ನಾನು ಮೊದಲ ಬಾರಿಗೆ ವಿದೇಶ ಪ್ರವಾಸ ಮಾಡಿದ್ದು 2023ರ ಆರಂಭದಲ್ಲಿ. ಅದು ಆಗಷ್ಟೇ ಕರೊನಾದಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದ ಸಮಯ. ಬಹಳಷ್ಟು ನಿಯಮಗಳನ್ನು ಪಾಲಿಸುವುದರ ಜತೆಗೆ ಎರಡು ಡೋಸ್ ಇಂಜೆಕ್ಷನ್ ಹಾಕಿಸಿಕೊಂಡಿದ್ದಕ್ಕೆ ದಾಖಲೆಗಳನ್ನೂ ತೋರಿಸಬೇಕಿತ್ತು. ಈ ಪರಿಸ್ಥಿತಿಯಲ್ಲಿ ನನ್ನ ಹಿತೈಷಿ ಜತೆಗೂಡಿ ವಿದೇಶಕ್ಕೆ ಹೋಗಿದ್ದೆ. ಬಾಲಿ, ವಿಯೆಟ್ನಾಂ, ಶ್ರೀಲಂಕಾ, ಭೂತಾನ್ ಹೀಗೆ ನಮ್ಮ ಬಜೆಟ್‌ಗೆ ತಕ್ಕಂತೆ ತಿರುಗಲು ದೇಶಗಳ ರೂಪುರೇಷೆ ಸಿದ್ಧವಾಗಿದ್ದವು. ಹೀಗಿರುವಾಗ ನಮ್ಮನ್ನು ಸ್ವಾಗತಿಸಿದ್ದು ಥೈಲ್ಯಾಂಡ್.

ಕರೆನ್ಸಿ ಎಕ್ಸ್‌ಚೇಂಜ್ ನಮಗೆ ಸಮಸ್ಯೆ ಎನಿಸಲಿಲ್ಲ. ಕಾರಣ ಥೈಲ್ಯಾಂಡ್‌ನಲ್ಲಿ ನಮ್ಮ ಪರಿಚಿತರು ಕೆಲಸ ಮಾಡುತ್ತಿದ್ದರು. ಕರೊನಾ ಸಮಯದಲ್ಲಿ ಆತುರಾತುರವಾಗಿ ಭಾರತಕ್ಕೆ ಬಂದಿದ್ದರು. ಅವರ ಬಳಿಯೇ ನಮಗೆ ಬಹಳಷ್ಟು ಥೈಲ್ಯಾಂಡ್ ಕರೆನ್ಸಿ ಥಾಯ್ ಬಾಟ್ ಸಿಕ್ಕಿತ್ತು. ಟ್ರಾವೆಲ್ ಏಜೆನ್ಸಿ ಜತೆಗಿನ ಟೂರ್ ಪ್ಲಾನ್ ಆದ್ದರಿಂದ ದುಗುಡವೇನೂ ಇರಲಿಲ್ಲ. ಮಧ್ಯರಾತ್ರಿ ಬ್ಯಾಂಕಾಕ್ ವಿಮಾನವೇರಿ ಹೊರಟ ನಾವು ಬೆಳಗಿನ ಜಾವ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನ ‘ಸುವರ್ಣಭೂಮಿ’ಯಲ್ಲಿ ಲ್ಯಾಂಡ್ ಆಗಿದ್ದೆವು. ಅಷ್ಟೊತ್ತಿಗೆ ನಮ್ಮ ಹೆಸರಿನ ನಾಮಫಲಕ ಹಿಡಿದು ಸುಂದರ ಥಾಯ್ ಚೆಲುವೆಯೊಬ್ಬಳು ಸ್ವಾಗತಿಸಿದ್ದಳು. ತನ್ನ ಕಾರಿನಲ್ಲಿ ಟೂರ್ ಪ್ಲಾನಿನಂತೆ ಬ್ಯಾಂಕಾಕ್‌ನಿಂದ ಪಟ್ಟಾಯಾಗೆ ಕರೆದೊಯ್ದಳು.

