ಮಕ್ಕಳಲ್ಲೂ ಬೆಳೆಸಿ ಚಾರಣದ ʻಹುಚ್ಚುʼ
ವೀಕ್ ಎಂಡ್‌ನಲ್ಲಿ ಟ್ರಕ್ಕಿಂಗ್‌ಗೆ ತೆರಳಬೇಕು, ಆದರೆ ಮಕ್ಕಳ ಜೊತೆ ಟ್ರಕ್ಕಿಂಗ್ ಹೋಗುವುದು ಕಷ್ಟ ಎಂದುಕೊಳ್ಳುವವರೇ ಎಲ್ಲರೂ. ನಿಮಗೆ ಗೊತ್ತಾ? ಮಕ್ಕಳನ್ನು ಟ್ರಕ್ಕಿಂಗ್ ಕರೆದುಕೊಂಡು ಹೋಗುವುದರಿಂದ ಅನೇಕ ಲಾಭಗಳಿವೆ ಎನ್ನುವ ವಿಚಾರ.
ಸಾಹಸವನ್ನು ಇಷ್ಟಪಡದವರಿಲ್ಲ. ಅದರಲ್ಲೂ ಟ್ರಕ್ಕಿಂಗ್ ಎಂದರೆ ಸಾಮಾನ್ಯವಾಗಿ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ವಾರಂತ್ಯ ಬಂದರೆ ಸಾಕು ಒತ್ತಡದ ಜೀವನದಿಂದ ಹೊರಬಂದು ಫ್ರೆಶ್ ಆಗಿರಲು, ಜಿಗಿಗುಡುವ ಬೆಂಗಳೂರಿನಿಂದ ದೂರ ಉಳಿದು, ಸ್ವಚ್ಛ ವಾತಾವರಣದಲ್ಲಿ ಕಾಲಕಳೆಯಲು ಬಯಸುತ್ತಾರೆ. ಇವೆಲ್ಲದಕ್ಕೂ ಹೆಚ್ಚಾಗಿ ಚಾರಣದಿಂದಾಗುವ ಆರೋಗ್ಯಕರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಮಂದಿ ಟ್ರಕ್ಕಿಂಗ್ ಮೊರೆ ಹೋಗುತ್ತಾರೆ.
ಸಾಮಾನ್ಯವಾಗಿ ಸ್ನೇಹಿತರ ಜೊತೆಗೆ ಟ್ರಕ್ಕಿಂಗ್ ಹೋಗುವ ಪೋಷಕರು ಗಮನಿಸಬೇಕಿರುವ ವಿಚಾರವೇನು ಗೊತ್ತಾ? ಟ್ರಕ್ಕಿಂಗ್ ವೇಳೆ ನಿಮ್ಮೊಂದಿಗೆ ನಿಮ್ಮ ಮಕ್ಕಳನ್ನೂ ಕರೆದುಕೊಂಡು ಹೋಗುವುದರಿಂದ ಸಾಕಷ್ಟು ಲಾಭಗಳಿವೆ. ಅಧ್ಯಯನಗಳ ಪ್ರಕಾರ, ಟ್ರಕ್ಕಿಂಗ್ ಕೇವಲ ವ್ಯಾಯಾಮಕ್ಕಿಂತ ಹೆಚ್ಚು ಲಾಭದಾಯಕ ಎಂದು ಬಹಿರಂಗಪಡಿಸಿವೆ. ಹಾಗಾದರೆ ಮಕ್ಕಳು ಟ್ರಕ್ಕಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಮಾಹಿತಿ ನಿಮಗಾಗಿ.

