ಆಫ್ ರೋಡಿಂಗ್ - ಒಂದು ಅನುಭವ
ಆಫ್ ರೋಡಿಂಗ್ ಅನುಭವ ಒಂದು ವಿಭಿನ್ನ, ರೋಮಾಂಚನ. ಆಫ್ ರೋಡಿಂಗ್ ಮಾಡಲೆಂದೇ ಟ್ರ್ಯಾಕ್'ಗಳು ಸಿದ್ಧಗೊಳ್ಳುತ್ತವೆ. ಜೀಪ್ ತಯಾರಿಸುವ ಕಂಪೆನಿಗಳು ಇಂತಹದ್ದೊಂದು ಅನುಭವವನ್ನು ತಮ್ಮ ಜೀಪ್ ಖರೀದಿಸುವ ಅಥವಾ ಖರೀದಿಸಲು ಹೊರಟವರಿಗೆ ಅವಕಾಶಗಳನ್ನು ನೀಡುತ್ತಾರೆ. - ಸುಪ್ರೀತಾ ವೆಂಕಟ್
"ಜೀಪ್" ಅಂದಾಕ್ಷಣ ನಮ್ಮ ಮನಸ್ಸಲ್ಲಿ ಯಾವ ಚಿತ್ರಣ ನೆನಪಾಗುತ್ತೆ ಹೇಳಿ? ಕರಾವಳಿ ಕಡೆಯವಳಾದ ನನಗೆ ಜೀಪ್ ಅಂದರೆ ನಾನು ಸಣ್ಣವಳಿದ್ದಾಗ ನೋಡಿದ, ಮುಂದೆ ಡ್ರೈವರ್ ಬಿಟ್ಟು ಒಂದಿಬ್ಬರು ಕೂರಬಹುದಾದ, ಹಿಂದೆ ಅಡ್ಡಡ್ಡ ಎದುರು ಬದುರು ಎರಡು ಸೀಟ್, ಅದ್ರಲ್ಲಿ ಒಂದಿಷ್ಟು ರಾಶಿ ಜನ ಕೂತ್ಕೊಂಡು, ಕೊನೆಯಲ್ಲಿದ್ದ ಹೆಚ್ಚುವರಿ ಟೈರ್ ಪಕ್ಕದ ಸ್ಟ್ಯಾಂಡ್ ಮೇಲೆ ಒಂದೆರಡು ಜನ ನಿಂತ್ಕೊಂಡು ಸ್ವಲ್ಪ ಸರ್ಕಸ್ ಮಾಡ್ಕೊಂಡು, ಅದೆಷ್ಟೇ ಚಿಕ್ಕದಾದ ದಾರಿಯಲ್ಲಿ ಭುರ್ರನೆ ಮುನ್ನುಗ್ಗುತ್ತಿದ್ದ ನೆನಪುಗಳು! ಜೀಪ್ ಅಂದರೆ ಅದೊಂದು ಸಾಮಾನುಗಳನ್ನು ಹೊತ್ತು ಹೋಗುತ್ತಿದ್ದ ವಾಹನವೆಂದಷ್ಟೇ ನೋಡುತ್ತಿದ್ದೆವು ವಿನಃ ಬೇರೇನಿಲ್ಲ. ಆದರೆ ಈಗ? ಜೀಪ್ ಮಾದರಿಯ ಹಲವು ಬ್ರಾಂಡ್'ಗಳ ವಾಹನಗಳು ಬಹಳ ಪ್ರಸಿದ್ಧ. ಜನರಿಗೆ ಕ್ರೇಜ್ ಜಾಸ್ತಿ.
