ನಾನು ಸ್ವಿಟ್ಜರ್‌ಲ್ಯಾಂಡ್‌ಗೆ ಹೋದರೆ ಬಾಸೆಲ್‌ಗೆ ಹೋಗುವ ಅವಕಾಶವನ್ನು ತಪ್ಪಿಸಿಕೊಂಡಿಲ್ಲ. ಈ ಸುಂದರ ನಗರವು ಕೇವಲ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿಲ್ಲ, ಬದಲಾಗಿ ತನ್ನ ಅನನ್ಯ ಭೌಗೋಳಿಕ ಸ್ಥಾನದಿಂದಾಗಿ ಗಮನ ಸೆಳೆಯುತ್ತದೆ. ಈ ನಗರಕ್ಕೆ ಹೋದರೆ ಮೂರು ದೇಶಗಳನ್ನು ನೋಡಬಹುದು.

ರೈನ್ ನದಿಯ ದಡದಲ್ಲಿರುವ ಈ ನಗರವು ಸ್ವಿಟ್ಜರ್‌ಲ್ಯಾಂಡ್, ಜರ್ಮನಿ ಮತ್ತು ಫ್ರಾನ್ಸ್—ಈ ಮೂರು ಪ್ರಬಲ ಯುರೋಪಿಯನ್ ದೇಶಗಳ ಗಡಿಗಳು ಸಂಧಿಸುವ ‘ತ್ರಿಕೋನ ಬಿಂದು’ವಿನಲ್ಲಿದೆ. ಈ ವಿಶಿಷ್ಟ ಸ್ಥಾನವು ಬಾಸೆಲ್ಅನ್ನು ಕೇವಲ ಒಂದು ನಗರವಾಗಿರಿಸದೇ, ಒಂದು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದೆ.

ಬಾಸೆಲ್ ನಗರದ ಅತ್ಯಂತ ಆಕರ್ಷಕ ಅಂಶವೆಂದರೆ ಇಲ್ಲಿನ ಗಡಿಗಳ ಸರಳತೆ. ಇಲ್ಲಿನ ನಿವಾಸಿಗಳಿಗೆ ಗಡಿ ಎಂಬುದು ಕೇವಲ ನಕ್ಷೆಯ ಮೇಲಿನ ಗೆರೆಯಷ್ಟೇ. ಒಬ್ಬ ವ್ಯಕ್ತಿಯು ಬಾಸೆಲ್‌ನ ಮಧ್ಯಭಾಗದಿಂದ ಟ್ರಾಮ್ ಹತ್ತಿದರೆ ಅಥವಾ ಸ್ವಲ್ಪ ದೂರ ನಡೆದರೆ, ಕೆಲವೇ ನಿಮಿಷಗಳಲ್ಲಿ ಫ್ರಾನ್ಸ್‌ನ ಸೇಂಟ್-ಲೂಯಿಸ್ ಅಥವಾ ಜರ್ಮನಿಯ ವೇಯ್ಲ್ ಆಮ್‌ರೈನ್ ನಗರಗಳನ್ನು ತಲುಪಬಹುದು.

ಇದನ್ನೂ ಓದಿ: ಪೆಟ್ರಾ : ಮರಳುಗಾಡಿನ ಮಹಾಶಿಲ್ಪ, ಕಾಲದ ಪದರದೊಳಗೆ ಇತಿಹಾಸದ ಸಲ್ಲಾಪ

ಯುರೋಪ್‌ನ 'ಶೆಂಗೆನ್' ಒಪ್ಪಂದದ ಪರಿಣಾಮವಾಗಿ, ಈ ದೇಶಗಳ ನಡುವಿನ ಸಂಚಾರವು ಎಷ್ಟು ಸುಗಮವಾಗಿದೆ ಎಂದರೆ, ಜನರು ಬೆಳಗಿನ ಉಪಾಹಾರವನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮುಗಿಸಿ, ಮಧ್ಯಾಹ್ನದ ಶಾಪಿಂಗ್ಅನ್ನು ಜರ್ಮನಿಯಲ್ಲಿ ಮಾಡಿ, ರಾತ್ರಿಯ ಭೋಜನಕ್ಕೆ ಫ್ರಾನ್ಸ್‌ಗೆ ಹೋಗುವುದು ಇಲ್ಲಿ ಸಾಮಾನ್ಯ ಸಂಗತಿ.

ಮೂರು ದೇಶಗಳ ಗಡಿಯಲ್ಲಿರುವುದರಿಂದ ಬಾಸೆಲ್‌ನ ಜೀವನಶೈಲಿಯ ಮೇಲೆ ಜರ್ಮನ್, ಫ್ರೆಂಚ್ ಮತ್ತು ಸ್ವಿಸ್ ಸಂಸ್ಕೃತಿಗಳ ಗಾಢ ಪ್ರಭಾವವಿದೆ. ಇಲ್ಲಿನ ಅಧಿಕೃತ ಭಾಷೆ ಜರ್ಮನ್ ಆಗಿದ್ದರೂ, ಫ್ರೆಂಚ್ ಭಾಷೆಯ ಪ್ರಭಾವವು ದೈನಂದಿನ ಸಂಭಾಷಣೆಯಲ್ಲಿ ಎದ್ದು ಕಾಣುತ್ತದೆ. ಹೆಚ್ಚಿನ ಜನರು ಬಹುಭಾಷಾ ಪ್ರವೀಣರಾಗಿದ್ದು, ಸಂವಹನವು ಸುಲಭವೇ.

