ಉಡುಪಿ ಜಿಲ್ಲೆಯಲ್ಲಿರುವ ಅತ್ಯದ್ಭುತ ಬೀಚ್‌ಗಳಿವು
ಕರಾವಳಿಯು ಕಡಲ ತೀರಗಳಿಗೆ ಹೆಸರುವಾಸಿ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಆಸುಪಾಸಿನಲ್ಲಿ ಅನೇಕ ಸಮುದ್ರ ತೀರಗಳಿದ್ದು, ಬೀಚ್ ಪ್ರಿಯರ ನೆಚ್ಚಿನ ತಾಣವಾಗಿಬಿಟ್ಟಿದೆ. ಇಲ್ಲಿರುವ ಬೀಚ್ ಗಳು, ಅಲ್ಲಿನ ಇತಿಹಾಸದ ಕುರಿತ ಮಾಹಿತಿ ನಿಮಗಾಗಿ.
ಸಮುದ್ರವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಿಂದ ತೊಡಗಿ ಎಲ್ಲಾ ವಯಸ್ಕರೂ ಸಹ ಸಮುದ್ರದಲ್ಲಿ ಮಗುವಾಗಿ ಬಿಡುತ್ತಾರೆ. ಜಲಕ್ರೀಡೆಗಳಲ್ಲಿ ತೊಡಗಿಸಿಕೊಂಡು, ಸ್ಕೂಬಾ ಡೈವ್ ಮಾಡು ಹೊಸ ಅನುಭವಗಳನ್ನು ಪಡೆದುಕೊಡುತ್ತಾರೆ. ಅದರಲ್ಲೂ ಬೀಚ್ ಗಳ ತಾಣವಾಗಿರುವ ಉಡುಪಿ ಜಿಲ್ಲೆಯ ಸುತ್ತಮುತ್ತಲೂ ಅನೇಕ ಸಮುದ್ರ ತೀರಗಳಿದ್ದು, ಅಲ್ಲಿಗೆ ಪ್ರವಾಸ ಕೈಗೊಳ್ಳುವ ಮುನ್ನ ಈ ಮಾಹಿತಿಗಳನ್ನು ತಿಳಿದುಕೊಳ್ಳಿ.
ಮಲ್ಪೆ ಬೀಚ್
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿಯಿಂದ ಸುಮಾರು 6 ಕಿಲೋ ಮೀಟರ್ ದೂರದಲ್ಲಿರುವ ಮಲ್ಪೆ ಬೀಚ್, ಉದ್ಯಾವರ ನದಿ ದಂಡೆಯ ಮೇಲಿದೆ. ಇದು ಕರ್ನಾಟಕ ರಾಜ್ಯದ ನೈಸರ್ಗಿಕ ಬಂದರು ಹಾಗೂ ಕರ್ನಾಟಕದ ಕರಾವಳಿಯ ಪ್ರಮುಖ ಮತ್ಸ್ಯ ಕೈಗಾರಿಕಾ ತಾಣ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ನೀವು ಮಲ್ಪೆಗೆ ಭೇಟಿ ಕೊಟ್ಟಾಗ ಈ ಸ್ಥಳದ ಇತರೆ ಆಕರ್ಷಣೆಗಳಾದ ಬಲರಾಮನ ಹಾಗೂ ಅನಂತೇಶ್ವರನ ದೇವಾಲಯಗಳು. ಇಲ್ಲಿರುವ ದ್ವೀಪಗಳಲ್ಲೊಂದರ ಮೇಲೆ, ಒಂದು ಕೋಟೆ ಇದ್ದು ಅದನ್ನು ಬಸವಪ್ಪ ನಾಯಕರ್ ನಿರ್ಮಿಸಿರುವುದಾಗಿ ತಿಳಿದು ಬಂದಿದೆ.

