ಸದ್ಯದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿದೆ ವಿಶ್ವದ ಮೊದಲ ಅಂಡರ್ ವಾಟರ್ ಮ್ಯೂಸಿಯಂ
ಆರ್ಟ್ ಮ್ಯೂಸಿಯಂ, ಕಂಟೆಂಪರರಿ ಮ್ಯೂಸಿಯಂ, ಹೆರಿಟೇಜ್ ಮ್ಯೂಸಿಯಂ ಹೀಗೆ ಹಲವು ಬಗೆಯ ಮ್ಯೂಸಿಯಂಗಳನ್ನು ನೀವು ನೋಡಿರುತ್ತೀರಿ. ಆದರೆ ಎಂದಾದರೂ ಅಂಡರ್ ವಾಟರ್ ಮ್ಯೂಸಿಯಂ ಬಗ್ಗೆ ಕೇಳಿದ್ದೀರಾ? ಹೌದು, ಇಂತಹ ವಿಶಿಷ್ಟ ಪ್ರಯತ್ನಕ್ಕೆ ಸದ್ಯ ಅಮೆರಿಕಾ ಮುಂದಾಗಿದ್ದು, ವಿಶ್ವದಲ್ಲೇ ಮೊದಲ ಅಂಡರ್ ವಾಟರ್ ಮ್ಯೂಸಿಯಂ ಮುಂದಿನ ವರ್ಷದೊಳಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ.
ನೀರಿನೊಳಗೆ ಇಳಿಯುವುದು ಎಲ್ಲರಿಂದಲೂ ಸಾಧ್ಯವಾಗದ ಮಾತು. ಅದರಲ್ಲೂ ವಯಸ್ಸಾದವರು, ಮಕ್ಕಳು ನೀರಿನೊಳಗೆ ಇಳಿಯುವುದೆಂದರೆ ಚಿಂತನೆಗೀಡುಮಾಡುವ ಸಂದರ್ಭದಲ್ಲಿ ಎಲ್ಲರನ್ನೂ ನೀರಿನೊಳಗೆ ಕರೆದೊಯ್ದು, ನೀರಿನೊಳಗೆ ಇರುವ ವಸ್ತು ಸಂಗ್ರಹಾಲಯವನ್ನು ಪರಿಚಯಿಸುವ ಹೊಸ ಯೋಜನೆಯೊಂದು ಸದ್ದಿಲ್ಲದೆ ಸಿದ್ಧವಾಗುತ್ತಿದೆ ಎಂದರೆ ನಂಬುತ್ತೀರಾ? ಹೌದು, ಇಂತಹ ವಿಶೇಷ ವಸ್ತುಸಂಗ್ರಹಾಲಯವು ಸಿದ್ಧವಾಗುತ್ತಿರುವುದು ಅಮೆರಿಕಾದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವಾಯುವ್ಯ ವೇಲ್ಸ್‌ನ ಸ್ಲೇಟ್ ಲ್ಯಾಂಡ್‌ಸ್ಕೇಪ್‌ನ ವಿವಿಯನ್ ಕ್ವಾರಿಯಲ್ಲಿ.
ಈ ಯೋಜನೆಯಂತೆ ನೀರೊಳಗಿನ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದ್ದು, ವಿಶ್ವದಲ್ಲಿಯೇ ಇಂತಹ ಪ್ರಯತ್ನ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಪ್ರವಾಸಿಗರು ಇಲ್ಲಿ ನೀರಿನೊಳಗೆ ಮುಳುಗಿರುವ ವಸ್ತು ಸಂಗ್ರಹಾಲಯವನ್ನು ನೋಡುವುದರ ಜೊತೆಗೆ ಸಮುದ್ರ ಜೀವನವನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ. ವಿಶೇಷವೆಂದರೆ 10 ವರ್ಷ ವಯಸ್ಸಿನ ಮಕ್ಕಳಿಗೂ ಸಹ ಇಲ್ಲಿ ಅನುವುಮಾಡಿದ್ದು, ನೀರಿನ ಒಳಗೆ ಇಳಿಯಲು ಅವಕಾಶ ಕಲ್ಪಿಸಿರುವ "ವಿಶ್ವದ ಮೊದಲ" ಅಂಡರ್ ವಾಟರ್ ಮ್ಯೂಸಿಯಂ ಎಂದು ಗುರುತಿಸಿಕೊಂಡಿದೆ.

ವಿವಿಯನ್ ಕ್ವಾರಿಯಲ್ಲಿ ನೋಡುವಂಥದ್ದೇನಿದೆ ?