ಬಾಸೆಲ್‌ನ ಹೋಟೆಲ್‌ಗಳಲ್ಲಿ ಸ್ವಿಸ್ ಚೀಸ್ ಫೊಂಡು (Fondue), ಜರ್ಮನಿಯ ಸಾಸೇಜ್‌ಗಳು ಮತ್ತು ಫ್ರಾನ್ಸ್‌ನ ಅತ್ಯುತ್ತಮ ವೈನ್ ಹಾಗೂ ಪೇಸ್ಟ್ರಿಗಳು ಒಂದೇ ಕಡೆ ಸಿಗುತ್ತವೆ. ಈ ಅಡುಗೆ ಶೈಲಿಗಳ ಮಿಶ್ರಣವು ನಗರವನ್ನು ಆಹಾರ ಪ್ರಿಯರ ಸ್ವರ್ಗವನ್ನಾಗಿ ಮಾಡಿದೆ.

ಬಾಸೆಲ್ ಅನ್ನು ಸ್ವಿಟ್ಜರ್‌ಲ್ಯಾಂಡ್‌ನ 'ಸಾಂಸ್ಕೃತಿಕ ರಾಜಧಾನಿ' ಅಂತಾರೆ. ಇಲ್ಲಿನ ವಸ್ತುಸಂಗ್ರಹಾಲಯಗಳು ಮತ್ತು ಕಟ್ಟಡ ವಿನ್ಯಾಸಗಳಲ್ಲಿ ಮೂರೂ ದೇಶಗಳ ಕಲಾತ್ಮಕ ಛಾಪು ಕಂಡುಬರುತ್ತದೆ. 'ಆರ್ಟ್ ಬಾಸೆಲ್'ನಂಥ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಜಗತ್ತಿನಾದ್ಯಂತ ಕಲಾವಿದರನ್ನು ಇಲ್ಲಿಗೆ ಸೆಳೆಯುತ್ತವೆ.

ಬಾಸೆಲ್‌ನ ಆರ್ಥಿಕತೆಯು ಈ ಗಡಿ ಮುಕ್ತ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಸಾವಿರಾರು ಜನರು ಪ್ರತಿದಿನ ಜರ್ಮನಿ ಮತ್ತು ಫ್ರಾನ್ಸ್‌ನಿಂದ ಬಾಸೆಲ್‌ಗೆ ಕೆಲಸಕ್ಕಾಗಿ ಬರುತ್ತಾರೆ. ಜರ್ಮನಿಯಲ್ಲಿ ವಸ್ತುಗಳ ಬೆಲೆ ಕಡಿಮೆ ಇರುವುದರಿಂದ ಸ್ವಿಸ್ ಜನರು ಅಲ್ಲಿಗೆ ಶಾಪಿಂಗ್‌ಗೆ ಹೋಗುತ್ತಾರೆ, ಪ್ರತಿಯಾಗಿ ಜರ್ಮನ್ನರು ಮತ್ತು ಫ್ರೆಂಚ್ ಜನರು ಸ್ವಿಟ್ಜರ್‌ಲ್ಯಾಂಡ್‌ನ ಉನ್ನತ ವೇತನದ ಉದ್ಯೋಗಗಳನ್ನು ಅವಲಂಬಿಸಿದ್ದಾರೆ. ರೈನ್ ನದಿಯು ಇಲ್ಲಿ ವಾಣಿಜ್ಯದ ಜೀವನಾಡಿಯಾಗಿದ್ದು, ಮೂರೂ ದೇಶಗಳ ನಡುವೆ ಸರಕು ಸಾಗಣೆಗೆ ಪ್ರಮುಖ ಮಾರ್ಗವಾಗಿದೆ.

ಬಾಸೆಲ್‌ನ ಈ ವಿಶಿಷ್ಟ ಸ್ಥಾನವು ಇಲ್ಲಿನ ಜನರಲ್ಲಿ ಅತೀವ ಮುಕ್ತ ಮನೋಭಾವ ಮತ್ತು ಸಹಿಷ್ಣುತೆಯನ್ನು ಬೆಳೆಸಿದೆ. ವಿಭಿನ್ನ ರಾಷ್ಟ್ರೀಯತೆಗಳು, ಸಂಪ್ರದಾಯಗಳು ಮತ್ತು ಭಾಷೆಗಳು ಇಲ್ಲಿ ಸಂಘರ್ಷವಿಲ್ಲದೇ ಬೆರೆತಿವೆ. ‘ಡ್ರೈಲ್ಯಾಂಡೆರೆಕ್’ ಎಂಬ ಸ್ಮಾರಕವು ಈ ಮೂರು ದೇಶಗಳ ಸ್ನೇಹ ಮತ್ತು ಒಗ್ಗಟ್ಟಿನ ಸಂಕೇತವಾಗಿ ರೈನ್ ನದಿಯ ದಡದಲ್ಲಿ ನಿಂತಿದೆ.