Untitled design (6)

ಥೈಲ್ಯಾಂಡ್‌ನಲ್ಲಿ ಪುರುಷರಂತೆ ಅಥವಾ ತುಸು ಹೆಚ್ಚೇ ಎನಿಸುವಷ್ಟು ಅಲ್ಲಿನ ಮಹಿಳೆಯರು ದುಡಿಯುತ್ತಾರೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅವರೇ ಕಾಣಿಸುತ್ತಾರೆ. ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗಳನ್ನು ಸುಲಭವಾಗಿ ಹ್ಯಾಂಡಲ್ ಮಾಡುತ್ತಾರೆ. ಥೈಲ್ಯಾಂಡ್ ದೇಶ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಅಲ್ಲಿಯ ಜನರು ನಯ- ನಾಜೂಕು, ಶಿಸ್ತು ಹಾಗೂ ಸಂಯಮವನ್ನು ಪಾಲಿಸುತ್ತಾರೆ. ನಗುಮೊಗದ ಹಾಸ್ಪಿಟಾಲಿಟಿಯ ಜತೆಗೆ ವೃತ್ತಿಪರತೆ ಹಾಗೂ ಸ್ನೇಹಮಯ ನಡವಳಿಕೆಯನ್ನು ಹೊಂದಿರುತ್ತಾರೆ. ಹೆಣ್ಣು, ಹೆಂಡ, ನಶೆ ಎಲ್ಲ ಚಟುವಟಿಕೆಗಳಿಗೂ ಅಲ್ಲಿ ಸರಕಾರವೇ ಮಾನ್ಯತೆ ಕೊಟ್ಟಿದೆ. ಹಾಗಾಗಿ ಮಡಿವಂತರು ಥೈಲ್ಯಾಂಡ್ ದೇಶಕ್ಕೆ ಹೋಗಿ ಬರುವವರನ್ನು ತುಂಟತನದ ಚೌಕಟ್ಟಿನಲ್ಲಿಯೇ ನೋಡುತ್ತಾರೆ.

ಪಟ್ಟಾಯಾದಲ್ಲಿನ ಮೂರು ದಿನಗಳು ಹಾಗೂ ಬ್ಯಾಂಕಾಕ್‌ನಲ್ಲಿ ಎರಡು ದಿನಗಳ ನಮ್ಮ ಪ್ರವಾಸ, ಅನೇಕ ಸ್ಮರಣೀಯ ಅನುಭವಗಳನ್ನು ಇನ್ನೂ ತಾಜಾವಾಗಿಟ್ಟಿವೆ. ಪಟ್ಟಾಯಾದ ನಮ್ಮ ಗೈಡ್ ಹಾಗೂ ಡ್ರೈವರ್ ಆಗಿದ್ದ ಮಿನ್ನಿ ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕದಲ್ಲಿದ್ದಾಳೆ, ನಮ್ಮ ಹಬ್ಬಗಳಿಗೆ ಪ್ರತಿವರ್ಷ ಶುಭಕೋರುತ್ತಾಳೆ. ಇದು ಅಲ್ಲಿನ ಜನರ ಸ್ನೇಹಪರತೆ ಎನ್ನಬಹುದು. ಅಲ್ಲಿನ ಸ್ಥಳೀಯರಿಗೆ ವ್ಯಾಪಾರವಾಗುವಂತೆ ಮಾಡುವಲ್ಲಿಯೂ ಇವರು ನಿಪುಣರು. ಸ್ಥಳೀಯ ಜಾಗಗಳನ್ನು ತೋರಿಸುವುದರ ಜತೆಗೆ ತಮ್ಮ ಜನರಿಗೆ ವ್ಯಾಪಾರವಾಗುವಂತೆ ಪ್ರವಾಸಿಗರ ಮನವೊಲಿಸುತ್ತಾರೆ. ಪ್ರವಾಸಿ ಕುಟುಂಬದೊಡನೆ ಹೋದರೆ ಒಂದು ತೆರನಾಗಿ ಒಬ್ಬಂಟಿಯಾಗಿದ್ದರೆ ಮತ್ತೊಂದು ತೆರನಾಗಿ ವ್ಯವಹರಿಸುತ್ತಾರೆ. ಒಟ್ಟಿನಲ್ಲಿ ವಿದೇಶಿಯರು ತಮ್ಮ ದೇಶದಲ್ಲಿ ಹೆಚ್ಚೆಚ್ಚು ಖರ್ಚು ಮಾಡಲಿ ಎನ್ನುವುದು ಅವರ ಆಶಯ. ಹಾಗಂತ ಮನಬಂದಂತೆ ದರ ಏರಿಸುವುದು, ಖರೀದಿಸಿ ಎಂದು ಪೀಡಿಸುವುದು, ಯಾಮಾರಿಸುವುದು ಮಾಡುವುದಿಲ್ಲ. ಅಲ್ಲಿಯ ಹೆಚ್ಚಿನವರಿಗೆ ಇಂಗ್ಲೀಷ್ ಭಾಷೆ ಬರದಿದ್ದರೂ ಸಂವಹನದಲ್ಲಿ ಮಾತ್ರ ಚಾಲಾಕಿಗಳು.

