ಸಿಂಹಗಳನ್ನು ನೋಡಲು ವಿಶ್ವದ ಈ 7 ತಾಣಗಳಿಗೆ ನೀವು ಹೋಗಲೇಬೇಕು
ಭಾರತದ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಂಹಗಳಿದ್ದ ಕಾಲವೊಂದಿತ್ತು.ಆದರೆ ಕೆಲವು ವರ್ಷಗಳಿಂದೀಗೆಚೆ ಸಿಂಹಗಳ ಸಂಖ್ಯೆ ಇಳಿಮುಖವಾಗಿದೆ. ಗುಜರಾತ್ನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹ ವೀಕ್ಷಣೆಗೆ ಅವಕಾಶವಿದೆ. ಆದರೆ ವಿವಿಧ ತಣಿಯ ಸಿಂಹಗಳನ್ನು ನೋಡಲು ವಿದೇಶಗಳನ್ನು ಸುತ್ತಲೇ ಬೇಕು.
ಸಿಂಹಗಳನ್ನು ʻಕಾಡಿನ ರಾಜʼ ಎಂದು ಸುಮ್ಮನೇ ಕರೆಯುವುದಲ್ಲ. ಅವುಗಳ ಗಂಭೀರ ಮುಖಭಾವ, ಗತ್ತಿನ ನಡೆ, ಬೇಟೆಯಾಡುವ ಶೈಲಿ ನೋಡಲು ಒರಟು ಎನ್ನಿಸಿದರೂ, ಅದೇನೋ ಗೌರವ ಭಾವ ಮೂಡಿಸುತ್ತದೆ. ಆದರೆ ನರಭಕ್ಷಕ ಎಂದೇ ಗುರುತಿಸಿಕೊಂಡಿರುವ ಈ ಸಿಂಹಗಳ ಸಮೀಪ ಹೋಗುವ ಧೈರ್ಯ ಯಾರಿಗೂ ಇಲ್ಲ..ವನ್ಯಜೀವಿ ತಾಣಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಬೋನಿನೊಳಗೆ ಕೂಡಿಹಾಕಿರುವ, ಇಲ್ಲವೇ ಅವುಗಳಿಗಾಗಿಯೇ ಮೀಸಲಿಟ್ಟ ಪರಿಸರದಲ್ಲಿ ಓಡಾಡುವ ಸಿಂಹಗಳನ್ನು ದೂರದಲ್ಲೇ ನೋಡಿ ಖುಷಿಪಡಬೇಕಷ್ಟೇ.
ಪ್ರಪಂಚದಾದ್ಯಂತ ಕಾಣಸಿಗುವ ಸಿಂಹಗಳಲ್ಲೂ ಅನೇಕ ವಿಧಗಳಿವೆ. ಬಾರ್ಬರಿ ಸಿಂಹ, ಪಶ್ಚಿಮ ಆಫ್ರಿಕಾದ ಸಿಂಹ, ನೈಋತ್ಯ ಆಫ್ರಿಕನ್ ಸಿಂಹ, ಮಸಾಯಿ ಸಿಂಹ, ಟ್ರಾನ್ಸ್ವಾಲ್ ಸಿಂಹ, ಇಥಿಯೋಪಿಯನ್ ಸಿಂಹ, ಏಷ್ಯಾಟಿಕ್ ಸಿಂಹ ಎಂದು ವಿಭಾಗಿಸಲಾಗಿದೆ. ಇವುಗಳು ದೇಶ ವಿದೇಶಗಳಲ್ಲಿ ಕಾಣಸಿಗುವ ವಿವಿಧ ಬಗೆಯ ಸಿಂಹಗಳ ಮಾಹಿತಿ ಇಲ್ಲಿವೆ.
ಮಾಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶ (Maasai Mara National Reserve), ಕೀನ್ಯಾ
ಕೀನ್ಯಾದಲ್ಲಿರುವ ಈ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ವನ್ಯಜೀವಿ ಉತ್ಸಾಹಿಗಳಿಗೆ ಸ್ವರ್ಗವಾಗಿದೆ. ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶವು ಗ್ರೇಟ್ ರಿಫ್ಟ್ ವ್ಯಾಲಿಯ ಒಂದು ಭಾಗವಾಗಿದೆ. ಇದು ಸರಿಸುಮಾರು 1,510 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ದಕ್ಷಿಣಕ್ಕೆ ಟಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದ ಗಡಿಯಲ್ಲಿದೆ. ಈ ಉದ್ಯಾನವನವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದ್ದು, ಸಿಂಹ, ಚಿರತೆ, ಆನೆ, ಜಿರಾಫೆ, ಜೀಬ್ರಾ ಮತ್ತು ಇತರ ಅನೇಕ ಜಾತಿಯ ವನ್ಯಜೀವಿಗಳಿಗೆ ನೆಲೆಯಾಗಿದೆ. ಸಿಂಹಗಳು ಮುಕ್ತವಾಗಿ ಓಡಾಡುವುದನ್ನು ವೀಕ್ಷಿಸಲು ಅತ್ಯುತ್ತಮ ಸ್ಥಳವಿದು.