ಬಾಸೆಲ್ ನಗರವು ಗಡಿಗಳು ಜನರನ್ನು ವಿಭಜಿಸುವುದಕ್ಕಿಂತ ಹೆಚ್ಚಾಗಿ, ಸಂಸ್ಕೃತಿಗಳನ್ನು ಹೇಗೆ ಜೋಡಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ. ಇಲ್ಲಿನ ಜೀವನವು ವೈವಿಧ್ಯದಲ್ಲಿ ಏಕತೆಯನ್ನು ಸಾರುವ ಒಂದು ಸುಂದರ ಕಾವ್ಯದಂತಿದೆ. ನೀವು ಇಲ್ಲಿ ನಿಂತಾಗ, ನೀವು ಕೇವಲ ಒಂದು ನಗರದಲ್ಲಿರುವುದಿಲ್ಲ, ಬದಲಾಗಿ ಇಡೀ ಯುರೋಪ್‌ನ ಹೃದಯಭಾಗದಲ್ಲಿದ್ದೀರಿ ಎಂಬ ಅನುಭವವಾಗುತ್ತದೆ.

**

Untitled design (58)

ಯಾರನ್ನೂ ಹೂಳದ ಸಮಾಧಿಯೇ ಆಕರ್ಷಣೆ !

ಉಜ್ಬೇಕಿಸ್ತಾನ್‌ನಕ್ಕೆ ಹೋದವರು ಸಮರಕಂಡ್ ಮತ್ತು ಬುಕಾರಾಗಳಿಗೆ ಹೋಗಿ ಬರುತ್ತಾರೆ. ಆದರೆ ಶಖ್ರಿಸಿಯಬ್ಜ್ ನಗರಕ್ಕೆ ಹೋಗುವುದು ಅಪರೂಪ. ಈ ವರ್ಷ ನಾನು ಉಜ್ಬೇಕಿಸ್ತಾನ್‌ನಕ್ಕೆ ಹೋದಾಗ, ಅಮಿರ್ ತೈಮೂರನ ಜನ್ಮಸ್ಥಳವಾದ ಶಖ್ರಿಸಿಯಬ್ಜ್ ನಗರಕ್ಕೆ ಹೋಗಲೇಬೇಕು ಎಂದು ನಿರ್ಧರಿಸಿದ್ದೆ. ಅದಕ್ಕೂ ಮುಂಚಿನ ಭೇಟಿಯಲ್ಲಿ ನಾನು ಸಮರಕಂಡ್ ಮತ್ತು ಬುಕಾರವನ್ನು ನೋಡಿದ್ದೆ.

ಶಖ್ರಿಸಿಯಬ್ಜ್ ಗೆ ಹೋದಾಗ ನಾನು ಒಂದು ಸಮಾಧಿಗೆ ಹೋಗಿದ್ದೆ. ಅದು ಬಹಳ ಪ್ರಸಿದ್ಧ ಸಮಾಧಿ. ಆದರೆ ಅಲ್ಲಿ ಯಾರನ್ನೂ ಹೂತಿರಲಿಲ್ಲ. ಹಾಗೆ ನೋಡಿದರೆ, ಅದು ಯಾರಿಗೂ ಸೇರದ ಒಂದು ‘ಅನಾಥ ಸಮಾಧಿ’! ಆದರೂ ಅದನ್ನು ನೋಡಲು ಆ ನಗರಕ್ಕೆ ಭೇಟಿ ನೀಡಿದವರೆಲ್ಲ ಬರುವುದು ವಿಶೇಷ. ತನ್ನ ಮರಣ ನಂತರ, ಶಖ್ರಿಸಿಯಬ್ಜ್ ಮಣ್ಣಿನಲ್ಲೇ ಮಣ್ಣಾಗಬೇಕೆಂದು ತೈಮೂರ್ ಬಯಸಿದ್ದ. ಆದರೆ ವಿಧಿ ಆಟವೇ ಬೇರೆಯಾಗಿತ್ತು.

ಅಮಿರ್ ತೈಮೂರ್ (1336-1405)ನ ಬಗ್ಗೆ ಎರಡು ಮಾತು ಹೇಳಬೇಕು. ತೈಮೂರ್ ಮಧ್ಯ ಏಷ್ಯಾದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಜನರಲ್ಲಿ ಭೀತಿ ಹುಟ್ಟಿಸುವ ರಾಜನಾಗಿದ್ದ. ಇತಿಹಾಸದಲ್ಲಿ ಇವನನ್ನು 'ತೈಮೂರ್ ಲಂಗ್' ಎಂದೂ ಕರೆಯುತ್ತಾರೆ. ಮಂಗೋಲರ ಸಾಮ್ರಾಜ್ಯವನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ತೈಮೂರ್, ಸಮರಕಂಡ್ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ.