ಮಹೀಂದ್ರ ಕಂಪೆನಿಯ ಥಾರ್ ಹಾಗೂ ಥಾರ್ ರಾಕ್ಸ್, ಮಾರುತಿ ಕಂಪೆನಿಯ ಜಿಮ್ನಿ, ಜೀಪ್ ಕಂಪೆನಿಯ ಕಂಪಾಸ್ ಹೀಗೆ ಹಲವು ಜೀಪ್ ವಾಹನಗಳಿವೆ. ಅದೊಂದು ಸಲ ನನ್ನ ಪತಿ ಕೇಳಿದ್ದರು, "ನಾವು ಇಸುಝು ವಿ ಕ್ರಾಸ್ ತಗೊಂಡ್ರೆ ಹೇಗೆ?" ಅಂತ, ಆಗ ನಾನು ಏನು ಹೇಳಿರಬಹುದು ಹೇಳಿ? "ಅದೂ ಒಂದು ಫ್ಯಾಮಿಲಿ ವೆಹಿಕಲ್ ಆಹ್!? ಅದನ್ನ್ಯಾರು ಖರೀದಿಸುತ್ತಾರೆ?" ಎಂದು ಹೌಹಾರಿದ್ದೆ. ಆಗೆಲ್ಲಾ ಫ್ಯಾಮಿಲಿ ವೆಹಿಕಲ್ ಅಂದ್ರೆ ಕಾರು ಅಷ್ಟೇ, ಬೇರೆ ಯಾವುದೇ ತಿಳಿದಿರಲಿಲ್ಲ, ಆಸಕ್ತಿ ಕೂಡ ಇರ್ಲಿಲ್ಲ. ಅಂದು ಹಾಗಂದವಳೇ ಇಂದು ಸ್ವಂತ ಥಾರ್ ರಾಕ್ಸ್ ಅಲ್ಲಿ ಓಡಾಡುವಂತಾಗಿದೆ! ಅದ್ಹೇಗೆ? ಅವಕ್ಕೆಲ್ಲಾ ಕಾಲವೇ ಉತ್ತರ.

ಆಫ್ ರೋಡಿಂಗ್ ಬಗ್ಗೆ ಬಹುಶಃ ಹಲವರಿಗೆ ತಿಳಿದಿರುತ್ತೆ ಅಂದುಕೊಂಡಿದ್ದೇನೆ. ನನಗಂತೂ ಏನೇನೂ ಗೊತ್ತಿರಲಿಲ್ಲ ಥಾರ್ ರಾಕ್ಸ್ ಖರೀದಿಸುವ ತನಕ! ಇರುವ ನೇರಾನೇರ ರೋಡಲ್ಲೇ ಕಾರ್ ಬಿಡಬೇಕಾದರೆ ಪರದಾಡುವ ನಾವುಗಳು, ಇನ್ನು ಹೊಂಡ ಗುಂಡಿ ಇರುವ ಮಾರ್ಗದಲ್ಲಿ ಬಿಡೋದಂದರೆ! ಆಫ್ ರೋಡಿಂಗ್ ಅನುಭವ ಒಂದು ವಿಭಿನ್ನ, ರೋಮಾಂಚನ. ಆಫ್ ರೋಡಿಂಗ್ ಮಾಡಲೆಂದೇ ಟ್ರ್ಯಾಕ್'ಗಳು ಸಿದ್ಧಗೊಳ್ಳುತ್ತವೆ. ಜೀಪ್ ತಯಾರಿಸುವ ಕಂಪೆನಿಗಳು ಇಂತಹದ್ದೊಂದು ಅನುಭವವನ್ನು ತಮ್ಮ ಜೀಪ್ ಖರೀದಿಸುವ ಅಥವಾ ಖರೀದಿಸಲು ಹೊರಟವರಿಗೆ ಅವಕಾಶಗಳನ್ನು ನೀಡುತ್ತಾರೆ. ಥಾರ್ ರಾಕ್ಸ್ ಖರೀದಿಸಿದ ನಮಗೆ ಎರಡು ಬಾರಿ ಆಫ್ ರೋಡಿಂಗ್ ಅನುಭವ ಪಡೆಯುವ ಅವಕಾಶ ಸಿಕ್ಕಿತು.