ನಿಸರ್ಗದೊಂದಿಗೆ ಹೊಸ ಬಂಧ
ನಿತ್ಯವೂ ಶಾಲೆ, ಮನೆ, ಪಾಠ, ಹೋಂ ವರ್ಕ್ ಅದಕ್ಕೂ ಮೀರಿ ಬಿಡುವಿನ ವೇಳೆಯಲ್ಲಿ, ಮೊಬೈಲ್, ಟಿವಿ, ಐಪ್ಯಾಡ್‌ಗಳ ಗೀಳು ಹತ್ತಿಸಿಕೊಂಡು ಕುಳಿತುಕೊಳ್ಳುವ ಮಕ್ಕಳೇ ಹಲವರು. ಅಂತಹ ಮಕ್ಕಳನ್ನು ಚಿಕ್ಕಂದಿನಿಂದಲೇ ನಿಸರ್ಗದೊಂದಿಗೆ ಬೆರೆಯುವಂತೆ ಮಾಡಲು, ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಲು ಚಾರಣ ಉತ್ತಮ ಆಯ್ಕೆಯಾಗಿದೆ.

ಪೋಷಕರೊಂದಿಗೆ ಕಾಲ ಕಳೆಯಲಿ
ಈಗಂತೂ ಅಪ್ಪ – ಅಮ್ಮ ಇಬ್ಬರೂ ದುಡಿಯುವವರೇ ಆಗಿರುವುದರಿಂದ ಮಕ್ಕಳಿಗೆ ಸೂಕ್ತ ಸಮಯವನ್ನು ಕೊಡುವುದಕ್ಕಾಗಲಿ, ಮಕ್ಕಳೊಂದಿಗೆ ಬೆರೆಯುವುದಕ್ಕೆ, ಕಾಲ ಕಳೆಯುವುದಕ್ಕೂ ಸಹ ಸಮಯ ಸಿಗುವುದೇ ಇಲ್ಲ. ಆದರೆ ಮಕ್ಕಳಿಗೆ ಆ ವಯಸ್ಸಿನಲ್ಲಿ ಹೆತ್ತವರ ಅಗತ್ಯವಿರುತ್ತದೆ. ತಮ್ಮ ದೈನಂದಿಕ ವಿಚಾರಗಳನ್ನು ಹಂಚಿಕೊಳ್ಳಲು, ಬೇಕು ಬೇಡಗಳನ್ನು ಹೇಳಿಕೊಳ್ಳಲು ಹೆತ್ತವರು ಸಮೀಪವಿರಬೇಕೆಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಉತ್ತಮವಾದ ಸಮಯವನ್ನು ಕಳೆಯಲು ಚಾರಣವನ್ನು ಆಯ್ಕೆಮಾಡಿಕೊಳ್ಳಿ.

ಪ್ರಪಂಚವನ್ನು ತಿಳಿಯುವ ಅವಕಾಶ
ಇಂದಿನ ಮಕ್ಕಳು ಮನೆಯೊಳಗೆ ಕಾಲ ಕಳೆಯುವುದೇ ಹೆಚ್ಚು. ಗ್ಯಾಡ್ಜೆಟ್ಸ್ ಗಳ ಮೊರೆ ಹೋಗುವ ಮಕ್ಕಳು ಆ ಲೋಕದಿಂದ ಹೊರಬರಲು ಇಷ್ಟಪಡುವುದೇ ಇಲ್ಲ. ಅಂತಹ ಮಕ್ಕಳನ್ನು ಟ್ರಕ್ಕಿಂಗ್ ಗೆ ಕರೆದೊಯ್ಯುವುದರಿಂದ ವಿಭಿನ್ನವಾದ ಹೊರಾಂಗಣ ಚಟುವಟಿಕೆಗಳಲ್ಲಿ ಅವರು ತೊಡಗಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಅವರು ಹೊರಗಿನ ಪ್ರಪಂಚದ ಕಷ್ಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ
ಚಾರಣ ಮಾಡುವ ಹಾದಿಯು ಅಷ್ಟೇನೂ ಸುಲಭವಾಗಿರುವುದಿಲ್ಲ. ಬದಲಾಗಿ ಸಾಕಷ್ಟು ಸಮಸ್ಯೆಗಳಿಂದ ಕೂಡಿರುತ್ತದೆ. ಅದನ್ನು ನಿಭಾಯಿಸಲು ಅವರು ಮೊದಮೊದಲು ಕಷ್ಟಪಡುವರಾದರೂ ನಂತರ ಅದನ್ನು ಸೃಜನಾತ್ಮಕವಾಗಿ ಹೇಗೆ ನಿಭಾಯಿಸಬೇಕು ಎಂದು ಕಲಿತುಕೊಳ್ಳುತ್ತಾರೆ. ಈ ಅನುಭವವು ಅವರ ಮುಂದಿನ ಜೀವನದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಇದಲ್ಲದೆ, ಅವರಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ.