ಇವನ ಕಾಲಾವಧಿಯಲ್ಲಿ ಪಶ್ಚಿಮ, ದಕ್ಷಿಣ ಮತ್ತು ಮಧ್ಯ ಏಷ್ಯಾವನ್ನು ಒಳಗೊಂಡ ಬೃಹತ್ 'ತೈಮೂರಿಡ್ ಸಾಮ್ರಾಜ್ಯ'ವನ್ನು ಸ್ಥಾಪಿಸಿದ. ತೈಮೂರ್ ಒಬ್ಬ ಅಸಾಧಾರಣ ಸೇನಾ ತಂತ್ರಜ್ಞನಾಗಿದ್ದ, ಆದರೆ ಅವನ ದಂಡಯಾತ್ರೆಗಳು ಅಪಾರ ರಕ್ತಪಾತ ಮತ್ತು ವಿನಾಶಕ್ಕೆ ಹೆಸರಾಗಿದ್ದವು. 1398ರಲ್ಲಿ ಭಾರತದ ಮೇಲೆ ದಾಳಿ ಮಾಡಿದ ಈತ, ದೆಹಲಿಯನ್ನು ಲೂಟಿ ಮಾಡಿ ಅಪಾರ ಸಂಪತ್ತನ್ನು ಸಾಗಿಸಿದ.

ಒಂದೆಡೆ ಕ್ರೂರ ಆಡಳಿತಗಾರನಾಗಿದ್ದರೂ, ಮತ್ತೊಂದೆಡೆ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಮಹಾನ್ ಪೋಷಕನಾಗಿದ್ದ. ಇವನ ಕಾಲದ ಸಮರಕಂಡ್ ನಗರವು ವಿಶ್ವದ ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿತ್ತು. ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ಕೂಡ ಇದೇ ತೈಮೂರನ ವಂಶಸ್ಥರು.

ತೈಮೂರ ಬದುಕಿದ್ದಾಗಲೇ ಶಖ್ರಿಸಿಯಬ್ಜ್‌ನ ‘ದೊರುತ್ ತಿಲಾವತ್’ ಸಂಕೀರ್ಣದ ಹತ್ತಿರ ತನಗಾಗಿ ಒಂದು ಸಮಾಧಿಯನ್ನು ನಿರ್ಮಿಸಿಕೊಂಡಿದ್ದ. ತನ್ನನ್ನು ಇಲ್ಲಿಯೇ ಸಮಾಧಿ ಮಾಡಬೇಕು ಎಂದು ಆದೇಶಿಸಿದ್ದ. ಇದು ಅತ್ಯಂತ ಸರಳ ಹಾಗೂ ಸುಭದ್ರವಾದ ನೆಲಮಾಳಿಗೆ. ತೈಮೂರನ ಸಮಾಧಿ ಎಂಬ ಕಾರಣಕ್ಕೆ ಸಾಮಾನ್ಯವಾಗಿ ಎಲ್ಲರೂ ಅಲ್ಲಿಗೆ ಭೇಟಿ ನೀಡುತ್ತಾರೆ. ಈ ಸಮಾಧಿಯ ಒಳಗೆ ಒಂದು ದೊಡ್ಡ ಬಿಳಿ ಅಮೃತಶಿಲೆಯ ಶವಪೆಟ್ಟಿಗೆಯನ್ನು ಇರಿಸಲಾಗಿದೆ. ಅದರ ಮೇಲೆ ತೈಮೂರನ ಜೀವನದ ಸಾಧನೆಗಳು ಮತ್ತು ಅವನ ವಂಶಾವಳಿಯ ಬಗ್ಗೆ ಕೆತ್ತನೆ ಮಾಡಲಾಗಿದೆ. ಇದು ಎಷ್ಟು ರಹಸ್ಯವಾಗಿತ್ತೆಂದರೆ, ಸುಮಾರು 1943ರವರೆಗೆ ಈ ನೆಲಮಾಳಿಗೆಯ ನಿಖರ ಸ್ಥಾನ ಯಾರಿಗೂ ತಿಳಿದಿರಲಿಲ್ಲ!

1404ರ ಚಳಿಗಾಲದಲ್ಲಿ, ತನ್ನ 68ನೇ ವಯಸ್ಸಿನಲ್ಲಿ ತೈಮೂರ್ ಚೀನಾದ 'ಮಿಂಗ್' ಸಾಮ್ರಾಜ್ಯದ ಮೇಲೆ ದಂಡಯಾತ್ರೆಗೆ ಹೊರಟ. ಆದರೆ ಮಾರ್ಗಮಧ್ಯದಲ್ಲಿ, ಅಂದರೆ ಇಂದಿನ ಕಝಕಿಸ್ತಾನ್‌ನ 'ಒಟ್ರಾರ್' ಎಂಬಲ್ಲಿ ಅವನು ತೀವ್ರ ಜ್ವರದಿಂದ ಬಳಲಿ 1405ರ ಫೆಬ್ರವರಿಯಲ್ಲಿ ಸತ್ತ. ಅವನ ಇಚ್ಛೆಯಂತೆ ಅವನನ್ನು ಶಖ್ರಿಸಿಯಬ್ಜ್‌ಗೆ ಕೊಂಡೊಯ್ಯಲು ಸಿದ್ಧತೆಗಳು ನಡೆದವು.