ಪಟ್ಟಾಯಾದಲ್ಲಿ ಮೊದಲ ರಾತ್ರಿ ಸಮಯದಲ್ಲಿ ಗೊತ್ತಿಲ್ಲದೇ ವಾಕಿಂಗ್ ಸ್ಟ್ರೀಟ್‌ಗೆ ಹೋದಾಗ ಬಿಕಿನಿ ತೊಟ್ಟ ಹತ್ತಾರು ಥಾಯ್ ಚೆಲುವೆಯರು, ನೀಳಕಾಯದ ರಷ್ಯನ್ ಲೇಡಿಗಳು ಪಬ್ಲಿಕ್‌ನಲ್ಲಿ ಮಾದಕವಾಗಿ ಕರೆಯುವಾಗ; ನಾಚಿಕೆ ಸ್ವಭಾವದ ನಮ್ಮಂತ ಹುಡುಗರಿಗೆ ಭಯ ಬಾಯಿಗೆ ಬರದಿರುತ್ತದೆಯೇ? ಕೇವಲ ಬಜೆಟ್ ಫ್ರೆಂಡ್ಲಿ ಪ್ರವಾಸಿ ದೇಶವೆಂದು ತಿಳಿದು ಥಾಯ್‌ಗೆ ಹೋದ ನಮಗೆ ಯಾಕೆ ಥೈಲ್ಯಾಂಡ್ ಅಂದರೆ ಜನರು ಬೇರೇ ರೀತಿಯಲ್ಲಿ ಅರ್ಥೈಸುತ್ತಾರೆಂದು ಅಲ್ಲಿಯವರೆಗೆ ಅರ್ಥವಾಗಿರಲಿಲ್ಲ. ಇಷ್ಟಾದರೂ ಥೈಲ್ಯಾಂಡಿನಿಂದ ನಾವು ಶೀಲ ಉಳಿಸಿಕೊಂಡು ಬಂದಿದ್ದೇವೆಂದು ಹೇಳಿದರೂ ನಮ್ಮ ಸ್ನೇಹಿತರು ಯಾರೂ ನಂಬುತ್ತಿರಲಿಲ್ಲ. ಇರಲಿ, ಅದು ಆ ಲ್ಯಾಂಡ್‌ನ ಮಹಿಮೆ.