ನ್ಗೊರೊಂಗೊರೊ ಕುಳಿ (Ngorongoro Crater), ಟಾಂಜಾನಿಯಾ
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ನ್ಗೊರೊಂಗೊರೊ ಕುಳಿಯು ಟಾಂಜಾನಿಯಾದ ಉತ್ತರ ಭಾಗದಲ್ಲಿ ವನ್ಯಜೀವಿ ವೀಕ್ಷಣಾ ತಾಣವಾಗಿದ್ದು, ಆಫ್ರಿಕಾದ ನೈಸರ್ಗಿಕ ಅದ್ಭುತಗಳಲ್ಲಿ ಒಂದಾಗಿದೆ. ಇಲ್ಲಿ ಸಫಾರಿಗೆ ಅವಕಾಶವಿದ್ದು, ಸಫಾರಿಯ ವೇಳೆ ಸಿಂಹಗಳನ್ನು ಸಮೀಪದಿಂದ ವೀಕ್ಷಿಸಲು ಅವಕಾಶವಿದೆ. ಸಿಂಹಗಳಲ್ಲದೆ, ಕ್ರೇಟರ್ ಸಫಾರಿಗಳಲ್ಲಿ ವೈಲ್ಡ್‌ಬೀಸ್ಟ್, ಚಿರತೆ, ಹಾರ್ಟೆಬೀಸ್ಟ್, ಆನೆ, ಜೀಬ್ರಾ, ಹಿಪಪಾಟಮಸ್, ಮತ್ತು ಅಳಿವಿನಂಚಿನಲ್ಲಿರುವ ಕಪ್ಪು ಘೇಂಡಾಮೃಗಗಳನ್ನು ವೀಕ್ಷಿಸಬಹುದು.

ಗಿರ್ ರಾಷ್ಟ್ರೀಯ ಉದ್ಯಾನವನ ( Gir National Park), ಭಾರತ
ಗುಜರಾತ್ ರಾಜ್ಯದ ಜುನಾಗಢ ಜಿಲ್ಲೆಯ ದಕ್ಷಿಣಭಾಗದಲ್ಲಿರುವ ಗಿರ್ ಗಿರಿಶ್ರೇಣಿಯ ಆಕರ್ಷಕ ಅರಣ್ಯ ಪ್ರದೇಶವಾಗಿದ್ದು, ಅರೆ ಮರುಭೂಮಿಯಿಂದ ಕೂಡಿದ 1412 ಚ. ಕಿಮೀ ವಿಸ್ತೀರ್ಣದ ಪ್ರದೇಶವಾಗಿದೆ. ಏಷ್ಯಾಟಿಕ್ ಸಿಂಹಗಳು ಕಾಡಿನಲ್ಲಿ ಮುಕ್ತವಾಗಿ ಸುತ್ತಾಡುವುದನ್ನು ಕಾಣುವ ಏಕೈಕ ಸ್ಥಳವಿದು. ಗಿರ್ ರಾಷ್ಟ್ರೀಯ ಉದ್ಯಾನವನವು ಸಂರಕ್ಷಿತ ಅಭಯಾರಣ್ಯವಾಗಿದ್ದು, ಇದು ಸಿಂಹಗಳನ್ನು ವೀಕ್ಷಿಸಲು, ಹಾಗೂ ಅದರ ಚಲನವಲನಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅನುಮಾಡಿಕೊಡುತ್ತದೆ.

ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನ (Serengeti National Park), ಟಾಂಜಾನಿಯಾ
ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನ ಉತ್ತರ ತಾಂಜಾನಿಯಾದ ಜನಪ್ರಿಯ ರಾಷ್ಟ್ರೀಯ ಉದ್ಯಾನವನವಾಗಿದ್ದು, ಸಿಂಹಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಇಲ್ಲಿ ವನ್ಯಜೀವಿಪ್ರಿಯರು ರಾಜಗಾಂಭೀರ್ಯತೆಯೊಂದಿಗೆ ಬೇಟೆಯಾಡುವ ಹಾಗೂ ಅಕೇಶಿಯ ಮರಗಳ ಕೆಳಗೆ ವಿಶ್ರಾಂತಿ ಪಡೆಯುವ ಅದ್ಭುತ ದೃಶ್ಯಗಳನ್ನು ಆಗಾಗ ವೀಕ್ಷಿಸಬಹುದು.