ತೈಮೂರ್ ತೀರಿಕೊಂಡಾಗ ಭೀಕರ ಚಳಿಗಾಲ. ದಾರಿಯುದ್ದಕ್ಕೂ ಅತಿಯಾದ ಹಿಮಪಾತವಾಗಿ, ಪರ್ವತಗಳ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದವು. ಶವವನ್ನು ಜನ್ಮಸ್ಥಳಕ್ಕೆ ಕೊಂಡೊಯ್ಯುವುದು ಅಸಾಧ್ಯವೆಂದು ಅರಿತ ಅವನ ಸೇನಾಪತಿಗಳು ಮತ್ತು ಕುಟುಂಬಸ್ಥರು, ಶವವನ್ನು ಹತ್ತಿರದ ರಾಜಧಾನಿಯಾದ ಸಮರ್‌ಕಂಡ್‌ಗೆ ಕೊಂಡೊಯ್ದರು. ತನ್ನ ಮೊಮ್ಮಗ ಮೊಹಮ್ಮದ್ ಸುಲ್ತಾನನಿಗಾಗಿ ನಿರ್ಮಿಸಿದ್ದ ‘ಗುರ್-ಎ-ಅಮೀರ್’ ಎಂಬ ಸಮಾಧಿಯಲ್ಲಿ ತೈಮೂರನನ್ನು ಹೂಳಲಾಯಿತು.

ಹೀಗಾಗಿ, ಶಖ್ರಿಸಿಯಬ್ಜ್‌ನಲ್ಲಿ ತೈಮೂರ್ ಪ್ರೀತಿಯಿಂದ ತನಗಾಗಿ ನಿರ್ಮಿಸಿಕೊಂಡಿದ್ದ ಆ ಸಮಾಧಿ ಇಂದಿಗೂ ಖಾಲಿಯಾಗಿದೆ. ಪ್ರವಾಸಿಗರು ಅಲ್ಲಿಗೆ ಹೋದಾಗ ಕೇವಲ ಆ ಖಾಲಿ ಅಮೃತಶಿಲೆಯ ಶವಪೆಟ್ಟಿಗೆಯನ್ನು ಮಾತ್ರ ಕಾಣಬಹುದು. ತೈಮೂರನ ಇಬ್ಬರು ಪುತ್ರರಾದ ಜಹಾಂಗೀರ್ ಮತ್ತು ಉಮರ್ ಶೇಖ್ ಅವರ ಸಮಾಧಿಗಳು ಇದೇ ನಗರದಲ್ಲಿದ್ದರೂ, ಸಾಮ್ರಾಟನ ಸಮಾಧಿ ಮಾತ್ರ ಅನಾಥವಾಗಿ ಉಳಿದಿದೆ.

ಈ ಖಾಲಿ ಸಮಾಧಿಯು ಇಂದಿಗೂ ಇತಿಹಾಸಕಾರರಿಗೆ ಮತ್ತು ಪ್ರವಾಸಿಗರಿಗೆ ಕುತೂಹಲದ ಸಂಗತಿ. ಅರಮನೆಗಳ ಮೇಲೆ ದೊಡ್ಡ ದೊಡ್ಡ ಸಂದೇಶಗಳನ್ನು ಕೆತ್ತಿಸಿದ ಚಕ್ರವರ್ತಿಯೊಬ್ಬ, ಕೊನೆಗೆ ತನ್ನ ಜನ್ಮಸ್ಥಳದಲ್ಲಿ ತಾನು ಬಯಸಿದ ಸಮಾಧಿಯಲ್ಲಿ ಮಲಗಲು ಸಾಧ್ಯವಾಗಲಿಲ್ಲ ಎಂಬುದು ಇತಿಹಾಸದ ಕ್ರೂರ ವ್ಯಂಗ್ಯ. 1943ರಲ್ಲಿ ಸೋವಿಯತ್ ಪುರಾತತ್ವ ಶಾಸ್ತ್ರಜ್ಞರು ಈ ನೆಲಮಾಳಿಗೆಯನ್ನು ಪತ್ತೆಹಚ್ಚಿದಾಗ, ಅಲ್ಲಿನ ಕಲ್ಲಿನ ಪೆಟ್ಟಿಗೆಯ ಮೇಲೆ ತೈಮೂರನ ಬಗ್ಗೆ ಬರೆದಿದ್ದ ಲೇಖನಗಳು ಅವನ ಅಂತಿಮ ಇಚ್ಛೆಯನ್ನು ಜಗತ್ತಿಗೆ ಸಾರಿದವು.

