ಈ ನೀಲಿ 'ಪ್ರೀತಿಯ ಸರೋವರ' ಈಗ ಪ್ರವಾಸಿಗರ ನೆಚ್ಚಿನ ತಾಣ
ಪ್ರಕೃತಿಯ ಮಡಿಲು ಅದೆಷ್ಟು ಅದ್ಭುತಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ ಎಂಬುದನ್ನು ತಿಳಿದರೆ ಅಚ್ಚರಿಗೊಳಗಾಗಬಹುದು. ಅಂತಹ ಅಚ್ಚರಿಯ ತಾಣವೇ ಕೇರಳ ರಾಜ್ಯದ ಮುನ್ನಾರಿನ ಮೀಸಪುಲಿಮಲದಲ್ಲಿರುವ ಬ್ಲೂ ಲವ್ ಲೇಕ್.
ಕೇರಳದ ಅತ್ಯಂತ ಸುಂದರವಾದ ಗಿರಿಧಾಮವಾದ ಮುನ್ನಾರ್‌ನ ಪ್ರವಾಸ ತಾಣಗಳ ಪೈಕಿ ಈಗ ಬಹು ಬೇಡಿಕೆಯನ್ನು ಹೊಂದಿರುವ ಸ್ಥಳ ಮೀಸಪುಲಿಮಲ. ಯಾಕೆಂದರೆ ಇಲ್ಲಿರುವ ವಿಶೇಷವಾದ ನೀಲಿ ಬಣ್ಣದ ಹೃದಯದ ಆಕಾರದಲ್ಲಿರುವ ಸರೋವರವು ಎಲ್ಲರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ಈ ಸರೋವರವನ್ನು ನೋಡುವುದುಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಪಶ್ಚಿಮ ಘಟ್ಟಗಳ ಎರಡನೇ ಅತಿ ಎತ್ತರದ ಶಿಖರವಾದ ಮೀಸಪುಲಿಮಲವು ಮುನ್ನಾರ್‌ನಿಂದ 31 ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ 2640 ಮೀಟರ್ ಎತ್ತರದಲ್ಲಿರುವ ಈ ಪರ್ವತ ಶ್ರೇಣಿಯು ಚಾರಣಿಗರ ಸ್ವರ್ಗವಾಗಿದೆ.
ಆಗಾಗ ಮಂಜಿನಿಂದ ಆವೃತವಾಗಿ ಮೋಡಿಮಾಡುವ ಈ ಲವ್ ಸರೋವರವು ರೋಡೋ ಮ್ಯಾನ್ಷನ್‌ನಿಂದ ಪ್ರಾರಂಭವಾಗುವ ಎಂಟು ಕಿಲೋಮೀಟರ್ ಉದ್ದದ ಟ್ರೆಕ್ಕಿಂಗ್ ಹಾದಿಯ ನಡುವೆಯಿದೆ. ನೈಸರ್ಗಿಕವಾಗಿಯೇ ರೂಪುಗೊಂಡಿರುವ ಈ ಲವ್ ಲೇಕ್ ಹಚ್ಚ ಹಸಿರಿನ ಹುಲ್ಲುಗಾವಲುಗಳ ನಡುವೆ ನೆಲೆಸಿದೆ. ಸರೋವರದಲ್ಲಿನ ಸ್ಪಷ್ಟ ನೀರು ಬೇಸಿಗೆಯ ಸ್ಪಷ್ಟ ಆಕಾಶದ ಭವ್ಯವಾದ ನೀಲಿ ಬಣ್ಣವನ್ನು ಪ್ರತಿಬಿಂಬಿಸುವ ಮೂಲಕ ದೂರದಿಂದ ನೋಡುವವರಿಗೆ ನೀಲಿಯ ಸರೋವರವೆಂಬಂತೆ ಭಾಸವಾಗುತ್ತದೆ.
View this post on Instagram A post shared by @my_munnar_frames
ಹೆಸರಿನ ಹಿಂದಿದೆ ಕೌತುಕದ ವಿಚಾರ
ಅರಣ್ಯ ಇಲಾಖೆಯ ಅಡಿಯಲ್ಲಿ ಬರುವ ಕೇರಳ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ಇಲ್ಲಿ ಚಾರಣವನ್ನು ಏರ್ಪಡಿಸುತ್ತದೆ. ಒಟ್ಟು ಎಂಟು ಶಿಖರಗಳಿಂದ ಕೂಡಿರುವ ಈ ತಾಣವು ಮೀಸೆಯಂತಹ ರಚನೆಯನ್ನು ಹೊಂದಿವೆ. ಆದ್ದರಿಂದಲೇ ಇಲ್ಲಿಗೆ ಮೀಸಪುಲಿಮಲ ಎಂಬ ಹೆಸರು ಬಂದಿದೆ. ಹೃದಯದ ಆಕಾರದಲ್ಲಿ ರೂಪುಗೊಂಡ ನೀರಿನ ಮೂಲವಾದ ಲವ್ ಲೇಕ್, ಮೀಸಪುಲಿಮಲ ಶಿಖರಕ್ಕೆ ಹೋಗುವ ದಾರಿಯಲ್ಲಿ ಹುಲ್ಲುಗಾವಲುಗಳಲ್ಲಿದೆ. ಹಚ್ಚ ಹಸಿರಿನ ಹುಲ್ಲುಗಾವಲುಗಳಿಂದ ಸುತ್ತುವರೆದಿರುವ ಹೃದಯದ ಆಕಾರದ ಆಳವಾದ ನೀಲಿ ಸರೋವರವು ಪ್ರಕೃತಿಯೇ ಬರೆದ ಕಾವ್ಯಾತ್ಮಕ ದೃಶ್ಯವಾಗಿದೆ!
ಸಮೀಪದ ಪ್ರವಾಸಿತಾಣಗಳು
ಮೀಸಪ್ಪುಲಿಮಲದ ಬಳಿ ನೀವು ಭೇಟಿ ನೀಡಬಹುದಾದ ಇನ್ನೂ ಅನೇಕ ಸುಂದರ ತಾಣಗಳಿವೆ. ಕೊಲುಕ್ಕುಮಲೈ ಟೀ ಎಸ್ಟೇಟ್, ಪೋಥನ್ಮೇಡು ವ್ಯೂ ಪಾಯಿಂಟ್ , ಮುನ್ನಾರ್ ಟಾಪ್ ಸ್ಟೇಷನ್ , ಮಟ್ಟುಪೆಟ್ಟಿ ಅಣೆಕಟ್ಟು , ಕುಂಡಲ ಸರೋವರ ಹೀಗೆ ಮುನ್ನಾರ್‌ಗೆ ಭೇಟಿ ಕೊಟ್ಟರೆ ಈ ತಾಣಗಳಿಗೂ ಹೋಗಿ ಬನ್ನಿ.