ಥಾಯ್ ಮಸಾಜ್ ಹೇಗಿರುತ್ತದೆ ಎಂದು ಅನುಭವ ಪಡೆಯಲು ನಾವು ಉಳಿದುಕೊಂಡಿದ್ದ ಹೊಟೇಲ್‌ನಲ್ಲಿಯೇ ಇದ್ದ ಪಾರ್ಲರ್‌ಗೆ ಹೋಗಿದ್ದೆವು. ಭಾರತದಲ್ಲಿ ಬರೀ ಹುಡುಗರಿಂದ ಮಸಾಜ್ ಮಾಡಿಸಿಕೊಂಡಿದ್ದ ನಮಗೆ, ಅಲ್ಲಿ ವೃತ್ತಿಪರ ಮಹಿಳೆಯರು ಮಸಾಜ್ ಮಾಡುತ್ತಾರೆ ಎನ್ನುವುದೇ ವಿಶೇಷ ಎನ್ನಿಸಿತ್ತು. ಆದರೆ ಥಾಯ್ ಮಸಾಜ್ ಮಾಡಿಸಿಕೊಳ್ಳುವಾಗ ಗೊತ್ತಾಯ್ತು, ಮೃದು ಕೈಗಳ ಥಾಯ್ ಚೆಲುವೆಯರ ಮಸಾಜಿಗಿಂತ ಗಡಸುತನ ಗಂಡಸರು ಮಾಡಿದ ಮಸಾಜ್ ಎಷ್ಟೋ ವಾಸಿಯೆಂದು. ಈ ಮಹಿಳೆಯರು ಯಾವ ಎಣ್ಣೆಗಳನ್ನು ಬಳಸದೇ ನಮ್ಮ ದೇಹದ ಕೀಲುಗಳನ್ನು ಒತ್ತುತ್ತಾ ಸ್ಟ್ರೇಚ್ ಮಾಡುತ್ತಾರೆ. ತಮ್ಮ ಕೈಗಳು, ಮೊಣಕೈಗಳು, ಪಾದಗಳು ಮತ್ತು ಮೊಣಕಾಲುಗಳನ್ನು ಬಳಸಿ ದೇಹದ ಮೇಲೆ ಒತ್ತಡವನ್ನು ಹಾಕುತ್ತಾರೆ. ಕೆಲವು ಕ್ಷಣ ಬಾಡಿಯನ್ನು ಹಿಡಿದು ಹಿಂಡಿದಂತಾದರೂ ಕೊನೆಯಲ್ಲಿ ವಜ್ರಾಸನದಲ್ಲಿ ಕುಳಿತು ತಮ್ಮ ತೊಡೆಯ ಮೇಲೆ ನಮ್ಮ ತಲೆಯನ್ನಿಟ್ಟುಕೊಂಡು ಹುಬ್ಬು, ಹಣೆ ಹಾಗೂ ತಲೆಯ ಭಾಗದಲ್ಲಿ ಮಸಾಜ್ ಮಾಡುವಾಗ ಬಹಳ ಹಿತ ಎನಿಸುತ್ತದೆ. ನೀವೂ ಥೈಲ್ಯಾಂಡ್ ಹೋದಾಗ ಥಾಯ್ ಮಸಾಜ್ ಅವಶ್ಯವಾಗಿ ಮಾಡಿಸಿಕೊಂಡು ಬನ್ನಿ, ಅದೂ ಸರ್ಟಿಫೈಡ್ ಟ್ರೈನರ್ ಬಳಿ ಮಾತ್ರ!

ಇನ್ನು ಥೈಲ್ಯಾಂಡ್‌ನಲ್ಲಿ ಎಲ್ಲೆಂದರಲ್ಲಿ ಥಾಯ್‌ ತೋರಿಸುವವರೇ ಹೆಚ್ಚು. ಆದರೂ, ಅದನ್ನೂ ಮೀರಿದ ಅಲ್ಲಿನ ಸುಂದರ ಸ್ಥಳಗಳು, ದೇವಾಲಯಗಳು, ಸ್ಥಳೀಯ ತಿನಿಸುಗಳು, ಅಲ್ಲಿನವರ ಶಿಸ್ತು, ವೃತ್ತಿಪರತೆ ಹಾಗೂ ಹೆಣ್ಣುಮಕ್ಕಳಿಗೆ ಆ ಸಮಾಜದಲ್ಲಿರುವ ಗೌರವಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳಲು ನನಗೆ ಈ ಪ್ರವಾಸ ಸಹಕಾರಿಯಾಗಿತ್ತು. ನನ್ನ ಮೊದಲ ವಿದೇಶ ಪ್ರವಾಸ ಸ್ಮೃತಿಪಟಲದಲ್ಲಿ ಶಾಶ್ವತವಾಗಿ ಉಳಿಯಿತು.