ಈ ಖಾಲಿ ಸಮಾಧಿಯು ಅಧಿಕಾರ, ವಿಧಿ ಮತ್ತು ಮನುಷ್ಯನ ಅಂತಿಮ ಆಸೆಗಳ ನಡುವಿನ ಸಂಘರ್ಷಕ್ಕೆ ಒಂದು ಮೂಕ ಸಾಕ್ಷಿಯಾಗಿದೆ. ನೀವು ಈ ಪ್ರದೇಶಕ್ಕೆ ಭೇಟಿ ನೀಡಿದರೆ, ಆ ಕತ್ತಲೆ ತುಂಬಿದ ನೆಲಮಾಳಿಗೆಯಲ್ಲಿ ಇಂದಿಗೂ ತೈಮೂರನ ಅತೃಪ್ತ ಇಚ್ಛೆಯ ಅನುಭವವಾಗುತ್ತದೆ!

**

ಇಲ್ಲಿ ಸಾಯುವುದನ್ನು ನಿಷೇಧಿಸಲಾಗಿದೆ!

ಕೆಲವೊಮ್ಮೆ ಭೂಪಟದ ಯಾವುದೋ ಮೂಲೆಯಲ್ಲಿ ಅಡಗಿರುವ ಊರುಗಳು ಕೇವಲ ವಿಳಾಸಗಳಾಗಿ ಉಳಿಯುವುದಿಲ್ಲ, ಅವು ನಿಸರ್ಗದ ಪಿಸುಮಾತಿನಂತೆ ನಮಗೆ ಕೇಳಿಸತೊಡಗುತ್ತವೆ ಎಂದು ನನಗೆ ಅನಿಸಿದ್ದು ನಾನು ನಾರ್ವೆಯ ಉತ್ತರದ ತುದಿಯಲ್ಲಿರುವ ‘ಲಾಂಗೈರ್ಬೈನ್’ (Longyearbyen) ಎಂಬ ಊರಿಗೆ ಹೋದಾಗ. ಅಲ್ಲಿ ಸುತ್ತಲೂ ಮೈ ಹೆಪ್ಪುಗಟ್ಟಿಸುವ ಹಿಮದ ಕವಚ, ಆಕಾಶದಲ್ಲಿ ಬಣ್ಣದ ರಂಗೋಲಿ ಬಿಡಿಸುವ ಉತ್ತರದ ಬೆಳಕು ಮತ್ತು ಮೌನವನ್ನೇ ತನ್ನ ಭಾಷೆಯಾಗಿಸಿಕೊಂಡಿರುವ ಜನಜೀವನ.

Untitled design (57)

ಆದರೆ ಈ ಊರಿನ ಅಸಲಿ ಸ್ವಾರಸ್ಯವಿರುವುದು ಈ ಸಂಗತಿಗಳಲ್ಲ. ತಮಾಷೆ ಅಂದ್ರೆ ಅಲ್ಲಿ ಯಾರೂ ಸಾಯುವಂತಿಲ್ಲ!

ಕೇಳಲು ಇದು ಯಾವುದೋ ಸಿನಿಮಾದ ಸಂಭಾಷಣೆಯಂತೆ ಕಂಡರೂ, ಇದು ಆ ಊರಿನ ಕಟು ವಾಸ್ತವ. ಇಲ್ಲಿ ಯಾರಿಗಾದರೂ ಮರಣದ ಅಂಚಿನ ಅನಾರೋಗ್ಯ ಕಾಡಿದರೆ ಅಥವಾ ಮುಪ್ಪಿನ ಮಂಕು ಆವರಿಸಿದರೆ, ಅವರನ್ನು ತಕ್ಷಣವೇ ನಾರ್ವೆಯ ಮುಖ್ಯ ಭೂಭಾಗಕ್ಕೆ ವಿಮಾನದ ಮೂಲಕ ಸಾಗಿಸಲಾಗುತ್ತದೆ. ಇದು ಯಾರಿಗಾದರೂ ಹಟ ಮಾಡುವ ಸಾವಿನ ವಿರುದ್ಧದ ಪ್ರತಿಭಟನೆಯಂತೆ ಕಾಣಬಹುದು, ಆದರೆ ಇದರ ಹಿಂದೆ ಪ್ರಕೃತಿಯ ಕ್ರೂರ ಮತ್ತು ವಿಚಿತ್ರ ಸತ್ಯವೊಂದಿದೆ.

ಇಲ್ಲಿನ ಚಳಿ ಎಂಥದೆಂದರೆ, ಕಾಲವೇ ಇಲ್ಲಿ ಮಂಜಿನ ರೂಪದಲ್ಲಿ ಹೆಪ್ಪುಗಟ್ಟಿ ನಿಂತುಬಿಡುತ್ತದೆ. 1918ರ ಸುಮಾರಿಗೆ ಇಲ್ಲಿ ‘ಸ್ಪ್ಯಾನಿಷ್ ಫ್ಲೂ’ ಎಂಬ ಕಾಯಿಲೆಯಿಂದ ಮೃತಪಟ್ಟವರನ್ನು ಹೂಳಲಾಗಿತ್ತು. ದಶಕಗಳ ನಂತರ ವಿಜ್ಞಾನಿಗಳು ಸಂಶೋಧನೆ ನಡೆಸಿದಾಗ ಆ ದೇಹಗಳು ಕೊಳೆಯದೇ ಹಾಗೇ ಇದ್ದವು. ವೈರಸ್‌ಗಳು ಕೂಡ ಆ ದೇಹಗಳಲ್ಲಿ ಜೀವಂತವಾಗಿದ್ದವು. ಈ ನಗರದ 'ಪರ್ಮಾಫ್ರಾಸ್ಟ್' (Permafrost) ಅಂದರೆ ಸದಾಕಾಲ ಹೆಪ್ಪುಗಟ್ಟಿರುವ ಮಣ್ಣು, ದೇಹಗಳನ್ನು ಮಣ್ಣಾಗಲು ಬಿಡುವುದಿಲ್ಲ. ಮನುಷ್ಯರು ಕೊನೆಗೆ ಮಣ್ಣಾಗಲೇಬೇಕು ಎಂಬ ಸೃಷ್ಟಿಯ ನಿಯಮವನ್ನೇ ಇಲ್ಲಿನ ಹವಾಮಾನ ತಿರುಚಿ ಬರೆದಿದೆ.

