರ್ಕ್ಟಿಕ್ ನೀರನ್ನು ಭೇದಿಸುವುದನ್ನು ನೋಡುವ ಅನುಭವ, ಟ್ರೋಂಡೆಲಾಗ್‌ನ ಸ್ಫಟಿಕ-ಸ್ಪಷ್ಟ ನದಿಗಳಲ್ಲಿ ರೋಮಾಂಚಕಾರಿ ಸಾಲ್ಮನ್ ಸಫಾರಿ, ಸಮುದ್ರ ಹದ್ದು ಸಫಾರಿಗಳು, ನಾಯಿ ಸ್ಲೆಡ್ಡಿಂಗ್, ಹಿಮಕರಡಿ ವೀಕ್ಷಣೆ, ಬರ್ಗೆನ್‌ನಲ್ಲಿ ಕುದುರೆ ಸವಾರಿ ಮತ್ತು ಹಿಮಸಾರಂಗ ಅಭಯಾರಣ್ಯಕ್ಕೆ ಭೇಟಿ ವಿಶೇಷ ಅವಕಾಶಗಳು ಮಾತ್ರವಲ್ಲದೆ ಸ್ಥಳೀಯ ಜನರ ಶ್ರೀಮಂತ ಸಂಪ್ರದಾಯಗಳನ್ನು ಮಕ್ಕಳಿಗೆ ತಿಳಿಹೇಳಬಹುದು.

293-2048

ಹಾಕಿಂಗ್ ಹಿಲ್‌ನಲ್ಲಿ ಪತಂಗಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ:

"ಹ್ಯಾಕಿಂಗ್ ಹಿಲ್ ಮಾತ್ಸ್" ಎಂಬುದು ಓಹಿಯೋದ ಹ್ಯಾಕಿಂಗ್ ಹಿಲ್ ಪ್ರದೇಶದಲ್ಲಿ ಅಥವಾ ಹತ್ತಿರದಲ್ಲಿ ಕಂಡುಬರುವ ನಿರ್ದಿಷ್ಟ ಪತಂಗ ಪ್ರಭೇದ. ಇಲ್ಲಿಗೆ ಮಕ್ಕಳೊಂದಿಗೆ ಭೇಟಿ ಕೊಟ್ಟರೆ ವಿಶೇಷವಾದ ಚಿಟ್ಟೆಗಳ ಪ್ರಬೇಧಗಳ ನೋಡುವುದರ ಜೊತೆಗೆ ಜೊತೆಗೆ ಹಮ್ಮಿಂಗ್‌ಬರ್ಡ್‌ ಗಳಿಗೆ ಮಕ್ಕಳ ಕೈಯಿಂದಲೇ ಆಹಾರವನ್ನು ನೀಡಬಹುದು.ಇಡೀ ಹಾಕಿಂಗ್ ಹಿಲ್ಸ್ ಪ್ರದೇಶವು ಪ್ರಕೃತಿ ಪ್ರಿಯರ ಸ್ವರ್ಗವಾಗಿದ್ದು, ಅಲ್ಲಿ ನಿಮ್ಮ ಕುಟುಂಬವು ಬೈಸಿಕಲ್ ಸವಾರಿ, ಚಾರಣ,, ರಾಪೆಲ್, ಕುದುರೆ ಸವಾರಿ, ಜಿಪ್‌ಲೈನ್ ಮತ್ತು ಇನ್ನೂ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಬಹುದು.

ಹೀಗೆ ಮಕ್ಕಳಿಗಾಗಿ ದೇಶ ವಿದೇಶಗಲ್ಲಿ ಪಕ್ಷಿ, ಪ್ರಾಣಿಗಳ ವೀಕ್ಷಣೆಯೊಂದಿಗೆ ವಿಶೇಷ ಅನುಭವವನ್ನು ಪಡೆಯುವುದಕ್ಕಾಗಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೆ ಅಲ್ಲಿಗೆ ಭೇಟಿ ನೀಡುವ ಮುನ್ನ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಂಡು, ಮಕ್ಕಳ ಸುರಕ್ಷತೆಯ ಬಗೆಗೂ ಗಮನಹರಿಸುವುದು ಸೂಕ್ತ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..