ಸೇಂಟ್ ಮೇರಿಸ್ ದ್ವೀಪ
ಉಡುಪಿಯಿಂದ ಕೇವಲ 10.9 ಕಿಲೋ ಮೀಟರ್ ದೂರದಲ್ಲಿರುವ ಸೇಂಟ್ ಮೇರೀಸ್ ದ್ವೀಪವನ್ನು ಕೊಕೊನಟ್ ಐಸ್‌ಲ್ಯಾಂಡ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸೇಂಟ್ ಮೇರಿಸ್ ಭಾರತದ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು. ಇಲ್ಲಿರುವ ಕಲ್ಲಿನ ರಚನೆ ಬಲು ಅಪರೂಪವಾದ್ದುದು. ಈ ದ್ವೀಪವನ್ನು ಥೋನ್ಸೆಪರ್ ಎಂದೂ ಕರೆಯಲಾಗುತ್ತದೆ. ಸೇಂಟ್ ಮೇರಿಸ್‌ನಲ್ಲಿ ಸ್ತಂಭಾಕಾರದ ಬಸಾಲ್ಟಿಕ್ ಲಾವಾ ಶಿಲಾ ರಚನೆಗಳು ಪ್ರಮುಖ ಆಕರ್ಷಣೆಗಳು. ಕರ್ನಾಟಕದ ಕೇವಲ ನಾಲ್ಕು ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೇಂಟ್ ಮೇರೀಸ್ ಕೂಡಾ ಒಂದು. ಈ ವಿಶಿಷ್ಟ ಕಲ್ಲಿನ ರಚನೆಗಳನ್ನು ನೋಡುವ ಸಲುವಾಗಿಯೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವ ತಾಣಗಳಲ್ಲಿ ಇದು ಕೂಡಾ ಒಂದು. ಇಲ್ಲಿ ಸಾಕಷ್ಟು ಜಲಕ್ರೀಡೆಗಳನ್ನೂ ಎಂಜಾಯ್ ಮಾಡಬಹುದು.
ಮರವಂತೆ ಬೀಚ್
ಮರವಂತೆ ಕರ್ನಾಟಕ ಕರಾವಳಿಯ ಒಂದು ವಿಶಿಷ್ಟ ಕಡಲತೀರವಾಗಿದೆ. ಒಂದು ಕಡೆ ವಿಶಾಲ ಅರಬ್ಬಿ ಸಮುದ್ರ, ಮತ್ತೊಂದೆಡೆ ಸೌಪರ್ಣಿಕಾ ನದಿ, ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ಯನ್ನು ಇಲ್ಲಿ ಕಾಣಬಹುದು. ನದಿ ಮತ್ತು ಸಮುದ್ರ ತೀರ ಹತ್ತಿರ ಬಂದರೂ ಒಂದಾಗದೆ ದೂರಸಾಗುವ ಅಪರೂಪದ ಭೌಗೋಳಿಕ ಸ್ಥಳವಿದು. ಇಂತಹ ಅದ್ಭುತ ದೃಶ್ಯ ಭಾರತದ ಇನ್ನೆಲ್ಲೂ ಇಲ್ಲ. 2005ರಲ್ಲಿ ಮರವಂತೆ ಕಡಲ ತೀರಕ್ಕೆ ಕರ್ನಾಟಕದ ಅತ್ಯಂತ ಸುಂದರ ಬೀಚ್ ಎಂಬ ಹೆಸರು ಬಂದಿದೆ.

ಹೂಡೆ ಬೀಚ್
ಉಡುಪಿಯಿಂದ ಸುಮಾರು 18 ಕಿಲೋ ಮೀಟರ್ ದೂರದಲ್ಲಿರುವ ಕದಿಕೆ ಮತ್ತು ಡೆಲ್ಟಾ ಬೀಚ್ ನಡುವೆ ಇರುವ ಹೂಡೆ ಬೀಚ್ ಚಲನಚಿತ್ರ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಕಾಪು ಕಡಲತೀರ
ಶ್ರೀ ಕೃಷ್ಣನ ಊರಾದ ಉಡುಪಿಯಿಂದ 16.5 ಕಿಲೋ ಮೀಟರ್ ದೂರದಲ್ಲಿರುವ ಕಾಪು, ಕರಾವಳಿ ಕರ್ನಾಟಕದ ಕಡಲತೀರದ ಹಳ್ಳಿಯಾಗಿದೆ. ಇಲ್ಲಿನ ಕಡಲತೀರದ ಬಳಿ ಇರುವ ಲೈಟ್ ಹೌಸ್ ಕೂಡ ಬಹಳ ಜನಪ್ರಿಯವಾಗಿದೆ. 27.12 ಮೀಟರ್ ಎತ್ತರದಲ್ಲಿರುವ ಕಾಪು ಲೈಟ್‌ಹೌಸ್ ನೋಡಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಪಡುಬಿದ್ರೆ ಬೀಚ್
ಉಡುಪಿ ಜಿಲ್ಲೆಯಿಂದ 26.9 ಕಿಲೋ ಮೀಟರ್ ದೂರಲ್ಲಿರುವ ಪಡುಬಿದ್ರಿ ಊರಿನಲ್ಲಿ ಪಡುಬಿದ್ರಿ ಕಡಲತೀರವಿದೆ. ಈ ಸಮುದ್ರವನ್ನು ಬ್ಲೂ ಫ್ಲಾಗ್ ಬೀಚ್ ಎಂಬುದಾಗಿಯೂ ಕರೆಯಲಾಗುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಡಕ್ಕೆ ಬಲಿ ಆಚರಣೆಗೆ ಇದು ಹೆಸರುವಾಸಿಯಾಗಿದೆ.