ಹೀಗಾಗಿ, ಇಲ್ಲಿ ಸಾವನ್ನೇ ನಿಷೇಧಿಸಲಾಗಿದೆ. ಅಲ್ಲಿ ಯಾರನ್ನೂ ಹೂಳುವಂತಿಲ್ಲ. ಇಲ್ಲಿ ಮಣ್ಣು ಎಂಬುದು ಕೇವಲ ಧೂಳಲ್ಲ, ಅದು ನೆನಪುಗಳನ್ನು ಅಳಿಸಲಾರದ ಶೈತ್ಯಾಗಾರ!

ಇನ್ನು ಈ ಊರಿನ ರಸ್ತೆಗಳಲ್ಲಿ ನಡೆಯುವುದು ಅಂದರೆ ಅದು ಕೇವಲ ವಾಕಿಂಗ್ ಅಲ್ಲ; ಅದೊಂದು ರೋಚಕ ಸಾಹಸ. ಇಲ್ಲಿ ಜನರಿಗಿಂತ ಹಿಮಕರಡಿಗಳೇ (Polar Bears) ಹೆಚ್ಚು. ಕೈಯಲ್ಲೊಂದು ಗನ್ ಹಿಡಿಯದೇ ಮನೆಯಿಂದ ಹೊರಬರುವುದು ಇಲ್ಲಿ ಅಪಾಯಕ್ಕೆ ಆಮಂತ್ರಣ ನೀಡಿದಂತೆ. ಪ್ರತಿ ಮನೆಯ ಹೊರಗೆ, ಕಚೇರಿಗಳ ಮುಂದೆ ಹಿಮಕರಡಿಗಳ ಬಗ್ಗೆ ಎಚ್ಚರಿಕೆ ನೀಡುವ ಬೋರ್ಡುಗಳನ್ನು ಕಾಣಬಹುದು. ಅಂದರೆ, ನೀವು ಅಲ್ಲಿ ಯಾರನ್ನಾದರೂ ಭೇಟಿಯಾಗಲು ಹೋದರೆ, ಮೊದಲು ಸ್ವಾಗತಿಸುವುದು ಮನುಷ್ಯರಲ್ಲ, ಮಂಜಿನ ಬೆಳ್ಳನೆಯ ಹೊದಿಕೆಯಂತೆ ಕಾಣುವ ಕರಡಿಗಳು!

ಈ ಊರಿನಲ್ಲಿ ಹಗಲು ಮತ್ತು ರಾತ್ರಿಗಳು ನಾವು ತಿಳಿದಂತಿಲ್ಲ. ಕೆಲವು ತಿಂಗಳುಗಳ ಕಾಲ ಸೂರ್ಯ ಮುಳುಗುವುದೇ ಇಲ್ಲ. ಇನ್ನು ಕೆಲವು ತಿಂಗಳು ಆತ ಮುಖವನ್ನೇ ತೋರಿಸದೇ ಕತ್ತಲಲ್ಲಿ ಕವಿದುಬಿಡುತ್ತಾನೆ. ಆದರೂ ಜನರು ಅಲ್ಲಿ ಬದುಕುತ್ತಾರೆ. ಅಲ್ಲಿನ ಒಂದು ಪುಟ್ಟ ಕೆಫೆಯಲ್ಲಿ ಕುಳಿತು ಬಿಸಿ ಕಾಫಿ ಹೀರುತ್ತಿದ್ದರೆ, ಎದುರಿಗಿನ ಕಿಟಕಿಯಲ್ಲಿ ಅನಂತವಾಗಿ ಹರಡಿರುವ ಬಿಳಿ ಬಣ್ಣದ ಲೋಕ ಕಾಣಿಸುತ್ತದೆ. ಅಲ್ಲಿ ಗಡಿಯಾರದ ಮುಳ್ಳುಗಳು ತಿರುಗುತ್ತಿದ್ದರೂ, ಸಮಯ ಮಾತ್ರ ಸ್ತಬ್ಧವಾಗಿ ನಿಂತಂತೆ ಭಾಸವಾಗುತ್ತದೆ.

