ಕೆ ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು

ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲಿಕರ ಸಂಘ (ರಿ)

“ಇಂದು ಬೆಂಗಳೂರು ಪಿಂಚಣಿ ಪಡೆಯುವವರ ಸ್ವರ್ಗ ಮಾತ್ರವಲ್ಲ, ಹೊಸ ಸ್ಟಾರ್ಟ್‌ಅಪ್‌ಗಳ ತವರೂರು, ಐಟಿ–ಬಿಟಿ ಕೇಂದ್ರ ಹಾಗೂ ಕೈಗಾರಿಕಾ ಸ್ನೇಹಿ ನಗರವಾಗಿ ಬೆಳಗುತ್ತಿದೆ.”

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣದ ವಿಚಾರವು ವರ್ಷಗಳ ಕಾಲ “ಚಂದ್ರ ತೋರಿಸಿ ಮಕ್ಕಳಿಗೆ ಊಟ ಮಾಡಿಸುವಂತೆ ” ಆಟದಲ್ಲಿ ಮುಂದೂಡಲ್ಪಟ್ಟಿರುವುದು ಹೊಸದೇನಲ್ಲ. ಆದರೆ ಈಗಿನ ಪರಿಸ್ಥಿತಿ ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನಿಸಿದರೆ, ಈ ಚರ್ಚೆ ಕೇವಲ ರಾಜಕೀಯ ಹಂಗಿನ ವಿಷಯವಲ್ಲ, ಬದಲಾಗಿ ತುರ್ತು ನೀತಿ ನಿರ್ಧಾರದ ಅವಶ್ಯಕತೆಯಾಗಿದೆ.

ಪ್ರಸ್ತುತ ಸ್ಥಿತಿ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಭಾರೀ ಒತ್ತಡಕ್ಕೆ ಒಳಗಾಗಿದೆ. HAL ವಿಮಾನ ನಿಲ್ದಾಣವನ್ನು 2008ರಿಂದ ನಾಗರಿಕ ಸೇವೆಗೆ ಮುಚ್ಚಿದರೂ, ಅದು ಇನ್ನೂ ಖಾಸಗಿ ಹಾಗೂ ಕಾರ್ಪೊರೇಟ್ ಹಾರಾಟಗಳಿಗೆ ಹಾಗೂ ಖಾಸಗಿ ವಿಮಾನಗಳ ನಿಲುಗಡೆಗೆ ಬಳಸಲಾಗುತ್ತಿದೆ. ಈ ಸೀಮಿತ ಸಾಮರ್ಥ್ಯವು ನಗರಕ್ಕೆ ಬರುವ ಪ್ರವಾಸಿಗರು, ಉದ್ಯಮಿಗಳು ಮತ್ತು ಹೂಡಿಕೆದಾರರ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ.

airport

ಭವಿಷ್ಯದ ಚಿತ್ರಣ

2033ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 2 ಕೋಟಿಗೂ ಮೇಲಾಗುವ ನಿರೀಕ್ಷೆಯಿದೆ. ಸಾಫ್ಟ್‌ವೇರ್ ಉದ್ಯಮ, ಏರೋಸ್ಪೇಸ್, ಡಿಫೆನ್ಸ್ ಮತ್ತು ಹೈಟೆಕ್ ಮ್ಯಾನ್ಯುಫ್ಯಾಕ್ಚರಿಂಗ್ ವಿಸ್ತಾರದಿಂದಾಗಿ ಅಂತಾರಾಷ್ಟ್ರೀಯ ಸಂಪರ್ಕದ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಲಿದೆ. ಒಂದು ವಿಮಾನ ನಿಲ್ದಾಣಕ್ಕೆ ಇದನ್ನು ಭರಿಸುವುದು ಅಸಾಧ್ಯ.

ಹೊಸೂರು ಅಂಶ

ಹೊಸೂರು ಬಳಿ ವಿಮಾನ ನಿಲ್ದಾಣ ಸ್ಥಾಪನೆಯಾದಲ್ಲಿ, ಬೆಂಗಳೂರಿನ ದಕ್ಷಿಣ–ಪೂರ್ವ ಭಾಗದ ಲಕ್ಷಾಂತರ ಜನರು ಅದನ್ನು ಬಳಸುವ ಸಾಧ್ಯತೆ ಹೆಚ್ಚು. ಉತ್ತಮ ರಸ್ತೆ ಮತ್ತು ರೈಲು ಸಂಪರ್ಕದಿಂದ “ಕನ್ನಡ ಗಡಿಯಾಚೆಯ ವಿಮಾನ ನಿಲ್ದಾಣ” ಉಪಯೋಗಿಸುವ ಅಭ್ಯಾಸ ರೂಢಿಯಾಗುವುದು ಖಚಿತ. ಇದರ ಪರಿಣಾಮವಾಗಿ, ಕರ್ನಾಟಕಕ್ಕೆ ಬರುವ ವಿಮಾನಯಾನ ಆದಾಯ, ಸೇವ ವಲಯದ ಆದಾಯ ತಮಿಳುನಾಡಿಗೆ ಹರಿಯುವುದು ಅಸಂಭಾವ್ಯವಲ್ಲ.

ಸರ್ಕಾರದ ಹೊಣೆಗಾರಿಕೆ

ಇದನ್ನು ತಡೆಯಲು ಕರ್ನಾಟಕ ಸರ್ಕಾರವೇ ಮುಂದಾಗಬೇಕು. ಎರಡನೇ ವಿಮಾನ ನಿಲ್ದಾಣಕ್ಕಾಗಿ ಸ್ಥಳ ಆಯ್ಕೆ, ಭೂಸ್ವಾಧೀನ ಹಾಗೂ ಹೂಡಿಕೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು. ತುಮಕೂರು ಅಥವಾ ದಾವಣಗೆರೆ ಭಾಗದಲ್ಲಿ ದೀರ್ಘಾವಧಿಯ ಅಗತ್ಯಗಳಿಗೆ ಹೊಂದುವ ರೀತಿಯಲ್ಲಿ ಯೋಜನೆ ಕೈಗೊಳ್ಳುವುದು ಸೂಕ್ತ. ಇಲ್ಲವಾದರೆ, “ಬೆಂಗಳೂರು ದಕ್ಷಿಣದ ವಿಮಾನ ನಿಲ್ದಾಣ” ತಮಿಳುನಾಡಿನ ಹೆಸರಿನಲ್ಲಿ ಬೆಳೆಯುವುದು, ಕರ್ನಾಟಕ ತನ್ನದೇ ಆದ ಲಾಭದಿಂದ ವಂಚಿತವಾಗುವುದು.

ಒಟ್ಟಿನಲ್ಲಿ, HAL ವಿಮಾನ ನಿಲ್ದಾಣವನ್ನು ಪುನಃ ತೆರೆಯುವುದರಿಂದ ಜನರಿಗೆ ತಾತ್ಕಾಲಿಕ ಉಪಶಮನ ಸಿಕ್ಕರೂ, ಅದು ಶಾಶ್ವತ ಪರಿಹಾರವಲ್ಲ. 2033ರ ಹೊತ್ತಿಗೆ ಎರಡನೇ ದೊಡ್ಡ ವಿಮಾನ ನಿಲ್ದಾಣವಿಲ್ಲದೆ ಬೆಂಗಳೂರು ತನ್ನ ಆರ್ಥಿಕ ಶಕ್ತಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳುವ ಅಪಾಯ ಎದುರಿಸಬೇಕಾಗುತ್ತದೆ.