ಕ್ರುಗರ್ ರಾಷ್ಟ್ರೀಯ ಉದ್ಯಾನವನ (Kruger National Park), ದಕ್ಷಿಣ ಆಫ್ರಿಕಾ
ಆಫ್ರಿಕಾದ ಅತ್ಯಂತ ದೊಡ್ಡ ರಾಷ್ಟ್ರೀಯ ಉದ್ಯಾನವನ ಎಂದು ಗುರುತಿಸಿಕೊಂಡಿರುವ ಕ್ರುಗರ್ ರಾಷ್ಟ್ರೀಯ ಉದ್ಯಾನವನವು, ಅತಿ ಹೆಚ್ಚು ಸಿಂಹಗಳನ್ನು ಹೊಂದಿದೆ. ಇಲ್ಲಿ ಸಿಂಹಗಳು ಬೋನುಗಳಲ್ಲಿ ಮಾತ್ರವಲ್ಲದೆ ತೆರೆದ ಪರಿಸರಗಳಲ್ಲಿ ಕಂಡುಬರುತ್ತವೆ. ಇದು ವರ್ಷಪೂರ್ತಿ ಸಿಂಹಗಳನ್ನು ವೀಕ್ಷಿಸಲು ಅದ್ಭುತ ಸ್ಥಳವಾಗಿದೆ.

ಒಕಾವಾಂಗೊ ಡೆಲ್ಟಾ(Okavango Delta), ಬೋಟ್ಸ್ವಾನಾ
ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿರುವ ಬೋಟ್ಸ್ವಾನಾದ ಒಕಾವಾಂಗೊ ಡೆಲ್ಟಾ ಸಿಂಹಗಳ ವೀಕ್ಷಣೆಗೆ ಸೂಕ್ತವಾದ ಪ್ರಮುಖ ಪ್ರವಾಸಿತಾಣವಾಗಿದೆ. ವಿಶೇಷವಾಗಿ ಹಚ್ಚ ಹಸಿರಿನ ಪ್ರವಾಹ ಪ್ರದೇಶಗಳ ಸುತ್ತಲೂ ವಿಹರಿಸುವ ಸಿಂಹಗಳನ್ನು ನೋಡುವುದೇ ಒಂದು ಸುಂದರ ಅನುಭವ. ಇಲ್ಲಿ ಸಾಮಾನ್ಯವಾಗಿ ಸಿಂಹಗಳು ನೀರಿನ ಮೂಲಗಳ ಬಳಿ ಕಂಡುಬರುತ್ತವೆ. ಒಟ್ಟಿನಲ್ಲಿ ವಾಹನಗಳ ಮೂಲಕ ಸಫಾರಿ ಮಾಡುವುದು ಅಥವಾ ದೋಣೆಯಲ್ಲಿ ತೆರಳಿಯೂ ಸಿಂಹಗಳ ವೀಕ್ಷಣೆಗಳನ್ನು ಮಾಡಬಹುದು.

ದಕ್ಷಿಣ ಲುವಾಂಗ್ವಾ ರಾಷ್ಟ್ರೀಯ ಉದ್ಯಾನವನ (South Luangwa National Park), ಜಾಂಬಿಯಾ
ದಕ್ಷಿಣ ಲುವಾಂಗ್ವಾ ರಾಷ್ಟ್ರೀಯ ಉದ್ಯಾನವನವು ಪೂರ್ವ ಜಾಂಬಿಯಾದ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದನ್ನು 1972ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿಸಲಾಯಿತು. ವಾಕಿಂಗ್ ಸಫಾರಿಗಳಿಗೆ ಹೆಸರುವಾಸಿಯಾಗಿರುವ ಈ ಉದ್ಯಾನವನದಲ್ಲಿ ಸಿಂಹಗಳು ದಟ್ಟವಾದ ಗಿಡ ಮರ, ಪೊದೆಗಳ ನಡುವೆ ನದಿ ದಂಡೆಗಳಲ್ಲಿ ಕಂಡುಬರುತ್ತವೆ. ವಾಕಿಂಗ್ ಸಫಾರಿಯ ಮೂಲಕ ತೆರಳುವ ಅವಕಾಶವಿರುವುದರಿಂದ ಪ್ರವಾಸಿಗರಿಗೆ ಸಿಂಹಗಳ ಚಲನವಲನಗಳನ್ನು ಹತ್ತಿರದಿಂದ ತಿಳಿಯುವುದು ಸಾಧ್ಯವಾಗುತ್ತದೆ.

ಒಟ್ಟನಲ್ಲಿ ವನ್ಯಜೀವಿ ಪ್ರಿಯರಿಗಾಗಿ, ಅದರಲ್ಲೂ ಕಾಡಿನ ರಾಜ ಸಿಂಹಗಳ ವೀಕ್ಷಣೆಗೆ ಪ್ರಪಂಚದಾದ್ಯಂತ ಅನೇಕ ರಾಷ್ಟ್ರೀಯ ಉದ್ಯಾನವನಗಳಲ್ಲಿ ಅವಕಾಶಗಳಿದ್ದು, ದೇಶ ಸುತ್ತಿಯಾದರೂ ಸರಿ, ವಿಭಿನ್ನ ತಣಿಯ ಸಿಂಹಗಳನ್ನು ಒಮ್ಮೆ ನೋಡಿ ಬನ್ನಿ..