ಮುಂಬರುವ ದಿನಗಳಲ್ಲಿ ವೇಲ್ಸ್‌ನ ಆಕರ್ಷಣೆಗಳ ಪೈಕಿ ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿರಲಿದೆ: ನೀರೊಳಗಿನ ವಸ್ತುಸಂಗ್ರಹಾಲಯ, ಸ್ಕೂಬಾ ಸ್ಕೂಲ್ ಮತ್ತು ಸಂದರ್ಶಕರಿಗೆ ವಿಶಿಷ್ಟ ಅನುಭವವನ್ನು ನೀಡುವ ವಿಶೇಷ ಕೊಠಡಿಗಳು. ಎರಡು ದಶಕಗಳಿಂದ ಮುಳುಗಿರುವ ಸ್ಥಿತಿಯಲ್ಲಿರುವ ಗಣಿಗಾರಿಕೆ ಕ್ವಾರಿಯಲ್ಲಿ ಸಂದರ್ಶಕರು ವೇಲ್ಸ್ ಇತಿಹಾಸವನ್ನು ತಿಳಿಯುವ ಸುವರ್ಣ ಅವಕಾಶ ಲಭ್ಯವಾಗುತ್ತದೆ. ಡೈವರ್‌ಗಳು ಕ್ವಾರಿಯೊಳಗೆ ಪ್ರವೇಶಿಸಿದಾಗ, 19 ಮೀಟರ್ ನೀರಿನ ಅಡಿಯಲ್ಲಿ ಮುಚ್ಚಿಹೋಗಿರುವ ನಿರ್ಜನ ಕಟ್ಟಡಗಳು ಮತ್ತು ಐತಿಹಾಸಿಕ ಗಣಿಗಾರಿಕೆ ಉಪಕರಣಗಳು ಸೇರಿದಂತೆ ಹಿಂದಿನ ಯುಗದ ಅವಶೇಷಗಳನ್ನು ಪತ್ತೆಹಚ್ಚುವ ಅವಕಾಶವನ್ನು ಅವರು ಪಡೆಯಲಿದ್ದಾರೆ. ಅಲ್ಲದೆ ಬ್ಲಾಸ್ಟ್ ಶೆಲ್ಟರ್‌ನಂತಹ ಆಕರ್ಷಕ ಕಲಾಕೃತಿಗಳನ್ನು ನೋಡುವ ಅವಕಾಶವೂ ಸಿಗಲಿದೆ.

ಎಸ್ಕೇಪ್ ಕೊಠಡಿಗಳು ಮತ್ತು ಸ್ಕೂಬಾ ಡೈವಿಂಗ್
ಎಸ್ಕೇಪ್ ಕೊಠಡಿಗಳು ಪ್ರಮುಖ ಆಕರ್ಷಣೆಯೆಂದರೆ, ಸಬ್‌ಮರ್ಡ್ ಎಸ್ಕೇಪ್ ಕೊಠಡಿಗಳು ಇಲ್ಲಿಗೆ ಭೇಟಿ ನೀಡುವವರಿಗಾಗಿಯೇ ರೋಮಾಂಚಕಾರಿ ಸವಾಲನ್ನು ನೀಡುತ್ತವೆ. ಅವನ್ನು ಪೂರ್ತಿಗೊಳಿಸಲು ಪ್ರತಿಯೊಬ್ಬರಿಗೂ 40 ನಿಮಿಷಗಳವರೆ ಕಾಲಾವಕಾಶವನ್ನು ನೀಡಲಾಗುತ್ತದೆ. ಅಲ್ಲದೆ ಇಲ್ಲಿನ ಸ್ಕೂಬಾ ಸ್ಕೂಲ್, ಡೈವಿಂಗ್ ಜಗತ್ತಿಗೆ ಪರಿಪೂರ್ಣ ಪರಿಚಯವನ್ನು ನಿಮಗೆ ನೀಡಲಿದೆ. ಸಂದರ್ಶಕರು ಅವರಿಗೆ ಅಗತ್ಯವಾದ ಸ್ಕೂಬಾ ಡೈವಿಂಗ್ ಕೌಶಲ್ಯಗಳನ್ನು ಕಲಿಯಲು ವಿನ್ಯಾಸಗೊಳಿಸಲಾದ ವಿವಿಧ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಪರಿಣಿತ ಬೋಧಕರು ಅವರಿಗೆ ಮಾರ್ಗದರ್ಶನ ನೀಡುವುದರಿಂದ, ಭಾಗವಹಿಸುವವರು SSI ಓಪನ್ ವಾಟರ್ ಡೈವರ್ ಪ್ರಮಾಣೀಕರಣವನ್ನು ಸಹ ಪಡೆಯಬಹುದು. ಇದು ವಸ್ತುಸಂಗ್ರಹಾಲದ ಜೊತೆಗೆ ನೀರೊಳಗಿನ ಪ್ರಪಂಚವನ್ನು ಹುಡುಕಲು ಬಯಸುವ ಮಂದಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಒಟ್ಟಾರೆಯಾಗಿ ಎಲ್ಲವೂ ಅಂದುಕೊಂಡಂತೆ ಆದರೆ ವಿಶ್ವದ ಮೊದಲ ಅಂಡರ್ ವಾಟರ್ ಮ್ಯೂಸಿಯಂ ಯುಕೆನಲ್ಲಿ ತಲೆ ಎತ್ತಲಿದ್ದು, ಯುಕೆಯ ಭೇಟಿಯ ವೇಳೆ ಇಲ್ಲಿಗೆ ವಿಸಿಟ್ ಮಾಡುವುದನ್ನು ಮರೆಯಬೇಡಿ.