ಸಾಮಾನ್ಯವಾಗಿ ಆಫ್ ರೋಡಿಂಗ್ ಈವೆಂಟ್'ಗಳನ್ನು ವಾರಾಂತ್ಯದಲ್ಲಿ ಆಯೋಜಿಸುತ್ತಾರೆ. 4x4 ವೀಲಿಂಗ್ ಇರುವವರು ತಮ್ಮ ಸ್ವಂತ ವಾಹನವನ್ನು ಅಥವಾ ಅವರು ಒದಗಿಸುವ ಜೀಪ್'ಗಳನ್ನು ಡ್ರೈವ್ ಮಾಡಬಹುದು. ಈ ತರಹದ ಕಾರ್ಯಕ್ರಮಗಳು ಹೊಸತಾಗಿ ಖರೀದಿಸಿದವರಿಗೆ ಹೊಸತೊಂದು ಅನುಭವ ನೀಡುವುದಕ್ಕಾಗಿ, ಯಾವುದೇ ಖರ್ಚು ವೆಚ್ಚಗಳಿರದೆ ಪಾಲ್ಗೊಳ್ಳುವಂತೆ ಕಂಪೆನಿಗಳು ಆಹ್ವಾನ ನೀಡಿದರೆ ಮತ್ತೊಂದೆಡೆ ಇಂತಹ ಅನುಭವಗಳ ಪಡೆಯುವ ಕ್ರೇಜ್ ಇರೋರು ಈವೆಂಟ್ ಫೀಸ್ ಪಾವತಿಸಿ ಭಾಗವಹಿಸಬಹುದು. ಒಂದು ಅಥವಾ ಎರಡು ದಿನಗಳಿಗೋಸ್ಕರ ಇದನ್ನು ಆಯೋಜಿಸುತ್ತಾರೆ.

ಮಣ್ಣು, ಕೆಸರು, ಹಿಮ ಹೀಗೆ ವಿವಿಧ ಬಗೆಯ ಜಾಗಗಳಲ್ಲಿ ಏರ್ಪಡಿಸುತ್ತಾರೆ. ಆಫ್ ರೋಡಿಂಗ್ ಸುಲಭವೇನಲ್ಲ, ಇದರದ್ದೇ ಟೆಕ್ನಿಕಲ್ ವಿವರಗಳು ಇರುತ್ತವೆ. ಮಾಮೂಲಾಗಿ ಕಾರು/ಜೀಪ್ ಓಡಿಸಿದಂತೆ, ಆಫ್ ರೋಡಿಂಗ್ ಅಲ್ಲಿ ಜೀಪ್ ಓಡಿಸಲು ಸಾಧ್ಯವಿಲ್ಲ. ಆಯೋಜಕರು ಇದರ ವಿವರಗಳನ್ನು ನೀಡುತ್ತಾರೆ. ಜೀಪ್ ಓಡಿಸುವಾಗ ಜೊತೆಗೆ ಸಹಾಯಕರು ಇರುತ್ತಾರೆ. ಒಂದು ಟ್ರ್ಯಾಕ್ ಅಲ್ಲಿ ಕೆಲವು ಆಯ್ಕೆಗಳನ್ನು ಉಪಯೋಗಿಸಿದರೆ, ಮತ್ತೊಂದರಲ್ಲಿ ಇನ್ನೂ ಕೆಲವುಗಳು. ಸರಿಯಾಗಿ ತಿಳಿದು ಬಿಟ್ಟರೆ, ಆಫ್ ರೋಡಿಂಗ್ ನಿಜವಾಗಿಯೂ ಒಂದು ಅನನ್ಯ ಅನುಭವ. ಇಂತಹ ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ ಖಂಡಿತಾ ಮಿಸ್ ಮಾಡ್ಕೋಬೇಡಿ!