ಕೋಡಿ ಬೆಂಗ್ರೆ (ಡೆಲ್ಟಾ ಬೀಚ್)
ಅರಬೀ ಸಮುದ್ರವನ್ನು ಸುವರ್ನಾ, ಸಿತಾ ನದಿಗಳು ಸೇರುವ ತ್ರಿವೇಣಿ ಸಂಗಮ ಡೆಲ್ಟಾ ಬೀಚ್ ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಉಡುಪಿಯಿಂದ ಸುಮಾರು 7ಕಿಮೀ ದೂರದಲ್ಲಿರುವ ಕಲ್ಯಾಣಪುರ ಸಂತೆಕಟ್ಟೆಗೆ ಬಂದರೆ ಅಲ್ಲಿಂದ 10ಕಿಮೀ ದೂರದಲ್ಲಿ ಕೋಡಿಬೇಂಗ್ರೆ ಇದೆ. ಇಲ್ಲಿಗೆ ಬರಲು ಸರ್ಕಾರಿ ಹಾಗೂ ಖಾಸಗಿ ಬಸ್ ಗಳೂ ಸಹ ಇವೆ.

ಪಡುಕೆರೆ ಬೀಚ್
ಉಡುಪಿಯಿಂದ 29ಕಿ ಮೀ ದೂರದಲ್ಲಿರುವ ಪಡುಕೆರೆ ಬೀಚನ್ನು ದೋಣೆ ಅಥವಾ ಸೇತುವೆಯ ಮೂಲಕವೂ ಪ್ರವೇಶಸಬಹುದು. ಮಲ್ಪೆ ಬೀಚಿನ ಸಮೀಪದಲ್ಲೇ ಇರುವ ಈ ಬೀಚ್ ಅಷ್ಟಾಗಿ ಪ್ರವಾಸಿಗರಿಗೆ ತಿಳಿದಿಲ್ಲವಾದ್ದರಿಂದ ಪ್ರಶಾಂತ ವಾತಾವರಣ ಹಾಗೂ ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆಗೂ ಸೂಕ್ತ ಕಡಲತೀರವಾಗಿದೆ.
ಒತ್ತಿನೆಣೆ ಬೀಚ್
ಸೋಮೇಶ್ವರ ಬೀಚ್ ಎಂದೂ ಕರೆಯಲ್ಪಡುವ ಒತ್ತಿನೆಣೆ ಬೀಚ್ ಉಡುಪಿ ಜಿಲ್ಲೆಯ ಬೈಂದೂರು ಸಮೀಪದಲ್ಲಿದೆ. ಅಲ್ಲಿರುವ ಬಂಡೆಗಳು ಮತ್ತು ಬ್ಯಾಕ್ ವಾಟರ್ ಗೆ ಈ ಪರಿಸರ ಹೆಸರುವಾಸಿಯಾಗಿದೆ.
ಕರಾವಳಿಯ ಉಡುಪಿ ಜಿಲ್ಲೆಯ ಸುತ್ತಮುತ್ತಲೂ ಅನೇಕ ಸಂಖ್ಯೆಯಲ್ಲಿ ಕಡಲತೀರ, ಸಮುದ್ರ ಪ್ರದೇಶಗಳಿರುವುದರಿಂದ ರಜಾದಿನಗಳಲ್ಲಿ ಇಲ್ಲಿ ಬಂದು ಸಮುದ್ರ ವೀಕ್ಷಣೆ, ಜಲಕ್ರಿಡೆಗಳನ್ನಾಡುತ್ತಾ, ಪ್ರವಾಸದ ಖುಷಿಯನ್ನು ಆನಂದಿಸಬಹುದು.