ಕಠಿಣ ಸವಾಲುಗಳಿಗೆ ಒಡ್ಡಿಕೊಳ್ಳಲಿ
ಎಲ್ಲವೂ ಸುಲಭ ಸಾಧ್ಯವಾದರೆ ಕಷ್ಟ ಏನೆಂಬುದು ಮಕ್ಕಳಿಗೆ ತಿಳಿಯುವುದೇ ಇಲ್ಲ.ಅಲ್ಲದೆ ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಧೈರ್ಯವೂ ಇರುವುದಿಲ್ಲ.ಆದರೆ ಮಕ್ಕಳು ಚಾರಣದ ಸಮಯದಲ್ಲಿ ಕಠಿಣವಾದ ಮಾರ್ಗವನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಅವರ ಮನಸ್ಸು ಕೂಡ ಸವಾಲಿಗೆ ಹೊಂದಿಕೊಳ್ಳುತ್ತದೆ. ಇದರಿಂದ ಅವರು ಜವಾಬ್ದಾರಿಗಳನ್ನು ನಿಭಾಯಿಸಲು, ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ.

ಸುರಕ್ಷತಾ ಕೌಶಲ್ಯಗಳ ಪಾಠ
ಎಲ್ಲ ಸಮಸ್ಯೆಗಳನ್ನು ಹೆತ್ತವರೇ ಪರಿಹರಿಸುತ್ತಾರೆಂಬ ನಂಬಿಕೆಯಿದ್ದರೆ ಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ಗಮನಹರಿಸುವುದಿಲ್ಲ. ಎಲ್ಲದಕ್ಕೂ ಪೋಷಕರನ್ನೇ ಅವಲಂಭಿಸುತ್ತಾರೆ. ಆದರೆ ಪ್ರಪಂಚದ ಹೊರಗೆ ನಡೆಯುವ ಅನೇಕ ಸವಾಲುಗಳನ್ನು ಚಿಕ್ಕಮಯಸ್ಸಿನಲ್ಲಿಯೇ ತಿಳಿಯುವುದು ಒಳ್ಳೆಯದು. ಉದಾಹರಣೆಗೆ ಟ್ರಕ್ಕಿಂಗ್ ಹೋಗುವ ಬಗೆ, ಯಾವೆಲ್ಲಾ ರೀತಿಯ ತಯಾರಿ ನಡೆಸಬೇಕು, ಚಾರಣದ ವಿಧಾನ, ಪ್ರಥಮ ಚಿಕಿತ್ಸೆ ಮುಂತಾದವುಗಳನ್ನು ಕಲಿಯುವುದರಿಂದ ಮಕ್ಕಳಿಗದು ಜೀವನ ಪಾಠವಾಗಲಿದೆ. ಇಂದಿಗಲ್ಲದಿದ್ದರೂ ಮುಂದಿನ ಜೀವನದಲ್ಲಿ ಇಂತಹ ವಿಚಾರಗಳ ಬಗೆಗೆ ತಿಳಿದುಕೊಂಡಿರುವುದು ಪ್ರಯೋಜನಕ್ಕೆ ಬರಲಿದೆ.