ಲಾಂಗೈರ್ಬೈನ್ ಅಂದರೆ ಕೇವಲ ಸಾವು ನಿಷೇಧಿತ ಊರು ಎಂದು ಭಾವಿಸಬೇಕಿಲ್ಲ. ಅದು ಬದುಕಿನ ಹಟದ ಸಂಕೇತ. ನಿಸರ್ಗವು ‘ನೀನು ಇಲ್ಲಿ ಮಣ್ಣಾಗಲು ಸಾಧ್ಯವಿಲ್ಲ’ ಎಂದು ಹೇಳಿದರೂ, ಮನುಷ್ಯ ತನ್ನ ಇಚ್ಛಾಶಕ್ತಿಯಿಂದ ಅಲ್ಲಿ ಸಂಸ್ಕೃತಿಯನ್ನು, ಪ್ರೀತಿಯನ್ನು ಮತ್ತು ಬದುಕಿನ ಗಂಧವನ್ನು ಹರಡಿದ್ದಾನೆ. ಅಳಿಸಲಾಗದ ಸಾಲುಗಳಂತೆ ಅಲ್ಲಿನ ಜನರ ಬದುಕು ಹಿಮದ ಮೇಲೆ ದಾಖಲಾಗುತ್ತಿದೆ. ಸಾವಿಲ್ಲದ ಆ ಊರಿನಲ್ಲಿ, ಬದುಕು ಪ್ರತಿಕ್ಷಣವೂ ಹೊಸದಾಗಿ ಹುಟ್ಟುತ್ತಲೇ ಇರುತ್ತದೆ.

**

Untitled design (56)

ಒಂದು ತಮಾಷೆಯ ಫಲಕ

ಜರ್ಮನಿಯ ಹತ್ತಾರು ನಗರಗಳಲ್ಲಿ ಈ ತಮಾಷೆಯ ಫಲಕಗಳನ್ನು ನೋಡಿ ನನ್ನಷ್ಟಕ್ಕೇ ನಕ್ಕಿದ್ದೇನೆ. ಈ ಫಲಕದ ಮೇಲೆ ಬರೆದಿದ್ದನ್ನು ನೋಡಿದರೆ, ಇದೊಂದು ವ್ಯಾಪಾರಿಯ ಗಿಮಿಕ್‌ ಅಲ್ಲ, ಬದಲಿಗೆ ಮನುಷ್ಯನ ಮನಃಸ್ಥಿತಿಯ ಮೇಲೆ ಮಾಡುತ್ತಿರುವ ಒಂದು ‘ಸೈಕಲಾಜಿಕಲ್‌ ಎಕ್ಸ್‌ಪೆರಿಮೆಂಟ್’ ಎಂಬುದು ಗೊತ್ತಾಗುತ್ತದೆ.

ಅಂದ ಹಾಗೆ ಆ ಫಲಕದ ಮೇಲಿನ ಬರಹ ಹೀಗಿದೆ - ‘Free Beer... Tomorrow !’

ಜರ್ಮನ್ನರು ತುಂಬಾನೇ ಪಂಕ್ಚುವಲ್ ಮತ್ತು ಶಿಸ್ತಿನ ಮನುಷ್ಯರು. ಅಂಥವರ ದೇಶದಲ್ಲಿ ಈ ರೀತಿಯ ಒಂದು 'ಸುಂದರ ಸುಳ್ಳು' ರಾರಾಜಿಸುವುದು ಒಂದು ದೊಡ್ಡ ವಿರೋಧಾಭಾಸ. ನೀವು ಇಂದು ಆ ಬೋರ್ಡ್‌ ನೋಡಿ ಖುಷಿಪಟ್ಟು, ನಾಳೆ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋದರೆ ಅದೇ ಬೋರ್ಡ್‌ ನಿಮ್ಮನ್ನು ನೋಡಿ ಹಲ್ಲು ಕಿರಿಯುತ್ತಿರುತ್ತದೆ! ಇದು ಒಂಥರಾ ‘ನಾಳೆ ಬಾ‘ ಎಂದು ನಮ್ಮಲ್ಲಿ ಬಾಗಿಲ ಮೇಲೆ ಬರೆದಂತೆ.

ಬದುಕು ಒಮ್ಮೊಮ್ಮೆ ತುಂಬಾನೇ ಪ್ರೆಡಿಕ್ಟೆಬಲ್ ಮತ್ತು ಬೋರಿಂಗ್‌ ಅನಿಸತೊಡಗುತ್ತದೆ. ಆಫೀಸ್ ಕಿರಿಕಿರಿ, ಟ್ರಾಫಿಕ್ ಜಾಮ್ ಅಥವಾ ಅಕೌಂಟಿನಲ್ಲಿ ಬರಿದಾಗುತ್ತಿರುವ ಹಣ—ಇವೆಲ್ಲದರ ನಡುವೆ ಇಂಥ ಒಂದು ಪುಟ್ಟ ಫಲಕ ಅಥವಾ ಭಾಷೆಯ ಎಡವಟ್ಟಿನಿಂದ ಹುಟ್ಟುವ ಹಾಸ್ಯ ದೊಡ್ಡ 'ರಿಲೀಫ್' ನೀಡುತ್ತದೆ.